ಕಳೆದ ಹಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ 9 ಚಿನ್ನಾಭರಣ ಮಳಿಗೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, ಓರ್ವ ಚಿನ್ನದ ವ್ಯಾಪಾರಿ ಮನೆಯಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಪತ್ತೆಯಾಗಿದ್ದು, ಪೊಲೀಸರು ರಕ್ಷಣೆ ಮಾಡಿದ್ದಾರೆ.
ಹೌದು, ಯಡಿಯೂರಿನ ಸಾಕಮ್ಮ ಗಾರ್ಡನ್‌ನಲ್ಲಿರುವ ಗೌರವ್ ಚೋರ್ಡಿಯಾ ಎಂಬ ಚಿನ್ನದ ಅಂಗಡಿ ಮಾಲೀಕನ ಮನೆಯಲ್ಲಿ ಬಿಹಾರದ ಗಯಾ ಜಿಲ್ಲೆಯ 10 ಮತ್ತು 8 ವರ್ಷದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ.
ಮನೆಯ ಮಾಲಕಿ ಪಿಂಕಿ ಜೈನ್ ಅವರ ಆರೈಕೆಗಾಗಿ ಈ ಮಕ್ಕಳನ್ನು ಬಿಹಾರದಿಂದ ಕರೆ ತರಲಾಗಿತ್ತು ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆ, ಐಟಿ ಅಧಿಕಾರಿಗಳು ಅಪ್ರಾಪ್ತ ಹೆಣ್ಣು ಮಕ್ಕಳನ್ನು ರಕ್ಷಿಸಿ ಹಿರಿಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಅಪ್ರಾಪ್ತ ಮಕ್ಕಳನ್ನು ಸಿದ್ದಾಪುರದ ಬಾಲ ರಕ್ಷಣಾ ಕೇಂದ್ರದಲ್ಲಿ ವಾಸ್ತವ್ಯಕ್ಕಾಗಿ ಇರಿಸಲಾಗಿದೆ. ಜಯನಗರ ಪೊಲೀಸರು ಆರೋಪಿಗಳ ವಿರುದ್ಧ ಸುಮೋಟೊ ಕೇಸ್ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ.
ಕಾನೂನು ಬಾಹಿರವಾಗಿ ಮಕ್ಕಳ ಬಳಕೆ ವಿಚಾರವಾಗಿ ಆಭೂಷನ್ ಕುಟುಂಬದ ಅಶೋಕ್ ಕುಮಾರ್, ಶ್ರೇಯಸ್ ಚೌಡರೆ ಹಾಗೂ ಗೌರವ್ ಎಂಬುವವರ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಣ್ಮನ ಸೆಳೆಯುವ ಕೇಕ್ ಶೋ ಆರಂಭ: ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು
ಐಟಿ ದಾಳಿ
ಆದಾಯ ವಂಚಕರಿಗೆ ಬಿಸಿ ಮುಟ್ಟಿಸಲು ಐಟಿ ಅಧಿಕಾರಿಗಳು ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ, ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ತೆರಿಗೆ ವಂಚಕರು ತಂತ್ರಜ್ಞಾನ ಬಳಸಿ ವಂಚನೆ ಎಸಗುತ್ತಿದ್ದರು. 3 ಸಾವಿರ ಕೆಜಿ ಚಿನ್ನ ಮತ್ತು ವಜ್ರವನ್ನ ಹಣದ ರೂಪದಲ್ಲಿ ಮಾರಾಟ ಮಾಡಿದ್ದ ವಂಚಕನನ್ನ ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಜುವೆಲ್ಲರಿ ಶಾಪ್ ಮಾಲೀಕರು ಸಾಫ್ಟ್‌ವೇರ್ ಹಾಗೂ ಪೆನ್ ಡ್ರೈವ್ ಬಳಸಿ ಅಕ್ರಮ ಎಸಗುತ್ತಿದ್ದರು. ಪೆನ್ ಡ್ರೈವ್ ಹಾಗೂ ಸಿಸ್ಟಂ ಬಳಸಿದ ವಂಚನೆಯನ್ನ ಐಟಿ ಪರಿಣಿತರ ತಂಡ ಪತ್ತೆ ಮಾಡಿದೆ.
ಕಳೆದ ಹಲವು ದಿನಗಳಿಂದ ಜಯನಗರದ 9 ಜುವೆಲ್ಲರಿ ಶಾಪ್ಗಳಿಗೆ ಸೇರಿದ 15ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಐಟಿ ದಾಳಿ ನಡೆದಿತ್ತು. ಅಂಗಡಿ ಮಾಲೀಕರ ಮನೆ, ಸಂಬಂಧಿ ಮನೆ, ಆಪ್ತರ ಮನೆ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ನಡೆಸಿ, ಪರಿಶೀಲನೆ ನಡೆಸಿದ್ದರು.
ಆಭೂಷನ್ ಆ್ಯಂಡ್ ಗ್ರೂಪ್, ಮಾಲೀಕ ಮಹಾವೀರ್ ಬೋರಾ, ವಿಶಾಲ್ ಬೋರಾ ಫ್ಯಾಮಿಲಿ, ಎಂ ಆರ್ ಜ್ಯೂವೆಲ್ಸ್ ಗ್ರೂಪ್, ಮಂಗಳಂ, ಪೊಲಿಸ್ಕ್, ರಿದ್ದಿ ಸೇರಿ 9ಕ್ಕೂ ಹೆಚ್ಚು ಆಭರಣ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಕಳೆದ 5 ದಿನ 60ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ನಿರಂತರ ಶೋಧ ನಡೆಸಿದ್ದಾರೆ.