ʼಹೊಸ ಓದುಗರಿಗೆ ಕುವೆಂಪುʼ -ಕೆ.ವಿ. ನಾರಾಯಣ ಅವರ ಪ್ರವೇಶಿಕೆ

Date:

Advertisements
ʼಹೊಸ ಓದುಗರಿಗೆ ಕುವೆಂಪುʼ ಸಂಕಲನದಲ್ಲಿರುವ ಬರಹಗಳನ್ನು ಓದುವುದಕ್ಕೆ ಒಂದು ಚೌಕಟ್ಟು ಎಂಬ ಕೆ.ವಿ. ನಾರಾಯಣ ಅವರ ಪ್ರಸ್ತಾವನೆಯ ಆಯ್ದ ಭಾಗ...

ಸರಿ ಸುಮಾರು ಐವತ್ತು ವರುಶಗಳ ಅವಧಿಯಲ್ಲಿ ರೂಪುಗೊಂಡ ನನ್ನ ಮಾತು ಮತ್ತು ಬರಹಗಳನ್ನು ಹೀಗೆ ಇಲ್ಲಿ ಒಗ್ಗೂಡಿಸಿ ಅಚ್ಚುಮಾಡಲು ಯಾವ ಹೆಚ್ಚಿನ ಕಾರಣವೂ ಇಲ್ಲ; ಹಾಗಾಗಿ ಇದಕ್ಕೆ ಯಾವ ಮಹತ್ವವನ್ನೂ ಆರೋಪಿಸಿಕೊಳ್ಳುವಂತಿಲ್ಲ. ಆದರೆ ಹೀಗೆ ಮಾಡಲು ಕೆಲವು ಕಾರಣಗಳಿವೆ. ಈ ಬರಹಗಳನ್ನು ಒಟ್ಟು ಮಾಡುವ ಹೊತ್ತಿನಲ್ಲಿ ಕುವೆಂಪು ಬರಹಗಳನ್ನು ನಾವು ನೋಡುತ್ತಿರುವ ಬಗೆಯಲ್ಲಿ ಆಗಿರುವ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಅರಿಯಲು ಸಾಧ್ಯವೇ ಎಂದು ಚಿಂತಿಸುವ ಉದ್ದೇಶವಿದೆ. ಈ ಬದಲಾವಣೆಗಳು ಈ ಬರಹಗಳನ್ನು ಬರೆದ ನನ್ನಲ್ಲಿಯೂ ಇರುತ್ತವೆ. ಜೊತೆಗೆ ಕನ್ನಡ ವಿಮರ್ಶೆಯು ಕುವೆಂಪು ಅವರನ್ನು ಓದುವ ಬಗೆಯಲ್ಲೂ ಕಾಣಿಸಿಕೊಂಡಿರುತ್ತವೆ.

ಇಲ್ಲಿ ಕೂಡಿಸಿರುವ ಬರಹಗಳಲ್ಲಿ ಬಹುಪಾಲು ಕುವೆಂಪು ಅವರ ವೈಚಾರಿಕ ಮತ್ತು ವಿಮರ್ಶಾ ವಲಯದ ಚಿಂತನೆಗಳನ್ನು ಗಮನದಲ್ಲಿ ಇರಿಸಿಕೊಂಡಿವೆ. ಕೆಲವು ಬರಹಗಳು ಕುವೆಂಪು ಅವರ ಕಾದಂಬರಿಯನ್ನು ಕೇಂದ್ರದಲ್ಲಿ ಇರಿಸಿಕೊಂಡಿವೆ. ಅವರ ಕಾವ್ಯ ಮತ್ತು ನಾಟಕಗಳನ್ನು ಗಮನಿಸುವ ಬರಹಗಳು ಇಲ್ಲಿಲ್ಲ. ಅಂದರೆ ಈ ಬರಹಗಳು ಕುವೆಂಪು ಅವರನ್ನು ‘ಸಮಗ್ರ’ವಾಗಿ ನೋಡುವ ನೆಲೆಯಲ್ಲಿ ಇಲ್ಲವೆಂದು ಸುಲಭವಾಗಿ ಹೇಳಬಹುದು. ಆದರೆ ಕುವೆಂಪು ಅವರ ಬರಹಗಳನ್ನು ನೋಡುವ ಕ್ರಮದಲ್ಲಿ ಆಗಿರುವ ಪಲ್ಲಟಗಳನ್ನು ಗುರುತಿಸಲು ಈ ಬರಹಗಳು ನೆರವಾದಾವು ಎಂಬ ಆಸೆ ನನ್ನದು.

ಕುವೆಂಪು ಅವರು ಕನ್ನಡ ಸಂಸ್ಕೃತಿಯಲ್ಲಿ ನೆಲೆಗೊಂಡಿರುವ ಹಲವು ಸ್ತರಗಳನ್ನು ಗುರುತಿಸುವುದು ಅಗತ್ಯ. ಅವರು ಕೇವಲ ಹೆಸರಾಗಿಯೂ ವ್ಯಾಪಕತೆಯನ್ನು ಪಡೆದಿದ್ದಾರೆ. ಅವರ ಹೆಸರುಳ್ಳ ವಿಶ್ವವಿದ್ಯಾಲಯವೊಂದಿದೆ. ಹಲವಾರು ಊರುಗಳಲ್ಲಿ ಅವರ ಹೆಸರಿನ ಬಡಾವಣೆಗಳಿವೆ. ಊರಿನ ಬೀದಿಗಳಿಗೆ ಅವರ ಹೆಸರನ್ನು ಇರಿಸಿದ್ದಾರೆ. ಅವರ ಹಲವು ಮಾದರಿಯ ಪ್ರತಿಮೆಗಳನ್ನು ಹಲವು ಕಡೆ ಸ್ಥಾಪಿಸಲಾಗಿದೆ. ಅವರ ನೆನಪನ್ನು ಹಸಿರಾಗಿಡಲು ವ್ಯವಸ್ಥಿತವಾದ ಸಾಂಸ್ಥಿಕ ಪ್ರಯತ್ನಗಳು ನಡೆದಿವೆ. ಅವರು ಬರೆದ ಕವನವೊಂದು ನಾಡಗೀತೆಯಾಗಿದೆ. ಇನ್ನೊಂದು ಕವಿತೆ ರೈತಗೀತೆಯಾಗಿದೆ. ದಿನದಿನವೂ ಈ ಗೀತೆಗಳನ್ನು ಹಾಡುವುದನ್ನು ಕೇಳುತ್ತಿದ್ದೇವೆ. ಹಲವು ತರಗತಿಗಳ ಪಠ್ಯಪುಸ್ತಗಳಲ್ಲಿ ಅವರ ಕೃತಿಗಳನ್ನು ಸೇರಿಸಿ ಓದಲು ನಿಗದಿ ಮಾಡಲಾಗುತ್ತಿದೆ. ಅವರ ಕೃತಿಗಳು ಬಿಡಿಯಾಗಿ ಮತ್ತು ಸಂಪುಟಗಳಲ್ಲಿ ಮತ್ತೆಮತ್ತೆ ಅಚ್ಚಾಗುತ್ತಿವೆ. ಓದು/ಕೇಳು ಕೃತಿಗಳಾಗಿ ಅವರ ರಚನೆಗಳು ಮಾರ್ಪಟ್ಟಿವೆ. ಅವರ ಹೆಸರಿನಲ್ಲಿ ಅಖಿಲ ಭಾರತ ಮಟ್ಟದ ಸಾಹಿತ್ಯ ಪ್ರಶಸ್ತಿಯೊಂದಿದೆ. ಅವರು ರೂಪಿಸಿದ ಮಂತ್ರ ಮಾಂಗಲ್ಯ ವಿವಾಹ ಪದ್ಧತಿಯು ಸಾಕಷ್ಟು ವ್ಯಾಪಕವಾಗಿ ಎಳೆಯ ತಲೆಮಾರಿನವರಲ್ಲಿ ಆಚರಣೆಯಲ್ಲಿದೆ. ಮನುಜ ಮತ-ವಿಶ್ವ ಪಥ ಸಂದೇಶವು ಶಾಲಾ ಪಠ್ಯ ಪುಸ್ತಕಗಳ ಒಳ ಕವಚಗಳಲ್ಲಿ ಅಚ್ಚಾಗಿ ಓದುವ ಮಕ್ಕಳ ಗಮನಕ್ಕೆ ಬರುವಂತೆ ಮಾಡಲಾಗಿದೆ. ಸಾಂಸ್ಥಿಕ ಪ್ರಯತ್ನಗಳ ಮೂಲಕ ಹೊಸ ತಲೆಮಾರಿನ ಮಕ್ಕಳು ಕುವೆಂಪು ಅವರ ಬರಹಗಳನ್ನು ಓದುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದೆಲ್ಲದರ ನಡುವೆ ಸಮಾಜದ ಒಂದು ಸಮುದಾಯ ಅವರನ್ನು ತನ್ನ ಗುರುತನ್ನಾಗಿ ಮಾಡಿಕೊಳ್ಳುವ ಯತ್ನವನ್ನೂ ಮಾಡಿದ್ದಿದೆ.

Advertisements

ಶೈಕ್ಷಣಿಕ ನೆಲೆಯಲ್ಲಿ ಗಮನಿಸಿದರೆ ಕಳೆದ ಎಪ್ಪತ್ತೈದು ವರುಶಗಳಲ್ಲಿ ಸುಮಾರು ನಾಲ್ಕು ನೂರು ಪುಸ್ತಕಗಳು ಕುವೆಂಪು ಅವರ ಸಾಹಿತ್ಯ ಕೃತಿಗಳ ಅಧ್ಯಯನ ವಲಯದಲ್ಲಿ ಮೈದಳೆದಿವೆ. ಲೇಖನಗಳನ್ನು ಪಟ್ಟಿ ಮಾಡಿದರೆ ಅವುಗಳ ಸಂಖ್ಯೆ ಸಾವಿರವನ್ನು ದಾಟಿಯಾವು. ಪಿಎಚ್.ಡಿ ಪದವಿಗಾಗಿ ಬರೆದು ಸಲ್ಲಿಸಿರುವ ನಿಬಂಧಗಳು ಸರಿ ಸುಮಾರು ಅರವತ್ತು ಇವೆ. ಕುವೆಂಪು ಅವರ ಜನ್ಮ ಶತಾಬ್ದಿ ವರುಶವಾದ 2004ರಲ್ಲೇ ಅವರ ಬರಹಗಳನ್ನು ಆಧರಿಸಿದ 45 ಪುಸ್ತಕಗಳು ಪ್ರಕಟವಾಗಿವೆ. ಕುವೆಂಪು ಅವರ ಸಾಹಿತ್ಯದ ಅಧ್ಯಯನಕ್ಕಾಗಿಯೇ ಮೀಸಲಾದ ನಿಯತಕಾಲಿಕೆಯೊಂದು ಹರಿಹರಪ್ರಿಯರಿಂದ ಆರಂಭಗೊಂಡಿತ್ತು. ಈ ಎಲ್ಲ ಬರಹಗಳು ಕುವೆಂಪು ಅವರ ಸೃಜನಶೀಲ ಕೃತಿಗಳನ್ನು ಗಮನಿಸುವಷ್ಟೇ ಪ್ರಮಾಣದಲ್ಲಿ ಅವರ ಸಾಮಾಜಿಕ-ಸಾಂಸ್ಕೃತಿಕ ವಿಚಾರಧಾರೆಗಳ ಚರ್ಚೆಗೂ ಗಮನ ಹರಿಸಿವೆ.

ಈ ಎಲ್ಲ ಬರಹಗಳನ್ನು ಪರಿಶೀಲಿಸಿ ಕುವೆಂಪು ಅವರನ್ನು ಕನ್ನಡ ಚಿಂತನೆಯು ಗ್ರಹಿಸುತ್ತಿರುವ ಕ್ರಮದಲ್ಲಿ ಆಗಿರುವ ಬೆಳವಣಿಗೆ ಮತ್ತು ಬದಲಾವಣೆಗಳನ್ನು ಗುರುತಿಸುವುದು ಸುಲಭದ ಕೆಲಸ ಅಲ್ಲವೆಂಬುದನ್ನು ಮರೆಯುವಂತಿಲ್ಲ. ಕುವೆಂಪು ಅವರ ಕೃತಿಗಳನ್ನು ಹಲವು ನೆಲೆಗಳಲ್ಲಿ ಅರಿಯಲು ಅನುಕೂಲವಾಗುವ ಪರಿಕರಗಳೂ ಕನ್ನಡದಲ್ಲಿ ಸಿದ್ಧಗೊಂಡಿಲ್ಲ. ಅವರ ಅಧಿಕೃತ ಜೀವನ ಚರಿತ್ರೆ ಕೂಡ ಈವರೆಗೆ ರಚನೆಯಾಗಿಲ್ಲ. ಒಂದೆರಡು ಜೀವನ ಚರಿತ್ರೆಯ ಮಾದರಿಯ ಕೃತಿಗಳು ಕಾಣಸಿಗುತ್ತವೆಯಾದರೂ ಅವುಗಳಲ್ಲಿರುವ ಕೊರತೆಯನ್ನು ತುಂಬುವ ಬೇರೆ ಯಾವ ಯತ್ನಗಳೂ ನಡೆದಂತೆ ತೋರುವುದಿಲ್ಲ. ಕುವೆಂಪು ಅವರ ಆತ್ಮಚರಿತ್ರೆಯಾದ ನೆನಪಿನ ದೋಣಿಯಲ್ಲಿ ಕೃತಿಯು ಅವರ ಬದುಕಿನ ಮೊದಲ ಮೂರೂ ದಶಕಗಳ ಅವಧಿಯನ್ನು ಮಾತ್ರ ಒಳಗೊಂಡಿದೆ. ಆ ಕೃತಿಯ ಬಳಿಕ ಎರಡನೆಯ ಭಾಗವನ್ನು ಕುವೆಂಪು ಅವರೇ ಬರೆದರಾದರೂ ಅದು ಅತ್ಯಂತ ಸಂಕ್ಷಿಪ್ತವಾಗಿ ವಿವರಗಳ ಕೊರತೆಯಿಂದ ಸೊರಗಿದೆ.

ಇಷ್ಟೆಲ್ಲಾ ಇದ್ದರೂ ಕುವೆಂಪು ಬರಹಗಳು ಇತರ ನುಡಿಗಳನ್ನು ಆಡುವವರಿಗೆ ಪರಿಚಯವಾಗಿರುವ ಪ್ರಮಾಣ ತುಂಬಾ ಕಡಿಮೆ. ಸಾಂಸ್ಥಿಕ ಪ್ರಯತ್ನಗಳಿಂದಾಗಿ ಕೆಲವು ಕೃತಿಗಳು ಬೇರೆಬೇರೆ ನುಡಿಗಳಿಗೆ ಅನುವಾದಗೊಂಡು ಆ ನುಡಿಗಳ ಓದುಗರಿಗೆ ದೊರೆಯುವಂತಾಗಿದೆ ಎಂಬುದು ದಿಟ. ಆದರೆ ಬೇರೆ ನುಡಿಗಳಲ್ಲಿ ಪರಿಣಿತಿ ಪಡೆದ ಕನ್ನಡಿಗರು ಇಲ್ಲವೇ ಕನ್ನಡವನ್ನೂ ಬಲ್ಲ ಇತರ ನುಡಿಗಳ ಪರಿಣಿತರು ಕುವೆಂಪು ಕೃತಿಗಳ ಅನುವಾದಕ್ಕೆ ತೊಡಗಿರುವ ಕೆಲವು ಸಂದರ್ಭಗಳು ಇವೆಯಾದರೂ ಅದು ಗಣನೀಯವಾಗಿ ಕಾಣುತ್ತಿಲ್ಲ. ಕನ್ನಡದಿಂದ ನೇರವಾಗಿ ಅನುವಾದಿಸಲು ಸಿದ್ಧರಿರುವವರು ಉತ್ತರ ಭಾರತದ ನುಡಿಗಳಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಅವರು ಅನುವಾದಕ್ಕಾಗಿ ಹಿಂದಿ ಇಲ್ಲವೇ ಇಂಗ್ಲಿಷ್ ಅನುವಾದಗಳನ್ನು ಅವಲಂಬಿಸಿರುವುದನ್ನು ಕಂಡಿದ್ದೇವೆ. ಇದು ಒಂದು ಕೊರತೆ ಎಂದು ಪರಿಗಣಿಸಿ ಹೇಳುವ ಮಾತಲ್ಲ. ಕುವೆಂಪು ಅವರ ಬರವಣಿಗೆಯ ಹೆಚ್ಚಳವನ್ನು ಬೇರೆ ನುಡಿಗಳನ್ನಾಡುವ ಓದುಗರು ಅರಿಯಲು ಸಾಧ್ಯವಾಗುತ್ತಿಲ್ಲ. ಅದರಿಂದಾಗಿ ಆ ನುಡಿಗಳ ಸಾಹಿತ್ಯ ರಚನೆಯ ಮೇಲೆ ಕುವೆಂಪು ಅವರ ಪ್ರಭಾವವನ್ನು ಬಹುಮಟ್ಟಿಗೆ ಇಲ್ಲವಾಗಿಸಿದೆ.

KVN1

ಕುವೆಂಪು ಅವರ ಬರವಣಿಗೆಯ ಕಾಲಾವಧಿ ಸುಮಾರು ಆರು ದಶಕಗಳು. ಅವರು ಬರೆಯಲು ಮೊದಲು ಮಾಡಿದ ಹಂತದಿಂದ ಹಿಡಿದು ಮುಂದಿನ ಹಲವು ದಶಕಗಳಲ್ಲಿ ಅವರ ಬರಹಗಳ ಸಮರ್ಥನೆ, ವಿಶ್ಲೇಷಣೆ, ತೀವ್ರ ಟೀಕೆಗಳು ನಿರಂತರವಾಗಿ ಮಂಡನೆಯಾಗುತ್ತ ಬಂದಿವೆ. ಕೊಳಲು ಸಂಕಲನ ಪ್ರಕಟವಾದಾಗ (1930) ಧಾರವಾಡದ ಕಡೆಯಿಂದ ಬಂದ ವಿಮರ್ಶೆಯಿಂದ ಮೊದಲಾಗಿ ಕುವೆಂಪು ಬರಹಗಳನ್ನು ಕಿರಿಗಣ್ಣಿನಿಂದ ನೋಡುವ ಪರಂಪರೆಯೊಂದು ಬೆಳೆದು ಬಂತು. ಅಷ್ಟೇ ಪ್ರಮಾಣದಲ್ಲಿ ಅವರ ಬರಹಗಳ ಸಮರ್ಥನೆಯೂ ನಡೆದು ಬಂದಿದೆ. ರಾಜೇಂದ್ರ ಬಡಿಗೇರ ಅವರು ತಮ್ಮ ಪಿಎಚ್.ಡಿ ನಿಬಂಧದ ಒಂದು ಅಧ್ಯಾಯವನ್ನು ಚಿಕ್ಕ ಪುಸ್ತಕವನ್ನಾಗಿ ಪ್ರಕಟಿಸಿದ್ದಾರೆ. ಆ ಪುಸ್ತಕದಲ್ಲಿ ಕುವೆಂಪು ಮತ್ತು ಬೇಂದ್ರೆ ಅವರನ್ನು ಮುಖಾಮುಖಿಯಾಗಿಸುವ ಪ್ರಯತ್ನಗಳ ಚರಿತ್ರೆಯನ್ನು ಅನಾವರಣ ಮಾಡಿದ್ದಾರೆ. ಸುಮಾರು ನಾಲ್ಕುನೂರು ಉಲ್ಲೇಖಗಳನ್ನು ಆಧರಿಸಿರುವ ಅವರ ಈ ಬರಹದಲ್ಲಿ ಕುವೆಂಪು ಮತ್ತು ಬೇಂದ್ರೆಯವರ ನಡುವೆ ನಡೆದಿರಬಹುದಾದ ಸೃಜನಾತ್ಮಕ ನೆಲೆಯ ಸಂವಾದಗಳನ್ನು ಗುರುತಿಸಿಲ್ಲ. (ಅಂತಹ ಪ್ರಯತ್ನಗಳನ್ನು ಬೇರೆ ಯಾರಾದರೂ ವಿಮರ್ಶಕರು ಪ್ರಾಸಂಗಿಕವಾಗಿ ಮಾತ್ರವಲ್ಲದೆ ವ್ಯವಸ್ಥಿತವಾಗಿ ಮಾಡಿರುವುದು ನನ್ನ ಸೀಮಿತ ಓದಿನಲ್ಲಿ ಕಂಡಿಲ್ಲ) ಬದಲಿಗೆ ಅವರಿಬ್ಬರ ಬರವಣಿಗೆಯನ್ನು ಆಧರಿಸಿ ಬರೆದವರು ತಂತಮ್ಮಲ್ಲೇ ಎರಡು ತುದಿಗಳಲ್ಲಿ ನಿಂತು ವಾಗ್ವಾದಗಳನ್ನು ಬೆಳೆಸಿದ್ದನ್ನು ವಿವರಿಸಿದ್ದಾರೆ. ಈ ಬಗೆಯ ಬರಹಗಳು ದೊಡ್ಡ ಪ್ರಮಾಣದಲ್ಲಿ ಕಾಣಸಿಗುತ್ತವೆ. ಈ ಚೌಕಟ್ಟಿನ ಬರಹಗಳಿಂದ ಕುವೆಂಪು ಅವರ ಬರಹಗಳನ್ನು ಚಿಂತನೆಗಳನ್ನು ಹೊಸ ತಲೆಮಾರು ಅರಿಯಲು ಸಿಗುವ ನೆರವು ತುಂಬಾ ಕಡಿಮೆ.‌

ಶೂದ್ರ ತಪಸ್ವಿ ನಾಟಕವನ್ನು ಕುವೆಂಪು ಅವರು ಬರೆದಾಗ ನಡೆದ ಚರ್ಚೆಗಳು ಬೇರೆ ದಿಕ್ಕಿನಲ್ಲಿವೆ. ಈ ಚರ್ಚೆಗಳೇ ಒಂದು ಬಗೆಯಲ್ಲಿ ಕುವೆಂಪು ಅವರ ಬರಹಗಳನ್ನು ಓದುವ ಒಂದು ಹೊಸ ದಾರಿಯನ್ನು ರೂಪಿಸಿಕೊಳ್ಳಲು ಕಾರಣವಾದಂತಿದೆ. ಅದರ ನೆಲೆ ಎಂದರೆ ಕುವೆಂಪು ಅವರನ್ನು ಶೂದ್ರ ಬರಹಗಾರರು ಎಂದು ಗುರುತಿಸುವುದು. ಕುವೆಂಪು ಅವರ ಕವಿತೆಗಳಲ್ಲಿ ಮತ್ತು ವಿಮರ್ಶಾ ಬರಹಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕೃತ ನುಡಿಯ ಪದಗಳ ಬಳಕೆಯಾಗಿದೆ ಎನ್ನುವ ನಿಲುವೊಂದನ್ನು ಪ್ರಚುರಪಡಿಸದ್ದನ್ನು ಕಂಡಿದ್ದೇವೆ. ಸಂಸ್ಕೃತ ಭೂಯಿಷ್ಟತೆ ಎಂದು ಗುರುತಿಸಿ ಅದನ್ನೊಂದು ದೋಷವೆಂದು ವಾದಿಸಲಾಗಿದೆ. ಈ ನಿಲುವಿಗೆ ಅಗತ್ಯವಾದ ಪುರಾವೆಗಳನ್ನು ಆ ನಿಲುವನ್ನು ಮಂಡಿಸಿದವರು ಕೊಡಲಿಲ್ಲ ಎನ್ನುವುದನ್ನು ಬದಿಗಿರಿಸೋಣ. ಆದರೆ ಈ ‘ಟೀಕೆ’ಯ ತಳಹದಿಯನ್ನು ಒಪ್ಪಿಕೊಂಡು ಹಾಗೆ ಸಂಸ್ಕೃತವನ್ನು ಹೆಚ್ಚು ಪ್ರಮಾಣದಲ್ಲಿ ಕುವೆಂಪು ಅವರು ಬಳಸಲು ಅವರ ಶೂದ್ರ ಹಿನ್ನೆಲೆಯೇ ಕಾರಣವೆಂಬ ಒಂದು ವಾದವನ್ನು ಮುಂದಿಟ್ಟದ್ದನ್ನು ನೋಡುತ್ತೇವೆ. 1971ರ ಸುಮಾರಿನಲ್ಲಿ ಡಾ.ಜಿ.ಎಸ್. ಶಿವರುದ್ರಪ್ಪನವರು ‘ಕುವೆಂಪು ಅವರು ಶೂದ್ರರಾಗಿದ್ದರು. ಅದರಿಂದ ಅವರಿಗೆ ತಮ್ಮಿಂದ ಸಹಜವಾಗಿಯೇ ದೂರ ಉಳಿದಿದ್ದ ಸಂಸ್ಕೃತ ನುಡಿಯ ಮೇಲಿನ ಪ್ರಭುತ್ವವನ್ನು ಪಡೆದುಕೊಳ್ಳಲು ವಿಶೇಷ ಪ್ರಯತ್ನವನ್ನು ಮಾಡಬೇಕಾಯಿತು; ಮತ್ತು ಇದೇ ಕಾರಣದಿಂದ ಅವರು ತಾವು ಪಡೆದುಕೊಂಡಿದ್ದ ಈ ಪ್ರಭುತ್ವವನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ ಬಿಂಬಿಸಿದ್ದು ಸಹಜವೇ ಆಗಿತ್ತು’ ಎಂಬ ನೆಲೆಯ ವಿವರಣೆಯನ್ನು ಮಂಡಿಸಿದರು.

ಇದನ್ನು ಓದಿದ್ದೀರಾ?: ಭಾರತದಲ್ಲಿ ಮುಸ್ಲಿಂ ದ್ವೇಷ ಹರಡಲು AI ಚಿತ್ರ- ವಿಡಿಯೋಗಳ ವ್ಯಾಪಕ ಬಳಕೆ: ಅಧ್ಯಯನ ವರದಿ

ಈ ನೆಲೆಯಲ್ಲಿ ಕುವೆಂಪು ಅವರ ಬರಹಗಳನ್ನು ನೋಡುವ, ವಿಶ್ಲೇಷಿಸುವ ಪ್ರಯತ್ನಗಳು ಕೆಲವೊಮ್ಮೆ ಸೂಕ್ಷ್ಮವಾಗಿ ಮತ್ತೆ ಕೆಲವೊಮ್ಮೆ ಒರಟಾಗಿ ನಡೆಯುತ್ತ ಬಂದದ್ದನ್ನು ಕಾಣುತ್ತೇವೆ. ಇದರ ತಾರ್ಕಿಕ ನೆಲೆ ಮತ್ತಷ್ಟು ವಿಸ್ತಾರಗೊಂಡದ್ದು ಪೂರ್ಣಚಂದ್ರ ತೇಜಸ್ವಿಯವರ ಚಿಂತನೆಗಳಲ್ಲಿ. ಅವರು ಕನ್ನಡ ಸಾಹಿತ್ಯದಲ್ಲಿ ವೈದಿಕ ಪರಂಪರೆಯ ವಿರುದ್ಧ ಮೊದಲಿನಿಂದಲೂ ಕಂಡುಬಂದಿರುವ ಪ್ರತಿಭಟನೆಯ ಇಪ್ಪತ್ತನೆಯ ಶತಮಾನದ ಪ್ರತಿನಿಧಿಯಾಗಿ ಕುವೆಂಪು ಅವರನ್ನು ಪರಿಗಣಿಸಬೇಕೆಂದು ಹೇಳಿದರು. ತೇಜಸ್ವಿಯವರ ವ್ಯಾಖ್ಯಾನವನ್ನು ಇಡಿಯಾಗಿ ಒಪ್ಪಿದವರ ಎದುರು ಇದ್ದ ಸಮಸ್ಯೆಯೆಂದರೆ ಅವೈದಿಕ ಸಂವೇದನೆಯ ಮೂಲಕ ಕುವೆಂಪು ಅವರ ಬರಹಗಳನ್ನು ಓದುವುದು ಹೇಗೆ ಎಂಬುದಾಗಿತ್ತು. ವೈದಿಕ ಸಂವೇದನೆಯಿಂದ ಓದುವವರಿಗೆ ಕುವೆಂಪು ಅವರ ಬರಹಗಳನ್ನು ಅರಿಯುವುದು ಒಪ್ಪುವುದು ಕಷ್ಟವಷ್ಟೇ ಅಲ್ಲ; ಅಸಾಧ್ಯವೂ ಕೂಡ ಎಂಬ ನಿಲುವನ್ನು ತೇಜಸ್ವಿಯವರೇ ತಳೆದದ್ದು ಉಂಟು.

ಕುವೆಂಪು ಅವರೊಡನೆ ಹಲವರು ಸಂದರ್ಶನಗಳನ್ನು ನಡೆಸಿದ್ದಾರಷ್ಟೆ. ಅಂತಹ ಕೆಲವು ಸಂದರ್ಶನಗಳಲ್ಲಿ ಈ ಶೂದ್ರ ಸಂವೇದನೆಯ ಮಾತೂ ಬಂದಿದೆ. ‘ಪಾಂಚಾಲಿ’ ವಿಶೇಷಾಂಕಕ್ಕಾಗಿ ಪಿ.ಲಂಕೇಶ್ ಅವರು ಮಾಡಿದ ಸಂದರ್ಶನದಲ್ಲಿ ʼʼನನ್ನ ಜೀವನ ದರ್ಶನ… ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅವಲಂಬಿಸುತ್ತದೆ. ಅದನ್ನು ʼನಿಮ್ಮಲ್ಲಿʼ ಕೆಲವರು ʼವೈದಿಕʼ ಎಂದು ನಿಂದಿಸಿ ಜರೆಯುವ ರೀತಿಯಲ್ಲಿ ʼಅವರಲ್ಲಿʼ ಕೆಲವರು ʼಅವೈದಿಕʼ ಎಂದೂ ತಿರಸ್ಕರಿಸುತ್ತಾರೆʼʼ ಎಂದಿದ್ದಾರೆ. ಅವರ ಈ ಮಾತುಗಳನ್ನು ಮತ್ತು “ನೀವು” “ಅವರು” ಎಂದು ಹೆಸರಿಸಿರುವ ಬಗೆಯನ್ನು ಗಮನಿಸಿ. ಮತ್ತು ತಮ್ಮ ಸಾಹಿತ್ಯವನ್ನು ಶೂದ್ರ ಸಂವೇದನೆಯಿಂದ ಮೈದಳೆದದ್ದು ಎಂದು ವಿವರಿಸುವುದು ಅವರಿಗೆ ಸಮ್ಮತವಾಗಿರಲಿಲ್ಲ ಎಂದು ಅವರು ಹೇಳಿರುವ ಮೇಲಿನ ಮಾತುಗಳಿಂದ ತಿಳಿಯಲು ಸಾಧ್ಯವಿದೆ. ಹಾಗಾಗಿ ವಿಮರ್ಶೆಯ ಈ ನಿಲುವು ಅವರಿಗೆ ಅಷ್ಟು ಸರಿ ಎನಿಸಿದಂತೆ ತೋರುವುದಿಲ್ಲ. ಬರಹಗಾರರು ತಮ್ಮ ಬರಹಗಳನ್ನು ಯಾವ ಬಗೆಯಲ್ಲಿ ನೋಡಬೇಕೆಂದು ಬಯಸುತ್ತಾರೆಂಬುದು ಅಷ್ಟು ಮುಖ್ಯವಲ್ಲ. ಆದರೂ ಶೂದ್ರ ಸಂವೇದನೆಯನ್ನು ಅವಲಂಬಿಸಿ ತಮ್ಮ ಬರಹಗಳನ್ನು ನೋಡಬೇಕೆಂಬ ನಿಲುವನ್ನು ಕುವೆಂಪು ತಮ್ಮದೇ ಆದ ರೀತಿಯಲ್ಲಿ ನಿರಾಕರಿಸಿದಂತೆ ತೋರುತ್ತದೆ. ವಿಶ್ವಮಾನವ ಪ್ರಜ್ಞೆಯನ್ನು ಪ್ರತಿಪಾದಿಸುತ್ತಿದ್ದ ಅವರು ಖಂಡ ದೃಷ್ಟಿಯನ್ನು ಅವಲಂಬಿಸುವುದನ್ನು ಅಷ್ಟಾಗಿ ಒಪ್ಪಿದಂತೆ ಕಾಣುವುದಿಲ್ಲ.

ಪುಸ್ತಕಕ್ಕಾಗಿ: ಆಕೃತಿ ಪುಸ್ತಕ-9611541806

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ಪ್ರೊ.ಬಿ.ವಿ.ವೀರಭದ್ರಪ್ಪ ವೈಚಾರಿಕ ಸಾಹಿತ್ಯ ಸಂವಾದ

ಬೆಂಗಳೂರಿನ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ 'ಮರೆಯಲಾಗದ ಮಹನೀಯರು' ಕಾರ್ಯಕ್ರಮದ ಭಾಗವಾಗಿ ಪ್ರೊ.ಬಿ.ವಿ.ವೀರಭದ್ರಪ್ಪ...

ಚಿತ್ರದುರ್ಗ | ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಪಾತ್ರ, ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ

ಶ್ರೀವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ವತಿಯಿಂದ ಶನಿವಾರ ಚಿತ್ರದುರ್ಗ...

ಕಳಚಿದ ‌’ಪತ್ರಿಕಾಧರ್ಮ’ದ ʻಭದ್ರ ಕೊಂಡಿʼ ಟಿ ಜೆ ಎಸ್‌ ಜಾರ್ಜ್

ನೇರಮಾತು, ರಾಜಿ ಮಾಡಿಕೊಳ್ಳದ ತೀಕ್ಷ್ಣವಾದ ನೋಟದಂಥ ಬರಹ, ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ನೀರಿಳಿಯದ...

ಭಾರತದಲ್ಲಿ ಮುಸ್ಲಿಂ ದ್ವೇಷ ಹರಡಲು AI ಚಿತ್ರ- ವಿಡಿಯೋಗಳ ವ್ಯಾಪಕ ಬಳಕೆ: ಅಧ್ಯಯನ ವರದಿ

ಭಾರತದ ಆನ್‌ಲೈನ್ ಇಕೋಸಿಸ್ಟಮ್‌ನ ಒಂದು ಮುಖ್ಯವಾದ ಅಂಶವೆಂದರೆ, ಮುಸ್ಲಿಮರು, ಕ್ರೈಸ್ತರು, ದಲಿತರು...

Download Eedina App Android / iOS

X