ಸಂವಿಧಾನದ 371(ಜೆ) ಕಲಂ ವಿರುದ್ಧ ಬೆಂಗಳೂರಿನಲ್ಲಿ ಹಸಿರು ಪ್ರತಿಷ್ಠಾನ ಹಮ್ಮಿಕೊಂಡಿರುವ ಪ್ರತಿಭಟನೆಯ ವಿರುದ್ಧ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ವಿವಿಧ ಕಾಲೇಜಿನ ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಾಮಾಜಿಕ ಚಿಂತಕರು, ಕನ್ನಡ, ದಲಿತ ಹಿಂದುಳಿದ, ಅಲ್ಪಸಂಖ್ಯಾತರ, ಕಾರ್ಮಿಕ, ರೈತ ಸಂಘಟನೆಗಳ ಪ್ರಮುಖರು ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ 371ನೇ (ಜೆ) ಕಲಂ ವಿರೋಧಿ ಶಕ್ತಿಗಳ ಧೋರಣೆಗೆ ಖಂಡಿಸಿ ಸಂವಿಧಾನ ವಿರೋಧಿ ಹಸಿರು ಪ್ರತಿಷ್ಠಾನ ನಿಷೇಧಿಸಲು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, “ಬೆಂಗಳೂರಿನಲ್ಲಿ ಹಸಿರು ಪ್ರತಿಷ್ಠಾನ ಸಂಘಟನೆಯವರು 371(ಜೆ) ಕಲಂ ವಿರುದ್ಧ24 ಜಿಲ್ಲೆಗಳ ಜನರಿಗೆ ಸುಳ್ಳು ಸುದ್ದಿ ಹುಟ್ಟಿಸಿ ಕಲ್ಯಾಣ ಕರ್ನಾಟಕದ ಸಂವಿಧಾನ ಬದ್ಧ ಹಕ್ಕಿನ ಮೂಲ ಉದ್ದೇಶ ಗಾಳಿಗೆ ತೂರಿ ತಪ್ಪು ಸಂದೇಶ ಪ್ರಚಾರ ಮಾಡುತಿದ್ದಾರೆ. ಇಂದಿನ ಸಾಂಕೇತಿಕ ಹೋರಾಟದ ಮೂಲಕ ಮೊದಲನೇ ಹಂತದ ಎಚ್ಚರಿಕೆ ನೀಡುತ್ತಿದ್ದೇವೆ” ಎಂದರು.
ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಾಂತಪ್ಪ ಸೂರನ್, ಚಂದ್ರಶೇಖರ ಶೀಲವಂತ, ಆಲ್ ಖಮರ್ ಸಂಸ್ಥೆಯ ಅಧ್ಯಕ್ಷ ಅಸದ್ ಅನ್ಸಾರಿ ಅವರು ಮಾತನಾಡಿದರು.
“ಹಸಿರು ಪ್ರತಿಷ್ಠಾನ 371ನೇ (ಜೆ) ಕಲಂ ವಿರುದ್ಧ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ವಿರುದ್ಧ ಹಾಗೂ ಸಂವಿಧಾನ ವಿರುದ್ಧ ನಡೆಸುತ್ತಿರುವ ಹೋರಾಟಗಳಿಗೆ ಸರಕಾರ ತಕ್ಷಣವೇ ನಿಷೇಧಿಸಬೇಕು. ಇಂತಹ ಹೋರಾಟಕ್ಕೆ ನಾವು ಬಲವಾಗಿ ಖಂಡಿಸುತ್ತೇವೆ, ಇದಕ್ಕೆ ಸರಕಾರ ಸ್ಪಂದಿಸಬೇಕು. ಹಸಿರು ಪ್ರತಿಷ್ಠಾನ ಸಂಘಟನೆ ದೇಶದಲ್ಲಿ ದೇಶದ್ರೋಹಿ ಕೃತ್ಯಗಳನ್ನು ಮಾಡುವಂತಹ ಮಾನದಂಡದಂತೆಯೇ ಸಂವಿಧಾನ ತಿದ್ದುಪಡಿಯ ವಿರುದ್ಧ ಮತ್ತು ಕರ್ನಾಟಕ ರಾಜ್ಯ ಒಡೆಯುವಂತಹ ನೀಚ ಕೃತ್ಯ ಮಾಡುತ್ತಿರುವುದನ್ನು ಗಮನಿಸಿ ತಕ್ಷಣ ಆ ಸಂಘಟನೆಯನ್ನು ನಿಷೇಧಿಸಬೇಕು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು” ಎಂದು ಆಗ್ರಹಿಸಿದರು.
“ಸಂವಿಧಾನದ 371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ‘ಪ್ರತ್ಯೇಕ ಸಚಿವಾಲಯ’ ಸ್ಥಾಪನೆ ಯಾಗಬೇಕು. 371 (ಜೆ) ಕಲಂ ವ್ಯಾಜ್ಯಗಳ ನಿವಾರಣೆಗೆ ‘ಪ್ರತ್ಯೇಕ ಟ್ರಿಬ್ಯೂನಲ್’ ಕಲಬುರಗಿಯ ವಿಭಾಗೀಯ ಕೇಂದ್ರದಲ್ಲಿ ಸ್ಥಾಪಿಸಬೇಕು. ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ವಯೋ ರಿಯಾಯಿತಿ ಮತ್ತು ನೇಮಕಾತಿಯಲ್ಲಿ ಕೃಪಾಂಕ ನೀಡಬೇಕು. 371 (ಜೆ) ವಿಶೇಷ ಸ್ಥಾನಮಾನದ ನಿಯಮಾವಳಿಯಂತೆ ಶೇ.8% ರಷ್ಟು ಮೀಸಲಾತಿಯನ್ನು ರಾಜ್ಯಮಟ್ಟದ ಎಲ್ಲಾ ಇಲಾಖೆಗಳಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು” ಎಂದು ಒತ್ತಾಯಿಸಿದರು.
“371 (ಜೆ) ಕಲಂ ನಿಯಮಾವಳಿಯಂತೆ ರಾಜ್ಯದ ನೇಮಕಾತಿಗಳಲ್ಲಿ ವಿನಾಕಾರಣ ದ್ವಂದ್ವ ಸೃಷ್ಟಿಸಿ ನೇಮಕಾತಿ ಪಟ್ಟಿಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು, ಅದರಂತೆ ನೇಮಕಾತಿಯಾದ ನಂತರವೂ ಸಹ ಅಭ್ಯರ್ಥಿಗಳಿಗೆ ಅಧಿಕೃತ ಆದೇಶ ನೀಡದೇ ನಿರ್ಲಕ್ಷ ವಹಿಸುತ್ತಿರುವ ನೀತಿಯನ್ನು ತಕ್ಷಣ ಕೈಬಿಟ್ಟು ಸಹಜ ಪ್ರಕ್ರಿಯೆಯಂತೆ ನಮಗೆ ನ್ಯಾಯ ಒದಗಿಸಿಕೊಡಬೇಕು. ಖಾಲಿ ಇರುವ ನಮ್ಮ ಪಾಲಿನ ಎಲ್ಲ ಹುದ್ದೆಗಳನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ಹಕ್ಕೊತ್ತಾಯ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಳಕೆಯಾಗದ ಪ್ರದೇಶಾಭಿವೃದ್ಧಿ ನಿಧಿ; ಶಾಸಕರಾಗಿ ಮುಂದುವರಿಯಲು ಯೋಗ್ಯರಲ್ಲ
ಪ್ರತಿಭಟನೆಯಲ್ಲಿ ಪ್ರಮುಖರಾದ ಪ್ರತಾಪಸಿಂಗ್ ತಿವಾರಿ,ಆರ್ ಕೆ ಹುಡುಗಿ, ಬಸವರಾಜ ಕುಮ್ಮನೂರ್, ಡಾ.ಗಲಶೆಟ್ಟಿ, ಡಾ.ಶರಣಪ್ಪ ಸೈದಾಪುರ, ಡಾ.ಸಗೀತಾ ಕಟ್ಟಿ, ಡಾ.ಮಾಜೀದ ದಾಗಿ, ಪ್ರೊ.ಬಿರಾದಾರ ಮೇಡಮ್, ರೇಣುಕಾ ಸಿಂಘೆ, ಡಾ.ಗಾಂಧೀಜಿ ಮೋಳಕೇರಿ, ಡಾ.ಮಲ್ಲಿಕಾರ್ಜುನ ಶೆಟ್ಟಿ, ಡಾ.ಹರ್ಷವರ್ಧನ, ಡಾ.ಮಾಜಿದ್, ಡಾ.ಆನಂದ ಸಿದ್ದಾಮಣಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ಲಿಂಗರಾಜ ಸಿರಗಾಪೂರ, ಶರಣು ಐ.ಟಿ, ಮುತ್ತಣ್ಣ ನಾಡಗೇರಿ, ಮಂಜುನಾಥ ನಾಲವರಕರ್, ಸಚಿನ್ ಫರತಾಬಾದ, ಗೋಪಾಲ ನಾಟಿಕರ್, ದತ್ತು ಶಿವಲಿಂಗಪ್ಪ ಭಂಡಕ, ಮನೋಹರ್ ಬೀರನೋರ,ಭಾಸಗಿ,ರವಿ ದೇಗಾವ, ಆನಂದ ಕಪನೂರ ಸೇರಿದಂತೆ ಆಯಾ ಕ್ಷೇತ್ರದ ನೂರಾರು ಗಣ್ಯರು ಉಪಸ್ಥಿತರಿದ್ದರು.