ನೆನಪು | ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ

Date:

Advertisements
ಪಾತ್ರಗಳಿಗೆ ಹಾಸ್ಯದ ಲೇಪನಗಳನ್ನು ಹಚ್ಚುತ್ತಲೇ ಬದುಕಿನ ವಿಷಾದ, ಸಂತಸ, ಧೂರ್ತತನ ಮತ್ತು ಉದಾತ್ತ ಭಾವನೆಗಳನ್ನು ಅನಾವರಣಗೊಳಿಸುವ ಬಾಲಣ್ಣರ ಅಭಿನಯ ಶೈಲಿ ಅನನ್ಯ. ಈ ವಿಷಯದಲ್ಲಿ ಬಾಲಣ್ಣನಿಗೆ ಬಾಲಣ್ಣನೇ ಹೋಲಿಕೆ. ಇಂದು ಅವರು ಇಲ್ಲವಾದ ದಿನ. ಅವರ ನೆನಪಿಗಾಗಿ...

ನಟ ಬಾಲಕೃಷ್ಣ ಅವರಿಗೆ ತಂದೆ ತಾಯಿಗಳ ನೆನಪಿರಲಿಲ್ಲ. ಹುಟ್ಟಿದ ದಿನ ತಿಳಿದಿರಲಿಲ್ಲ. ಹೆಸರಿಗೆ ಟಿ.ಎನ್. ಹೇಗೆ ಅಂಟಿತೋ ಗೊತ್ತಿಲ್ಲ. ಅದರ ಅರ್ಥವೂ ತಿಳಿಯದು. ಹುಟ್ಟಿದ್ದು ಅರಸೀಕೆರೆಯಲ್ಲಿ ಎರಡು ವರ್ಷದ ಕೂಸಾಗಿದ್ದಾಗಲೇ ಹೆತ್ತವರು ಎಂಟು ರೂಪಾಯಿಗೆ ಅವರನ್ನು ಮಾರಿದರು. ಸಾಕು ತಾಯಿಯ ಆಶ್ರಯದಲ್ಲೇ ಬೆಳೆದ ಬಾಲಕನಿಗೆ ಬದುಕಿನ ಎಲ್ಲಾ ಕಷ್ಟ ಕಾರ್ಪಣ್ಯಗಳು ಬಾಲ್ಯದಲ್ಲೇ ಪರಿಚಿತವಾದವು.

ಬಾಲಕನಿಗೆ ಇದ್ದ ಒಂದೇ ಒಂದು ದೌರ್ಬಲ್ಯವೆಂದರೆ ನಾಟಕದ ಗೀಳು. ಅದರ ದೆಸೆಯಿಂದ ಎಂಟನೇ ತರಗತಿ ಪಾಸು ಮಾಡಲಾಗದ ಆತನನ್ನು ಸಾಕಿದ ಮನೆಯವರು ಮನೆಯಿಂದ ಹೊರಕ್ಕೆ ಕಳುಹಿಸಿದರು. ಬೀದಿಗೆ ಬಿದ್ದ ಬಾಲಕ ಬದುಕಬೇಕೆಂಬ ಅದಮ್ಯ ಛಲದಿಂದ ಜತೆಯ ಹುಡುಗರನ್ನು ಕೂಡಿ ಹಾಕಿ ದೇವಾಲಯಗಳ ಆವರಣದಲ್ಲಿ ನಾಟಕವಾಡಿಸಿದ. ಕೆಲಕಾಲ ಅಂಗಡಿಯ ಫಲಕಗಳನ್ನು ಬರೆದು ಹಣ ಸಂಪಾದಿಸಿ ಬದುಕಿದ.

ಬಾಲಕೃಷ್ಣ ಅವರಿಗೆ ‘ಚಂದ್ರಹಾಸ’ನ ಹೆಸರು ಹೆಚ್ಚು ಅನ್ವರ್ಥವಾಗುತ್ತದೆ. ಚಂದ್ರಹಾಸನಂತೆಯೇ ತಬ್ಬಲಿಯಾಗಿ ಬೆಳೆದ ಅವರಿಗೆ ಆಶ್ರಯ ನೀಡಿದ್ದು ರಾಜ್ಯಾಧಿಕಾರವಲ್ಲ. ಬದಲು ಕಲಾರಂಗ. “ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ” ಎಂಬ ಅ.ನ.ಕೃ. ಅವರ ಮಾತು ಇವರ ಬದುಕಿನಲ್ಲಿ ನಿಜವಾಯಿತು. ಅಂಗಡಿ ಫಲಕಗಳನ್ನು ಬರೆಯುತ್ತಿದ್ದ ಬಾಲಕೃಷ್ಣ ಅರಸೀಕೆರೆಗೆ ಬಂದು ಹಾರ್ಮೊನಿಯಂ ಮಾಸ್ತರ್ ಗಿರೀಗೌಡರ ನಾಟಕ ಮಂಡಲಿಗೆ ಸೇರಿದರು. ಅಲ್ಲಿ ಬಾಗಿಲು ಕಾಯುವ, ಪರದೆ ಎಳೆವ, ಸೈಡ್‌ವಿಂಗ್ ಜೋಡಿಸುವ, ಬಣ್ಣ ಹಚ್ಚುವ ಕಾಯಕದಿಂದ ಹಿಡಿದು, ಸಣ್ಣ ಪುಟ್ಟ ಪಾತ್ರಗಳವರೆಗೆ ಅವರ ಕಾರ್ಯಕ್ಷೇತ್ರ ವಿಸ್ತರಿಸಿತು. ಅನಂತರ ಲಕ್ಷ್ಮಾಸಾನಿ ನಾಟಕ ಮಂಡಲಿ, ನೀಲಕಂಠಪ್ಪನವರ ಗೌರಿಶಂಕರ ನಾಟಕ ಸಭಾ, ಗಂಜಾಂ ಬ್ಯಾಟಪ್ಪನವರ ಭಾರತ ಮಾತಾ ನಾಟಕ ಸಭಾ, ಭಗವತಿ ನಾಟಕ ಸಭಾ ಹಾಗೂ ಗುಬ್ಬಿ ಚನ್ನಬಸವೇಶ್ವರ ನಾಟಕ ಮಂಡಲಿಯಲ್ಲಿ ಅಭಿನಯಿಸುತ್ತ ಪ್ರಮುಖ ನಟರಾಗಿ ಪ್ರವರ್ಧಮಾನಕ್ಕೆ ಬಂದರು.

Advertisements

ಬಾಲಕೃಷ್ಣ ಅವರ ಅಭಿನಯ ಸಾಮರ್ಥ್ಯವು ವೈಶಾಲ್ಯವನ್ನು ಕಂಡಿದ್ದು ಚಲನಚಿತ್ರಗಳಲ್ಲಿ. 1943ರಲ್ಲಿ ತಯಾರಾಗಿ ಬಿಡುಗಡೆಯಾದ ಎಂ.ವಿ.ರಾಜಮ್ಮನವರ ಚಿತ್ರ ‘ರಾಧಾರಮಣ’ದ ಸಣ್ಣ ಪಾತ್ರದ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅನಂತರ ಅಲ್ಲಿಂದ ತ್ರಿವಿಕ್ರಮನಾಗಿ ಬೆಳೆದರು. ಎಲ್ಲರ ಬಾಯಲ್ಲಿ ಪ್ರೀತಿಯ ‘ಬಾಲಣ್ಣ’ನಾದರು.

ಇದನ್ನು ಓದಿದ್ದೀರಾ?: ಭಾರತೀಯ ತೆರೆಯನ್ನು ಆಳಿದ ತಾರೆ: ಬಿ. ಸರೋಜಾದೇವಿ

ಸುಮಾರು ಐದು ದಶಕಗಳ ಸುದೀರ್ಘ ಕಾಲ 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಬಾಲಣ್ಣ, ಮಾಡದ ಪಾತ್ರವಿಲ್ಲ. ಕನ್ನಡದ ಅತಿ ಹೆಚ್ಚು ಸಂಖ್ಯೆಯ ಹಿರಿಯ-ಕಿರಿಯ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಿರುವ ಹೆಗ್ಗಳಿಕೆ ಅವರದು. ಹಾಸ್ಯ, ಖಳನಾಯಕ, ನಾಯಕ, ಎಲ್ಲಾ ಬಗೆಯ ಪೋಷಕ ಪಾತ್ರಗಳಲ್ಲಿ ನಟಿಸಿರುವ ಅವರ ಅಭಿನಯ ರಂಜನಾ ಪ್ರಧಾನವಾದ್ದು. ಎಲ್ಲಾ ಪಾತ್ರಗಳಿಗೂ ಹಾಸ್ಯದ ಲೇಪನಗಳನ್ನು ಹಚ್ಚುತ್ತಲೇ ಬದುಕಿನ ವಿಷಾದ, ಸಂತಸ, ಧೂರ್ತತನ ಮತ್ತು ಉದಾತ್ತ ಭಾವನೆಗಳನ್ನು ಅನಾವರಣಗೊಳಿಸುವ ಅವರ ಅಭಿನಯ ಶೈಲಿ ಅನನ್ಯ. ಈ ವಿಷಯದಲ್ಲಿ ಬಾಲಣ್ಣನಿಗೆ ಬಾಲಣ್ಣನೇ ಹೋಲಿಕೆ.

520245630 23976241712045429 7278298636765512837 n

ಬಿ. ವಿಠಲಾಚಾರ್ಯ ಅವರ ‘ಕನ್ಯಾದಾನ'(1954) ಚಿತ್ರದಲ್ಲಿ ಅವರು ವಹಿಸಿದ ದಳ್ಳಾಳಿ ಸೀತಾರಾಮಯ್ಯನ ಪಾತ್ರ ಅವರಲ್ಲಿದ್ದ ನಟನನ್ನು ಪರಿಚಯಿಸಿತು. ‘ಪಂಚರತ್ನ’, ‘ಕನ್ಯಾರತ್ನ’, ‘ಕಲಿತರೂ ಹೆಣ್ಣೆ’, ‘ಕಲಾವತಿ’, ‘ಭೂದಾನ’, ‘ಕಣ್ಣೆರೆದು ನೋಡು’, ‘ಸಂತ ತುಕಾರಾಂ’, ‘ಚಂದವಳ್ಳಿಯ ತೋಟ’, ‘ಬೆಳ್ಳಿಮೋಡ’, ‘ರಣಧೀರ ಕಂಠೀರವ’, ‘ಇಮ್ಮಡಿ ಪುಲಿಕೇಶಿ’, ‘ವೀರಕೇಸರಿ’, ‘ಸಹಧರ್ಮಿಣಿ’, ‘ಬಂಗಾರದ ಮನುಷ್ಯ’, ‘ಮಯೂರ’, ‘ನಮ್ಮ ಸಂಸಾರ’, ‘ನಾ ನಿನ್ನ ಮರೆಯಲಾರೆ’, ‘ಪಟ್ಟಣಕ್ಕೆ ಬಂದ ಪತ್ನಿಯರು’… ಹೀಗೆ ಅವರ ಬಹುಮುಖ ಪ್ರತಿಭೆಯನ್ನು ಹೊರ ಹಾಕಿದ ಚಿತ್ರಗಳ ಪಟ್ಟಿಯೇ ದೊಡ್ಡ ಹೊತ್ತಗೆಯಾಗುತ್ತದೆ.

ಬಾಲಣ್ಣನ ದೈತ್ಯ ಪ್ರತಿಭೆ ಪರಿಚಯವಾಗಬೇಕಾದರೆ ಅವರಲ್ಲಿರುವ ದೈಹಿಕ ಕೊರತೆ ಅರಿಯಬೇಕು. ಬಹುಬೇಗನೆ ಶ್ರವಣಶಕ್ತಿಯನ್ನು ಕಳೆದುಕೊಂಡ ಬಾಲಣ್ಣನಿಗೆ ಅಭಿನಯ ಮತ್ತು ಸಂಭಾಷಣೆಯನ್ನು ಬರೆದು ಹೇಳಿಕೊಡಬೇಕಿತ್ತು. ಬೇರೊಬ್ಬ ನಟನ ತುಟಿ ಮತ್ತು ಅಂಗಾಂಗ ಚಲನೆಗಳ ಮೂಲಕವೇ ತನ್ನ ಪಾತ್ರವನ್ನು ಗ್ರಹಿಸಿ ಜೀವ ತುಂಬುವ ಅವರ ನಟನೆ ನಟನೆಯಾಗಿರಲಿಲ್ಲ. ಅದೊಂದು ಅಮೋಘ ಸೃಜನಶೀಲ ಕ್ರಿಯೆ. ಮಾತು ಜೋಡಿಸುವ ಘಟ್ಟದಲ್ಲೂ ತಮ್ಮ ತುಟಿ ಚಲನೆಯನ್ನು ನೋಡಿಕೊಂಡೇ ಧ್ವನಿಯ ಏರಿಳಿತವನ್ನು ನಿಯಂತ್ರಿಸುತ್ತಿದ್ದ ಅವರ ಪ್ರತಿಭೆ ಅಸಾಮಾನ್ಯ. ಪ್ರಾಯಶಃ ತಮ್ಮ ದೈಹಿಕ ಕೊರತೆಯನ್ನು ಮೆಟ್ಟಿ ನಿಂತು ಅವರಂತೆ ಅಭಿನಯ ಸಾಮರ್ಥ್ಯ ಮೆರೆದ ನಟ ಭಾರತ ಚಿತ್ರರಂಗದಲ್ಲೇ ಬೇರೊಬ್ಬರಿಲ್ಲ.

ಅರವತ್ತರ ದಶಕದಲ್ಲಿ ಕನ್ನಡ ಕಲಾವಿದರು ತಮ್ಮ ಬದುಕು ಸಾಗಿಸಲು ಕನ್ನಡ ಚಲನಚಿತ್ರ ಕಲಾವಿದರ ಸಂಘವನ್ನು ಕಟ್ಟಿ ‘ರಣಧೀರ ಕಂಠೀರವ’ ನಿರ್ಮಿಸಿದವರಲ್ಲಿ ಬಾಲಕೃಷ್ಣ ಕೂಡ ಒಬ್ಬರು.

ನಾಟಕ ಕಂಪನಿಯಲ್ಲಿರುವಾಗಲೇ ಬಾಲಕೃಷ್ಣ ಅವರು ನಾಟಕ ರಚನೆಯನ್ನೂ ಕೈಗೊಂಡಿದ್ದರು. ‘ಕಾಲಚಕ್ರ’ ಎಂಬ ನಾಟಕ ರಚಿಸಿ ಗುಬ್ಬಿ ಕಂಪನಿಯಲ್ಲಿ ಪ್ರಯೋಗಿಸಿದಾಗ ಸಂಪ್ರದಾಯಶರಣರ ವಿರೋಧವನ್ನು ಎದುರಿಸಬೇಕಾಯಿತು. ಆದರೆ ಆ ನಾಟಕ ಪ್ರಗತಿಶೀಲರ ಮನಗೆದ್ದಿತು. ಮುಂದೆ ‘ಭಾರತಲಕ್ಷ್ಮಿ’, ‘ಬೇಡರ ಕಣ್ಣಪ್ಪ’ ಮತ್ತು ‘ರಾಮ ರಾವಣ’ ಮೊದಲಾದ ನಾಟಕಗಳನ್ನು ರಚಿಸಿ ರಂಗಭೂಮಿಗೆ ತಂದರು. ಅವರು ಬದುಕಿನ ಕೊನೆಯವರೆಗೂ ಬರೆಯುತ್ತಲೇ ಇದ್ದದ್ದು ಹೆಚ್ಚಿನ ಜನರಿಗೆ ತಿಳಿದಂತಿಲ್ಲ. ಎಷ್ಟರ ಮಟ್ಟಿಗೆಂದರೆ ಎಪ್ಪತ್ತು ಎಂಬತ್ತು ದಶಕದವರೆಗೆ ಅವರು ‘ಪ್ರಜಾವಾಣಿ’ ಪತ್ರಿಕೆಯ ದೀಪಾವಳಿ ಸಂಚಿಕೆಯ ಕಥಾಸ್ಪರ್ಧೆಗೆ ತಮ್ಮ ಕತೆಗಳನ್ನು ಕಳುಹಿಸಿಕೊಡುತ್ತಿದ್ದರು. ಆದರೆ ಅವುಗಳಿಗೆ ಬಹುಮಾನ ಬರಲಿಲ್ಲ ಎನ್ನುವುದು ಬೇರೆ ಮಾತು. ಒಂದೆರಡು ಚಿತ್ರಗಳಿಗೂ ಬಾಲಣ್ಣ ಸಂಭಾಷಣೆ ಹಾಡು ಬರೆದಿದ್ದರು. ‘ಪಂಚರತ್ನ'(1956) ಎಂಬ ಪೌರಾಣಿಕ ಚಿತ್ರದ ಕತೆ, ಚಿತ್ರಕತೆ, ಗೀತೆ, ಸಂಭಾಷಣೆ ರಚಿಸಿದ ಬಾಲಕೃಷ್ಣ ಅವರು ಚಿತ್ರದ ಆರಂಭದಲ್ಲಿ ಕತೆಯ ವ್ಯಾಖ್ಯಾನವನ್ನೂ ನೀಡಿದ್ದಾರೆ. ಅವರು ಗೀತೆಗಳನ್ನು ರಚಿಸಿದ ಮತ್ತೊಂದು ಚಿತ್ರವೆಂದರೆ ‘ಶುಕ್ರದೆಸೆ'(1957).

ಬಹುಶಃ ಕನ್ನಡದ ಅತಿ ಹೆಚ್ಚು ನಿರ್ದೇಶಕರ ಕೈಕೆಳಗೆ ನಟಿಸಿದವರು ಬಾಲಕೃಷ್ಣ ಒಬ್ಬರೇ. ಸಹ ನಟಿಯರು, ತಂತ್ರಜ್ಞರು ಮತ್ತು ನಿರ್ದೇಶಕರ ಜತೆಗಿನ ಅವರ ಸಂಬಂಧ ಸದಾ ಸ್ನೇಹಪೂರ್ಣವಾಗಿತ್ತು. ಹಾಗಿದ್ದರು ಸಹ ಬದುಕಿನ ಕೊನೆಯಲ್ಲಿ ಹೊಸ ನಾಯಕ ನಟರೊಬ್ಬರು ಅವರ ದೈಹಿಕ ಕೊರತೆಯನ್ನು ಗೇಲಿಮಾಡಿದ್ದನ್ನು ತಿಳಿದು ನೊಂದಿದ್ದರು. ನಿರ್ದೆಶಕರು ಹಿರಿಯರಿರಲಿ, ಕಿರಿಯರಿರಲಿ, ಬಾಲಣ್ಣನಿಗೆ ಆ ಬಗ್ಗೆ ಚಿಂತೆ ಇರಲಿಲ್ಲ. ಪಾತ್ರದಲ್ಲಷ್ಟೇ ಮಾತ್ರ ಅವರು ತಲ್ಲೀನರಾಗಿರುತ್ತಿದ್ದರು. ಆದರೂ ಕೊನೆಗೆ ಅವರು ಸಹನಟನ ಗೇಲಿಯಿಂದ ಎಷ್ಟು ನೊಂದಿದ್ದರೆಂದರೆ ಇಡೀ ಸನ್ನಿವೇಶವನ್ನು ‘ಲಂಕೇಶ್ ಪತ್ರಿಕೆ’ಗೆ ಬರೆದು ಮನಸ್ಸು ಹಗುರ ಮಾಡಿಕೊಂಡಿದ್ದರು.

518319696 23976242855378648 1562525144161475992 n

ಬಾಲಣ್ಣನವರ ಪ್ರಯೋಗಗಳು ಇಷ್ಟಕ್ಕೆ ಮುಗಿಯಲಿಲ್ಲ. ಕನ್ನಡ ಚಿತ್ರರಂಗ ಕರ್ನಾಟಕದಲ್ಲೇ ಕಾಲೂರಬೇಕೆಂಬ ಅವರ ಕಳಕಳಿ ಸ್ಟುಡಿಯೋ ನಿರ್ಮಾಣಕ್ಕೆ ಪ್ರೇರಣೆ ನೀಡಿತು. ಹಾಗಾಗಿ ಸಾಲ ಎತ್ತಿದರು. ರಾಜಧಾನಿಗೆ ಅನತಿ ದೂರದ ಕೆಂಗೇರಿಯಲ್ಲಿ ‘ಅಭಿಮಾನ ಸ್ಟುಡಿಯೋ’ ಮೈದಾಳಿತು. ಆದರೆ ‘ಕಲೆಗಾರರಲ್ಲಿ ಕೆಲವರನ್ನು ಮಾತ್ರ ಭಾಗ್ಯಲಕ್ಷ್ಮಿ ಒಲಿಯುತ್ತಾಳೆ. ಉಳಿದವರನ್ನು ಸರಿಸುತ್ತಾಳೆ’ ಎಂಬ ಮಾತು ಬಾಲಣ್ಣನವರ ಬದುಕಿನಲ್ಲಿ ನಿಜವಾಯಿತು. ದುಡಿದ ಹಣವಲ್ಲದೆ, ಸಾಲದ ಹಣವನ್ನು ತಂದು ನಿರ್ಮಿಸಿದ ‘ಅಭಿಮಾನ ಸ್ಟುಡಿಯೋ’ ಅವರ ನಿರೀಕ್ಷೆಗೆ ತಕ್ಕಂತೆ ರೂಪುಗೊಳ್ಳಲಿಲ್ಲ. ಆರ್ಥಿಕವಾಗಿ ಮುಗ್ಗರಿಸಿದ ಬಾಲಣ್ಣ ಛಲ ಬಿಡದ ತ್ರಿವಿಕ್ರಮನಂತೆ ಅದರ ಬಗ್ಗೆಯೇ ಗೀಳು ಹತ್ತಿಸಿಕೊಂಡರು. ಎಪ್ಪತ್ತೊಂಬತ್ತರ ಹರೆಯದಲ್ಲೂ ಅದರ ಬಗ್ಗೆ ಚಿಂತಿಸುತ್ತಿದ್ದರು. ಏನೇ ಆಗಲೀ ‘ಅಭಿಮಾನ’ವನ್ನು ಸುಸಜ್ಜಿತಗೊಳಿಸುತ್ತೇನೆಂಬ ಹಠ ತೊಟ್ಟಿದ್ದರು.

ಆ ಗೀಳು, ಹಠ ಅವರ ಮೈಮನಸ್ಸನ್ನು ಆಕ್ರಮಿಸಿತು. ಶ್ರೀಕೃಷ್ಣದೇವರಾಯ ಸತ್ತ ಎಷ್ಟೋ ವರ್ಷಗಳ ನಂತರ ಹಂಪೆ ಹಾಳಾದರೆ, ಬಾಲಣ್ಣ ಬದುಕಿರುವಾಗಲೇ ತನ್ನ ಕನಸಿನ ಮನೆಯು ಕುಸಿಯುತ್ತಿರುವುದಕ್ಕೆ ಮೂಕ ಸಾಕ್ಷಿಯಾದರು.

ಬಾಲಣ್ಣನವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಒಂದು ಕಾಲದಲ್ಲಿ ಬಾಲಣ್ಣ-ನರಸಿಂಹರಾಜು ಅವರ ಜೋಡಿ ಕನ್ನಡ ಚಿತ್ರರಂಗದ ಮನೋರಂಜನೆಯ ದಿಗಂತಗಳನ್ನು ವಿಸ್ತರಿಸಿತ್ತು. ಅವರಿಬ್ಬರ ಜೋಡಿ ಕನ್ನಡ ಚಿತ್ರರಂಗದ ಆರಂಭದ ಬೆಳವಣಿಗೆಗೆ ಕಾರಣವಾಯಿತೆಂಬ ವಿಚಾರದಲ್ಲಿ ಸಹಮತವಿದೆ. ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಬಾಲಣ್ಣ ಕನ್ನಡ ಚಿತ್ರರಂಗದ ಇತಿಹಾಸದುದ್ದಕ್ಕೂ ಬೆಳೆದು ಬಂದಿದ್ದಾರೆ.

ತಬ್ಬಲಿ ಮಗುವಾಗಿ, ಅಂಗಡಿ ಬೋರ್ಡ್ ಬರೆವ ಕಲಾವಿದನಾಗಿ, ಗೇಟ್ ಕೀಪರ್‌ನಿಂದ ಹಿಡಿದು ಪರದೆ ಎಳೆವ, ಬಣ್ಣ ಬಳೆವ ಹುಡುಗನಾಗಿ ನಾಟಕ ರಂಗ ಮತ್ತು ಚಿತ್ರರಂಗದ ಪ್ರಮುಖ ನಟರಾಗಿ, ನಿರ್ಮಾಪಕರಾಗಿ, ನಾಟಕಕಾರರಾಗಿ, ಸ್ಟುಡಿಯೋ ಮಾಲೀಕರಾಗಿ ಬಾಲಣ್ಣ ಸಾಧನೆಯ ಹಿಮಾಲಯವನ್ನೇರಿದರು. ಕನ್ನಡ ಚಿತ್ರರಂಗದ ಪ್ರಾತಃಸ್ಮರಣೀಯರಲ್ಲಿ ಒಬ್ಬರಾದರು. ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಂಡು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ನಿಜವಾದ ಅರ್ಥದಲ್ಲಿ ‘ಕಲಾಭಿಮಾನಿ’ಯೇ ಆದರು.

ಬಾಲಣ್ಣನವರ ಅಭಿನಯ ಕೌಶಲ್ಯವನ್ನು ಅಳೆಯುವುದು ಹೇಗೆ? ಬಹುಶಃ ತಮ್ಮ ದೇಹದ ಪ್ರತಿಯೊಂದು ಅಂಗವನ್ನೂ ಅಭಿನಯಕ್ಕೆ ಬಳಸಿದ ಕಲಾವಿದರನ್ನು ನೆನೆಯುವುದಾದರೆ ತಕ್ಷಣ ಬಾಲಣ್ಣ ನೆನಪಾಗುತ್ತಾರೆ. ಒಂದು ‘ಕೆಡುಕು ಸ್ವಭಾವ’ದ ಪಾತ್ರವನ್ನೇ ತೆಗೆದುಕೊಂಡರೂ, ಆ ಪಾತ್ರದ ಗುಣಲಕ್ಷಣಗಳನ್ನು ಆಂಗಿಕ ಅಭಿನಯದಿಂದಲೇ ಹೊರಸೂಸಬಲ್ಲ ಕುಶಲತೆ ಅವರಲ್ಲಿತ್ತು. ಕಣ್ಣಿನ ಮೊನಚು, ತುಟಿಯ ನಗು, ಮೈ ಪರಚಿಕೊಳ್ಳುವ ಪರಿ, ಬೀಡಿ ಸೇದುವ ಶೈಲಿ, ನಡೆಯುವ ಭಂಗಿ, ಸಂಭಾಷಣೆ ಹೇಳುವ ವೈಖರಿ, ದೃಶ್ಯವನ್ನೆಲ್ಲ ಆವರಿಸಿಕೊಳ್ಳುವಂಥ ಚಲನೆ ಇತ್ಯಾದಿಗಳಿಂದ ಬಾಲಣ್ಣ ಒಂದು ಪಾತ್ರದ ಸಕಲ ಲಕ್ಷಣಗಳನ್ನು ಕೆತ್ತಿಡುತ್ತಿದ್ದರು. ‘ಕಣ್ತೆರೆದು ನೋಡು’ ಚಿತ್ರದ ದಾಸಣ್ಣನ ಕೆಡುಕನ್ನು, ‘ಕಲಾವತಿ’ಯ ಮ್ಯಾನೇಜರ್ ‘ಬಾಕೃಸಂ'(ಬಾಲಕೃಷ್ಣ ಸಂಜೀವಿನಿ)ನ ಸಂಚನ್ನು, ‘ಚಂದವಳ್ಳಿಯ ತೋಟ’ ಚಿತ್ರದ ಕರಿಯನ ಮನೆಹಾಳು ಕೆಲಸಗಳನ್ನು, ‘ಚಿಕ್ಕಮ್ಮ’ ಚಿತ್ರದ ಕಾಮುಕನನ್ನು, ‘ದೂರದ ಬೆಟ್ಟ’ ಚಿತ್ರದ ಕುಡುಕನ ಅವಾಂತರಗಳನ್ನು, ‘ವೀರಕೇಸರಿ’ಯ ದುಷ್ಟಭಟನ ಪೇಚಾಟಗಳನ್ನು, ‘ಸಂಪತ್ತಿಗೆ ಸವಾಲ್’ನ ಪುಟ್ಟನ ತಿರುಬೋಕಿತನವನ್ನು, ‘ಸಂತ ತುಕಾರಾಂ’, ‘ಭಕ್ತ ಕುಂಬಾರ’ ಮತ್ತು ‘ಸನಾದಿ ಅಪ್ಪಣ್ಣ’ ಚಿತ್ರಗಳ ಪಾತ್ರಗಳು ಅಸೂಯೆ ಹೊರಹಾಕುವ ಕ್ರಮವನ್ನು ನೋಡಿದರೆ ಬಾಲಣ್ಣನ ದೈತ್ಯಪ್ರತಿಭೆ ಅರ್ಥವಾಗುತ್ತದೆ. ದುಷ್ಟತನಕ್ಕೆ ಹಾಸ್ಯದ ಸೊಗಸನ್ನು ಲೇಪಿಸುತ್ತಲೇ ಪಾತ್ರದ ಸಂಕೀರ್ಣತೆಯನ್ನು ಹಿಡಿದಿಟ್ಟುಕೊಡುತ್ತಿದ್ದ ಬಾಲಣ್ಣನಿಗೆ ಅಭಿನಯ ಸಹಜ ಪ್ರವೃತ್ತಿ, ಹುಟ್ಟರಿವು ಆಗಿತ್ತು.

ಇದನ್ನು ಓದಿದ್ದೀರಾ?: ತಮಿಳು ಚಿತ್ರರಸಿಕರು ಮೆಚ್ಚಿದ ‘ಕನ್ನಡತ್ತು ಪೈಂಕಿಳಿ’ ಬಿ. ಸರೋಜಾದೇವಿ

ಬರೀ ದುಷ್ಟ ಪಾತ್ರಗಳಲ್ಲದೆ ಅನೇಕ ಬಗೆಯ ಪೋಷಕ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು ಬಾಲಣ್ಣ. ‘ಬೆಳ್ಳಿಮೋಡ’ದ ಎಸ್ಟೇಟ್ ಮ್ಯಾನೇಜರ್, ‘ಸಹಧರ್ಮಿಣಿ’ ಚಿತ್ರದ ಬ್ರಹ್ಮಚಾರಿ ಅಣ್ಣ, ‘ಬಂಗಾರದ ಮನುಷ್ಯ’ ಚಿತ್ರದ ರಾಚೂಟಪ್ಪ, ‘ಪಟ್ಟಣಕ್ಕೆ ಬಂದ ಪತ್ನಿಯರು’ ಚಿತ್ರದ ಮನೆ ಹಿರಿಯ, ‘ನಮ್ಮ ಸಂಸಾರ’ ಚಿತ್ರದ ಮಾಜಿ ಸೈನಿಕ, ‘ಸಹೋದರರ ಸವಾಲ್’ನ ಕೋಳಿ ಕಳ್ಳ, ‘ಗಲಾಟೆ ಸಂಸಾರ’ದ ಅವಾಂತರಿ ಮಗನ ತಂದೆ, ‘ನಾ ನಿನ್ನ ಮರೆಯಲಾರೆ’ ಚಿತ್ರದ ದರ್ಜಿ ಚಿಕ್ಕಪ್ಪ, ‘ತಾಯಿಯ ಮಡಿಲಲ್ಲಿ’ ಚಿತ್ರದ ನೊಂದ ಪೊಲೀಸ್ ತಂದೆ -ಹೀಗೆ ವೈವಿಧ್ಯ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಾಲಣ್ಣ ತಮ್ಮಲ್ಲಿನ ಪ್ರತಿಭೆಯನ್ನು ಹೊರಹಾಕಿದರು. ಹಾಗಾಗಿ ಬಾಲಣ್ಣ ಎಲ್ಲ ಬಗೆಯ ಪಾತ್ರಗಳಿಗೆ ಹಾಸ್ಯದ ಮುಲಾಮನ್ನು ಹಚ್ಚುತ್ತಾ ಮನರಂಜನೆಯ ಹೊಸ ಸಾಧ್ಯತೆಗಳನ್ನು ತೆರೆದರು.

518734427 23976243422045258 794800172190840384 n

ಈಗಲೂ ಬಾಲಣ್ಣನನ್ನು ನೆನೆದಾಗ ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ರೆಟ್ಟೆ ತುರಿಸಿಕೊಳ್ಳುತ್ತಾ ಎಂ.ವಿ. ರಾಜಮ್ಮನವರನ್ನು ಉದ್ದೇಶಿಸಿ ಹೇಳುವ ‘ಪಾರ್ವತಮ್ಮಾ… ಪಾರ್ವತಮ್ಮಾ’ ಎಂಬ ಪುಟ್ಟಯ್ಯನ ಕರೆ, ‘ಸಾಕುಮಗಳು’ ಚಿತ್ರದ ‘ಡ್ರಿಲ್… ರೋಮಾಂಚನ’ ಎಂಬ ಉದ್ಗಾರ, ‘ಬಂಗಾರದ ಮನುಷ್ಯ’ ಚಿತ್ರದ ರಾಚೂಟಪ್ಪ ಹೇಳುವ ‘ಕಲ್‌ಗುದ್ದಿ ನೀರ್ ತಗೀತೀನಿ ಅಂತೀಯಲ್ಲ… ರಾಜೀವಪ್ಪ ಇದು ಆಗದ ಕೆಲಸ…, ರಾಜೀವಪ್ಪ ನಾವು ನಿಮ್ಮನ್ನ ಕಳ್ಕೊಂಡ್ವೋ ಇಲ್ಲ ನೀವು ನಮ್ಮನ್ ಕಳ್ಕೊಂಡ್ರೋ ತಿಳೀವಲ್ದು…’, ‘ನಾ ನಿನ್ನ ಮರೆಯಲಾರೆ’ ಚಿತ್ರದಲ್ಲಿ ಲೀಲಾವತಿಯರನ್ನುದ್ದೇಶಿಸಿ ಹೇಳುವ ‘ಅಯ್… ನಾನ್ ಕಣಮ್ಮಾ ನಿನ್ನ ಬೀಗ’ ಎಂಬ ವಾಕ್ಯ -ಹೀಗೆ ಅಸಂಖ್ಯಾತ ಪಾತ್ರಗಳಲ್ಲಿನ ಬಾಲಣ್ಣನ ದನಿಗಳು ಕೇಳಿಸುತ್ತವೆ. ಅವರ ಆಂಗಿಕ ಅಭಿನಯದ ಅನೇಕ ನಮೂನೆಗಳು ಕಣ್ಣಿಗೆ ಕಟ್ಟುತ್ತವೆ.

(ಕೃಪೆ: ಸಿನಿಮಾಯಾನ, ಲೇ: ಡಾ.ಕೆ. ಪುಟ್ಟಸ್ವಾಮಿ, ಪ್ರ: ಅಭಿನವ ಪ್ರಕಾಶನ, ಸಂ: 94488 04905)
(ಚಿತ್ರಗಳು ಕೃಪೆ: ಪ್ರಗತಿ ಅಶ್ವಥನಾರಾಯಣ)

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X