- ವೈಜ್ಞಾನಿಕ ಜ್ಞಾನದ ವಿಚಾರ ಹೊಂದಿರುವ ಸಾಹಿತಿ ಕುವೆಂಪು: ಎಲ್.ಎನ್ ಮುಕುಂದರಾಜ
- ಕನ್ನಡ ಜಾಣಜಾಣೆಯರ ವೇದಿಕೆಯಿಂದ ವಿಶ್ವಮಾನವೊತ್ಸವ ಕ್ರಾಂತಿ ಕವಿಗೆ 120
“ಕನ್ನಡ ವಿಶ್ವವಿದ್ಯಾಲಯವನ್ನು ಕುವೆಂಪು ಮತ್ತು ರವೀಂದ್ರ ನಾಥ್ ಠಾಗೋರ್ ಅವರ ವಿಚಾರದಂತೆಯೇ ನಿರ್ಮಾಣ ಮಾಡಿದೆ. ಈ ಬಗ್ಗೆ ಕುವೆಂಪು ಅವರಿಗೆ ತಿಳಿಸಬೇಕು ಎಂದು ತೆರಳುವಷ್ಟರಲ್ಲಿ ಅವರು ನಮ್ಮನ್ನು ಅಗಲಿದ್ದರು. ಬಳಿಕ ಅವರನ್ನು ನೋಡಲಿಕ್ಕೆ ಆಗಲಿಲ್ಲ. ಸದ್ಯ ಕನ್ನಡ ಸಾಹಿತ್ಯ ಎಲ್ಲ ಭಾಷೆಗಳ ಪೈಕಿ ಉಜ್ವಲವಾಗಿದೆ” ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಚಂದ್ರಶೇಖರ್ ಕಂಬಾರ ಹೇಳಿದರು.
ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಕದಂಬ ಪಡೆ ಸಹಯೋಗದಲ್ಲಿ ಕನ್ನಡ ಜಾಣಜಾಣೆಯರ ವೇದಿಕೆ ಬೆಂಗಳೂರಿನಲ್ಲಿ ‘ವಿಶ್ವಮಾನವೊತ್ಸವ – ಕ್ರಾಂತಿ ಕವಿಗೆ 120’ ಕಾರ್ಯಕ್ರಮ ಆಯೋಜಿಸಿದೆ.
ಈ ವೇಳೆ, ಡಾ.ಕೆ.ಎನ್.ನಾಗೇಶ್ ಅವರ ತಂಡದಿಂದ ಕುವೆಂಪು ಅವರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಕುವೆಂಪು ರೈತ ಗೀತೆ ಹಾಡಿ ನಮನ ಸಲ್ಲಿಸಲಾಯಿತು. ಇನ್ನು ವಿಜಯನಗರ ಶಾಸಕ ಕೃಷ್ಣಪ್ಪ, ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಚಂದ್ರಶೇಖರ್ ಕಂಬಾರ ಸೇರಿದಂತೆ ಹಲವು ಗಣ್ಯರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ, ಕುವೆಂಪು ಕ್ಯಾಲೆಂಡರ್ ಮತ್ತು ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಚಿಂತಕರು ಹಾಗೂ ಕವಿ, ನಾಟಕಕಾರರು ಎಲ್.ಎನ್.ಮುಕುಂದರಾಜ, “ಕನ್ನಡದ ಪ್ರಜ್ಞೆ ಅಂದರೇ, ಅದು ಕುವೆಂಪು ಅವರು. ಇಡೀ ಮೈಸೂರು ವಿಶ್ವವಿದ್ಯಾಲಯವನ್ನು ಮಾನಸ ಗಂಗೋತ್ರಿಯಾಗಿ ಮಾಡಿದ್ದು ಕುವೆಂಪು ಅವರು. ಅವರ ಕಲ್ಪನೆಯಲ್ಲಿಯೇ ಚಂದ್ರಶೇಖರ್ ಕಂಬಾರ ಅವರು ಹಂಪಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಿದರು. ಅದಕ್ಕೆ, ‘ವಿದ್ಯಾರಣ್ಯ’ ಎಂಬ ಹೆಸರು ಇಟ್ಟರು. ಇದರ ಅರ್ಥ ವಿದ್ಯೆಯ ಅರಣ್ಯ. ಇನ್ನು ಮೊದಲನೇ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಕುವೆಂಪು ಅವರಿಗೆ ಎಂಟನೇ ಜ್ಞಾನ ಪೀಠ ಪ್ರಶಸ್ತಿ ಬಂದಿದ್ದು ಚಂದ್ರಶೇಖರ್ ಕುಂಬಾರ ಅವರಿಗೆ” ಎಂದು ಹಳೆಯ ದಿನಗಳನ್ನ ಮೆಲುಕು ಹಾಕಿದರು.
“ಸಾಹಿತಿಗಳು ಸತ್ಯವನ್ನು ಹೇಳುತ್ತಾರೆ. ಕುವೆಂಪು ಅವರ ಚಿಂತನೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಮನೆಯಲ್ಲಿ ನಮ್ಮ ಮಕ್ಕಳಿಗೆ, ಮಡದಿಗೆ ಕುವೆಂಪು ಅವರ ಚಿಂತನೆಗಳ ಬಗ್ಗೆ ಹೇಳಬೇಕು. ಪ್ರತಿಯೊಬ್ಬರು ಕುವೆಂಪು ವಿಚಾರವನ್ನು ಬಸವಣ್ಣ ಪ್ರಜ್ಞೆಯನ್ನ ಇಟ್ಟುಕೊಳ್ಳಬೇಕು. ಕುವೆಂಪು ಅವರನ್ನು ಪ್ರತಿ ನಿಟ್ಟಿನಲ್ಲಿಯೂ ನೆನೆಯುವ ಕೆಲಸ ನಾವು ಮಾಡಬೇಕಿದೆ” ಎಂದು ಹೇಳಿದರು.
“ಕುವೆಂಪು ಅವರ ಹಾಡುಗಳನ್ನು ಹಾಡುವ ಮೂಲಕ, ಕಥೆ ಕಾದಂಬರಿ ಓದುವ ಮೂಲಕ, ಅವರ ವೈಚಾರಿಕ ಚಿಂತನೆ ಮಾಡಬಹುದು. ನೆಮ್ಮದಿಯಿಂದ ಜೀವನ ಮಾಡಬೇಕೆಂದರೇ ಕುವೆಂಪು ಅವರ ವಿಚಾರ ಮುಖ್ಯ. ಇನ್ನು ಕುವೆಂಪು ಅವರು ಧ್ಯಾನ ಎಂದರೆ ಅದು ಪೂಜೆಯಲ್ಲ. ಮನುಷ್ಯ ತನ್ನನ್ನು ಪರಿಪಕ್ವವಾಗಿ ಇಟ್ಟುಕ್ಕೊಳ್ಳುವುದಕ್ಕೆ ಜ್ಞಾನ ಮುಖ್ಯ. ಕುವೆಂಪು ಅವರು ಒಬ್ಬ ವೈಜ್ಞಾನಿಕ ಜ್ಞಾನದ ವಿಚಾರ ಹೊಂದಿರುವ ಸಾಹಿತಿ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಬೀಗ ಜಡಿದ ಬಿಬಿಎಂಪಿ!
ಯುವ ಲೇಖಕಿ ಫಾತಿಮಾ ರಲಿಯಾ ಮಾತನಾಡಿ, “ನಾನು ಕವಿ, ಸಾಹಿತಿ, ನಾಟಕಕಾರ, ಲೇಖಕಿ ಎಂದು ಹೇಳಿದರೇ ಸ್ವರ್ಗದ ಬಾಗಿಲು ತೆಗೆಯುವುದಿಲ್ಲ. ಅದೇ ನಾನು ಹೇಮಿಯ ಗಂಡ ಎಂದು ಹೇಳಿದ ತಕ್ಷಣ ಸ್ವರ್ಗದ ಬಾಗಿಲು ತೆಗೆಯುತ್ತದೆ ಎಂದು ಕುವೆಂಪು ಅವರು ಬರೆದ ಪದ್ಯದಲ್ಲಿ ತಿಳಿಸಿದ್ದಾರೆ. ಅಂದರೆ, ಹೆಣ್ಣಿಗೆ ಅವರು ಇಲ್ಲಿ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇಂದಿನ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಸಾರ್ವಜನಿಕ ನಿಂದನೆ, ಮಾಡುಕಟ್ಟೆಯ ಸರಕಾಗಿ ಮಾಡಲಾಗಿದೆ. ಆದರೆ, ಅರ್ಧ ಶತಮಾನಗಳ ಹಿಂದೆಯೇ ಕುವೆಂಪು ಅವರು ಮಹಿಳೆಯರ ಬಗ್ಗೆ ಅಪಾರವಾದ ಕಲ್ಪನೆ ಕಟ್ಟಿಕೊಟ್ಟಿದ್ದಾರೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಶ್ರೀರಾಮಾಯಣ ದರ್ಶನಂ ಕಥೆಗಳಲ್ಲಿ ಮಹಿಳೆಯರಿಗೆ ಸ್ಥಾನ ನೀಡಿದ್ದಾರೆ. ಹೆಣ್ಣಿಗೆ ಸೀಮಿತ ಮಾಡಲಾಗಿದ್ದ ಚೌಕಟ್ಟನ್ನು ಅವರು ವಿಸ್ತರಿಸಿದ್ದಾರೆ” ಎಂದು ಹೇಳಿದರು.