ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ರಾಜ್ಯದ ಸರ್ಕಾರಿ ನೌಕರರು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಮನವಿಗೆ ಸ್ಪಂದಿಸಿರುವ ಸಿದ್ದರಾಮಯ್ಯನವರ ಸರ್ಕಾರ ಇದೀಗ ʼಓಪಿಎಸ್ʼ ಜಾರಿಗೆ ಸಮಿತಿ ರಚಿಸಲು ಆದೇಶ ಹೊರಡಿಸಿದೆ.
ಹೊಸ ಪಿಂಚಣಿ ಯೋಜನೆಯಿಂದಾಗಿ 2006ರ ನಂತರ ಸೇವೆಗೆ ಸೇರಿರುವ ಲಕ್ಷಾಂತರ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಯಾವುದೇ ರೀತಿಯ ಆರ್ಥಿಕ ಸೌಲಭ್ಯ ದೊರೆಯದೇ ನಿವೃತ್ತಿಯ ನಂತರ ಜೀವನ ನಡೆಸುವುದು ಕಷ್ಟವಾಗಲಿದೆ. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ರಾಜಸ್ಥಾನದ ಮಾದರಿಯ ಹಳೆ ಪಿಂಚಿಣಿ ಯೋಜನೆಯನ್ನೇ ಜಾರಿಗೆ ತರಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ವೈ. ನಾರಾಯಣ ಸ್ವಾಮಿ ಅವರು ಇಂದು ಸದನದ ಗಮನ ಸೆಳೆದರು.
ನಾರಾಯಣ ಸ್ವಾಮಿಯವರು ಪ್ರಸ್ತಾಪ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಭೋಸರಾಜು, “ಹಳೆಯ ಪಿಂಚಣಿ ಯೋಜನೆಯ ಆರ್ಥಿಕ ಹೊರೆಯನ್ನು ನಿಭಾಯಿಸಲು ಬೇಕಾಗುವಷ್ಟು ಹೆಚ್ಚುವರಿ ನಿಧಿ ರಾಜ್ಯ ಸರ್ಕಾರದ ಬಳಿ ಇಲ್ಲ. ರಿಸರ್ವ್ ಬ್ಯಾಂಕ್ ರಚಿಸಿದ ಸಮಿತಿಯ ವರದಿಯ ಶಿಫಾರಸ್ಸಿನ ಆಧಾರದ ಮೇಲೆ ಕೇಂದ್ರ ಸರ್ಕಾರ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. ಅದರಂತೆ ಇತರೆ ರಾಜ್ಯಗಳು ಈ ಯೋಜನೆಯನ್ನು ಅಳವಡಿಸಿಕೊಂಡಿವೆ. ಕರ್ನಾಟಕ ರಾಜ್ಯವು ಕೂಡ 2005ರ ಏಪ್ರಿಲ್ 1ರಂದು ಮತ್ತು ಅದಾದ ನಂತರ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ರಾಷ್ಟ್ರೀಯ ಎಂಚಣಿ ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಲು, ಈಗಾಗಲೇ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಿರುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ತಿ ಡಿ.ಕೆ.ಶಿವಕುಮಾರ್, “ಸರ್ಕಾರಿ ನೌಕರರು ನಮ್ಮ ರಾಷ್ಟ್ರದ ನಿರ್ಮಾತೃಗಳು. ಅವರ ಏಳ್ಗೆಗೆ ಸರ್ಕಾರ ಬದ್ದವಾಗಿದೆ. ರಾಜಾಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಮತ್ತೆ ಹಳೆ ಪಿಂಚಣಿ ಜಾರಿಗೊಳಿಸಲಾಗಿದೆ. ಹಳೆ ಪಿಂಚಣಿ ಜಾರಿಗೆ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಪಟ್ಟ ಸಂಸ್ಥೆಗಳು, ಜನಪ್ರತಿನಿಧಿಗಳು , ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
ರಾಜ್ಯದ ಸರ್ಕಾರಿ ನೌಕರರು ವಿರೋಧಿಸುತ್ತಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಇರುವ ಸೌಲಭ್ಯಗಳಿವು
- ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನಿವೃತ್ತಿ ಹೊಂದಿದ ನೌಕರರ ಪ್ರಾನ್ ಖಾತೆಯಲ್ಲಿ ₹5 ಲಕ್ಷಕ್ಕಿಂತ ಕಡಿಮೆ ಮೊತ್ತವಿದ್ದರೆ ನೌಕರ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ನೀಡಲಾಗುವುದು. ಪ್ರಾನ್ ಖಾತೆಯಲ್ಲಿನ ಮೊತ್ತ ₹5 ಲಕ್ಷಕ್ಕಿಂತ ಹೆಚ್ಚಿದ್ದರೆ ಶೇ.60 ರಷ್ಟು ಮೊತ್ತವನ್ನು ನೌಕರರು ಹಿಂಪಡೆಯಬಹುದಾಗಿದ್ದು, ಉಳಿದ ಶೇ. 40 ರಷ್ಟು ಮೊತ್ತವನ್ನು ಕಡ್ಡಾಯವಾಗಿ ʼಆ್ಯನ್ವಿಟಿ ಸರ್ವಿಸ್ ಪ್ರೊವೈಡರ್ʼನಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿ ಪಡೆಯಬೇಕಿರುತ್ತದೆ.
- ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಸೇವಗೆ ರಾಜಿನಾಮೆ ನೀಡಿದ ನೌಕರರ ಪ್ರಾನ್ ಖಾತೆಯಲ್ಲಿ ₹2.50 ಲಕ್ಷಕ್ಕಿಂತ ಕಡಿಮೆ ಮೊತ್ತವಿದ್ದರೆ ನೌಕರರ ಖಾತೆಯಲ್ಲಿನ ಸಂಪೂರ್ಣ ಮೊತ್ತವನ್ನು ನೀಡಲಾಗುವುದು. ನೌಕರರ ಪ್ರಾನ್ ಖಾತೆಯಲ್ಲಿನ ಮೊತ್ತ ₹2.50 ಲಕ್ಷಕ್ಕಿಂತ ಹೆಚ್ಚಿದ್ದರೆ, ಶೇ.20% ರಷ್ಟು ಮೊತ್ತವನ್ನು ನೌಕರರು ಹಿಂಪಡೆಯಬಹುದಾಗಿದೆ. ಉಳಿದ ಶೇ 80ರಷ್ಟು ಮೊತ್ತವನ್ನು ಕಡ್ಡಾಯವಾಗಿ ʼಆ್ಯನ್ವಿಟಿ ಸರ್ವಿಸ್ ಪ್ರೊವೈಡರ್ʼನಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿ ಪಡೆಯಬೇಕಿರುತ್ತದೆ.
- ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟ ಸಂದರ್ಭದಲ್ಲಿ ಪ್ರಾನ್ ಖಾತೆಯಲ್ಲಿ ₹5 ಲಕ್ಷಕ್ಕಿಂತ ಕಡಿಮೆ ಮೊತ್ತವಿದ್ದರೆ, ಮೃತರ ನಾಮನಿರ್ದೇಶಿತರಿಗೆ ಸಂಪೂರ್ಣ ಮೊತ್ತವನ್ನು ನೀಡಲಾಗವುದು. ಫ್ರಾನ್ ಖಾತೆಯಲ್ಲಿನ ಮೊತ್ತವು 5.00 ಲಕ್ಷಕ್ಕಿಂತ ಹೆಚ್ಚಿದ್ದರೆ ಶೇ. 20ರಷ್ಟು ಮೊತ್ತವನ್ನು ಮೃತರ ನಾಮನಿರ್ದೇಶಿತರಿಗೆ ನೀಡಲಾಗುವುದು. ಉಳಿದ ಶೇ. 80% ರಷ್ಟು ಮೊತ್ತವನ್ನು ಕಡ್ಡಾಯವಾಗಿ ʼಆ್ಯನ್ವಿಟಿ ಸರ್ವಿಸ್ ಪ್ರೊವೈಡರ್ʼನಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿ ಪಡೆಯಬೇಕಿರುತ್ತದೆ.
- 2006ರ ನಂತರ ಸೇವೆಗೆ ಸೇರಿದ ಎನ್.ಪಿ.ಎಸ್ ನೌಕರರು ಸೇವೆಯಲ್ಲಿರುವಾಗಲೇ ಮೃತರಾದರೆ ಅವರ ಕುಟುಂಬಕ್ಕೆ ಮರಣ ಉಪದಾನವನ್ನು ಮತ್ತು ಕುಟುಂಬ ಪಿಂಚಣಿ ಹಾಗೂ ಮರಣ ಉಪದಾನ ಸೌಲಭ್ಯಗಳನ್ನು ಪಡೆಯಬಹುದು.