ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನೇಮಕಾತಿ ಪರೀಕ್ಷೆ ಬರೆಯಲು ಸಹಕರಿಸಿದ ಪ್ರಕರಣ ಸಂಬಂಧ ಪರೀಕ್ಷಾ ಮೇಲ್ವಿಚಾರಕರಿಗೆ ಹಣ ನೀಡಿದ ಆರೋಪದಡಿ ಚಿಕ್ಕಬಳ್ಳಾಪುರದ ಸಮಾಜ ಕಲ್ಯಾಣ ಇಲಾಖೆಯ ಚಿಕ್ಕಬಳ್ಳಾಪುರದ ವೃತ್ತಿಪರ ಹಾಸ್ಟೆಲ್ ವಾರ್ಡನ್ ಬಸವರಾಜ್ ಯಾಳವಾರ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಕೆಇಎ ಅಕ್ರಮ ಪರೀಕ್ಷೆಯ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಆಪ್ತನಾಗಿದ್ದ ಬಸವರಾಜ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಪರೀಕ್ಷಾ ಕೇಂದ್ರದ ಮುಖ್ಯಸ್ಥ ಹಾಗೂ ಕಸ್ಟೋಡಿಯನ್‌ಗೆ 40 ಲಕ್ಷ ರೂ. ಹಣ ನೀಡಿದ್ದ ಎಂಬುದು ಸಿಐಡಿ ತನಿಖೆಯಿಂದ ತಿಳಿದು ಬಂದಿದೆ.
ಬಸವರಾಜನ ವಿರುದ್ಧ ಕಲಬುರಗಿಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಈತ ತಲೆ ಮರೆಸಿಕೊಂಡಿದ್ದ. ಇದೀಗ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಪಕ್ಷ ನಾಯಕ ಅಶೋಕ್ ಮತ್ತು ಸಾರ್ವಜನಿಕ ಸಭ್ಯತೆ
ಆರೋಪಿ ಬಸವರಾಜ್ ಬಂಧನಕ್ಕೆ ಪೊಲೀಸರು ಹಲವು ಕಡೆ ಹುಡುಕಾಟ ನಡೆಸಿದ್ದರು. ಕೊನೆಗೆ ಚಿಕ್ಕಬಳ್ಳಾಪುರದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿದ್ದಾನೆ ಎಂಬ ಸುಳಿವಿನ ಮೇಲೆ ಬಂಧಿಸಲಾಗಿದೆ. ಪ್ರಕರಣದಲ್ಲಿ ಬಸವರಾಜ್ 15ನೇ ಆರೋಪಿಯಾಗಿದ್ದಾನೆ. ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.