ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಾಣೆ ಮಾಡಲಾಗುತ್ತಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ ₹6.8 ಕೋಟಿ ಮೌಲ್ಯದ 9.3 ಕೆಜಿ ಚಿನ್ನವನ್ನು ವಶಪಡಿಸಿಕೊಂಡು, 6 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರ ಪೈಕಿ ಇಬ್ಬರು ತಮಿಳುನಾಡು ಮತ್ತು ನಾಲ್ವರು ಉತ್ತರ ಭಾರತದವರು ಎಂದು ಗುರುತಿಸಲಾಗಿದೆ.
ಮೊದಲ ಪ್ರಕರಣದಲ್ಲಿ, ಬೆಂಗಳೂರು ಏರ್ಪೋರ್ಟ್ಗೆ ಮಲೇಷ್ಯಾದಿಂದ ಬಂದಿಳಿದ ನಾಲ್ವರು ಪ್ರಯಾಣಿಕರನ್ನು ತಪಸಾಣೆ ನಡೆಸಿದಾಗ ಒಳ ಉಡುಪಿನಲ್ಲಿ ಅಡಗಿಸಿಟ್ಟುಕೊಂಡಿದ್ದ ಪೇಸ್ಟ್ ರೂಪದ 2.632 ಕೆ.ಜಿ ಚಿನ್ನ ಪತ್ತೆಯಾಗಿತ್ತು. ಚಿನ್ನವನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
2.632 ಕೆ.ಜಿ ಚಿನ್ನದ ಮೌಲ್ಯ ಬರೋಬ್ಬರಿ ₹1.42 ಕೋಟಿ ಆಗಿದೆ. ಚಿನ್ನದ ಜತೆಗೆ ₹73.7 ಲಕ್ಷ ಮೌಲ್ಯದ 3,510 ಇ-ಸಿಗರೇಟ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಇನ್ನು ಎರಡನೇ ಪ್ರಕರಣದಲ್ಲಿ, ಮಲೇಶಿಯಾದ ಕೌಲಲಾಂಪುರದಿಂದ ಬೆಂಗಳೂರಿಗೆ ಬಂದ ಇಬ್ಬರನ್ನು ಬಂಧಿಸಿ, ಆರೋಪಗಳಿಂದ 2.854 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಚಿನ್ನದ ಪೇಸ್ಟ್ ಅನ್ನು ತಮ್ಮ ಸಾಕ್ಸ್ನಲ್ಲಿ ಅಡಗಿಸಿಟ್ಟುಕೊಂಡಿದ್ದರು. ಈ ಚಿನ್ನದ ಮೌಲ್ಯ ₹1.55 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಜನರಿಗೆ ಕೋಟ್ಯಂತರ ರೂ. ವಂಚನೆ: ದೂರು ದಾಖಲು
3ನೇ ಪ್ರಕರಣದಲ್ಲಿ ಶಾರ್ಜಾದಿಂದ ಬಂದ ವಿಮಾನದಲ್ಲಿ ಲಗೇಜ್ ಕ್ಯಾಬಿನ್ನಲ್ಲಿ ಅಡಗಿಸಿಟ್ಟಿದ್ದ 3.75 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಲಗೇಜ್ ಪರಿಶೀಲಿಸುತ್ತಿದ್ದ ಅವಧಿಯಲ್ಲಿ ಈ ಚಿನ್ನವನ್ನು ಕ್ಯಾಬಿನ್ನಲ್ಲೇ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ. 3.75 ಕೆಜಿ ಗಟ್ಟಿ ಚಿನ್ನ ಪತ್ತೆಯಾಗಿದ್ದು, ಇದರ ವಾರಸುದಾರರ ಪತ್ತೆ ಕಾರ್ಯ ನಡೆಯುತ್ತಿದೆ.