ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದರೇ, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಕೆಲವೆಡೆ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಿದ್ದರೇ, ಇನ್ನು ಕೆಲವೆಡೆ ಮೂಲಭೂತ ಸೌಕರ್ಯ ಕೊರತೆಯಿಂದ ಮತದಾನ ಬಹಿಷ್ಕಾರ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಕೋಲಾರ ತಾಲೂಕಿನ ಕೆ.ಬಿ. ಹೊಸಹಳ್ಳಿ ಗ್ರಾಮದ ಜನರು ಮೂಲಭೂತ ಸೌಕರ್ಯ ಕೊರತೆಯಿಂದ ಚುನಾವಣೆ ಬಹಿಷ್ಕರಿಸುವ ಮೂಲಕ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೆ, ಬೆಗ್ಲಿ ಬೆಣಜೇನಹಳ್ಳಿ ಗ್ರಾಮದ ಜನರು ಎಂಎಸ್ಐಎಲ್ ಮದ್ಯದಂಗಡಿ ಮುಚ್ಚಿಸುವಂತೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿ ಪ್ರತಿಭಟನೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಏ.29 ರಿಂದ ರಾಜ್ಯದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ : ಹವಾಮಾನ ಇಲಾಖೆ
ಕೋಲಾರ ತಾಲೂಕಿನ ಕೆ.ಬಿ.ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದ್ದು, ಸಮಯವಾದರೂ ಮತಗಟ್ಟೆಗೆ ಯಾವುದೇ ಮತದಾರರು ಸುಳಿದಿಲ್ಲ. ಚುನಾವಣಾ ಸಿಬ್ಬಂದಿ ಕೆಲಸವಿಲ್ಲದೇ, ಕುಳಿತುಕೊಳ್ಳುವಂತಾಗಿದೆ. ಗ್ರಾಮದಲ್ಲಿ ಸರಿಯಾದ ರಸ್ತೆ ಇಲ್ಲದೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹತಾಶರಾದ ಜನರು ಚುನಾವಣೆ ಬಹಿಷ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಗ್ಲಿ ಬೆಣಜೇನಹಳ್ಳಿ ಗ್ರಾಮದ ಪ್ರವೇಶ ದ್ವಾರದಲ್ಲಿಯೇ ಮದ್ಯದಂಗಡಿ ನಿರ್ಮಾಣ ಮಾಡಿದ್ದಾರೆ. ಇದರಿಂದ ಊರಿನ ಯುವಕರು ಕುಡಿದು ಬರುತ್ತಾರೆ. ವಿದ್ಯಾರ್ಥಿಗಳು, ಮಹಿಳೆಯರು ಆ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯದಂಗಡಿ ಮುಚ್ಚುವವರೆಗೂ ನಾವು ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.