ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸದ ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ಜಾಡಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ದ್ವಿಸದಸ್ಯ ಪೀಠ, ಸರ್ಕಾರಕ್ಕೆ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕೊರತೆ ಇರುವುದು ತಿಳಿದಿಲ್ಲವೇ. ಮೂಲ ಸೌಕರ್ಯ ಒದಗಿಸಲೂ 5 ವರ್ಷಗಳ ಯೋಜನೆ ಬೇಕೇ? 464 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ. 32 ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಡ ಮಕ್ಕಳಿಗೆ ಶಿಕ್ಷಣ ಪಡೆಯುವ ಅಧಿಕಾರವಿಲ್ಲವೇ? ಶ್ರೀಮಂತರ ಮಕ್ಕಳು ಮಾತ್ರ ಶಿಕ್ಷಣ ಪಡೆಯಬೇಕೇ ಎಂದು ತರಾಟೆಗೆ ತೆಗೆದುಕೊಂಡಿದೆ.
“ಮೂಲಸೌಕರ್ಯ ಕೊರತೆಯಿಂದ ಸರ್ಕಾರಿ ಶಾಲೆ ಮುಚ್ಚುತ್ತಿವೆ. ಅನಿವಾರ್ಯವಾಗಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಾಗಿದೆ. ಸರ್ಕಾರಿ ಶಾಲೆಗಳ ಬದಲು ಖಾಸಗಿ ಶಾಲೆ ಪ್ರೋತ್ಸಾಹಿಸುತ್ತಿದ್ದೀರಾ? ಹಣವಿಲ್ಲದ ಬಡ ಜನರು ಮಕ್ಕಳಿಗೆ ಶಿಕ್ಷಣ ನೀಡುವುದು ಹೇಗೆ? ಸಮಾನತೆ ಬರುವುದೇ ಶಿಕ್ಷಣದಿಂದ. ಅಂಬೇಡ್ಕರ್ ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಸಂವಿಧಾನದಡಿ ಪ್ರಾಥಮಿಕ ಶಿಕ್ಷಣ ಮೂಲಭೂತ ಹಕ್ಕು” ಎಂದು ತರಾಟೆಗೆ ತೆಗೆದುಕೊಂಡಿದ್ದು ಮೂಲಸೌಕರ್ಯ ಒದಗಿಸಿದ ಬಗ್ಗೆ 8 ವಾರಗಳಲ್ಲಿ ವರದಿ ಸಲ್ಲಿಸಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಸುಬ್ರಹ್ಮಣ್ಯನ್ ಸ್ವಾಮಿ ಆರ್‌ಟಿಐ ಅರ್ಜಿಗೆ ಉತ್ತರ ನೀಡುವಂತೆ ಮೋದಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶ
ರಾಜ್ಯದ ಅನೇಕ ಶಾಲೆಗಳು ಮೂಲ ಸೌಕರ್ಯ ಕೊರತೆಯನ್ನು ಎದುರಿಸುತ್ತಿವೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಮಕ್ಕಳು ಪರದಾಡುವಂಥ ಸ್ಥಿತಿ ಇರುವ ಬಗ್ಗೆ ವರದಿಯಾಗಿತ್ತು.
ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿಲ್ಲದೆ ಪ್ರತಿನಿತ್ಯ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ಇದೆ. ಕಲಘಟಗಿ ಪಟ್ಟಣದಲ್ಲಿರುವ ಸರ್ಕಾರಿ ಮಾದರಿ ಶಾಲೆ, ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕುಡಿಯಲು ನೀರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.