ರಾಜ್ಯದಲ್ಲಿ ಇತ್ತೀಚೆಗೆ ಹಲವು ಪ್ರಕರಣಗಳು ಭಾರೀ ಸದ್ದು ಮಾಡುತ್ತಿವೆ. ಸಿನಿಮಾ ತಾರೆಯರು, ರಾಜಕೀಯ ನಾಯಕರು ಹಲವು ಪ್ರಕರಣದಲ್ಲಿ ಆರೋಪಿಗಳಾಗಿ ಪೊಲೀಸ್ ತನಿಖೆ ಎದುರಿಸುತ್ತಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಪ್ರಕರಣವನ್ನು ಬಹಿರಂಗವಾಗಿ ಖಂಡಿಸಿದ ಕೆಲವೇ ಕೆಲವರಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರು ಕೂಡ ಒಬ್ಬರು. ಇವರು ಈ ಬಗ್ಗೆ ಪದೇ ಪದೆ ದನಿ ಎತ್ತುತ್ತಾ ಬರುತ್ತಿದ್ದಾರೆ. ಮತ್ತೊಮ್ಮೆ ಈ ಕುರಿತು ಪೋಸ್ಟ್ ಮಾಡಿದ್ದಾರೆ.
ದರ್ಶನ್ ಬಂಧನ ವಿಚಾರದಲ್ಲಿ ಪೊಲೀಸರು ಯಾವುದೇ ಪ್ರಭಾವ, ಆಮಿಷಕ್ಕೆ ಒಳಗಾಗದೆ ಸರಿಯಾಗಿ ಕೆಲಸ ಮಾಡಿ ಪ್ರಕರಣದಲ್ಲಿ ಅಮಾಯಕ, ಮುಗ್ಧರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದಾರೆ.
The ones breaking the law who have been in the news are the rich and powerful and the ones at the receiving end of their violent actions are the poor, women & children. The common people of Karnataka. Hats off to the police and media for bringing these crimes out. Justice will…
— Ramya/Divya Spandana (@divyaspandana) June 22, 2024
ಈ ಬಗ್ಗೆ ಮತ್ತೇ ಪೋಸ್ಟ್ ಮಾಡಿದ ಅವರು, “ಕಾನೂನು ಉಲ್ಲಂಘಿಸಿ ಶ್ರೀಮಂತರು ಹಾಗೂ ಶಕ್ತಿಶಾಲಿಗಳು ಸುದ್ದಿಯಲ್ಲಿದ್ದಾರೆ. ಇವರ ಹಿಂಸಾತ್ಮಕ ಕೃತ್ಯಗಳಿಂದ ಬಡವರು, ಮಹಿಳೆಯರು ಮತ್ತು ಮಕ್ಕಳು ಬದುಕು ನಾಶವಾಗಿದೆ. ಇಂಥ ಅಪರಾಧ ಕೃತ್ಯಗಳನ್ನು ಹೊರಗಡೆ ತಂದ ನಮ್ಮ ರಾಜ್ಯದ ಪೊಲೀಸರು ಹಾಗೂ ಮಾಧ್ಯಮಗಳಿಗೆ ಹ್ಯಾಟ್ಸ್ ಆಫ್” ಎಂದಿದ್ದಾರೆ.
ಮುಂದುವರೆದು, “ಈ ವಿಚಾರಣೆಯನ್ನು ತೀವ್ರಗೊಳಿಸಿ, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಾಗ ನ್ಯಾಯ ಖಂಡಿತ ಸಿಗುತ್ತದೆ. ನ್ಯಾಯವು ಮೇಲುಗೈ ಸಾಧಿಸದಿದ್ದರೆ, ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತೇವೆ?” ಎಂದು ಪ್ರಜ್ವಲ್ ರೇವಣ್ಣ, ನಟ ದರ್ಶನ್, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸೂರಜ್ ರೇವಣ್ಣ ಪ್ರಕರಣವನ್ನು ಉಲ್ಲೇಖಿಸಿ ಹೇಳಿದ್ದಾರೆ.
ಟ್ವೀಟ್‌ನ ಕೊನೆಯಲ್ಲಿ ರಮ್ಯಾ ಅವರು ಪ್ರಜ್ವಲ್ ರೇವಣ್ಣ, ದರ್ಶನ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸೂರಜ್ ರೇವಣ್ಣ ಅವರ ಹೆಸರನ್ನು ಹ್ಯಾಷ್ ಟ್ಯಾಗ್ನಲ್ಲಿ ಬಳಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಾಹೀರಾತು ನಿಯಮ ತಿದ್ದುಪಡಿ | ಒಂದು ವಾರದೊಳಗೆ ಸಾರ್ವಜನಿಕ ಚರ್ಚೆಗೆ ಬರಲಿದೆ ಹೊಸ ನೀತಿ : ಡಿಸಿಎಂ ಡಿಕೆಶಿ
ಸದ್ಯ ಇವರು ಮಾಡಿದ ಎಕ್ಸ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈಗಾಗಲೇ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ. ಇದೀಗ, ಮಾಜಿ ಪ್ರಧಾನಿ ದೇವೇಗೌಡರ ಮತ್ತೊಬ್ಬ ಮೊಮ್ಮಗ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.