ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

Date:

Advertisements

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ ಅಪಹರಣ, ಅತ್ಯಾಚಾರ, ಕೊಲೆ ಮತ್ತು ಅಸಹಜ ಸಾವುಗಳ ಸಮಗ್ರ ತನಿಖೆ ಮಾಡಬೇಕು. ಭೂ ಕಬಳಿಕೆ, ಅಕ್ರಮ ಒಕ್ಕಲೆಬ್ಬಿಸುವಿಕೆ ಪ್ರಕರಣಗಳು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೆಸರಿನಲ್ಲಿ ನಡೆದಿರುವ ಕಿರುಕುಳ, ದೌರ್ಜನ್ಯ ಮತ್ತು ಆತ್ಮಹತ್ಯೆಗಳ ಸಮಗ್ರ ತನಿಖೆಗೆ ಒತ್ತಾಯಿಸಿ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಪಕ್ಷಗಳು ಮನವಿ ಮಾಡಿವೆ.

ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಸಿಪಿಐಎಂ ಕಾರ್ಯದರ್ಶಿ ಡಾ ಕೆ ಪ್ರಕಾಶ್‌, ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್ ಮತ್ತು ಸಿಪಿಎಂ-ಐಎಲ್‌ ರಾಜ್ಯ ಸಮಿತಿಯ ಸದಸ್ಯರಾದ ಲೇಖಾ, “ಅನಾಮಿಕ ವ್ಯಕ್ತಿಯ ದೂರಿನ ಆಧಾರದಲ್ಲಿ ರಾಜ್ಯ ಸರಕಾರದ ತೀರ್ಮಾನದಂತೆ ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್.ಐ.ಟಿ. ತನಿಖೆ ನಡೆಯುತ್ತಿದೆ. ನಾವು ಎಸ್.ಐ.ಟಿ. ರಚನೆಯಾಗಿರುವುದನ್ನು ಸ್ವಾಗತಿಸುತ್ತೇವೆ. ಮತ್ತು ಒತ್ತಡಗಳಿಗೆ ಮಣಿಯದೇ ತನಿಖೆ ನಡೆಸಿ ಅಲ್ಲಿ ಹೂತುಹೋದ ಸತ್ಯವನ್ನು ಬಯಲಿಗೆಳೆಯಬೇಕೆಂದು ಬಯಸುತ್ತೇವೆ. ತನಿಖೆಯು ವಿವಿಧ ಚರ್ಚೆಗಳನ್ನು ಹುಟ್ಟು ಹಾಕಿದೆ. ಎಸ್.ಐ.ಟಿ. ಅಧಿಕೃತವಾಗಿ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲವಾದರೂ, ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದೆ. ಇದೇ ಸಂದರ್ಭದಲ್ಲಿ ಇಡೀ ತನಿಖೆಯ ಸ್ವರೂಪವನ್ನೇ ದಾರಿತಪ್ಪಿಸಲು ದೇವಸ್ಥಾನ, ದೇವರು, ನಂಬಿಕೆಯ ಪ್ರಶ್ನೆಗಳನ್ನು ಮುಂದು ಮಾಡಿ ದೇವರು ಧರ್ಮದ ಮೇಲಿನ ದಾಳಿ ನಡೆಯುತ್ತಿದೆ ಎಂದು ಜನರಲ್ಲಿ ಭಾವೋದ್ರೇಕವನ್ನು ಸೃಷ್ಟಿಸಲು ಬಿಜೆಪಿ ಮತ್ತು ಇತರೆ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಗಾಬರಿ ಹುಟ್ಟಿಸುವ ವಿಚಾರವೆಂದರೆ, ಸರ್ಕಾರವೇ ನೇಮಕ ಮಾಡಿರುವ ಎಸ್.ಐ.ಟಿ. ತಂಡ ಮತ್ತು ಅವರ ತನಿಖೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸುವ ರೀತಿಯಲ್ಲಿ ಸರ್ಕಾರದ ಉಪ-ಮುಖ್ಯಮಂತ್ರಿಗಳು ಸದನದಲ್ಲಿ ಆಡಿರುವ ಮಾತುಗಳು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೂ ಆಡಿದ ಮಾತುಗಳು ಸಹಜವಾಗಿಯೇ ತನಿಖೆಯ ದಿಕ್ಕು ಏನಾಗಬಹುದು ಎಂದು ಬಹಿರಂಗವಾಗಿದೆ. ಸರ್ಕಾರ ನೇಮಕ ಮಾಡಿರುವ ತನಿಖಾ ತಂಡವನ್ನು ಸರ್ಕಾರದ ಪ್ರಮುಖ ಮಂತ್ರಿಗಳೇ ದುರ್ಬಲಗೊಳಿಸುವುದು ಆತಂಕಕಾರಿಯಾಗಿದೆ” ಎಂದರು.

“ಎಸ್.ಐ.ಟಿ. ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಗಟ್ಟಿಯಾಗುತ್ತಾ ಸಾಗುತ್ತಿದ್ದಾಗ, ಜನರಲ್ಲಿ ಮೂಡಿದ ವಿಶ್ವಾಸದ ಕಾರಣದಿಂದ ಹಲವು ವ್ಯಕ್ತಿಗಳು ಸಾಕ್ಷಿಗಳಾಗಿ ಮುಂದೆ ಬರುತ್ತಿದ್ದಾರೆ. ಇನ್ನೂ ಹಲವು ಜನ ಮುಂದೆ ಬರುವ ಸಾಧ್ಯತೆ ಇದೆ. ಪ್ರಕರಣವನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕಾದ ಪರಿಸ್ಥಿತಿ ಬೆಳೆಯುತ್ತಿರುವಾಗ ಜನರೇ ಭಯ ಪಟ್ಟು ಹಿಂದೆ ಸರಿಯಬೇಕು ಎಂಬ ರೀತಿಯಲ್ಲಿ ಸರ್ಕಾರದ ಮಂತ್ರಿಗಳು, ಬಿಜೆಪಿಯ ನಾಯಕರುಗಳು ಟೀಕೆಗಳನ್ನು ಮಾಡಿದ್ದಾರೆ. ಇವರು ಯಾರ ಪರವಾಗಿದೆ ಎಂಬ ಅನುಮಾನಗಳನ್ನು ದೃಢಪಡಿಸುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರದ ಮಂತ್ರಿಗಳು ಈ ನಿಲುವಿನಿಂದ ಹೊರಬರಬೇಕು ಮತ್ತು ಜನರಲ್ಲಿ ಕಳೆದುಹೋಗಬಹುದಾದ ವಿಶ್ವಾಸವನ್ನು ಮರು ಸ್ಥಾಪಿಸಬೇಕಾಗಿದೆ.

Advertisements

ಇದೇ ಸಂದರ್ಭದಲ್ಲಿ ಹಿಂದೆ ಸಮರ್ಪಕ ತನಿಖೆ ಮಾಡದೆ ಮುಚ್ಚಿ ಹಾಕಲಾಗಿರುವ ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ ಕೊಲೆ ಪ್ರಕರಣಗಳನ್ನು, ತನ್ನ ವ್ಯಾಪ್ತಿಗೆ ತಂದುಕೊಂಡು ತನಿಖೆ ನಡೆಸಬೇಕೆಂದು, ಸೌಜನ್ಯ ಪ್ರಕರಣದಲ್ಲಿ ಸಿ.ಬಿ.ಐ. ನ್ಯಾಯಾಲಯ ಹೇಳಿರುವಂತೆ ಮರು ತನಿಖೆ ಮಾಡಬೇಕೆಂದು ಎಡಪಕ್ಷಗಳು ಒತ್ತಾಯಿಸುತ್ತವೆ. ಈ ಪ್ರಕರಣಗಳನ್ನು ತನಿಖೆ ಮಾಡಲು ಪ್ರಣವ್ ಮೊಹಂತಿ ನೇತೃತ್ವದ ಎಸ್.ಐ.ಟಿ. ತಂಡಕ್ಕೇ ವಹಿಸಬಹುದು. ಒಂದು ವೇಳೆ ಈ ತಂಡಕ್ಕೆ ಅವುಗಳನ್ನು ವಹಿಸಲು ಕಷ್ಟ ಎನ್ನುವುದಾದರೆ ಮತ್ತೊಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಎಲ್ಲಾ ಅತ್ಯಾಚಾರ ಮತ್ತು ಕೊಲೆಗಳ ಸಮಗ್ರ ತನಿಖೆ ಮಾಡಬೇಕೆಂದು ಎಡ ಪಕ್ಷಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತವೆ. ಅಸಹಜ ಸಾವುಗಳು, ಅತ್ಯಾಚಾರಗಳು, ಕೊಲೆಗಳು ಮತ್ತು ಭೂಕಬಳಿಕೆ ನಂಟು ಧರ್ಮಸ್ಥಳದಲ್ಲಿ ನಡೆಯುತ್ತಾ ಬಂದಿರುವ ಅತ್ಯಾಚಾರಗಳು ಮತ್ತು ಕೊಲೆಗಳನ್ನು ಹಾಗೂ ಪಾಳೆಗಾರಿಕೆಯನ್ನು ನಡೆಸುತ್ತಿರುವ ಶಕ್ತಿಗಳ ಸಂಪತ್ತು ಶೇಖರಣೆಯ ತೀವ್ರ ದಾಹ, ಭೂಮಿ ಮತ್ತು ಆಸ್ತಿಗಳನ್ನು ಕಬಳಿಸುವ ಲೂಟಿಕೋರ ಕೃತ್ಯಗಳಿಂದ ಬೇರ್ಪಡಿಸಿ ನೋಡಲಾಗದು ಎಂದು ಅಭಿಪ್ರಾಯಪಟ್ಟರು.

“ಆದ್ದರಿಂದ “ಅತ್ಯಾಚಾರ-ಕೊಲೆ ಅಸಹಜ ಸಾವುಗಳು ಸೇರಿದಂತೆ, ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಡವರು, ಆದಿವಾಸಿಗಳು, ದಲಿತರು ಮತ್ತು ಹಿಂದುಳಿದ ಸಮುದಾಯಗಳ ಜನರು ಮತ್ತು ಪಾಳೇಗಾರಿಕೆಯನ್ನು ವಿರೋಧಿಸಿದ ಜನರ ಮೇಲೆ ಬೆದರಿಕೆಗಳು, ದೌರ್ಜನ್ಯಗಳು ಮತ್ತು ಕೊಲೆಗಳನ್ನು ಮಾಡಿ ಅಕ್ರಮವಾಗಿ ಕಬಳಿಸಿರುವ ಭೂಮಿಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಧರ್ಮಸ್ಥಳದ ಪ್ರದೇಶದಲ್ಲಿ ಈಗಲೂ ಸಾಕಷ್ಟು ಸಂಖ್ಯೆಯಲ್ಲಿ ಕೃಷಿಕರು ತಮ್ಮ ಜಮೀನುಗಳನ್ನು ವ್ಯವಸಾಯಕ್ಕೆ ಬಳಸಲಾಗದೆ, ಭಯಪಟ್ಟು ದೂರ ಉಳಿದಿರುವ ಪ್ರಸಂಗಗಳಿವೆ. ಧರ್ಮಸ್ಥಳ ದೇಗುಲಕ್ಕೆ ಭೂಮಿ ದಾನ ಕೊಟ್ಟರು ಎಂದು ಬಿಂಬಿಸಲಾಗುವ ಹಲವು ಪ್ರಕರಣಗಳ ಹಿಂದೆ ಬಲಾತ್ಕಾರ, ಬೆದರಿಕೆಗಳ ಇವೆ ಎಂದು ವ್ಯಾಪಕವಾದ ಭಾವನೆ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿನ ಎಲ್ಲಾ ಭೂ ಕಬಳಿಕೆಯ ಪ್ರಕರಣಗಳನ್ನು ಪ್ರತ್ಯೇಕ ಎಸ್.ಐ.ಟಿ. ತನಿಖೆಗೆ ಒಳಪಡಿಸಬೇಕು. ಭೂಮಿಯ ನ್ಯಾಯಬದ್ಧ ಹಕ್ಕುದಾರರಿಗೆ ಭೂಮಿಗಳನ್ನು ವಾಪಸ್ ಕೊಡಬೇಕು, ಅಕ್ರಮವಾಗಿ ಭೂಮಿ ಹೊಂದಿರುವ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಎಡ ಪಕ್ಷಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತವೆ” ಎಂದು ಹೇಳಿದರು.

ಮೈಕ್ರೋಫೈನಾನ್ಸ್ ಎಂಬ ಕಿರುಕುಳ

ಮೈಕ್ರೋಫೈನಾನ್ಸ್ ಹೆಸರಲ್ಲಿ ಅಪಾರ ಪ್ರಮಾಣದ ಹಣಕಾಸಿನ ವ್ಯಾಪಾರವನ್ನು ಮಾಡುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಜನರ ಧಾರ್ಮಿಕ ನಂಬಿಕೆಗಳನ್ನು ಹಣಕಾಸಿನ ಲಾಭಕ್ಕಾಗಿ ದುರುಪಯೋಗ ಮಾಡುವ ಕಪಟ ಆಟಕ್ಕೆ ಸರಕಾರ ತಡೆ ಹಾಕಬೇಕು. ಆರ್.ಬಿ.ಐ.ನ ಅನುಮತಿ ಇಲ್ಲದೇ ಅಗಾಧ ಪ್ರಮಾಣದ ಹಣಕಾಸು ವ್ಯವಹಾರ ಈ ಸಂಸ್ಥೆಯ ಮೂಲಕ ನಡೆಯುತ್ತಿದೆ. ಇದು ತಕ್ಷಣ ನಿಲ್ಲಿಸಬೇಕು. ಕಿರುಕುಳದ ಬಡ್ಡಿ ವ್ಯವಹಾರವನ್ನು ದೇವರು ಧರ್ಮದ ಹೆಸರಲ್ಲಿ ನಡೆಸುವುದು ಜನರನ್ನು ನಂಬಿಸಿ ವಂಚಿಸುವ ವಿಧಾನವಾಗಿದೆ ಎಂದು ಆರೋಪಿಸಿದ್ದಾರೆ.

ಇದು ಜನರ ಧಾರ್ಮಿಕ ನಂಬಿಕೆ ಮತ್ತು ದೈವದ ಮೇಲಿನ ನಂಬಿಕೆಗೆ ಮಾಡುವ ದ್ರೋಹವಾಗಿದೆ. ಈ ಸಂಸ್ಥೆಯ ಅಕ್ರಮ ವಿಧಾನಗಳು, ಬೆದರಿಕೆ ವಸೂಲಿ, ವಿಪರೀತ ಬಡ್ಡಿ, ಪರಿಣಾಮವಾಗಿ ಸಾಲ ತೀರಿಸಲಾಗದೆ ಸಂಭವಿಸುತ್ತಿರುವ ಆತ್ಮಹತ್ಯೆಗಳು, ಇವೆಲ್ಲವುಗಳ ಕುರಿತು ಸಮಗ್ರವಾದ ತನಿಖೆ ನಡೆಯಬೇಕು ಎಂದು ಎಡ ಪಕ್ಷಗಳು ಒತ್ತಾಯಿಸುತ್ತವೆ. ಅಪರಾಧ ಪ್ರಕರಣಗಳ ಕೋಮುವಾದೀಕರಣ ಪ್ರಯತ್ನಕ್ಕೆ ತಡೆ ಹಾಕಬೇಕು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಆರಂಭದಿಂದಲೂ, ಜನರ ಬದುಕಿಗೆ ಸಂಬಂಧಿಸಿದ ಭೂಮಿ ಹಕ್ಕು ಮತ್ತು ಜೀವನದ ಪ್ರಗತಿಗೆ ಅಗತ್ಯವಾದ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಅದೇ ರೀತಿ ಕೊಲೆಗಳು, ಅತ್ಯಾಚಾರಗಳು ಮತ್ತು ದೌರ್ಜನ್ಯಗಳ ವಿರುದ್ಧ ಹೋರಾಡುತ್ತಾ ಬಂದಿದೆ. ಹೀಗಿರುವಾಗ, ವಿರೋಧ ಪಕ್ಷದ ನಾಯಕ ಬಿಜೆಪಿಯ ಆರ್.ಅಶೋಕ್ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಕಮ್ಯುನಿಸ್ಟರನ್ನು ಟೀಕಿಸಿ ಮಾತನಾಡಿರುವುದು ಮತ್ತು ಕೇರಳದ ಎಡರಂಗದ ಸರ್ಕಾರವನ್ನು ಎಳೆದು ತಂದಿರುವುದು ರಾಜಕೀಯ ಹತಾಶೆಯನ್ನು ತೋರಿಸುತ್ತದೆ. ಜನರ ಪರವಾಗಿ ಪ್ರತಿಪಕ್ಷವಾಗಿ ಧ್ವನಿ ಎತ್ತಬೇಕಿದ್ದ ವಿಪಕ್ಷ ನಾಯಕರು ಜನಧ್ವನಿಯನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿದ್ದಾರೆ.

ವಿದೇಶಿ ಹಣ ಆರೋಪ

“ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು, ಸ್ವತಂತ್ರ ಪತ್ರಕರ್ತರು ವಿದೇಶೀ ಹಣ ಬಳಸಿಕೊಂಡು ಧರ್ಮಸ್ಥಳದ ದೇವಸ್ಥಾನದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆಂದು, ಅದಕ್ಕಾಗಿ ಇ.ಡಿ. ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇಡೀ ಎಸ್.ಐ.ಟಿ. ತನಿಖೆಯನ್ನೇ ದಿಕ್ಕುತಪ್ಪಿಸುವ ಭಾಗವಾಗಿ ಶ್ರೀನಿವಾಸ ಪೂಜಾರಿಯವರು ದೇವಸ್ಥಾನದ ಪ್ರಶ್ನೆಯನ್ನು ಉದ್ದೇಶಪೂರ್ವಕವಾಗಿ ಮುಂದು ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಅಮಾಯಕ ಯುವತಿಯರು, ಪುರುಷರು ನೂರಾರು ಸಂಖ್ಯೆಯಲ್ಲಿ ಅತ್ಯಾಚಾರ, ಅಪಹರಣ, ಕೊಲೆಗಳಾದಾಗ ಧ್ವನಿಯೆತ್ತದೆ ಈಗ ದೂರು ಕೊಟ್ಟವರನ್ನೇ ಗುರಿಯಾಗಿಸುವ ಹುನ್ನಾರವನ್ನು ನಡೆಸಿದ್ದಾರೆ. ಧರ್ಮಸ್ಥಳ ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿರುವುದು ಜೈನ ಕುಟುಂಬ ಎಂಬ ಕಾರಣಕ್ಕಾಗಿ ಜೈನ ಧಾರ್ಮಿಕ ಮುಖಂಡರು ದೇವಸ್ಥಾನದ ಆಡಳಿತಗಾರರ ಪರವಾಗಿ ಅತಾರ್ಕಿಕ ವಾದಗಳನ್ನು ಮುಂದಿಟ್ಟು ಸಮರ್ಥಿಸುವುದನ್ನು ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಲಾಗದು. ಧರ್ಮಸ್ಥಳವು ಒಂದು ಹಿಂದೂ ಧಾರ್ಮಿಕ ಕೇಂದ್ರ ಎಂಬ ನೆಪವನ್ನು ಮುಂದಿಟ್ಟುಕೊಂಡು, ಧರ್ಮಸ್ಥಳ ಎಂಬ ಪ್ರದೇಶದಲ್ಲಿ ನಡೆದಿರುವ ಭೀಕರ ಅತ್ಯಾಚಾರ-ಕೊಲೆ-ಘೋರ ಅಪರಾಧಗಳನ್ನು ಮರೆತಂತೆ, ಮರೆಮಾಚಿ ಮಾತನಾಡುವುದು, ಹೀನಾತಿ ಹೀನ ಅಪರಾಧಗಳು ನಗಣ್ಯವೆಂಬಂತೆ ಸಾರ್ವಜನಿಕ ಜೀವನದ ಮುಖಂಡರೇ ಮಾತನಾಡುವುದರ ಹಿಂದೆ, ಅಲ್ಲಿ ಅಪರಾಧ ಎಸಗಿದವರನ್ನು ರಕ್ಷಿಸುವ ಉದ್ದೇಶ ಇದೆ ಎಂದೇ ಭಾವಿಸಬೇಕಾಗುತ್ತದೆ. ಕೋಮುವಾದಿ ಸಂಘಟನೆಗಳು ಮತ್ತು ಪಕ್ಷಗಳು ಸದ್ಯದ ತನಿಖೆ ಮತ್ತು ಧರ್ಮಸ್ಥಳದಲ್ಲಿ ನಡೆದಿರುವ ಅನ್ಯಾಯಗಳನ್ನು ಹಿಂದೂ-ಮುಸ್ಲಿಂ ಪ್ರಶ್ನೆಯಾಗಿ ಜನರ ಮಧ್ಯೆ ಬಿಂಬಿಸುವುದು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಿ ಈ ಪ್ರವೃತ್ತಿಗೆ ಸರಕಾರ ತಡೆ ಹಾಕಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಪದ್ಮಲತಾ, ವೇದವಲ್ಲಿ, ಮಾವುತ ನಾರಾಯಣ ಮತ್ತು ಯಮುನಾ, ಸೌಜನ್ಯ ಮುಂತಾದ ಕೊಲೆಯಾದ ಪ್ರಕರಣಗಳ ಮರು ತನಿಖೆ ಮಾಡಬೇಕು, ಎಲ್ಲಾ ಭೂಕಬಳಿಕೆಗಳ ತನಿಖೆಯಾಗಬೇಕು ಮತ್ತು ಭೂಮಿ ಕಳೆದುಕೊಂಡವರಿಗೆ ವಾಪಸ್ ಕೊಡಿಸಬೇಕು ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮೈಕ್ರೋ ಫೈನಾನ್ಸ್ ಕಿರುಕುಳ ಅವ್ಯವಹಾರಗಳನ್ನು ಎಸ್.ಐ.ಟಿ.ಯ ಸಮಗ್ರ ತನಿಖೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಜೋಡಿ ಕೊಲೆಯ ರಹಸ್ಯ ಬಿಚ್ಚಿಟ್ಟ 2013ರ ಆ ಪತ್ರ!

ಇಡೀ ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಧರ್ಮಸ್ಥಳ ಪ್ರಕರಣದಲ್ಲಿ ದಿನನಿತ್ಯ ನಾನಾ ಬೆಳವಣಿಗೆಗಳು...

ದಾವಣಗೆರೆ | ದಲಿತ ಸಂಘಟನೆಗಳ ಒಳಮೀಸಲಾತಿ ಪ್ರತಿಭಟನೆ; ಎಸಿ ಕಛೇರಿಗೆ ಬೀಗ

"ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿ ಒಂದು ವರ್ಷವಾದರೂ ಒಳಮೀಸಲಾತಿಯನ್ನು ಜಾರಿ ಮಾಡುವಲ್ಲಿ...

ಕರ್ನಾಟಕದಲ್ಲಿ ಒಂದು ವಾರ ಭಾರೀ ಮಳೆ: ಕರಾವಳಿ, ಒಳನಾಡಿನ ಜಿಲ್ಲೆಗಳಿಗೆ ರೆಡ್, ಆರೆಂಜ್ ಅಲರ್ಟ್

ಕರ್ನಾಟಕದಾದ್ಯಂತ ಆಗಸ್ಟ್ 17ರಿಂದ 21ರವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ...

ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರ ಸಾವು : ಮಣ್ಣಿನ ಗಣಪತಿ ಪೂಜಿಸಲು ಸಚಿವ ಈಶ್ವರ ಖಂಡ್ರೆ ಮನವಿ

ಗಣೇಶ ಚತುರ್ಥಿಯಂದು ಮನೆಯಲ್ಲೂ ಪೂಜೆಗೊಳ್ಳುವ ಗಣೇಶ ಪರಿಸರ (ಮಣ್ಣಿನಿಂದ) ದಿಂದಲೇ ಹುಟ್ಟಿದ...

Download Eedina App Android / iOS

X