ಫೆ.28 ರೊಳಗೆ 60% ಕನ್ನಡವುಳ್ಳ ನಾಮಫಲಕಗಳನ್ನು ಅಳವಡಿಸದ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಹಾಗೂ ಹೋಟೆಲ್‌ಗಳು ಮುಂತಾದವುಗಳ ಪರವಾನಗಿಯನ್ನು ಅಮಾನತು ಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.
ಈ ಬಗ್ಗೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿರೋಶ್ ಪ್ರಕಟಣೆ ನೀಡಿದ್ದಾರೆ. “ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ಗಳು ಮುಂತಾದವುಗಳು ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯು ನಾಮಫಲಕದ ಮೇಲ್ಬಾಗದಲ್ಲಿ ಪ್ರದರ್ಶಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ವಿಶೇಷ ರಾಜ್ಯ ಪತ್ರಿಕೆ ಅಧಿಸೂಚನಾ ಪತ್ರದಲ್ಲಿ ಸೂಚಿಸಿದೆ” ಎಂದು ತಿಳಿಸಿದ್ದಾರೆ.
“ಈ ಹಿಂದೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಫೆ.2 ಮತ್ತು ಫೆ.12ರಂದು ನಡೆದ ಸಭೆಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲ ವಾಣಿಜ್ಯ ಉದ್ದಿಮೆಗಳು ಫೆ.28 ರೊಳಗೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸುವಂತೆ ಎಲ್ಲ ವಾಣಿಜ್ಯದಾರರಿಗೆ ಸೂಚಿಸಿದ್ದರು” ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುಡಿಯುವ ನೀರು ಕೊಡದೆ ಯಾವ ಬ್ರ್ಯಾಂಡ್ ಬೆಂಗಳೂರು ಮಾಡ್ತೀರಾ; ಮೋಹನ್ ದಾಸರಿ ಪ್ರಶ್ನೆ
“ಫೆ.29 ರಿಂದ ಅನ್ವಯವಾಗುವಂತೆ, ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗಳನ್ನು ಇಲಾಖಾ ವತಿಯಿಂದ ನೀಡಿರುವ ಉದ್ದಿಮೆ ಪರವಾನಿಗೆಗಳನ್ನು ಅಮಾನತುಗೊಳಿಸಲು ಜತೆಗೆ, ಅಂತಹ ವಾಣಿಜ್ಯ ಉದ್ದಿಮೆಗಳನ್ನು ಬೀಗಮುದ್ರೆ ಮಾಡಬೇಕು” ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.