ಟ್ಯೂಷನ್ ಕೇಂದ್ರಗಳ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಶಾಲೆಯ ಸಾಮಾನ್ಯ ತರತಿಗತಿಗಳನ್ನು ತಪ್ಪಿಸುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಕ್ರಮ ಟ್ಯೂಷನ್ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲು ಸಜ್ಜಾಗಿದೆ.
ಉತ್ತರದ ಜಿಲ್ಲೆಗಳಲ್ಲಿ ಈ ಪದ್ಧತಿ ವ್ಯಾಪಕವಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಪ್ರಕಾರ, ಹೆಚ್ಚಿನ ಅನಧಿಕೃತ ಟ್ಯುಟೋರಿಯಲ್ ಕೇಂದ್ರಗಳು ರಾಜ್ಯದ ಜನಪ್ರಿಯ ಸರ್ಕಾರಿ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕಾಗಿ ಕೋಚಿಂಗ್ ತರಗತಿಗಳನ್ನು ನಡೆಸುತ್ತವೆ.
“ವಿದ್ಯಾರ್ಥಿಗಳು ನಿಯಮಿತವಾಗಿ ಕೋಚಿಂಗ್ ಕೇಂದ್ರಗಳಿಗೆ ಹಾಜರಾಗುತ್ತಿದ್ದು, ತಮ್ಮ ಪರೀಕ್ಷೆಗಳನ್ನು ಬರೆಯಲು ಮಾತ್ರ ತಮ್ಮ ಶಾಲೆಗಳಿಗೆ ಮರಳುತ್ತಿದ್ದಾರೆ. ಈ ಟ್ಯುಟೋರಿಯಲ್ ಕೇಂದ್ರಗಳಲ್ಲಿ ವಾರ್ಷಿಕ ಶುಲ್ಕ ₹40,000ದಿಂದ ₹50,000ದವರೆಗೆ ಇರುತ್ತದೆ” ಎಂದು ವಿಜಯಪುರದ ಖಾಸಗಿ ಶಾಲಾ ಮಾಲೀಕರು ತಿಳಿಸಿದ್ದಾರೆ.
ಇಲಾಖೆಯ ಆಯುಕ್ತ ತ್ರಿಲೋಕ್ ಚಂದ್ರ ಬಿ ವಿ ಸುತ್ತೋಲೆ ಹೊರಡಿಸಿದ್ದು, ಎಲ್ಲ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರು(ಡಿಡಿಪಿಐಗಳು) ನೋಂದಣಿಯಾಗದ ಟ್ಯುಟೋರಿಯಲ್‌ಗಳನ್ನು ಗುರುತಿಸಿ ಇಲಾಖೆಗೆ ವರದಿ ನೀಡುವಂತೆ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಗುಮ್ಮಲ ಡ್ಯಾಂನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು
ವಿಜಯನಗರ ಜಿಲ್ಲೆಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹಲವಾರು ವಿದ್ಯಾರ್ಥಿಗಳು ಅನಧಿಕೃತ ಕೋಚಿಂಗ್ ಕೇಂದ್ರಗಳಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಅನಧಿಕೃತ ಕೋಚಿಂಗ್ ಕೇಂದ್ರಗಳನ್ನು ನಿಗ್ರಹಿಸಲು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನವೆಂಬರ್ 26ರಂದು ಹೊರಡಿಸಿದ ನೋಟಿಸ್‌ನಲ್ಲಿ, “ಕೋಚಿಂಗ್ ಕೇಂದ್ರಗಳು ಅನಧಿಕೃತವಾಗಿ ನಡೆಯುತ್ತಿರುವುದು ಕಂಡುಬಂದರೆ, ಶಿಕ್ಷಣ ಕಾಯ್ದೆಗೆ ಅನುಗುಣವಾಗಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು” ಎಂದು ಹೇಳಿದೆ.