ಪೂರ್ವ ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಮತ್ತು ಆರಂಭದಲ್ಲಿಯೇ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ ಉದ್ದೇಶದಿಂದ ರಾಜ್ಯ ಸರಕಾರವು ಪ್ರಸಕ್ತ ವರ್ಷದಿಂದ ಕಲಬುರಗಿ ವಿಭಾಗದ ಆಯ್ದ 1,008 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ ಎಸ್ ತಿಳಿಸಿದ್ದಾರೆ.
“ಬೀದರ ಜಿಲ್ಲೆಯಲ್ಲಿ 98, ಬಳ್ಳಾರಿ 119, ಕಲಬುರಗಿ 234, ಕೊಪ್ಪಳ 131, ರಾಯಚೂರ 190, ವಿಜಯನಗರ 142 ಹಾಗೂ ಯಾದಗಿರಿ 94 ಸೇರಿ ಒಟ್ಟು ಕಲಬುರಗಿ ವಿಭಾಗದ 1,008 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರಾಧೇಶಿಕ ಅಭಿವೃದ್ಧಿ ಮಂಡಳಿ ಅಕ್ಷರ ಆವಿಷ್ಕಾರ ಕಾರ್ಯಕ್ರಮದ ಮೂಲಕ ಕೈಜೋಡಿಸಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿಈಗಾಗಲೇ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿಎಲ್ ಕೆಜಿ-ಯುಕೆಜಿ ತರಗತಿಗಳು ನಡೆಯುತ್ತಿವೆ. ಅಲ್ಲಿ ದಾಖಲಾದ ಮಕ್ಕಳ ವಿವರಗಳನ್ನು ಅವಲೋಕಿಸಿದರೆ ಕಲ್ಯಾಣ ಕರ್ನಾಟಕ ವಿಭಾಗದ ಸಂಖ್ಯೆ ಕಡಿಮೆ ಇದೆ ಎಂಬುದು ಅಂಕಿ-ಸಂಖ್ಯೆಯಿಂದ ಗೊತ್ತಾಗುತ್ತದೆ.
ಬೆಂಗಳೂರು ವಿಭಾಗದಲ್ಲಿ 3,073 ಶಾಲೆಗಳಲ್ಲಿ ಅತಿ ಹೆಚ್ಚು 1,71,523 ಮಕ್ಕಳು ಪ್ರವೇಶ ಪಡೆದರೆ, ಕಲಬುರಗಿ ವಿಭಾಗದಲ್ಲಿ 967 ಶಾಲೆಗಳಲ್ಲಿ 32,805 ಅತಿ ಕಡಿಮೆ ಮಕ್ಕಳು ಪ್ರವೇಶ ಪಡೆದಿದ್ದಾರೆ. ಧಾರವಾಡ ವಿಭಾಗದಲ್ಲಿ 1,102 ಶಾಲೆಗಳಲ್ಲಿ 48,805 ಮಕ್ಕಳು ಮತ್ತು ಮೈಸೂರು ವಿಭಾಗದಲ್ಲಿ 1,099 ಶಾಲೆಗಳಲ್ಲಿ 57,569 ಮಕ್ಕಳು ಎಲ್ ಕೆಜಿ-ಯುಕೆಜಿ ಪ್ರವೇಶ ಪಡೆದಿದ್ದಾರೆ.
ಇನ್ನು ಅಂಗನವಾಡಿಗಳಲ್ಲಿ 6 ತಿಂಗಳಿನಿಂದ 6 ವರ್ಷ ವರೆಗಿನ ಮಕ್ಕಳ ದಾಖಲಾತಿ ಪ್ರಮಾಣ ನೋಡಿದಾಗ ಬೆಂಗಳೂರು ವಿಭಾಗದಲ್ಲಿ ಶೇ.40.94, ಧಾರವಾಡ ವಿಭಾಗದಲ್ಲಿ ಶೇ.61.61, ಮೈಸೂರು ವಿಭಾಗದಲ್ಲಿ ಶೇ.34.48 ಹಾಗೂ ಕಲಬುರಗಿ ವಿಭಾಗದಲ್ಲಿಅತಿ ಹೆಚ್ಚು ಶೇ.70.93 ರಷ್ಟು ಮಕ್ಕಳು ಅಂಗನವಾಡಿ ಕೇಂದ್ರದ ಮೇಲೆ ಅವಲಂಬಿತರಾಗಿದ್ದಾರೆ. ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂಗನವಾಡಿ ಮೇಲಿನ ಹೊರೆ ಸಹ ತಪ್ಪಲಿದೆ ಎಂದರು.
ಕೇಂದ್ರ ಅನುದಾನದ ನಿರೀಕ್ಷೆ:
“ಪೂರ್ವ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಕ್ರಿಯಾತ್ಮಕ ಚಟುವಟಿಕೆ ಸೇರಿ ಇನ್ನಿತರ ಮಾನದಂಡ ಅಧರಿಸಿ ಕೇಂದ್ರ ಸರಕಾರವು ಅಂತಹ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಪ್ರೊಜೆಕ್ಟ್ ಅಪ್ರೂವಲ್ ಬೋರ್ಡ್‌ನಿಂದ ಅನುಮೋದನೆ ನೀಡಿ ಹೆಚ್ಚಿನ ಅನುದಾನ ನೀಡುತ್ತದೆ. ಆ ಮೂಲಕ ರಾಜ್ಯದ ಮಕ್ಕಳಿಗೆ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆಯಲು ಸಹಕಾರಿಯಾಗುವುದಲ್ಲದೆ ರಾಜ್ಯ ಸರಕಾರದ ಜೊತೆ ಕೇಂದ್ರ ಸರಕಾರ ಅನುದಾನ ಸಹ ಬರಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು
ಪೂರ್ವ ಪ್ರಾಥಮಿಕ ಹಂತಕ್ಕೆ ಶಾಲಾ ಹಂತದಲ್ಲಿಯೇ ನಿಯಮಾನುಸಾರ ಅತಿಥಿ ಶಿಕ್ಷಕರ ಮತ್ತು ಮಕ್ಕಳ ಪಾಲನೆಗೆ ಆಯಾ ನೇಮಕ ಮಾಡಿಕೊಳ್ಳಲಾಗುತ್ತದೆ” ಎಂದು ಮಾಹಿತಿ ನೀಡಿದರು.