- ಲೋಕಾಯುಕ್ತರ ಮುಂದೆ ಸಂಕಷ್ಟ ಹೇಳಿಕೊಂಡ ಜನತೆ
- ಶೌಚಾಲಯ ನಿರ್ಮಿಸಲು ನಗರಸಭೆ ಪೌರಾಯುಕ್ತರಿಗೆ ತಾಕೀತು
ಕಲುಷಿತ ನೀರು ಕುಡಿದು ಜನರು ಅಸ್ವಸ್ಥಗೊಂಡ ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು ಶುಕ್ರವಾರ ಬೆಳಗ್ಗೆ ದಿಢೀರ್ ಭೇಟಿ ಪರಿಶೀಲನೆ ನಡೆಸಿದರು.
ಈ ವೇಳೆ ಜನರು ಲೋಕಾಯುಕ್ತ ನ್ಯಾಯಮೂರ್ತಿ ಎದುರು ತಮ್ಮ ಸಂಕಷ್ಟಗಳ ಬಗ್ಗೆ ಹೇಳಿಕೊಂಡು, ಮೂಲಸೌಲಭ್ಯ ಕಲ್ಪಿಸುವಂತೆ ಅವರನ್ನು ಮನವಿ ಮಾಡಿದರು.
ಕಾಲರಾ ರೋಗಕ್ಕೆ ತುತ್ತಾದ ಮಂಜುಳ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮನೆಯ ಸ್ಥಿತಿ, ಅನೈರ್ಮಲ್ಯದ ವಾತಾವರಣ ಕಂಡು ಶೌಚಾಲಯದ ಬಗ್ಗೆ ಪ್ರಶ್ನಿಸಿದರು. ಬಯಲು ಬಹಿರ್ದೆಸೆಗೆ ತೆರಳುತ್ತಿರುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದರು. ಸ್ಥಳದಲ್ಲೇ ಇದ್ದ ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಅವರನ್ನು ತರಾಟೆ ತೆಗೆದುಕೊಂಡ ಬಿ ಎಸ್ ಪಾಟೀಲ್ ಅವರು, ಶೌಚಾಲಯ ನಿರ್ಮಿಸಿಕೊಡುವಂತೆ ತಾಕೀತು ಮಾಡಿದರು.
ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಪ್ರತಿಕ್ರಿಯಿಸಿ, “‘ಸ್ಥಳಾವಕಾಶದ ಕೊರತೆ ಇರುವುದರಿಂದ ಶೌಚಾಲಯ ನಿರ್ಮಾಣ ಸಾಧ್ಯವಾಗಿಲ್ಲ” ಎಂದು ಸಮಜಾಯಿಷಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರ ಸುಡದಿರಲಿ ಬಿಲ್ ಬಾಕಿ ಬೆಂಕಿ ಕಿಡಿ
ನ್ಯಾಯಮೂರ್ತಿ ಸಂಚಾರ
ಬೆಳಗ್ಗೆ 7.30 ರಿಂದ 11 ಗಂಟೆಯವರೆಗೆ ನಗರದ ವಿವಿಧ ರಸ್ತೆಗಳು, ಬಡಾವಣೆಗಳಲ್ಲಿ ನ್ಯಾಯಮೂರ್ತಿ ಅವರು ಸಂಚಾರ ನಡೆಸಿದರು. ಮೆದೇಹಳ್ಳಿ ರಸ್ತೆ, ಹೊರಪೇಟೆ, ಬಸವೇಶ್ವರ ಟಾಕೀಸ್ ರಸ್ತೆ, ಜೆಸಿಆರ್ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಅಕ್ಕಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ ಕಂಡು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಭೇಟಿ ವೇಳೆ ವೈದ್ಯರೇ ಇರಲಿಲ್ಲ
ತಾತ್ಕಾಲಿಕ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳು ಭೇಟಿ ನೀಡಿದಾಗ ವೈದ್ಯರೇ ಇರಲಿಲ್ಲ. ಶುಶೂಷಕರು ಮಾತ್ರ ಇರುವುದನ್ನು ಕಂಡು ಅಸಮಾಧಾನ ಹೊರಹಾಕಿದ ಪಾಟೀಲ್ ಅವರು, ಜನರಿಗೆ ವೈದ್ಯಕೀಯ ಸೇವೆಯನ್ನು ಸರಿಯಾಗಿ ಒದಗಿಸುವಂತೆ ಸೂಚಿಸಿದರು.