ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಕಾಲಕ್ಕೆ ಮಳೆಯಾಗದೇ, ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಇನ್ನು ಕಾವೇರಿ ನೀರು ಬಿಡುವ ವೇಳಾಪಟ್ಟಿಯೂ ಬದಲಾಗಿದ್ದು, ಹಲವೆಡೆ ನೀರಿನ ಸಮಸ್ಯೆ ಎದುರಾಗಿದೆ. ಇದನ್ನೇ ಬಂಡವಾಳ ಮಾಡಿಕೊಡಿರುವ ಟ್ಯಾಂಕರ್ ಮಾಲೀಕರು ಒಂದು ಟ್ಯಾಂಕರ್ ನೀರಿಗೆ ₹3000ವರೆಗೂ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾ.1 ರಂದು ಟ್ಯಾಂಕರ್ ಮಾಲೀಕರೊಂದಿಗೆ ಸಭೆ ನಡೆಸಿ ದರ ನಿಗದಿ ಮಾಡಲಿದ್ದಾರೆ.
ಬೆಂಗಳೂರಿನ ಕಾವೇರಿ ಭವನದಲ್ಲಿ ಫೆ.28 ರಂದು ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಜಂಟಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ತುಷಾರ್ ಗಿರಿನಾಥ್ ಅವರು, “ಸಾರಿಗೆ ಇಲಾಖೆ ಪ್ರಕಾರ 3,500 ಟ್ಯಾಂಕರ್ಗಳು ಇವೆ. ಟ್ರೇಡ್ ಲೈಸೆನ್ಸ್ ಇರುವ ಟ್ಯಾಂಕರ್ 54 ಇರಬಹುದು. ನಾವು ಅವರಿಗೆ ಒಂದು ವಾರ ಡೆಡ್ಲೈನ್ ಕೊಡುತ್ತೇವೆ. ಮಾ.1ರಿಂದ ಮಾರ್ಚ್ 7ರೊಳಗೆ ನೋಂದಣಿ ಕಡ್ಡಾಯ” ಎಂದಿದ್ದಾರೆ.
“ಟ್ರೇಡ್ ಲೈಸೆನ್ಸ್ ಪಡೆದೇ ನೀರು ಸರಬರಾಜು ಮಾಡಬೇಕು. ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ ವಶಕ್ಕೆ ಪಡೆಯುತ್ತೇವೆ. ವಾಟರ್ ಟ್ಯಾಂಕರ್ನವರ ಜೊತೆ ಮಾತಾಡಿ ದರ ನಿಗದಿ ಮಾಡುತ್ತೇವೆ. 110 ಹಳ್ಳಿಗಳಲ್ಲಿ ನೀರಿನ ಕೊರತೆ ಇದ್ದಾಗ ಬಿಡಬ್ಲ್ಯುಎಸ್ಎಸ್ಬಿಯವರೇ ಟ್ಯಾಂಕರ್ ಮೂಲಕ ನೀರು ಪೂರೈಸಿದ್ದಾರೆ. ನೋಂದಣಿಯಾಗದ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಟ್ರೇಡ್ ಅಸೋಸಿಯೇಷನ್ ಜೊತೆ ಮಾತನಾಡಿ ದರ ನಿಗದಿ ಮಾಡಲಾಗುತ್ತದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ₹12,369 ಕೋಟಿಯ ಬಜೆಟ್ ಮಂಡನೆ: 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿ
”ನಗರದಲ್ಲಿ ನೀರಿನ ಬವಣೆ ನೀಗಿಸಲು ಜಿಲ್ಲಾಧಿಕಾರಿಗಳು 200 ಟ್ಯಾಂಕರ್‌ಗಳನ್ನು ಜಲಮಂಡಳಿಯ ಸುಪರ್ದಿಗೆ ನೀಡಿದ್ದಾರೆ. ಈ ಪೈಕಿ 110 ಹಳ್ಳಿಗಳು, ಪುರಸಭೆ, ನಗರಸಭೆ ವ್ಯಾಪ್ತಿಗೆ 100 ಟ್ಯಾಂಕರ್ ಮತ್ತು ನಗರದ ಕೇಂದ್ರ ಭಾಗದ ಪ್ರದೇಶಗಳಿಗೆ ನೀರು ಪೂರೈಸಲು 100 ಟ್ಯಾಂಕರ್‌ಗಳನ್ನು ಬಳಸಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ ಮನೋಹರ ಮಾತನಾಡಿ, “ಎಸ್ಟಿಪಿ ನೀರನ್ನು ಮತ್ತೊಮ್ಮೆ ಶುದ್ಧೀಕರಣ ಮಾಡಿ ಅವಶ್ಯಕತೆ ಇರುವ ಕಡೆ ನೀರನ್ನು ಕೊಡುತ್ತೇವೆ. ಈ ನೀರನ್ನು ಜನರು ಕಾರ್ ವಾಷ್ ಹಾಗೂ ಗಾರ್ಡನ್ಗೆ ಬಳಕೆ ಮಾಡಬಹುದಾಗಿದೆ” ಎಂದಿದ್ದಾರೆ.
“ಮೊದಲ ಹಂತದಲ್ಲಿ ಸುಮಾರು 7 ಕೆರೆಗಳಿಗೆ ಶುದ್ಧೀಕರಿಸಿದ ನೀರನ್ನು ತುಂಬುತ್ತವೆ. ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಕಾವೇರಿ 5ನೇ ಹಂತ ಆದಷ್ಟು ಬೇಗ ಪೂರ್ಣ ಗೊಳಿಸುತ್ತೇವೆ. ಮೇ ಮೊದಲ ವಾರದಲ್ಲಿ ಆ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡುತ್ತೇವೆ” ಎಂದು ಹೇಳಿದ್ದಾರೆ.