ರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕ ಹೋಬಳಿ ಬ್ಯಾಟರಾಯನಪುರದ ಮಾಲ್ ಆಫ್ ಏಷ್ಯಾಗೆ ಡಿ.31ರಿಂದ ಜನವರಿ 15ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಬಟ್ಟು 16 ದಿನಗಳ ಕಾಲ ಈ ಮಾಲ್ ಬಂದ್ ಮಾಡುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಆದೇಶಿಸಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ನಾಮಫಲಕದಲ್ಲಿ ಶೇ. 60ರಷ್ಟು ಕನ್ನಡ ಬಳಸದ ವಾಣಿಜ್ಯ ಅಂಗಡಿಗಳು ಹಾಗೂ ಮಾಲ್‌ಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಪ್ರತಿಭಟನೆ ನಡೆಸಿತ್ತು. ಅಲ್ಲದೇ, ಬ್ಯಾಟರಾಯನಪುರದ ಫೋನಿಕ್ಸ್ ಮಾಲ್ ಆಫ್ ಏಷ್ಯಾ ವಿರುದ್ಧ ಕೂಡ ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಮಾಲ್ಗೆ ನುಗ್ಗಿ ಗಲಾಟೆ ನಡೆಸಲಾಗಿತ್ತು. ಈ ಹಿನ್ನೆಲೆ, ಸಾರ್ವಜನಿಕ ಶಾಂತಿ ಕಾಪಾಡುವುದು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಿಸುವ ದೃಷ್ಟಿಯಿಂದ ಮಾಲ್ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಈ ಆದೇಶ ಹೊರಡಿಸಿದ್ದಾರೆ.
ಇನ್ನು ಮಾಲ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಹಾಕಲಾಗಿದೆ. ಮುಂಜಾಗ್ರತ ಕ್ರಮವಾಗಿ ಮಾಲ್ ಬಳಿ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈ ಆದೇಶದಂತೆ 5 ಕ್ಕಿಂತ ಹೆಚ್ಚು ಜನ ಸೇರುವ ಹಾಗಿಲ್ಲ. ಹಾಗಾಗಿ ಮುಂದಿನ ಹದಿನೈದು ದಿನಗಳ ಕಾಲ ಮಾಲ್ ಆಫ್ ಏಷ್ಯಾ ಕ್ಲೋಸ್ ಆಗಲಿದೆ. ಅಕ್ಟೋಬರ್ ತಿಂಗಳಲ್ಲಿ ಓಪನ್ ಮಾಲ್ ಆಫ್ ಏಷ್ಯಾ ಓಪನ್ ಆಗಿತ್ತು.
ಮಾಲ್ ವಿರುದ್ಧ ಪ್ರತಿಭಟನೆ
ಇನ್ನು ಮಾಲ್ ನಿರ್ಮಾಣದಿಂದ ಸಂಚಾರಕ್ಕೆ ಅನಾನೂಕೂಲ ಆಗಿದೆ ಎಂದು ಸಾರ್ವಜನಿಕರು ಪ್ರತಿಭಟನೆ ಸಹ ನಡೆಸಿದ್ದರು. ಮಾಲ್ ಭಾಗದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಆಗುತ್ತಿಲ್ಲ. ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು, ಅಂಬುಲೆನ್ಸ್‌ಗಳ ಓಡಾಟಕ್ಕೂ ಕಷ್ಟ ಆಗಲಿದೆ ಎಂಬ ದೂರುಗಳು ಮಾಲ್ ವಿರುದ್ಧ ದಾಖಲಾಗಿದ್ದವು.
ಸಾಲು ಸಾಲು ದೂರುಗಳು ದಾಖಲಾದ ಹಿನ್ನೆಲೆ ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ಖುದ್ದು ಮಾಲ್‌ಗೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ, ಪಾರ್ಕಿಂಗ್ ಸೇರಿದಂತೆ ಕೆಲವು ನ್ಯೂನ್ಯತೆಗಳು ಕಂಡು ಬಂದಿದ್ದವು. ಜತೆಗೆ, ಸಂಚಾರ ದ್ಟಟಣೆ ಕುರಿತು ಜಂಟಿ ಆಯುಕ್ತರ ವರದಿ, ಕಾನೂನು ಸುವ್ಯವಸ್ಥೆ ಬಿಗಡಾಯಿಸುತ್ತಿರುವ ಸಂಬಂಧ ಈಶಾನ್ಯ ವಿಭಾಗದ ಡಿಸಿಪಿ ನೀಡಿದ್ದ ವರದಿ ಪರಿಗಣಿಸಿ ಮಾಲ್ ಆಫ್ ಏಷಿಯಾವನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಆದೇಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೈಲಿನ ಮೂಲಕ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಏಳು ಮಂದಿ ಬಂಧನ
ಬಂದ್ ವೇಳೆ, ಮಾಲ್ ಸಿಬ್ಬಂದಿ ಹಾಗೂ ಮಳಿಗೆಗಳ ಸಿಬ್ಬಂದಿ ಕಾರ್ಯಚಟುವಟಿಕೆ ನಡೆಸಬಹುದು. ಮುಂಜಾಗ್ರತಾ ಕ್ರಮವಾಗಿ ಮಾಲ್ ಸುತ್ತಮುತ್ತಲೂ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.