ರಾಜ್ಯದ 14 ಕ್ಷೇತ್ರಗಳಲ್ಲಿ ಏ.26 ರಂದು ಬೆಳಗ್ಗಿನಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಎಲ್ಲೆಡೆ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡುತ್ತಿದ್ದಾರೆ. ಈ ನಡುವೆ, ಮಂಗಳೂರಿನ ಕಪಿತಾನಿಯೋ ಮತಗಟ್ಟೆಯ ಬಳಿ ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮಾಧ್ಯಮ ಪ್ರತಿನಿಧಿಗೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ, ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಮಂಗಳೂರಿನ ಕಂಕನಾಡಿ ಕಪಿತಾನಿಯೋ ಶಾಲಾ ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಲು ಬಂದಾಗ ಈ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಸಂದೀಪ್ ಎಕ್ಕೂರು ಹಾಗೂ ಇನ್ನಿತರ ಕಾರ್ಯಕರ್ತರಿಂದ ಮಾತಿನ ಚಕಮಕಿ ನಡೆದಿದೆ. ಅಲ್ಲದೇ, ಇವರು ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದು, ಅಧಿಕಾರಿಯನ್ನ ತಳ್ಳಾಡಿ ಪುಂಡಾಟ ಮೆರೆದಿದ್ದಾರೆ. ಇತ್ತ ಇದನ್ನು ಚಿತ್ರೀಕರಣ ಮಾಡಿದ ಮಾಧ್ಯಮದವರ ಮೇಲೂ ಹರಿಹಾಯ್ದ ಇವರು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ಏನಿದು ಘಟನೆ?
ಮಂಗಳೂರಿನ ಕಂಕನಾಡಿ ಕಪಿತಾನಿಯೋ ಶಾಲಾ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿಯವರು ಮತದಾನ ಮಾಡಿ ಹೊರಗೆ ಬಂದಿದ್ದಾರೆ. ಈ ವೇಳೆ, ಮಾಧ್ಯಮ ಪ್ರತಿನಿಧಿಗಳು ಮತಗಟ್ಟೆಯ ಗೇಟಿನ ಹೊರಭಾಗದಲ್ಲಿ ಪದ್ಮರಾಜ್ ಅವರ ಹೇಳಿಕೆ ತೆಗೆದುಕೊಂಡಿದ್ದರು.
ಈ ವೇಳೆ, ಅಲ್ಲಿಗೆ ಬಂದ ಬಿಜೆಪಿ ಕಾರ್ಯಕರ್ತ ಸಂದೀಪ್ ಎಕ್ಕೂರು ‘ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು’ ಎಂದು ಜಗಳ ಆರಂಭಿಸಿದ್ದಾನೆ. ಈ ವೇಳೆ, ಅಲ್ಲಿಯೇ ಇದ್ದ ಪೊಲೀಸ್ ಅಧಿಕಾರಿ ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದಾನೆ. ಆಗ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಆರಂಭ: ಉತ್ಸಾಹದಿಂದ ಮತ ಚಲಾಯಿಸುತ್ತಿರುವ ಮತದಾರರು
ಪೊಲೀಸರು ಅಲ್ಲಿಂದ ಹಿಂದಿರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಹರಿಹಾಯ್ದಿದ್ದಾನೆ. ಪತ್ರಕರ್ತರೊಂದಿಗೂ ಬಿಜೆಪಿ ಕಾರ್ಯಕರ್ತರ ತಂಡ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಮತಗಟ್ಟೆಯ ಬಳಿ ಗಲಾಟೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ದ ಇಂದು ಸಂಜೆ ವೇಳೆಗೆ ಆತನ ಮೇಲೆ ಪ್ರಕರಣ ದಾಖಲು ಮಾಡಿ ಬಂಧನ ಮಾಡುತ್ತೇವೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಈ ಎಚ್ಚರಿಕೆಯ ಬಳಿಕ ಪರಿಸ್ಥಿತಿ ಶಾಂತವಾಯಿತು.