ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಫಯಾಜ್‌ನ ತಾಯಿ ಮುಮ್ತಾಜ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ.
ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಕಣ್ಣೀರಿಟ್ಟು ಮಾತನಾಡಿ, “ಮಗಳನ್ನು ಕಳಕೊಂಡ ತಂದೆ ತಾಯಿಯ ನೋವು ಎಂತಹದ್ದು ಎಂಬುದು ನನಗೆ ಅರ್ಥವಾಗುತ್ತೆ. ನನಗೂ ನೇಹಾ ಮಗಳ ಸಮ. ನನ್ನ ಮಗ ಕೊಲೆ ಮಾಡಿದ್ದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ನೆಲದ ಕಾನೂನು ಪ್ರಕಾರ ಮಗನಿಗೆ ಶಿಕ್ಷೆಯಾಗಲಿ” ಎಂದು ದುಃಖದಿಂದ ನುಡಿದರು.
ನೇಹಾ ಕೊಲೆ ಸುದ್ದಿ ಕೇಳಿಯೇ ನಾನು ಕುಸಿದು ಬಿದ್ದೆ. ಬಹಳ ಸಂಕಟ ಆಗುತ್ತೆ. ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ. ತಪ್ಪು ಯಾರೇ ಮಾಡಿರೂ ತಪ್ಪೇ. ನನ್ನ ಮಗ ಮಾಡಿದ್ದಾನೆ ಎಂದು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮಗನಿಗೂ ತಕ್ಕ ಶಿಕ್ಷೆಯಾಗಬೇಕು” ಎಂದು ಹೇಳಿದರು.
“ಫಯಾಜ್ ಓದಿನಲ್ಲಿ ಜಾಣನಾಗಿದ್ದ, ಬಾಡಿ ಬಿಲ್ಡರ್. ಯೂನಿವರ್ಸಿಟಿ ಬ್ಲ್ಯೂ ಆಗಿದ್ದ. ಆತನಿಗೆ ಹಲವಾರು ಸನ್ಮಾನಗಳು ನಡೆಯುತ್ತಿದ್ದವು. ಇದರಿಂದ ಖುಷಿಯಾದ ನೇಹಾ ಫಯಾಜ್ ಕ್ಯಾಂಟಿನ್‌ನಲ್ಲಿದ್ದಾಗ ಆಕೆಯೇ ಫೋನ್ ನಂಬರ್ ಪಡೆದಿದ್ದಳು. ಅವಳೇ ಫಯಾಜ್‌ಗೆ ಪ್ರಪೋಸ್ ಮಾಡಿದ್ದಳು. ಈ ಬಗ್ಗೆ ಒಂದು ವರ್ಷದ ಹಿಂದೆಯೇ ಫಯಾಜ್ ನನ್ನ ಬಳಿ ಹೇಳಿಕೊಂಡಿದ್ದ. ನೇಹಾ ಎಂಬಾಕೆ ನನ್ನ ತುಂಬಾ ಲೈಕ್ ಮಾಡುತ್ತಾಳೆ, ಪ್ರೀತಿ ಮಾಡುತ್ತಿದ್ದಾಳೆ ಎಂದಿದ್ದ. ಆದರೆ ನಾನು ಈ ಲವ್ ಎಲ್ಲ ಬೇಡ ಎಂದು ಹೇಳಿದ್ದೆ. ಆದರೆ ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಮದುವೆಯಾಗುವ ನಿರ್ಧಾರಕ್ಕೂ ಬಂದಿದ್ದರು” ಎಂದು ಹೇಳಿದರು.
“ಫಯಾಜ್ ಭವಿಷ್ಯದಲ್ಲಿ ಐಎಎಸ್ ಆಫೀಸರ್ ಆಗಬೇಕೆಂದು ಕನಸು ಕಂಡಿದ್ದೆ. ಆದರೆ ಈ ರೀತಿ ಆಗಿದ್ದು ಬಹಳ ಸಂಕಟ ಆಗುತ್ತೆ. ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ, ಅವರಿಬ್ಬರೂ ಮದುವೆ ಆಗಬೇಕು ಎಂದುಕೊಂಡಿದ್ದರು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು” ಎಂದು ಕಣ್ಣೀರಿಟ್ಟರು.
“ಗುರುವಾರ ಸಂಜೆ ಪರಿಚಯಸ್ಥರು ಫೋನ್ ಮಾಡಿ ಟಿವಿ ನೋಡಲು ಹೇಳಿದ್ದರು. ಫಯಾಜ್ ಸಂಬಂಧ ಬ್ರೇಕಿಂಗ್ ನ್ಯೂಸ್ ಬರುತ್ತಿದೆ ಎಂದಿದ್ದರು. ಮಗನಿಗೆ ಏನಾಯಿತು ಎಂದು ಆತಂಕದಲ್ಲೇ ಟಿವಿ ನೋಡಿದಾಗ, ಫಯಾಜ್ ನೇಹಾಳನ್ನು ಕೊಲೆ ಮಾಡಿದ್ದಾನೆ ಎಂಬ ಸುದ್ದಿ ಬಂದಿತ್ತು. ಈ ಕೊಲೆ ಸುದ್ದಿ ಕೇಳಿ ನಾನು ಕುಸಿದು ಬಿದ್ದು ಬಿಟ್ಟೆ” ಎಂದರು.
“ಸತ್ಯಾಸತ್ಯತೆ ಪರಿಶೀಲಿಸಿ ಅವನಿಗೆ ಶಿಕ್ಷೆ ನೀಡಬೇಕು. ಅವರು ಏನೇ ಶಿಕ್ಷೆ ಕೊಟ್ಟರೂ ಸಹ ನಾನು ಒಪ್ಪಿಕೊಳ್ಳುತ್ತೇನೆ. ತಪ್ಪು ಒಬ್ಬರಿಂದ ಆಗಲೂ ಸಾಧ್ಯವೇ ಇಲ್ಲ, ತಪ್ಪು ಇಬ್ಬರಲ್ಲೂ ಇರುತ್ತೆ. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು, ಅದು ಹೇಗೆ ಒನ್ ಸೈಡ್ ಲವ್ ಆಗುತ್ತೆ? ಅವರಲ್ಲಿ ಏನು ನಡೆಯಿತು ಅದು ಗೊತ್ತಿಲ್ಲ. ಫೋನ್‌ನಲ್ಲಿ ಅವಳ ಜತೆ ಮಾತನಾಡಿದ ಎಲ್ಲ ರೆಕಾರ್ಡ್‌ಗಳಿವೆ. ಇದರ ಮೇಲೆ ಕಾನೂನು ಯಾವ ರೀತಿ ಕ್ರಮ ಕೈಗೊಳ್ಳುತ್ತೋ ತೆಗೆದುಕೊಳ್ಳಲಿ. ಇರುವೆಯನ್ನೂ ಸಾಯಿಸದ ಅವನು ಇಷ್ಟೊಂದು ಧೈರ್ಯ ಹೇಗೆ ಬಂತು ಎಂದು ನಮಗೆ ಗೊತ್ತಿಲ್ಲ” ಎಂದು ಹೇಳಿದರು.
