ಲಂಕೇಶರು ಸಮಾಜದ ಎಲ್ಲ ಜಾತಿ, ಜನಾಂಗಗಳನ್ನೂ ಮುಟ್ಟಿದರು. ಮುಟ್ಟಿಸಿಕೊಂಡರು. ಆ ಸ್ಪರ್ಶದಲ್ಲಿ ಒಂದು ಕಾಳಜಿಯಿತ್ತು. ನಾವ್ಯಾರೂ ಶಾಶ್ವತವಲ್ಲ, ಚೆನ್ನಾಗಿ ಬದುಕಿ ಹೋಗೋಣ ಎಂಬ ವಿವೇಕವಿತ್ತು.
ಅಂದು ಹಿರಿಯ ಸ್ನೇಹಿತರಾದ ಪ್ರಮೀಳಾ ಅವರು ಫೋನ್ ಮಾಡಿ ವಿಷಯ ತಿಳಿಸಿದ್ದರು- ‘ಲಂಕೇಶರು ಹೋಗಿಬಿಟ್ರಂತೆ’.
ಆಗ ನಾನು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಏನೋ ಕೆಲಸ ಮಾಡುತ್ತಿದ್ದೆ. ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದು ತಕ್ಷಣ ಅಲ್ಲಿಂದ ಹೊರಟೆ.
ಇದು ನಡೆದು 25 ವರ್ಷಗಳಾಯಿತಾ? ಅಷ್ಟೇನು ಅಚ್ಚರಿ ಆಗುತ್ತಿಲ್ಲ.
ಕಾರಣ ಲಂಕೇಶರ ಗೈರು ಹಾಜರಿ ಅಂದಿನಿಂದ ಇಂದಿನವರೆಗೂ ಮನಸ್ಸಿಗೆ ಗೋಚರವಾಗುತ್ತಲೇ ಇದೆ. ಆದರೆ ಗೌರಿಯವರು ಇರುವಷ್ಟು ಕಾಲ ಲಂಕೇಶರೇ ಇದ್ದಾರೇನೋ ಅಥವಾ ಲಂಕೇಶರು ಇನ್ನಷ್ಟು ಗಟ್ಟಿಯಾಗಿದ್ದಾರೇನೋ ಎಂದೂ ಅನ್ನಿಸುತ್ತಿತ್ತು.
ನಾನು ನನ್ನ ಹಳ್ಳಿಯಿಂದ ಬೆಂಗಳೂರಿಗೆ ಬಂದ ಎಷ್ಟೋ ವರ್ಷಗಳ ನಂತರ ಲಂಕೇಶರನ್ನು ಭೇಟಿಯಾಗಲು ಅವರ ಕಚೇರಿಗೆ ಹೋದೆ. ಆಗಲೇ ಲಂಕೇಶರಿಗೆ ಒಂದು ಕಣ್ಣು ನಷ್ಟವಾಗಿತ್ತು. ಅಂದು ಪತ್ರಿಕೆ ಅಚ್ಚಿಗೆ ಹೋಗುವ ದಿನವೆಂದು ಎನಿಸುತ್ತದೆ. ಲಂಕೇಶರು ಕ್ಯಾಬಿನ್ನಿನಿಂದ ಹೊರಬಂದು ಮತ್ತೆ ವಾಪಸು ಹೋದರು. ಹೀಗೆ ಎರಡು ಬಾರಿ. ಅಂದು ಕಚೇರಿಯಲ್ಲಿದ್ದ ನಟರಾಜ್ ಹುಳಿಯಾರರನ್ನು ಮಾತನಾಡಿಸಿ ಬಂದೆ. ಇನ್ನೊಮ್ಮೆ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಭೇಟಿಯಾಗಿ ಬಂದೆ. ಕೊನೆಗೊಮ್ಮೆ ಲಂಕೇಶರೇ ಸಿಕ್ಕರು. ಜತೆಯಲ್ಲಿ ಗೆಳೆಯರಾದ ಶ್ರೀಧರ್ ಮತ್ತು ಷಹಬುದ್ದೀನ್ ಇದ್ದರು.
ಲಂಕೇಶರು ಸಮಾಜದ ಎಲ್ಲ ಜಾತಿ, ಜನಾಂಗಗಳನ್ನೂ ಮುಟ್ಟಿದರು. ಮುಟ್ಟಿಸಿಕೊಂಡರು. ಮುಟ್ಟುವ ಕ್ರಿಯೆ ಕೆಲವರಿಗೆ ಒರಟಾಗಿ ಕಂಡಿರಬಹುದು. ಆದರೆ ಆ ಸ್ಪರ್ಶದಲ್ಲಿ ಒಂದು ಕಾಳಜಿಯಿತ್ತು. ನಾವ್ಯಾರೂ ಶಾಶ್ವತವಲ್ಲ, ಚೆನ್ನಾಗಿ ಬದುಕಿ ಹೋಗೋಣ ಎಂಬ ವಿವೇಕವಿತ್ತು. ಈ ಪ್ರೀತಿಯ ಸ್ಪರ್ಶ ಬಲಿತ ಬಸ್ಲಿಂಗನನ್ನೂ, ದಲಿತ ತಿಪ್ಪನನ್ನೂ ತಟ್ಟಿತು. ಕೊಂಚ ಆಲಂಕಾರಿಕವಾಗಿ ಹೇಳುವುದಾದರೆ ಲಂಕೇಶರು ದಲಿತರಲ್ಲಿ ಆತ್ಮಾಭಿಮಾನವನ್ನೂ, ಬಲಿತ ಜಾತಿಗಳಲ್ಲಿ ಆತ್ಮವಿಮರ್ಶೆಯನ್ನೂ ಮೂಡಿಸಿದರು. ಲಂಕೇಶರ ಸಾಹಿತ್ಯದಲ್ಲಿ ಮಾತ್ರವಲ್ಲ, ಲಂಕೇಶ್ ಪತ್ರಿಕೆಯಲ್ಲೂ ಇವರೆಲ್ಲರ ದುಃಖ ದುಮ್ಮಾನಗಳಿಗೆ, ಟೀಕೆ, ಟಿಪ್ಪಣಿಗಳಿಗೆ ಜಾಗ ಸಿಕ್ಕಿತು. ಕರ್ನಾಟಕದ ಎಲ್ಲಾ ಜಾತಿ, ಜನಾಂಗಗಳಿಂದ ಬಂದ ಯುವ ತಲೆಮಾರೊಂದು ಲಂಕೇಶ್ ಪ್ರಭಾವದಲ್ಲಿ ಬೆಳೆಯಿತು. ಅದರಲ್ಲಿ ನಾನೂ ಒಬ್ಬ.
ಲಂಕೇಶರಿಲ್ಲದ ಈ ಕಾಲು ಶತಮಾನದಲ್ಲಿ ಏನೆಲ್ಲ ಆಗಿ ಹೋಯಿತು. ಕೋಮುವಾದ ತನ್ನ ರಾಕ್ಷಸರೂಪ ತೋರತೊಡಗಿತು. ಇದು ಕೇವಲ ಭಾರತಕ್ಕೆ ಸೀಮಿತವಾದ ಬೆಳವಣಿಗೆಯಲ್ಲ. ದೊಡ್ಡ ದೇಶಗಳ ರಾಜಕೀಯ ನೇತಾರರೆಲ್ಲ ಮತೀಯ ದ್ವೇಷವನ್ನೇ ಮುನ್ನೆಲೆಗೆ ತಂದು ಅಧಿಕಾರ ಹಿಡಿಯುತ್ತಿದ್ದಾರೆ. ಕೋಮುವಾದಿಗಳು ಮಾಡುತ್ತಿದ್ದ ಬೀದಿಬದಿಯ ಭಾಷಣವನ್ನು ಈಗ ಅಧಿಕಾರಸ್ಥ ರಾಜಕಾರಣಿಗಳು, ಸ್ವಾಮಿಗಳು ಮಾತ್ರವಲ್ಲ, ಸೇವಾನಿರತ ನ್ಯಾಯಾಧೀಶರೂ ಮಾಡಲಾರಂಭಿಸಿದ್ದಾರೆ.
ಇದನ್ನು ಓದಿದ್ದೀರಾ?: ನುಡಿ ನಮನ | ಕೆಕೆಜಿ ಎಂಬ ಸಾರ್ಥಕ ಜೀವಿ ʼಪರೋಪಕಾರಿ ಪಾಪಣ್ಣʼ
ಈ ಬೆಳವಣಿಗಳಿಗೆ ಪ್ರತಿರೋಧವೂ ಇದೆ. ಕರ್ನಾಟಕದ ಕೋಮುವಾದಿ ವಿರೋಧಿ ದಲಿತರ ಮೇಲಿನ ದೌರ್ಜನ್ಯವಿರೋಧಿ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧದ ಹೋರಾಟಗಳು ಲಂಕೇಶರ ನಂತರವೂ ಸಕ್ರಿಯವಾಗಿವೆ. ಈ ಹೋರಾಟದ ಕಾರ್ಯಕರ್ತರ ಮನಸ್ಸನ್ನು ಇದಕ್ಕೆ ಹದಗೊಳಿಸುವುದರಲ್ಲಿ ಲಂಕೇಶ್ ಪತ್ರಿಕೆಯ ಮತ್ತು ಅವರ ಸಾಹಿತ್ಯದ ಪ್ರಭಾವ ದೊಡ್ಡಮಟ್ಟದಲ್ಲಿದೆ.
ಲಂಕೇಶರು ಕಾಲವಾದ ಒಂದೆರೆಡು ವರ್ಷಗಳ ಅವಧಿಯಲ್ಲಿಯೇ ನಾನು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿಗೆ ಮರಳಿ, ಬಾಬಾಬುಡನ್ ಗಿರಿ ಉಳಿಸಿ ಹೋರಾಟ, ತುಂಗಭದ್ರ ಉಳಿಸಿ ಹೋರಾಟ, ಆದಿವಾಸಿ ಹಿತರಕ್ಷಣಾ ಹೋರಾಟಗಳಲ್ಲಿ ಭಾಗವಹಿಸುತ್ತಾ ಇವುಗಳಿಗೆ ಪೂರಕವಾದ ಸಾಹಿತ್ಯರಚನೆಯಲ್ಲಿ ತೊಡಗುವುದಕ್ಕೆ ಲಂಕೇಶ್ ಪತ್ರಿಕೆಯ ಪ್ರಭಾವವೂ ಪ್ರೇರಣೆ ಒದಗಿಸಿರಬೇಕು.
ಗೌರಿ ಲಂಕೇಶರು ಪತ್ರಿಕೆ ಆರಂಭಿಸಿದಾಗ ಶಿವಮೊಗ್ಗದ ಪತ್ರಿಕೆಯ ವಿತರಣೆಯನ್ನು ನಾನೇ ವಹಿಸಿಕೊಂಡು ಸೈಕಲ್ಲಿನಲ್ಲಿ ಅಂಗಡಿ, ಅಂಗಡಿ ತಿರುಗಿ ಹಲವು ಕಾಲ ಪತ್ರಿಕೆ ಹಾಕಿದೆ. ಇದಕ್ಕೆ ಗೌರಿಯವರ ಮೇಲಿನ ಅಭಿಮಾನ ಎಷ್ಟು ಕಾರಣವೋ, ಲಂಕೇಶರು ನಮ್ಮಂತವರಿಗೆ ಪರೋಕ್ಷವಾಗಿ ವಹಿಸಿದ್ದ ಜವಾಬ್ದಾರಿಯೂ ಕಾರಣವಾಗಿತ್ತು.
ಈ ಸಂದರ್ಭದಲ್ಲಿ ಲಂಕೇಶರನ್ನೂ, ಗೌರಿ ಲಂಕೇಶರನ್ನೂ ಗೌರವದಿಂದ, ಪ್ರೀತಿಯಿಂದ ನೆನೆಯುತ್ತೇನೆ.

ಡಾ. ಸರ್ಜಾಶಂಕರ್ ಹರಳಿಮಠ
ಲೇಖಕರು