ಬಹುಕೋಟಿ ಬಿಟ್ ಕಾಯಿನ್ ಹಗರಣದ ಆರೋಪಿಯಾಗಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಸ್ನೇಹಿತೆಗೆ ಸಂಕಷ್ಟ ಎದುರಾಗಿದ್ದು, ಆಕೆಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಶ್ರೀಕಿಯ ಸ್ನೇಹಿತೆ ಪೂಜಾ ಭಟ್‌ಗೆ ತುರ್ತಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಕಿ ಬಿಟ್ ಕಾಯಿನ್ ವಹಿವಾಟು, ಶ್ರೀಕಿಯಿಂದ ಕಾರು, ಮನೆ ಪಡೆದುಕೊಂಡಿರುವ ಹಿನ್ನೆಲೆ, ಶ್ರೀಕಿ ಸ್ನೇಹಿತೆ ಪೂಜಾ ಭಟ್‌ಗೆ ನೋಟಿಸ್ ನೀಡಲಾಗಿದೆ. ಪೂಜಾ ಭಟ್ ಸದ್ಯ ರಾಜಸ್ಥಾನದಲ್ಲಿದ್ದು, ವಿಚಾರಣೆಗೆ ಬೆಂಗಳೂರಿಗೆ ಬರಬೇಕಿದೆ.
ಏನಿದು ಪ್ರಕರಣ?
2015ರಲ್ಲಿ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಕೇಸ್‌ನಲ್ಲಿ ಶ್ರೀಕಿಯನ್ನು ಬಂಧಿಸಲಾಗಿತ್ತು. ಈ ಕೇಸ್ ತನಿಖೆ ವೇಳೆ ಬಿಟ್‌ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು.
2017ರಲ್ಲಿ ತುಮಕೂರು ಪೊಲೀಸ್ ಠಾಣೆಯಲ್ಲಿ ಯುನೋ ಕಾಯಿನ್ ಕಳವು ಪ್ರಕರಣ ದಾಖಲಾಗಿತ್ತು. ಯೂನೋಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸಹ ಸಂಸ್ಥಾಪಕ ಬಿ.ವಿ.ಹರೀಶ್ ಎಂಬವರು ಶ್ರೀಕಿ ವಿರುದ್ಧ ದೂರು ನೀಡಿದ್ದರು.
ಕಂಪನಿಯ 60.6 ಬಿಟ್ ಕಾಯಿನ್ಗಳನ್ನು ಕಳವು ಮಾಡಲಾಗಿದೆ. ಪ್ರತಿ ಬಿಟ್ ಕಾಯಿನ್ ಬೆಲೆ ₹1.67 ಲಕ್ಷದಂತೆ ಸುಮಾರು ₹1.14 ಕೋಟಿ ಮೌಲ್ಯದ ಬಿಟ್ ಕಾಯಿನ್ ಕಳವು ಮಾಡಲಾಗಿದೆ ಎಂದು ಆರೋಪಿಸಿ ಅವರು ಪ್ರಕರಣ ದಾಖಲಿಸಿದ್ದರು. 2020ರಲ್ಲಿ ಸುಮಾರು 1000 ಕೋಟಿ ಹಗರಣದ ಬಿಟ್‌ಕಾಯಿನ್ ಕೇಸ್‌ನಲ್ಲಿ ಶ್ರೀಕಿ ಬಂಧನವಾಗಿತ್ತು.
ಶ್ರೀಕಿ ಕಳೆದ ಐದಾರು ವರ್ಷಗಳಿಂದ ನಾನಾ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಕ್ ಮಾಡಿದ್ದನು. ಅವುಗಳಿಂದ ಸಾವಿರಾರು ಬಿಟ್‌ಕಾಯಿನ್‌ಗಳನ್ನು ಕದ್ದಿದ್ದನು ಎಂದು ತಿಳಿದುಬಂದಿದೆ. ಅಲ್ಲದೇ, ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ ಜಾಲತಾಣ ಹ್ಯಾಕ್ ಮಾಡಿದ್ದನು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ
ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸಿ ಆರೋಪಿ ಬಂಧನ ಮಾಡಿದ್ದರು. ಆತ ಜಾಮೀನಿನ ಮೇಲೆ ಹೊರಗಡೆ ಬಂದಿದ್ದನು.
ಈ ನಂತರ ಸಿಸಿಬಿ ಪೊಲೀಸರ ವಿರುದ್ಧ ದಾಖಲೆಗಳನ್ನು ತಿರುಚಿರುವ ಆರೋಪಗಳು ಕೇಳಿಬಂದಿತ್ತು. ಹಾಗಾಗಿ, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.
ಆದರೆ, ಶ್ರೀಕಿ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದಾಗ ತೆರಳದೇ ಕಳ್ಳಾಟ ಆಡುತ್ತಿದ್ದನು ಎನ್ನಲಾಗಿದೆ. ಹಾಗಾಗಿ ಸಿಐಡಿ ಅಧಿಕಾರಿಗಳು ಆತನನ್ನು ಬಂಧನ ಮಾಡಿದ್ದಾರೆ.
ಬಿಟ್ ಕಾಯಿನ್ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಕಾಟನ್ ಪೇಟೆ, ಕೆಂಪೇಗೌಡನಗರ, ಅಶೋಕನಗರ, ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು ಎಂಟು ಪ್ರಕರಣಗಳ ಕುರಿತಂತೆ ತನಿಖೆ ನಡೆಸುತ್ತಿದೆ. ಸದ್ಯ ರಾಜಸ್ಥಾನದಲ್ಲಿರುವ ಶ್ರೀಕಿ ಸ್ನೇಹಿತೆ ಪೂಜಾ ಭಟ್‌ಗೆ ನೋಟಿಸ್ ನೀಡಲಾಗಿದೆ.