ಮಹತ್ವದ ಬೆಳವಣಿಗೆಯಲ್ಲಿ ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ತಕ್ಷಣಕ್ಕೆ ಆರ್ಥಿಕ ಇಲಾಖೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿರುವ ಸರ್ಕಾರಿ ಸ್ವಾಮ್ಯದ ಏಕೈಕ ಸರ್ಕರೆ ಕಾರ್ಖಾನೆ ಮಂಡ್ಯದ ಮೈ ಶುಗರ್ ಅನ್ನು ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಈ ಹಿಂದೆ ಭರವಸೆ ನೀಡಿದ್ದರು. ಆ ಭರವಸೆಯಂತೆ ರೋಗಗ್ರಸ್ಥವಾಗಿದ್ದ ಕಾರ್ಖಾನೆಯ ಪುನಶ್ಚೇತನಕ್ಕೆ 15 ಕೋಟಿ ರೂ ಹಾಗೂ ಕಾರ್ಖಾನೆಯ ದುಡಿಯುವ ಬಂಡವಾಳಕ್ಕೆ 35 ಕೋಟಿ ರೂ ಬಿಡುಗಡೆಗೆ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು ಕಳೆದ ವಾರ ಅನುಮೋದನೆ ನೀಡಿದ್ದರು. ಆ ಪ್ರಕಾರ ಇಂದು ಆರ್ಥಿಕ ಇಲಾಖೆ 50 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ನೇತೃತ್ವದ ಮಂಡ್ಯ ಜಿಲ್ಲಾ ಕಾಂಗ್ರೆಸ್ ಶಾಸಕರ ಮತ್ತು ಜನಪ್ರತಿನಿಧಿಗಳ ನಿಯೋಗ ಮೈ ಶುಗರ್ ಪುನಶ್ಚೇತನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತ್ತು. 37 ಸಾವಿರ ಕಬ್ಬು ಬೆಳೆಗಾರ ರೈತರಿಂದ 5 ಲಕ್ಷ ಟನ್ ಕಬ್ಬು ಸರಬರಾಜು ಮಾಡುವ ಒಪ್ಪಂದವಾಗಿತ್ತು. ಈ ಒಪ್ಪಂದದಂತೆ ರೈತರಿಗೆ ಸಕಾಲದಲ್ಲಿ ಹಣ ಒದಗಿಸುವ ಅಗತ್ಯವಿದೆ ಎಂದು ನಿಯೋಗ ಮನವಿ ಮಾಡಿತ್ತು.
ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷಗಿರಿ; ರ್ಕಾರಕ್ಕೆ ಇರಲಿ ಎಚ್ಚರ
ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಿದ್ದು, ತಕ್ಷಣಕ್ಕೆ 50 ಕೋಟಿ ರೂ ಬಿಡುಗಡೆ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ ಎಂದು ನಿಯೋಗ ಅಭಿನಂದನೆ ಸಲ್ಲಿಸಿದೆ. ಸರ್ಕಾರದ ಈ ಕ್ರಮದಿಂದ 37 ಸಾವಿರ ಕಬ್ಬು ಬೆಳೆಗಾರರಿಗೆ ಚೈತನ್ಯ ನೀಡಿದಂತಾಗುತ್ತದೆ ಎನ್ನಲಾಗಿದೆ.