ಈಗಷ್ಟೇ, ಕೊರೊನಾ ಸೋಂಕಿನ ಅಬ್ಬರದಿಂದ ನಿರಾಳರಾಗಿರುವ ಜನತೆಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಚೀನಾದ ಉತ್ತರ ಭಾಗದ ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಭಾರತದಲ್ಲಿಯೂ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯ ಕುರಿತು ತಕ್ಷಣವೇ ಪರಿಶೀಲನೆ ನಡೆಸುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಜತೆಗೆ, ಕರ್ನಾಟಕ ಸೇರಿದಂತೆ ಒಟ್ಟು ಆರು ರಾಜ್ಯಗಳಿಗೆ ಅಲರ್ಟ್ ಆಗಿರುವಂತೆ ಸೂಚಿಸಿದೆ.
ಕರ್ನಾಟಕ, ರಾಜಸ್ಥಾನ, ಗುಜರಾತ್, ಉತ್ತರಾಖಂಡ, ಹರಿಯಾಣ ಹಾಗೂ ತಮಿಳುನಾಡು ರಾಜ್ಯ ಸರ್ಕಾರಗಳು ಉಸಿರಾಟದ ಸಮಸ್ಯೆಗಳ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಹಾಗೆಯೇ, ರಾಜ್ಯಗಳಲ್ಲಿ ಎಲ್ಲ ಆರೋಗ್ಯ ಮೂಲಸೌಕರ್ಯಗಳನ್ನು ಪರಿಶೀಲನೆ ಮಾಡಿ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಬಗ್ಗೆ ಹೆಚ್ಚಿನ ಕ್ರಮವಹಿಸುವಂತೆ ತಿಳಿಸಿದೆ. ರಾಜ್ಯಗಳು ಎಲ್ಲ ರೀತಿಯ ಪರೀಕ್ಷೆಗೂ ಸಿದ್ದತೆ ಮಾಡಿಕೊಳ್ಳವಂತೆ ಹೇಳಿದೆ.
ಕರ್ನಾಟಕ ರಾಜ್ಯ ಸರ್ಕಾರ ಈ ಸೋಂಕಿನ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುತ್ತಿದ್ದು, ಈ ಸೋಂಕಿನ ಬಗ್ಗೆ ಜಾಗೃತಿ ವಹಿಸುವಂತೆ ತಿಳಿಸಿದೆ.
ರಾಜ್ಯದಲ್ಲಿ ಯಾವುದೇ ಆತಂಕದ ಸ್ಥಿತಿ ಇಲ್ಲ. ಆದರೂ ವೈದ್ಯಕೀಯ ಸಿಬ್ಬಂದಿ ಜಾಗರೂಕರಾಗಿರಿ, ಮಕ್ಕಳ ಮತ್ತು ಔಷಧಿ ವಿಭಾಗಗಳಲ್ಲಿ ಸಾಕಷ್ಟು ವ್ಯವಸ್ಥೆ ಮಾಡಬೇಕು ಎಂದು ರಾಜಸ್ಥಾನ ಆರೋಗ್ಯ ಇಲಾಖೆ ಹೇಳಿದೆ.
ಈ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಗುಜರಾತ್ನ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಉತ್ತರಾಖಂಡದ ಮೂರು ಜಿಲ್ಲೆಗಳಾದ ಚಮೋಲಿ, ಉತ್ತರಕಾಶಿ ಹಾಗೂ ಪಿಥೋರಗಢ ಚೀನಾದೊಂದಿಗೆ ಗಡಿ ಹಂಚಿಕೊಂಡಿವೆ. ಹಾಗಾಗಿ, ಉಸಿರಾಟ ಖಾಯಿಲೆಗಳ ಪ್ರಕರಣಗಳಿಗೆ ಹೆಚ್ಚು ಕಣ್ಗಾವಲು ವಹಿಸುವಂತೆ ಉತ್ತರಾಖಂಡ ಆರೋಗ್ಯ ಇಲಾಖೆ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಚೀನಾದಲ್ಲಿ ಹೊಸ ಮಾದರಿ ಸೋಂಕು ಪತ್ತೆ: ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಅಸಾಧಾರಣ ಕಾಯಿಲೆಗಳು ಕಂಡುಬಂದರೂ, ಅದನ್ನು ತಕ್ಷಣವೇ ವರದಿ ಮಾಡಬೇಕು ಎಂದು ಹರಿಯಾಣ ಆರೋಗ್ಯ ಇಲಾಖೆ ತಿಳಿಸಿದೆ.
ಸೋಂಕಿನ ಹಿನ್ನೆಲೆ, ಆಸ್ಪತ್ರೆಗಳು ಸಿದ್ಧತೆಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಮಿಳುನಾಡು ಆರೋಗ್ಯ ಇಲಾಖೆ ಹೇಳಿದೆ.