ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ಇತ್ತೀಚೆಗೆ ದೇಶದ ಪ್ರಗತಿ ಸಾಧಿಸಲು ಎಲ್ಲರೂ ವಾರಕ್ಕೆ ಎಪ್ಪತ್ತು ಗಂಟೆಗಳು ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು, “ಒಬ್ಬ ವ್ಯಕ್ತಿ ದಿನಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ. ಕೆಲಸ ಮಾಡುವ ಸಮಯವನ್ನು ಹೆಚ್ಚು ಉಪಯುಕ್ತವಾಗಿ ಕಳೆಯಿರಿ. ಉಳಿದ ಸಮಯದಲ್ಲಿ ನಿಮ್ಮ ಕುಟುಂಬದೊಂದಿಗೆ ಇರಿ” ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಟ್ರೇಡಿಂಗ್ ಮತ್ತು ಶಿಕ್ಷಣದ ವಿಶ್ವದಲ್ಲಿ ಜ್ಞಾನ, ನೆಟ್ವರ್ಕಿಂಗ್ ಮತ್ತು ಆವಿಷ್ಕಾರವನ್ನು ಉತ್ತೇಜಿಸುವ ದಿ ಟ್ರೇಡಿಂಗ್ ಮೈಂಡ್ಸ್ ಆಯೋಜಿಸಿದ್ದ “ಟ್ರೇಡರ್ಸ್ ಮೀಟಪ್ ಮತ್ತು ಎಜುಕೇಷನ್ ಹೀರೋಸ್” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ, ಮಾತನಾಡಿದ ಅವರು, “ವಾರಕ್ಕೆ ಎಪ್ಪತ್ತು ಗಂಟೆ ಕೆಲಸ ಮಾಡುವುದು ಅಥವಾ ಹೆಚ್ಚು ಸಮಯ ಕೆಲಸ ಮಾಡಿ, ಅಧಿಕ ಉತ್ಪಾದಕತೆ ಪಡೆಯಬಹುದು ಎಂಬುವುದು ಸಂಪೂರ್ಣ ತಪ್ಪು ಕಲ್ಪನೆಯಾಗಿದೆ. ಕೆಲಸ ಮಾಡುವ ಅವಧಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದಷ್ಟೇ ನಮಗೆ ಮುಖ್ಯವಾಗಿದೆ” ಎಂದು ಅವರು ಹೇಳಿದರು.
“ಈಗಿನ ಕಾಲದಲ್ಲಿ ನಮ್ಮ ಮಕ್ಕಳಿಗೆ ನಾವೆಲ್ಲರೂ ಅಣುಬಾಂಬ್ ತಯಾರಿಕೆ ಬಗ್ಗೆ ಹೇಳಿ ಕೊಟ್ಟಿದ್ದೇವೆ. ಆದರೆ, ಅದರ ಬಳಕೆ ಬಗ್ಗೆ ಹೇಳಿಕೊಟ್ಟಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕೆಎಸ್‌ಆರ್‌ಟಿಸಿ | 40 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಜಯದೇವ ಹೃದ್ರೋಗದಲ್ಲಿ ತಪಾಸಣೆಯ ಸೌಲಭ್ಯ
“ನಾವು ಆರ್ಥಿಕತೆ ಮಾತ್ರವಲ್ಲದೇ, ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಸಾಧಿಸಬೇಕಿದೆ” ಎಂದು ನ್ಯಾಯಮೂರ್ತಿ ಗೋಪಾಲ ಗೌಡ ಹೇಳಿದರು.