ಮಂಡ್ಯ ಜಿಲ್ಲೆಯ ಮಾಕವಳ್ಳಿಯಲ್ಲಿರುವ ಕೋರಂಡಲ್ ಸಕ್ಕರೆ ಕಾರ್ಖಾನೆಯು ಪರಿಸರಕ್ಕೆ ಮತ್ತು ಪಕ್ಕದಲ್ಲಿರುವ ಹೇಮಾವತಿ ನದಿಗೆ ಹಾನಿ ಉಂಟು ಮಾಡುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಹಲವಾರು ನಿಯಮಗಳನ್ನು ಉಲ್ಲಂಘಿಸಿದೆ. ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಲು ಹಲವಾರು ವರ್ಷಗಳಿಂದ ಹೋರಾಟ ನಡೆಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ, ಕೇಂದ್ರ ಪರಿಸರ ಮಂಡಳಿ ಸೂಚನೆಯಂತೆ ಸಾರ್ವಜನಿಕ ಸಭೆ ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತಿದೆ. ಸಾರ್ವಜನಿಕ ಸಭೆಯ ಅಗತ್ಯವಿಲ್ಲ. ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವ ರೈತರು, ‘ನಿಮಗೆ ಕ್ರಮ ಕೈಗೊಳ್ಳಲು ಆಗದಿದ್ದರೆ, ಮಂಡಳಿಯ ಹೆಸರನ್ನು ಪೋಸ್ಟ್ ಮನ್ ಮಂಡಳಿಯೆಂದು ಬದಲಿಸಿಕೊಂಡು, ಬೋರ್ಡ್ ಹಾಕಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಬೆಂಗಳೂರಿನ ಕೆಎಸ್‌ಪಿಸಿಬಿ ಕಚೇರಿಯಲ್ಲಿ ಪಟ್ಟು ಹಿಡಿದು ಕುಳಿತಿದ್ದಾರೆ.
ಈಗಾಗಲೇ ಪರಿಸರಕ್ಕೆ ಮಾರಕವಾಗಿರುವ ಕಾರ್ಖಾನೆ ಇದೀಗ, ಡಿಸ್ಟಲರಿ (ಮದ್ಯ) ಉತ್ಪಾದನಾ ಘಟಕ ತೆರೆಯಲು ಮುಂದಾಗಿದೆ. ಇದಕ್ಕೆ ಅವಕಾಶ ನೀಡಬೇಕೇ ಬೇಡವೇ ಎಂದು ಮಾರ್ಚ್ 6ರಂದು ಸಾರ್ವಜನಿಕ ಸಭೆ ನಡೆಸಲು ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ. ಆದರೆ, ಈ ಸಭೆ ನಾಟಕೀಯ, ಕಾರ್ಖಾನೆಗೆ ಉಪಯೋಗ ಮಾಡಿಕೊಡಲು ನಾಟಕೀಯ ಸಭೆ ನಡೆಸಲಾಗುತ್ತಿದೆ. ಇದರ ಅಗತ್ಯವಿಲ್ಲ. ಸಭೆಯನ್ನು ರದ್ದುಗೊಳಿಸಿ, ಕಾರ್ಖಾನೆ ವಿರುದ್ಧ ಕ್ರಮಕ್ಕೆ ಪತ್ರ ಬರೆಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಮಂಡಳಿಯ ಕಚೇರಿಯಲ್ಲಿ ರೈತರು ಮತ್ತು ಅಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೋರಾಟಗಾರ ಡಾ.ಎಚ್.ವಿ ವಾಸು, “ಕಾರ್ಖಾನೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಈ ಹಿಂದೆಯೂ
ಮಂಡಳಿ ಸಾರ್ವಜನಿಕ ಸಭೆ ನಡೆಸಿತ್ತು. ಅಲ್ಲಿದ್ದ ಎಲ್ಲರೂ ಕಾರ್ಖಾನೆ ವಿರುದ್ಧವೇ ಆರೋಪಿಸಿ, ಕ್ರಮಕ್ಕೆ ಆಗ್ರಹಿಸಿದ್ದರು. ಆದರೆ, ಕಾರ್ಖಾನೆ ಪರವಾಗಿದ್ದ ಏಜೆಂಟ್‌ಗಳ ಮಾತು ಕೇಳಿ, ಸಭೆಯ ವರದಿಯನ್ನೇ ಬದಲಿಸಿದ್ದರು. ಇದೇ ಮಂಡಳಿ ಕಾರ್ಖಾನೆ ಬಳಿಯ ಹೇಮಾವತಿ ನದಿ ನೀರನ್ನ ಪರಿಶೀಲಿಸಿ, ಆ ನೀರು ಕುಡಿಯಲು ಮಾತ್ರವಲ್ಲ, ಸ್ನಾನಕ್ಕೂ ಯೋಗ್ಯವಲ್ಲ. ಅಷ್ಟೊಂದು ವಿಷಕಾರಿ ವಸ್ತು ಸೇರಿದೆ ಎಂದು ಹೇಳಿತ್ತು. ಈಗ, ಪರಿಸರ ಹಾಳು ಮಾಡುತ್ತಿರುವ ಅದೇ ಕಾರ್ಖಾನೆಗೆ ಮತ್ತೆ ಡಿಸ್ಟಲರಿ ಘಟಕ ತೆರೆಯಲು ಮುಂದಾಗಿದ್ದೀರಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹೇಮಾವತಿ ನದಿಯಿಂದ ಕೇಲವ 1ಕಿ.ಮೀ ದೂರದಲ್ಲಿ ಕಾರ್ಖಾನೆ ಇದೆ. ತ್ಯಾಜ್ಯದ ನೀರನ್ನ ಸಂಸ್ಕರಣೆ ಮಾಡದೆ ನೇರವಾಗಿ ನದಿಗೆ ಹರಿಸುತ್ತಿದೆ. ಕಾರ್ಖಾನೆಯ ಹೊಗೆ ಮತ್ತು ಹಾರುವ ಬೂದಿ ಸುತ್ತಲಿನ ಗ್ರಾಮಗಳಿಗೆ ಸೇರುತ್ತಿದ್ದು, ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕೃಷಿ ಭೂಮಿ ವಿಷವಾಗುತ್ತಿದೆ. ಪರಿಸರ ನಿಯಮಗಳನ್ನು ಕಾರ್ಖಾನೆ ಉಲ್ಲಂಘಿಸುತ್ತಿದೆ ಎಂದು ಇದೇ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಗೆ ಸುಮಾರು 60 ನೋಟಿಸ್ ಕೊಟ್ಟಿದೆ. ಆದರೆ, ಅದಕ್ಕೆ ಕಾರ್ಖಾನೆ ಉತ್ತರಿಸಿಲ್ಲ. ಮಂಡಳಿ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ” ಅಂದು ಆರೋಪಿಸಿದರು.
“ಈ ಹಿಂದೆ, ಮಂಡ್ಯದಲ್ಲಿ ನಡೆದಿದ್ದ ಸಭೆಯಲ್ಲಿ ಕಾರ್ಖಾನೆಯ ಮಾಲೀಕ, ‘ಹೆಚ್ಚಂದ್ರೆ ಮಂಡಳಿಯ ಅಧಿಕಾರಿಗಳಿಗೆ ಇನ್ನಷ್ಟು ಲಂಚ ಕೊಡಬೇಕಾಗುತ್ತದೆ’ ಅಂತ ಅಧಿಕಾರಿಗಳ ಮುಂದೆಯೇ ಹೇಳಿದ್ದರು. ಇದರ ಅರ್ಥವೇನು? ಅಧಿಕಾರಿಗಳು ಕಳ್ಳಾಟ ಆಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ : ಹಲವರಿಗೆ ಗಾಯ
“ಮಂಡಳಿಯ ನಿರ್ಲಕ್ಷ್ಯದ ಕಾರಣದಿಂದಲೇ, ರೈತರು ಎನ್‌ಜಿಟಿ ಮೊರೆಹೋಗಿದ್ದರು. ಎನ್‌ಜಿಟಿ ನ್ಯಾಯಾಲಯದ ಮುಂದೆ ಕಾರ್ಖಾನೆಯು ತನ್ನ ತಪ್ಪನ್ನು ಒಪ್ಪಿಕೊಂಡಿತ್ತು. ‘ಡಿಸ್ಟಲರಿ ಘಟಕ ತೆರೆಯುವುದಿಲ್ಲ. ಮಾಲಿನ್ಯ ಆಗದಂತೆ ಆಧುನಿಕ ತಂತ್ರಜ್ಞಾನ ಬಳಸುತ್ತೇವೆ’ ಎಂದು ಹೇಳಿತ್ತು. ಅದಾದ ಮೇಲೂ ಮಾಲಿನ್ಯ ನಿಯಂತ್ರಣಕ್ಕೆ ಕಾರ್ಖಾನೆ ಮುಂದಾಗಿಲ್ಲ. ಎನ್‌ಜಿಟಿ ಆದೇಶ ಉಲ್ಲಂಘಿಸಿರುವ ಕಾರ್ಖಾನೆ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಂಡಿಲ್ಲ” ಎಂದು ದೂರಿದರು.
ಸಭೆಯಲ್ಲಿ,”ಎನ್‌ಜಿಟಿ ಆದೇಶವನ್ನು ಕಾರ್ಖಾನೆ ಉಲ್ಲಂಘಿಸಿದೆ. ನಮ್ಮ ನೋಟಿಸ್‌ಗಳಿಗೂ ಉತ್ತರಿಸಿಲ್ಲ. ಡಿಸ್ಟಲರಿ ಘಟಕ ತೆರೆಯಲು ಅನುಮತಿ ನೀಡಬಾರದು. ಸಾರ್ವಜನಿಕ ಸಭೆಯನ್ನೂ ನಡೆಸುವ ಅಗತ್ಯವಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಲು ಯಾಕೆ ಸಾಧ್ಯವಾಗುತ್ತಿಲ್ಲ” ಎಂದು ರೈತರು ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಉತ್ತಿರಿಸಲಿಲ್ಲ. ಹಾರಿಕೆಯ ಮಾತುಗಳನ್ನಾಡಿ ಸಭೆಯಿಂದ ಹೊರನಡೆದರು.
ನಮಗೆ ನ್ಯಾಯ ಸಿಗುವವರೆಗೂ, ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವವೆರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎನ್ನುತ್ತಿರುವ ರೈತರು ಮಾಲಿನ್ಯ ನಿಯಂತ್ರಣ ಮಂಡಳಯಲ್ಲೇ ಕುಳಿತಿದ್ದಾರೆ. ಇಲ್ಲಿಯೇ ಅಡುಗೆ ಮಾಡಿ ತಿನ್ನುತ್ತೇವೆಂದು ಸೌದೆ, ಆಹಾರ ಸಾಮಗ್ರಿಗಳನ್ನು ತಂದಿಟ್ಟುಕೊಂಡಿದ್ದಾರೆ.
ಸಭೆಯಲ್ಲಿ ರೈತ ಹೋರಾಟಗಾರ ರಾಜೇಗೌಡ, ಕರೋಟಿ ತಮ್ಮಣ್ಣ ಸೇರಿದಂತೆ ನೂರಾರು ರೈತರು ಇದ್ದರು