ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನ.15ರಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಾಗುವುದು. 16ರಂದು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದು ಶಾಸಕ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು
“ಪಕ್ಷದ ಎಲ್ಲ ಹಿರಿಯರ ಸಮ್ಮುಖದಲ್ಲಿ ಜವಾಬ್ದಾರಿ ಸ್ವೀಕರಿಸಲಾಗುವುದು. ಪಂಚ ರಾಜ್ಯಗಳ ಚುನಾವಣೆ ಇರುವುದರಿಂದ ರಾಷ್ಟ್ರೀಯ ನಾಯಕರು ಕಾರ್ಯಕ್ರಮಕ್ಕೆ ಬರುವುದಿಲ್ಲ. ನ.16 ಅಥವಾ 17 ರಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಕೇಂದ್ರ ವೀಕ್ಷಕರು ಬರುವ ಸಾಧ್ಯತೆಗಳಿವೆ. ರೈತರಿಗೆ ಬರ ಪರಿಹಾರ ಕೊಡಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ” ಎಂದು ವಿಜಯೇಂದ್ರ ಹೇಳಿದರು.
ಈ ಸುದ್ದಿ ಓದಿದ್ದೀರಾ? ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ದಾಳಿ ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ
“ದೊಡ್ಡ ಪಕ್ಷದಲ್ಲಿ ಒಂದು ನಿರ್ಣಯ ಕೈಗೊಂಡಾಗ ಸಣ್ಣಪುಟ್ಟ ವ್ಯತ್ಯಾಸಗಳು ಆಗುತ್ತವೆ. ಪಕ್ಷದ ಕೆಲವು ನಾಯಕರಲ್ಲಿ ಅಸಮಾಧಾನಗಳಿವೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು. ಎಲ್ಲರನ್ನೂ ಒಗ್ಗೂಡಿಸಿಕೊಂಡು, ಹಿರಿಯರ ಆಶೀರ್ವಾದ, ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸಲಾಗುವುದು” ಎಂದರು.
“ಪಕ್ಷದಲ್ಲಿ ಯಾರನ್ನೂ ಬದಿಗೆ ಸರಿಸಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಮತ್ತಷ್ಟು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಚುನಾವಣೆಯ ಸಮಯದಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದರು. ವಿರೋಧ ಪಕ್ಷದ ನಾಯಕನ ಆಯ್ಕೆಯ ನಂತರ ದೆಹಲಿಗೆ ಭೇಟಿ ನೀಡಿ, ಪಕ್ಷದ ನಾಯಕರ ಜತೆ ಲೋಕಸಭಾ ಚುನಾವಣೆಯ ವಿಚಾರವಾಗಿ ಚರ್ಚಿಸಲಾಗುವುದು” ಎಂದು ವಿಜಯೇಂದ್ರ ತಿಳಿಸಿದರು.