ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶವಾಗಾರ ಕಟ್ಟಡ ನಿರ್ಮಾಣಕ್ಕಾಗಿ ನಿಗದಿಪಡಿಸಲಾಗಿದ್ದ ಸ್ಥಳಗಳಲ್ಲಿರುವ ಸುಮಾರು 70 ಗಿಡ-ಮರಗಳನ್ನು ತೆರವುಗೊಳಿಸಲು ಆಸ್ಪತ್ರೆ ಅಧಿಕಾರಿಗಳು ಮುಂದಾಗಿರುವುದು ಖಂಡನೀಯ ಎಂದು ವೃಕ್ಷ ಬಚಾವೋ ಆಂದೋಲನ ಸಮಿತಿ ಮುಖ್ಯಸ್ಥ ಪರಿಸರ ಮಂಜು ಹೇಳಿದ್ದಾರೆ.
ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಭಾಗಶಃ ಮುಕ್ತಾಯದ ಹಂತದಲ್ಲಿದೆ. ಸದರಿ ಕಾಮಗಾರಿಯೊಂದಿಗೆ ಅನುಮೋದನೆಯಾಗಿರುವ ಶವಾಗಾರ ಕಟ್ಟಡ ನಿರ್ಮಾಣಕ್ಕಾಗಿ ಸ್ಥಳ ನಿಗದಿಪಡಿಸಲಾಗಿದ್ದು, ನಿಗದಿಪಡಿಸಲಾಗಿರುವ ಸ್ಥಳದಲ್ಲಿ ಗಿಡ-ಮರ ಇರುವುದರಿಂದ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಸದರಿ ಮರಗಳನ್ನು ತೆರವುಗೊಳಿಸಲು ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಲು ಸಹಕರಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು ಬಿಬಿಎಂಪಿ ಅರಣ್ಯ ಘಟಕದ ಉಪ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವೃಕ್ಷ ಬಚಾವೋ ಆಂದೋಲನ ಸಮಿತಿ ಮುಖ್ಯಸ್ಥ ಪರಿಸರ ಮಂಜು, “ಈ ಸಾರ್ವಜನಿಕ ಆಸ್ಪತ್ರೆ ಸ್ವಚ್ಛ ಗಾಳಿ ಮತ್ತು ಉತ್ತಮ ಪರಿಸರ ನೀಡುವ ತಾಣವಾಗಿದೆ. ಈ ಆಸ್ಪತ್ರೆಯಲ್ಲಿ 36 ಫಿಕಸ್ ಬೆಂಜಮಿನ್, 10 ಹೊಂಗೆಮರ, 10 ಮಹಾಗನಿ, 4 ಉವರ್ಸಿ, 10 ಟಬಿಬಿಯಾ ರೋಜ್, 5 ಬೂರುಗ ಇಂತಹ ಸುಮಾರು 70ಕ್ಕೂ ಹೆಚ್ಚು ಬಹು ಉಪಯೋಗಿ ವೃಕ್ಷಗಳನ್ನು ಕಡಿಯಲು ಮುಂದಾಗಿರುವುದು ಸರಿಯಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಟ್ ಕಾಯಿನ್ ಪ್ರಕರಣ | ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
“ಈ ಸ್ಥಳವನ್ನು ಸಾರ್ವಜನಿಕರ ವಿಶ್ರಾಂತಿಗಾಗಿ ಪಾರ್ಕಿಂಗ್‌ಗಾಗಿ ನಿಗದಿಪಡಿಸಬಹುದು. ಶವಾಗಾರ ಘಟಕ ನಿರ್ಮಾಣಕ್ಕೆ ಬೇರೆಡೆ ಸ್ಥಳ ನಿಗದಿ ಮಾಡಲಿ. ಇಲ್ಲಿನ ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯಬಾರದು. ನಾವು ಮರದ ಒಂದು ರೆಂಬೆ ಅಥವಾ ಕೊಂಬೆಯನ್ನು ಕಡಿಯಲು ಬಿಡುವುದಿಲ್ಲ. ದೊಡ್ಡ ಸಂಖ್ಯೆಯಲ್ಲಿ ವೃಕ್ಷ ಪ್ರೇಮಿಗಳಿಂದ ಚಳುವಳಿ ಮಾಡಿಯಾದರು ಮರಗಳ ಜೀವ ಉಳಿಸುತ್ತೇವೆ” ಎಂದರು.