ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಈ ಹಿಂದೆ ‘ಕೆರೆಗಳ ನಗರಿ’ ಎಂಬ ಖ್ಯಾತಿ ಪಡೆದಿತ್ತು. ಸಾವಿರಾರು ಕೆರೆಗಳಿದ್ದ ನಾಡಿನಲ್ಲಿ ಇಂದು ಹಲವು ಕೆರೆಗಳು ಅಳಿವಿನಂಚಿನಲ್ಲಿವೆ. ನಗರದಲ್ಲಿದ್ದ ಸಾವಿರಾರು ಕೆರೆಗಳು ಇದೀಗ ನೂರು-ಹತ್ತರ ಲೆಕ್ಕಕ್ಕೆ ಕುಸಿದಿವೆ. ನಗರದಲ್ಲಿರುವ ದೊಡ್ಡ ಕೆರೆಗಳ ಅವನತಿಯಲ್ಲಿ ಸರ್ಕಾರ ಪ್ರಮುಖ ಪಾತ್ರ ವಹಿಸಿದೆ. ಅಳಿವಿನಂಚಿನಲ್ಲಿದ್ದ ನೂರಾರು ಕೆರೆಗಳನ್ನು ರಕ್ಷಿಸುವಲ್ಲಿ ಸರ್ಕಾರ ಮತ್ತು ನಾಗರಿಕರು ಸಂಪೂರ್ಣ ವಿಫಲವಾಗಿದ್ದಾರೆ. ಕೆರೆಗಳನ್ನು ಒತ್ತುವರಿ ಮಾಡಿ ಕೆರೆಯ ಮೇಲೆ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ.
ಇದೀಗ, ಎಚ್ಚೆತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಳಿದು ಉಳಿದಿರುವ ಕೆರೆಗಳ ಪುನರುಜ್ಜೀವನ ಕಾರ್ಯಕ್ಕೆ ಮುಂದಾಗಿದೆ. ಪುನರುಜ್ಜೀವನ ಹೊಂದುತ್ತಿರುವ ಕೆರೆಗಳ ಪೈಕಿ ಪುಟ್ಟೇನಹಳ್ಳಿ ಕೆರೆಯೂ ಒಂದಾಗಿದ್ದು, ಹೊಸ ಸೌಂದರ್ಯದೊಂದಿಗೆ ಕಂಗೊಳಿಸುತ್ತಿದೆ. ಸುತ್ತಮುತ್ತಲಿನ ಜನರ ಕಣ್ಮನ ಸೆಳೆಯುತ್ತಿದೆ.

ಹೌದು, ದಕ್ಷಿಣ ಬೆಂಗಳೂರಿನ ಜಯಪ್ರಕಾಶ ನಗರದ 7ನೇ ಹಂತದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಪುಟ್ಟೇನಹಳ್ಳಿ ಕೆರೆ ಪ್ರಾಚೀನ ಕೆರೆಗಳ ಪೈಕಿ ಒಂದಾಗಿದೆ. ಈ ಹಿಂದೆ ಸಿಹಿ ನೀರಿನ ಕಣಜವಾಗಿದ್ದ ಈ ಕೆರೆಯ ನೀರನ್ನು ಜನರು ಕುಡಿಯಲು ಬಳಸುತ್ತಿದ್ದರು.
ಕಾಲಕಳೆದಂತೆ ನಗರೀಕರಣದ ಹಿಂದೆ ಬಿದ್ದ ಸರ್ಕಾರ, ಬಂಡವಾಳಶಾಹಿಗಳು ಕೆರೆಯ ಸುತ್ತ ನೂರಾರು ಮನೆಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿದ್ದರು. ಕೆರೆಯ ನೀರು ಮಲಿನವಾಗತೊಡಗಿತು. ಕೆರೆಯಲ್ಲಿ ಮತ್ತು ಸುತ್ತ-ಮುತ್ತ ಕಸ ರಾಶಿರಾಶಿಯಾಗಿ ಬೀಳಲಾರಂಭಿಸಿತು. ಕೆರೆಗೆ ಚರಂಡಿ ನೀರು ಬಂದು ಸೇರುತ್ತಿತ್ತು. ಪರಿಣಾಮ, ಕೆರೆ ಸಂಪೂರ್ಣವಾಗಿ ಮೋರಿಯಾಗಿ ಮಾರ್ಪಟ್ಟಿತ್ತು. ವಿಸ್ತಾರವಾಗಿ ಹರಡಿಕೊಂಡಿದ್ದ ಕೆರೆ ಒತ್ತುವರಿಯಾಗಿ ಈಗ 13 ಎಕರೆ 25 ಗುಂಟಾಗೆ ಕುಸಿದಿದೆ.

ಸಂಪೂರ್ಣ ಅಳಿವಿನಂಚಿನಲ್ಲಿದ್ದ ಕೆರೆಯನ್ನು ಈಗ ಪುನರುಜ್ಜೀವನಗೊಳಿಸಲು ಬಿಬಿಎಂಪಿ ಕರೆ ನೀಡಿತು. ಈ ವೇಳೆ, ಪುಟ್ಟೇನಹಳ್ಳಿ ನೈಬರ್‌ಹುಡ್ ಲೇಕ್ ಇಂಪ್ರೂವ್‌ಮೆಂಟ್ ಟ್ರಸ್ಟ್ (ಪಿಎನ್ಎಲ್ಐಟಿ) ಈ ಕೆರೆಯನ್ನು ಪುನರುಜ್ಜೀವನಗೊಳಿಸಲು ಮುಂದೆ ಬಂದಿತು. ಸಾಯುತ್ತಿರುವ ಕೆರೆಯನ್ನು ಬದುಕಿಸಿ ಸಸ್ಯ ಮತ್ತು ಪ್ರಾಣಿಗಳ ಕಲ್ಯಾಣದಲ್ಲಿ ಪಿಎನ್ಎಲ್ಐಟಿ ತೊಡಗಿಸಿಕೊಂಡಿತು.
ಬ್ರಿಗೇಡ್ ಮಿಲೇನಿಯಮ್ ಮತ್ತು ಸೌತ್ ಸಿಟಿ ಎಂಬ ಎರಡು ವಸತಿ ಅಪಾರ್ಟ್‌ಮೆಂಟ್ ಎನ್‌ಕ್ಲೇವ್‌ಗಳ ನಡುವೆ ದಕ್ಷಿಣ ಬೆಂಗಳೂರಿನ ಜೆಪಿ ನಗರದಲ್ಲಿ ಈ ಕೆರೆ ನೆಲೆಗೊಂಡಿದೆ. ಕೆಲವೊಮ್ಮೆ ಉತ್ತರ ಬೆಂಗಳೂರಿನಲ್ಲಿರುವ ದೊಡ್ಡದಾದ ಸಾರಕ್ಕಿ ಕೆರೆ ಮತ್ತು ಯಲಹಂಕ ಪುಟ್ಟೇನಹಳ್ಳಿ ಕೆರೆಯೊಂದಿಗೆ ಗೊಂದಲಕ್ಕೊಳಗಾಗುತ್ತದೆ. ಆದ್ದರಿಂದ, ಇದು ಪುಟ್ಟೇನಹಳ್ಳಿ ‘ಪುಟ್ಟಕೆರೆ’ ಎಂದು ಗುರುತಿಸಲಾಗುತ್ತದೆ. ಈ ಕೆರೆ ಬಿಬಿಎಂಪಿ ನಿರ್ವಹಣೆಯಡಿ ಬರುತ್ತದೆ.
ಆಗಸ್ಟ್ 2009ರಲ್ಲಿ ಬಿಬಿಎಂಪಿಯು ಸರ್ವೆ ಮತ್ತು ಗಡಿಗೆ ಬೇಲಿ ಹಾಕುವ ಮೂಲಕ ಮತ್ತು ಇತರ ಸಂಬಂಧಿತ ಕೆಲಸಗಳನ್ನು ನಡೆಸುವ ಮೂಲಕ ಕೆರೆಯ ಪುನರುಜ್ಜೀವನವನ್ನು ಪ್ರಾರಂಭಿಸಿತು. ಕೆರೆಯಲ್ಲಿ ತುಂಬಿದ್ದ ಕಪ್ಪು ನೀರು ಹೊರತೆಗೆಯುವುದು, ಕೆರೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದಿರುವುದನ್ನು ತೆಗೆಯುವುದು, ಕೆರೆಯಲ್ಲಿ ಹೂಳು ತೆಗೆಯುವುದು, ಬಂಡ್ ನಿರ್ಮಿಸುವುದು, ಒಳಹರಿವುಗಳನ್ನು ಒದಗಿಸುವುದು ಸೇರಿದಂತೆ ಅನೇಕ ಕೆಲಸಗಳಿಂದಾಗಿ ಕೆರೆ ಪುನರುಜ್ಜೀವನಗೊಂಡಿದೆ.

ಮೀನುಗಳ ಮಾರಣಹೋಮಕ್ಕೆ ಸಾಕ್ಷಿಯಾಗಿದ್ದ ಕೆರೆ
ಇನ್ನು, ಈ ಹಿಂದೆ ಕೆರೆಗೆ ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಹರಿಯುತ್ತಿತ್ತು. 2017ರಲ್ಲಿ ನಟರಾಜ ಲೇಔಟ್‌ನಲ್ಲಿರುವ ಯುಜಿಡಿಯಿಂದ ಆಗಾಗ ಹರಿದು ಬರುತ್ತಿದ್ದ ಚರಂಡಿ ನೀರು ಮಳೆನೀರು ಚರಂಡಿ ಮೂಲಕ ಕೆರೆಗೆ ಸೇರುತ್ತಿತ್ತು. ಈ ಕಲುಷಿತ ನೀರಿನಿಂದಾಗಿ 2018ರ ಮಾರ್ಚ್‌ನಲ್ಲಿ ಕೆರೆಯ ಮೀನುಗಳ ಮಾರಣಹೋಮವೇ ನಡೆದಿತ್ತು.
ಪುಟ್ಟೇನಹಳ್ಳಿ ಕೆರೆಯು ಕಟ್ಟಡದ ಅವಶೇಷಗಳ ಜತೆಗೆ ಘನತ್ಯಾಜ್ಯ, ತ್ಯಾಜ್ಯನೀರು ಹಾಗೂ ಮಳೆನೀರು ಹರಿಯುವ ತಿಪ್ಪೆಯಾಗಿತ್ತು. 2010ರಲ್ಲಿ ಕೆರೆಯ ಪುನರ್ಜನ್ಮ ಪ್ರಾರಂಭವಾಯಿತು. ಕಾಳಜಿಯ ನಾಗರಿಕರ ಗುಂಪು ಒಗ್ಗೂಡಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ ಟ್ರಸ್ಟ್ ಸರಣಿ ಮಧ್ಯಸ್ಥಿಕೆಗಳ ಮೂಲಕ ಕೆರೆಯನ್ನು ಮತ್ತೆ ಜೀವಂತಗೊಳಿಸಲು ಸಹಾಯ ಮಾಡಿತು.
ಈ ಸುದ್ದಿ ಓದಿದ್ದೀರಾ? ಹೊಸ ತಲೆಮಾರಿಗೆ ಹಳೆಯ ನೆನಪು 5 | ಚಂದದ ಚೆಲ್ಲಘಟ್ಟ ಕೆರೆ ಮೇಲೆ ಹಸಿರಿನ ‘ಗಾಲ್ಫ್ ಕೋರ್ಸ್’ ನಿರ್ಮಾಣ
ಪಿಎನ್ಎಲ್ಐಟಿಗೆ ಸ್ಥಳೀಯರ ಸಾಥ್
ಪಿಎನ್ಎಲ್ಐಟಿ ಸ್ಥಳೀಯ ನಾಗರಿಕರ ಗುಂಪು ಕೆರೆ ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಮುಂದಾದ ನಂತರ ಕೆರೆಯನ್ನು ಉಳಿಸಲು ಹಲವಾರು ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡರು. ನಂತರ ಕೆರೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿತು. ಸ್ಥಳೀಯ ನಿವಾಸಿಗಳಿಂದ ದೇಣಿಗೆ ಪಡೆಯುವ ಮೂಲಕ ಕೆರೆಗೆ ನಿಧಿಯ ಪ್ರಾಥಮಿಕ ವಿಧಾನವಾಗಿ ಮಾಡಿಕೊಂಡಿತು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಪಿಎನ್ಎಲ್ಐಟಿ ಉಷಾ ರಾಜಗೋಪಾಲನ್, “2005ರಿಂದ ನಾನು ಈ ಕೆರೆಯನ್ನು ನೋಡುತ್ತಿದ್ದೇನೆ. 2009-2010ರಲ್ಲಿ ಬಿಬಿಎಂಪಿ ಕೆರೆಯನ್ನು ಪುನರುಜ್ಜೀವನಗೊಳಿಸಲು ಮುಂದಾಯಿತು. ಈ ವೇಳೆ, ಹಲವು ಕಡೆ ಕೆರೆ ಒತ್ತುವರಿಗಳನ್ನು ತೆರುವುಗೊಳಿಸಿತು. ಆದರೆ, ಇಂದಿಗೂ 1 ಎಕರೆ 13 ಗುಂಟೆ ಕೆರೆಯ ಜಾಗ ಒತ್ತುವರಿಯಾಗಿದೆ. 2009-2010ರಲ್ಲಿ 40 ಕುಟುಂಬಗಳು ವಾಸ ಮಾಡುತ್ತಿದ್ದವು. ಆದರೆ, ಈಗ 119 ಕುಟುಂಬಗಳು ವಾಸ ಮಾಡುತ್ತಿವೆ” ಎಂದು ತಿಳಿಸಿದರು.
“2008ರಲ್ಲಿ ಕೆರೆಯನ್ನು ರಕ್ಷಿಸಬೇಕು ಎಂಬ ಅಭಿಯಾನ ಆರಂಭವಾಯಿತು. ಬಿಬಿಎಂಪಿ ನಮಗೆ ಕೆರೆಯನ್ನ ಸಂರಕ್ಷಿಸಿ ಎಂದು ಕರೆ ನೀಡಿತು. ಜುಲೈ 2010ರಲ್ಲಿ ಗಿಡಗಳನ್ನು ನೆಡಲು ಪ್ರಾರಂಭಿಸಲಾಯಿತು. ಕೆರೆಯನ್ನು ಸಂರಕ್ಷಿಸುವ ಕಾರ್ಯ ಟ್ರಸ್ಟ್‌ನದ್ದಾಗಿದೆ” ಎಂದು ವಿವರಿಸಿದರು.
ಪುಟ್ಟೇನಹಳ್ಳಿ ಕೆರೆಯು ಬೆಂಗಳೂರಿನ ಜೆಪಿ ನಗರದಲ್ಲಿ ನೆಲೆಗೊಂಡಿರುವ ಒಂದು ಅಪ್ರತಿಮ ಕೆರೆಯಾಗಿದೆ. ನಾಗರಿಕರ ಕ್ರಿಯೆಯ ಮೂಲಕ ಪುನರುಜ್ಜೀವನಗೊಂಡ ಮೊದಲ ಕೆಲವು ಕೆರೆಗಳಲ್ಲಿ ಒಂದಾಗಿದೆ. ಹಲವಾರು ವರ್ಷಗಳ ಪರಿಶ್ರಮ ಮತ್ತು ಸಮರ್ಪಿತ ಕೆಲಸದ ಪರಿಣಾಮ ಕೆರೆಯ ಫಲಿತಾಂಶವನ್ನು ಕಾಣಬಹುದು. ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕೆರೆಯನ್ನು ಮರು ನಿರ್ಮಾಣ ಮಾಡಲು ಟ್ರಸ್ಟ್ ಶ್ರಮವಹಿಸಿದೆ. ಇದೀಗ, ಕೆರೆ ಪಕ್ಷಿ ವೀಕ್ಷಕರಿಗೆ ಆಶ್ರಯ ತಾಣವಾಗಿದೆ. ಇದರ ಪುನರುಜ್ಜೀವನವು ಅನೇಕ ನಾಗರಿಕರನ್ನು ಮೈತ್ರಿ ಮಾಡಿಕೊಳ್ಳಲು ಮತ್ತು ಬೆಂಗಳೂರಿನಲ್ಲಿ ಹೆಚ್ಚಿನ ಕೆರೆಗಳನ್ನು ಉಳಿಸಲು ಪ್ರೇರೇಪಿಸಿದೆ.