ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಳವಾಗಿದ್ದು, ಪೊಲೀಸರು ಎಷ್ಟೇ ಕ್ರಮ ಕೈಗೊಂಡರು ಯುವಕರು ಮಾತ್ರ ಬುದ್ಧಿ ಕಲಿಯುತ್ತಿಲ್ಲ. ವ್ಹೀಲಿಂಗ್ ಮಾಡುತ್ತಿದ್ದ ಯುವಕನೊಬ್ಬ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಆದರೂ, ಯುವಕರು ಈ ಹುಚ್ಚಾಟವನ್ನು ಮಾತ್ರ ನಿಲ್ಲಿಸುತ್ತಿಲ್ಲ. ಇದೀಗ, ಬೆಂಗಳೂರು ಸಂಚಾರ ಪೊಲೀಸರು ಕಳೆದ ಹದಿನೈದು ದಿನಗಳಿಂದ ವ್ಹೀಲಿಂಗ್ ಮಾಡುವವರ ವಿರುದ್ದ ಕಾರ್ಯಾಚರಣೆ ನಡೆಸಿ, ಎಫ್‌ಐಆರ್ ದಾಖಲಿಸುತ್ತಿದ್ದಾರೆ.
ಬೆಂಗಳೂರಿನ ಸಂಚಾರ ಪೊಲೀಸರು ನಡೆಸುತ್ತಿರುವ ಈ ವಿಶೇಷ ಕಾರ್ಯಾಚರಣೆಯಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ತನಿಖೆ ನಡೆಸಿ ಪ್ರಕರಣ ದಾಖಲಿಸುತ್ತಿದ್ದಾರೆ.
ಯುವಕರು ವ್ಹೀಲಿಂಗ್ ಮಾಡಿ ಅದಕ್ಕೊಂದು ಸಾಂಗ್ ಹಾಕಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ವ್ಹೀಲಿಂಗ್ ಮಾಡುವುದು ತಮಗೆ ಮತ್ತು ಸುತ್ತಮುತ್ತ ಜನಕ್ಕೆ ಅಪಾಯಕಾರಿ ಎಂದು ತಿಳಿದಿದ್ದರು. ಯುವಕರು ಕ್ರೇಜ್‌ಗೆಂದು ನಗರದ ಪ್ರಮುಖ ರಸ್ತೆಗಳಲ್ಲಿಯೂ ವ್ಹೀಲಿಂಗ್ ಮಾಡುತ್ತಿದ್ದಾರೆ. ಹೀಗಾಗಿ, ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಬೆಂಗಳೂರಿನ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ಸ್ಪೆಕ್ಟರ್ಗಳಿಗೆ ವ್ಹೀಲಿಂಗ್ ಕಂಟ್ರೋಲ್ ಮಾಡಬೇಕೆಂದು ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಸೂಚನೆ ನೀಡಿದ್ದಾರೆ.
ಸದ್ಯ ಕಳೆದ 15 ದಿನದಿಂದ ಕಾರ್ಯಾಚರಣೆ ಆರಂಭಿಸಿರುವ ಸಂಚಾರ ಪೊಲೀಸರು ನೈಸ್ ರಸ್ತೆ ಸೇರಿದಂತೆ ಹಲವೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೆಲವರ ವಿರುದ್ಧ ಪ್ರಕರಣ ದಾಖಲು ಮಾಡಿದರೇ, ಇನ್ನು ಕೆಲವರ ಬಳಿ ಬಾಂಡ್ ಬರೆಸಿಕೊಂಡು ಪೋಷಕರ ಎದುರಲ್ಲೇ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದಾರೆ.
ಫೆ.25 ರಂದು ಏರ್‌ಪೋರ್ಟ್, ಕೆ.ಜಿ.ಹಳ್ಳಿ ಮತ್ತು ಜೆ.ಬಿ.ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುವವರನ್ನು ಪತ್ತೆ ಮಾಡಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಠಾಣಾ ವ್ಯಾಪ್ತಿಯ ಸುರಂಜನ್ ದಾಸ್ ರಸ್ತೆ, ಹೆಚ್.ಬಿ.ಆರ್ ಲೇಔಟ್ 80 ಅಡಿ ರಸ್ತೆ ಹಾಗೂ ನರೆಂದ್ರ ಟೆಂಟ್ ರಸ್ತೆಯಲ್ಲಿ ಠಾಣಾ ಸಿಬ್ಬಂದಿ ಗಸ್ತಿನಲ್ಲಿರುವಾಗ ವ್ಹೀಲಿಂಗ್ ಮಾಡುತ್ತಿದ್ದ ಐದು ದ್ವಿಚಕ್ರ ವಾಹನ ಮತ್ತು ಸವಾರರನ್ನು ಏರ್‌ಪೋರ್ಟ್, ಕೆ.ಜಿ.ಹಳ್ಳಿ ಮತ್ತು ಜೆ.ಬಿ.ನಗರ ಸಂಚಾರ ಠಾಣೆಯ ಪೊಲೀಸರು ಪತ್ತೆ ಮಾಡಿ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
“ವಿಚಾರಣೆ ವೇಳೆ, ವ್ಹೀಲಿಂಗ್ ಮಾಡುತ್ತಿದ್ದ ನಾಲ್ಕು ದ್ವಿಚಕ್ರ ವಾಹನ ಸವಾರರು ವಯಸ್ಕರಾಗಿದ್ದು, ಮತ್ತೊಬ್ಬ ದ್ವಿಚಕ್ರ ವಾಹನ ಸವಾರ ಅಪ್ರಾಪ್ತ ವಯಸ್ಕನಾಗಿದ್ದಾನೆ ಎಂದು ತಿಳಿದುಬಂದಿದೆ. ಹಾಗಾಗಿ, ಸವಾರನ ಪೋಷಕರಿಗೆ ಅಥವಾ ವಾಹನ ಮಾಲೀಕರ ವಿರುದ್ದ ಪ್ರತ್ಯೇಕ ಒಟ್ಟು 5 ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ಅನ್ನು ದಾಖಲಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದು ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ₹2.3 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳ ವಶ: ಪೊಲೀಸ್ ಆಯುಕ್ತ ದಯಾನಂದ
ಫೆ.26 ರಂದು ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಟರಾಯನಪುರ ಜಂಕ್ಷನ್ ಬಳಿ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ವಾಹನ ಸಮೇತ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇನ್ನು ಫೆ.24 ರಂದು ಬಾಣಸವಾಡಿ 100 ಅಡಿ ಮುಖ್ಯ ರಸ್ತೆಯಲ್ಲಿ ಠಾಣಾ ಸಿಬ್ಬಂದಿ ಗಸ್ತಿನಲ್ಲಿರುವಾಗ ವ್ಹೀಲಿಂಗ್ ಮಾಡುತ್ತಿದ್ದ ಮೂವರು ದ್ವಿಚಕ್ರ ವಾಹನ ಸವಾರರು ಮತ್ತು ವಾಹನಗಳನ್ನು ಬಾಣಸವಾಡಿ ಸಂಚಾರ ಠಾಣೆಯ ಪೊಲೀಸರು ಪತ್ತೆ ಮಾಡಿ ಜಪ್ತಿ ಮಾಡಿದ್ದಾರೆ.
ಈ ದಿನ @wftrps ವ್ಯಾಪ್ತಿಯ ತೂಬರಹಳ್ಳಿ ಮುಖ್ಯ ರಸ್ತೆಯಲ್ಲಿ ನೊಂದಣಿ ಫಲಕವನ್ನು ತೆಗೆದು ನೊಂದಣಿ ಸಂಖ್ಯೆಯನ್ನು ಮರೆಮಾಚಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರನನ್ನು ವಶಕ್ಕೆ ಪಡೆದು ವರ್ತೂರು ಕಾ & ಸು ಪೊಲೀಸ್ ಠಾಣೆಗೆ ಒಪ್ಪಿಸಿದ ಮೇರೆಗೆ ಸದರಿ ಸವಾರನ ವಿರುದ್ಧ FIR ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ. pic.twitter.com/n19maCgX1r
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) February 26, 2024
“ವಿಚಾರಣೆ ವೇಳೆ, ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರು ವಯಸ್ಕರಾಗಿದ್ದು, ಈ ಇಬ್ಬರು ಸವಾರರ ವಿರುದ್ದ ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೊಬ್ಬ ದ್ವಿಚಕ್ರ ವಾಹನ ಸವಾರ ಅಪ್ರಾಪ್ತ ವಯಸ್ಕನಾಗಿದ್ದು, ಹಾಗಾಗಿ, ಸವಾರನ ಪೋಷಕರು ಅಥವಾ ವಾಹನದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದರು.
ಫೆ.25 ರಂದು ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಟರಾಯನಪುರ ಜಂಕ್ಷನ್ ಬಳಿ ವ್ಹೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ವಾಹನ ಸಮೇತ ಪತ್ತೆಮಾಡಿ ಪ್ರಕರಣ ದಾಖಲು ಮಾಡಲಾಗಿದೆ. ಹಾಗೇಯೇ, ಎಚ್‌ಎಸ್‌ಆರ್ ಲೇಔಟ್ ಬಳಿ ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಫೆ.24 ರಂದು ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ, ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ, ಅಂಬೇಡ್ಕರ್ ನಗರ ಕೂಡ್ಲುಗೇಟ್ ಬಳಿ, ಓಂ ಶಕ್ತಿ ದೇವಸ್ಥಾನದ ಹತ್ತಿರ, ಎನ್.ಜಿ.ಆರ್ ಲೇಔಟ್ ರೂಪೇನ ಅಗ್ರಹಾರ ಬೊಮ್ಮನಹಳ್ಳಿ ಬಳಿ ವ್ಹೀಲಿಂಗ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.