ಪ್ರೀತಿಸಿದ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಯುವತಿ ಮಹಿಳಾ ಸಾಂತ್ವನ ಕೇಂದ್ರದ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಅನುರಾಧಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ, ಘಟನೆಗೆ ಸಂಬಂಧಿಸಿದಂತೆ ರಾಯಚೂರು ಪಶ್ಚಿಮ ಪೊಲೀಸರು ಸಂತ್ರಸ್ತೆಯ ಪ್ರಿಯಕರ 24 ವರ್ಷದ ವಿನಯ ರೆಡ್ಡಿ ಎಂಬಾತನನ್ನು ಬಂಧಿಸಿದ್ದಾರೆ.
ಮೃತ ಅನುರಾಧಾ ಹಾಗೂ ವಿನಯ ರೆಡ್ಡಿ ಇಬ್ಬರೂ ನಗರದ ಜಲಾಲ್ ನಗರದವರು. ಒಂದುವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಕುಟುಂಬದವರು ಮದುವೆಗೆ ಒಪ್ಪಿದ್ದರು. ಆದರೆ ಯುವತಿ ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಒಂದೇ ಕಾರಣಕ್ಕೆ ಯುವಕನ ಮನೆಯವರು ಮದುವೆಗೆ ವಿರೋಧಿಸಿದ್ದರು. ತಮ್ಮ ಮದುವೆಗೆ ರಕ್ಷಣೆ ಕೋರಿ ಗುರುವಾರ ಪೊಲೀಸರ ಮೊರೆ ಹೋಗಿದ್ದರು.
ಈ ನಡುವೆ ಯುವತಿಯ ಪೋಷಕರು ಮದುವೆಗೆ ಒಪ್ಪದ ಕಾರಣ, ಅದೇ ದಿನ ಪೊಲೀಸ್ ಠಾಣೆಯಿಂದ ಅನುರಾಧಾ ಅವರನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ನಂತರ ವಿನಯ್ ರೆಡ್ಡಿ ಮದುವೆಯಾಗಲು ನಿರಾಕರಿಸಿದ್ದರಿಂದ ಯುವತಿ ಕಟ್ಟಡದ ಮೇಲಿಂದ ಹಾರಿದಳು ಎನ್ನಲಾಗುತ್ತಿದೆ.
ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ತಕ್ಷಣ ರಿಮ್ಸ್‌ಗೆ ಕೊಂಡೊಯ್ಯಲಾಗಿತ್ತಾದರೂ ಅಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬಾಲಕಿ ಮೇಲೆ ಅತ್ಯಾಚಾರ; 60 ವರ್ಷದ ಕಾಮುಕನ ಬಂಧನ
ಯುವಕ ವಿನಯ ರೆಡ್ಡಿ ಹಾಗೂ ಅವರ ಕುಟುಂಬದವರು ನನ್ನ ಮಗಳಿಗೆ ಮೋಸ ಮಾಡಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂತ್ರಸ್ತೆಯ ಪೋಷಕರು ನೀಡಿದ ದೂರಿನ್ವಯ ರಾಯಚೂರು ಪಶ್ಚಿಮ ಪೊಲೀಸರು ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ಡೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.