ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ ಒದಗಿಸುವ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲು ಆಟೋ ಚಾಲಕರ ಒಕ್ಕೂಟದೊಂದಿಗೆ ‘ನಮ್ಮ ಯಾತ್ರಿ’ ಆ್ಯಪ್ ಅಭಿವೃದ್ದಿಪಡಿಸಲಾಗಿತ್ತು. ಆಟೋ ಚಾಲಕರಿಗೆ ನೆರವಾಗುವಂತೆ ಹಾಗೂ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಸೇವೆ ಒದಗಿಸುವುದೇ ಈ ಆ್ಯಪ್ನ ಉದ್ದೇಶವಾಗಿದೆ. ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಬೆಂಬಲದೊಂದಿಗೆ ಕಡಿಮೆ ಅವಧಿಯಲ್ಲಿ ಪ್ರಯಾಣಿಕರು ಮತ್ತು ಆಟೋ ಚಾಲಕರನ್ನು ಸೆಳೆಯುವಲ್ಲಿ ಈ ಆ್ಯಪ್ ಜನಪ್ರಿಯತೆ ಗಳಿಸಿದೆ. ಇದೀಗ, ನಮ್ಮ ಯಾತ್ರಿ ಈ ಒಕ್ಕೂಟದಿಂದ ದೂರವಿರಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ನಮ್ಮ ಯಾತ್ರಿ ಆ್ಯಪ್ ಬಿಡುಗಡೆ ಮಾಡುವಲ್ಲಿ ಚಾಲಕರ ಒಕ್ಕೂಟ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಈಗ ‘ನಮ್ಮ ಯಾತ್ರಿ’ ಆ್ಯಪ್ ಸರ್ವೀಸ್ ಸಂಸ್ಥೆ ಹಾಗೂ ಬೆಂಗಳೂರು ಆಟೋ ಚಾಲಕರ ಸಂಘದ ನಡುವೆ ಬಿರುಕು ಮೂಡಿದೆ. ಪರಿಣಾಮ ಆಟೋಚಾಲಕರ ಸಂಘ ನಮ್ಮ ಯಾತ್ರಿ ಆ್ಯಪ್‌ನಿಂದ ಹೊರಬಂದಿದೆ ಎಂದು ಹೇಳಲಾಗಿದೆ.
ನಗರದ ಪ್ರಮುಖ ಆಟೋ ರಿಕ್ಷಾ ಒಕ್ಕೂಟಗಳಲ್ಲಿ ಒಂದಾದ ಆಟೋ ರಿಕ್ಷಾ ಚಾಲಕರ ಸಂಘ ಬೆಂಬಲಿತ ರೈಡ್ ಅಪ್ಲಿಕೇಶನ್ ‘ನಮ್ಮ ಯಾತ್ರಿ‘ಯಿಂದ ನಿರ್ಗಮಿಸಿದೆ ಎಂದು ಹೇಳಲಾಗಿದೆ. ಕೆಲ ಚಾಲಕರು ಇನ್ನು ಆ್ಯಪ್ ಬಳಸುವುದಾಗಿ ಹೇಳಿರುವುದರಿಂದ ‘ನಮ್ಮ ಯಾತ್ರಿ‘ ಕಾರ್ಯಾಚರಣೆಯು ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ.
ನಮ್ಮ ಯಾತ್ರಿಯು ಫಿನ್ಟೆಕ್ ಕಂಪನಿ ಜುಸ್ಪೇಯ ಒಡೆತನದಲ್ಲಿದೆ. ನಮ್ಮ ಯಾತ್ರಿಯನ್ನು ನವೆಂಬರ್ 2022ರಲ್ಲಿ ಚಾಲಕರ ಸ್ವಂತ ಅಪ್ಲಿಕೇಶನ್ ಆಗಿ ಪ್ರಾರಂಭಿಸಲಾಯಿತು. ಆಟೋ ಚಾಲಕರು ತಾವು ಗಳಿಸಿದ ದರದಲ್ಲಿ ನಮ್ಮ ಯಾತ್ರಿಗೆ ಪಾವತಿಸಬೇಕಾದ ಯಾವುದೇ ಕಮಿಷನ್ ಇಲ್ಲದ ಕಾರಣ, ಆ್ಯಪ್ ಬಹುಬೇಗನೇ ಯಶಸ್ವಿಯಾಯಿತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಎಂಟಿಸಿ ಬಸ್‌ಗೆ 21 ವರ್ಷದ ಗೃಹಿಣಿ ಬಲಿ
ಅಲ್ಲದೇ, ಅನೇಕ ಚಾಲಕರು ನಮ್ಮ ಯಾತ್ರಿ ಅಪ್ಲಿಕೇಶನ್ಗೆ ಬದಲಾಯಿಸಿದರು. ಪ್ರಯಾಣಿಕರಿಗೆ ಸಹ ಬುಕ್ಕಿಂಗ್ ಮಾಡಿದ ತಕ್ಷಣ ಆಟೋಗಳು ಸಿಗುತ್ತಿದ್ದವು.
ಕಂಪನಿ ಹಾಗೂ ಸಂಘದ ನಡುವೆ ಮೂಡದ ಒಮ್ಮತ
ನಮ್ಮ ಯಾತ್ರಿ ಆ್ಯಪ್ನಲ್ಲಿ ಪ್ರಯಾಣ ದರ ವಿಚಾರಕ್ಕೆ ಸಂಬಂಧಿಸಿದಂತೆ ಕಂಪನಿ ಹಾಗೂ ಆಟೋ ಚಾಲಕರ ಸಂಘದ ನಡುವೆ ಒಮ್ಮತ ಮೂಡಿಲ್ಲ. ಅಲ್ಲದೇ, ಕಂಪನಿ ತೆಗೆದುಕೊಂಡ ನಿರ್ಧಾರಕ್ಕೂ ಆಟೋಚಾಲಕರ ಸಂಘ ಅಸಮಾಧಾನ ವ್ಯಕ್ತಪಡಿಸಿತ್ತು ಎನ್ನಲಾಗಿದೆ.
ಮೆಟ್ರೋ ನಿಲ್ದಾಣದಿಂದ 2 ಕಿಲೋಮೀಟರ್ ವ್ಯಾಪ್ತಿ ಪ್ರದೇಶಕ್ಕೆ ₹40 ದರ ವಿಧಿಸುವಂತೆ ಆಟೋ ಚಾಲಕರು ಆಗ್ರಹಿಸಿದ್ದರು. ಆದರೆ, ನಮ್ಮ ಯಾತ್ರಿ ಪೇಮೆಂಟ್ ಸೊಲ್ಯುಶನ್ ಪ್ರೊವೈಡರ್ ಈ ಪ್ರಸ್ತಾವನೆ ಒಪ್ಪಿಕೊಂಡಿಲ್ಲ. ಇದರಿಂದ ಮನಸ್ತಾಪ ಉಂಟಾಗಿದೆ.
ಜತೆಗೆ, ಆ್ಯಪ್ ನಡೆಸುವ ಸಂಸ್ಥೆಗೆ ಯಾವುದೇ ಕಮಿಷನ್ ನೀಡದೇ ಚಾಲಕರು ಸವಾರಿ ಬಾಡಿಗೆಯ ಸಂಪೂರ್ಣ ಹಣ ಪಡೆಯುವ ವ್ಯವಸ್ಥೆಯು ಈ ಆ್ಯಪ್ ಜನಪ್ರಿಯಗೊಳ್ಳಲು ಮುಖ್ಯ ಕಾರಣವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ‘ನಮ್ಮ ಯಾತ್ರಿ‘ ಸಹ ಚಾಲಕರಿಗೆ ಚಂದಾದಾರಿಕೆ ಶುಲ್ಕ ವಿಧಿಸಲು ಪ್ರಾರಂಭಿಸಿದೆ. ದಿನಕ್ಕೆ ₹25 ಮತ್ತು ಪ್ರತಿ ಸವಾರಿಗೆ ₹3.50 ಪಾವತಿಸಬೇಕೆನ್ನುವ ಷರತ್ತು ಹಾಕಲಾಗಿತ್ತು. ಈ ಹಣವನ್ನು ಆ್ಯಪ್ ಸುಧಾರಣೆಗೆ ಬಳಸಲಾಗುವುದು ಎಂದು ಕಂಪನಿ ಹೇಳಿತ್ತು.
“ಸಂಘದ ಬೇಡಿಕೆಗಳನ್ನು ಈಡೇರಿಸುವಲ್ಲಿ ‘ನಮ್ಮ ಯಾತ್ರಿ‘ ವಿಫಲವಾಗಿದೆ. ಆರಂಭದಿಂದಲೂ, ಎಆರ್ಡಿಯು ನಮ್ಮ ಯಾತ್ರಿ ಆ್ಯಪ್ನ ಭಾಗವಾಗಿತ್ತು. ಆ್ಯಪ್ ಬಿಡುಗಡೆಯಾಗುವ ಮೊದಲೇ ಒಟ್ಟು 10,000 ಚಾಲಕರು ಸೇರಿದ್ದರು. ಬಿಡುಗಡೆಯಾದ ನಂತರ ಇನ್ನೂ 50,000 ಚಾಲಕರು ನೋಂದಣಿ ಮಾಡಿಕೊಂಡರು. ಆದರೆ ‘ನಮ್ಮ ಯಾತ್ರಿ‘ ನಂತರದ ದಿನಗಳಲ್ಲಿ ನಮ್ಮನ್ನು ನಿರ್ಲಕ್ಷಿಸಿತು” ಎಂದು ಆಟೋ ಚಾಲಕರ ಸಂಘದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
Setting the record straight. Here’s our official statement: pic.twitter.com/vTl45Nic9K
— Namma Yatri (@nammayatri) December 11, 2023
ಫಿನ್ಟೆಕ್ ಕಂಪನಿ ಜಸ್ಟ್ಪೇ–ಮಾಲೀಕತ್ವದ ಸಂಸ್ಥೆಯು ಯೂನಿಯನ್ ಬೆಂಬಲಿತವಾಗಿಲ್ಲ ಎಂದು ಹೇಳಿತ್ತು. ಇದಕ್ಕೆ ಆಟೋ ಚಾಲಕರ ಸಂಘಟನೆ ಆಕ್ಷೇಪಿಸಿದೆ. ಇನ್ನು ಕಾರ್ಪೊರೇಟ್ ಕಂಪನಿಗಳು ಜನಸಾಮಾನ್ಯರಿಂದ ಮಾತ್ರ ಯಶಸ್ವಿಯಾಗುತ್ತವೆ ಎಂದು ರುದ್ರಮೂರ್ತಿ ಅವರು ನಮ್ಮ ಯಾತ್ರಿ ಸಿಇಒ ವಿಮಲ್ ಕುಮಾರ್ ಅವರನ್ನು ಟೀಕಿಸಿದ್ದಾರೆ ಎಂದು ಹೇಳಲಾಗಿದೆ.
“ನಮ್ಮ ಯಾತ್ರಿಯು ಒಂದು ಲಕ್ಷಕ್ಕೂ ಹೆಚ್ಚು ಚಾಲಕರೊಂದಿಗೆ ಸಹಯೋಗ ಹೊಂದಿದೆ. ಅವರಲ್ಲಿ ಹೆಚ್ಚಿನವರು ಯಾವುದೇ ಒಕ್ಕೂಟದೊಂದಿಗೆ ಸಂಬಂಧ ಹೊಂದಿಲ್ಲ. ನಾವು ವೈಯಕ್ತಿಕ ಒಕ್ಕೂಟಗಳ ಹಿತಾಸಕ್ತಿಗಳಿಗಿಂತ ಸಮುದಾಯದ ಕಲ್ಯಾಣಕ್ಕೆ ಆದ್ಯತೆ ನೀಡುತ್ತೇವೆ” ಎಂದು ಕಂಪನಿ ಟ್ವೀಟ್ ಮೂಲಕ ತಿಳಿಸಿದೆ.