ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ʼಪಾಫ್ರೆʼ ಒತ್ತಾಯ

Date:

Advertisements

ಶಾಲೆಗಳು ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಸರ್ಕಾರಿ ಕನ್ನಡ ಶಾಲೆಗಳಲ್ಲಿನ ಹಲವು ಸಮಸ್ಯೆಗಳು ಬಗೆಹರಿಯದಿರುವ ಬಗ್ಗೆ ʼಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ)ʼ ಕಳವಳ ವ್ಯಕ್ತಪಡಿಸಿದೆ.

ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಕ್ಕಳ ಉತ್ತೇಜಕಗಳು ಸೇರಿದಂತೆ ಕಲಿಕೆಯ ಹಲವು ಜ್ವಲಂತ ಸಮಸ್ಯೆಗಳು ಬಗೆಹರಿಯದ ಕಾರಣ, ಕಲಿಕೆಗೆ ತೊಂದರೆಯಾಗಿದ್ದು ಮಕ್ಕಳು ಹಾಗೂ ಶಿಕ್ಷಕರು ಪರಿತಪಿಸುವಂತಾಗಿದೆ ಎಂದಿರುವ ಸಂಘಟನೆಯ ಹಕ್ಕೊತ್ತಾಯಗಳು ಇಂತಿವೆ.

ಒಂದು: ನಮಗೆಲ್ಲ ತಿಳಿದಿರುವಂತೆ ಸರ್ಕಾರಿ ಶಾಲೆಗಳಲ್ಲಿ ಹಲವು ತರಗತಿ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದರೆ ಉಳಿದ ತರಗತಿ ಕೋಣೆಗಳು ಸಣ್ಣ ಹಾಗು ದೊಡ್ಡ ಪ್ರಮಾಣ ದುರಸ್ತಿಯಲ್ಲಿವೆ. ಮಳೆಗಾಲ ಪ್ರಾರಂಭವಾಗಿದ್ದು, ಹಲವು ಶಾಲೆಗಳಲ್ಲಿ ಕಟ್ಟಡ ಕುಸಿದು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರೂ ತೀವ್ರ ಗಾಯಗೊಂಡಿದ್ದಾರೆ. ಉಳಿದಂತೆ ಹಲವು ಕೋಣೆಗಳು ತೀವ್ರ ಸೋರಿಕೆಯಿಂದ ಜಲಾವೃತಗೊಂಡಿದ್ದು ಪಾಠಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದೆ. ದಿನನಿತ್ಯ ಈ ಕುರಿತಾದ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಶಾಲೆಗಳು ಪ್ರಾರಂಭವಾಗುವ ಮುನ್ನ ಸರ್ಕಾರ ಈ ಬಗ್ಗೆ ಗಮನ ಹರಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ, ಸರ್ಕಾರದ ದೂರದೃಷ್ಟಿಯ ಕೊರತೆಯಿಂದ ಮಕ್ಕಳು ಬಲಿಪಶುವಾಗಿದ್ದು ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರಿದೆ. ಸರ್ಕಾರ ಈಗಲಾದರೂ ತನ್ನ ಬಳಿ ಇರುವ ಅಂಕಿ ಅಂಶಗಳ ಅನ್ವಯ ಅಂತಹ ಶಾಲೆಗಳಲ್ಲಿ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಎಸ್‌ಡಿಎಮ್‌ಸಿಗಳಿಗೆ ಅಗತ್ಯ ಹಣವನ್ನು ಬಿಡುಗಡೆ ಮಾಡಬೇಕಿದೆ.

Advertisements

ಜೊತೆಗೆ, ನಾವು ಕಂಡಂತೆ ಸಾಮಾನ್ಯವಾಗಿ ಹಲವು ಸರ್ಕಾರಿ ಶಾಲಾ ಕಟ್ಟಡಗಳ ಮೇಲ್ಚಾವಣಿಗೆ ಹೋಗಲು ಮೆಟ್ಟಿಲುಗಳು ಇರುವುದಿಲ್ಲ.ಇದರಿಂದ ಛಾವಣಿಯ ಮೇಲೆ ಉದುರಿದ ಕಸಕಡ್ಡಿ ಎಲೆಗಳನ್ನು ತೆಗೆಯದ ಕಾರಣ ನೀರು ನಿರಂತರವಾಗಿ ನಿಂತು ಕಟ್ಟಡ ಹಾಳಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಈ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕಿದೆ. ಸೂಕ್ತ ಭದ್ರತೆಯೊಂದಿಗೆ, ಪ್ರತಿ ಶಾಲಾ ಕಟ್ಟಡದ ಮೇಲ್ಛಾವಣಿಗೆ ಮೆಟ್ಟಿಲುಗಳ ಸೌಲಭ್ಯ ಕಲ್ಪಿಸಬೇಕಿದೆ.

ಶಾಲೆ ತೆರೆದು ಒಂದು ತಿಂಗಳಾದರೂ ಶಾಲಾ ಅನುದಾನ ಬಾರದ ಕಾರಣ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗಿದ್ದು ಕೂಡಲೇ ಶಾಲಾ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಪಾಫ್ರೆ ಒತ್ತಾಯಿಸುತ್ತದೆ.

ಎರಡು:  ಶಾಲಾವಾರು ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಆದೇಶ ನೀಡಿದೆ. ಆದರೆ, ವರ್ಗಾವಣೆಯ ಪ್ರಕ್ರಿಯೆ ಇನ್ನೂ ಮುಗಿಯದ ಕಾರಣ, ಯಾವ ಶಾಲೆಯಲ್ಲಿ ಯಾವ ಹುದ್ದೆ ಖಾಲಿಯಾಗುತ್ತದೆ ಎಂಬ ಬಗ್ಗೆ ಗೊಂದಲವಿದೆ. ಶೈಕ್ಷಣಿಕ ವರ್ಷ ಪ್ರಾರಂಭದ ನಂತರ ಶಿಕ್ಷಕರ ವರ್ಗಾವಣೆ ಅವೈಜ್ಞಾನಿಕವೆನಿಸುತ್ತದೆ. ಸಮಸ್ಯೆ ಹೀಗಿರುವುದರಿಂದ, ವರ್ಗಾವಣೆಯ ನಂತರವೂ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಸರ್ಕಾರ ನೀಡಬೇಕಾಗುತ್ತದೆ. ಜೊತೆಗೆ, ಗ್ರಾಮೀಣ ಭಾಗದಲ್ಲಿ ಖಾಲಿ ಇರುವ ಗಣಿತ, ವಿಜ್ಞಾನ, ಇಂಗ್ಲಿಷ್, ಹಿಂದಿ, ಇತ್ಯಾದಿ ವಿಷಯಗಳಿಗೆ ಅತಿಥಿ ಶಿಕ್ಷಕರು ಸಿಗುವುದು ಕಷ್ಟ. ಕಾರಣ, ಅತಿಥಿ ಶಿಕ್ಷಕರಿಗೆ ಸರ್ಕಾರ ನೀಡುವ ಗೌರವ ಧನ ರೂ. 10,000-10,500. ವೃತ್ತಿ ನೈಪುಣ್ಯ ಹೊಂದಿದ ಶಿಕ್ಷಕರಿಗೆ ಕನಿಷ್ಠ ವೇತನ ಸಿಗದ ಕಾರಣ ಯಾರೂ ಮುಂದೆ ಬರುತ್ತಿಲ್ಲ. ಇದೇ ಶಿಕ್ಷಕರಿಗೆ ತಾಲೂಕಿನ ಕೆಲವು ಖಾಸಗಿ ಶಾಲೆಗಳಲ್ಲಿ ಕನಿಷ್ಠ 20 ರಿಂದ 25 ಸಾವಿರ ರೂಪಾಯಿ ಸಂಬಳ ನೀಡಲು ಆಡಳಿತ ಮಂಡಳಿ ತಯಾರಿದ್ದಾರೆ. ಕೆಳಸ್ತರದ ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿ ಕಲಿಕೆ ಸುಗಮವಾಗಲು ತಕ್ಷಣ ಕ್ರಮ ವಹಿಸಬೇಕೆಂದು ಪಾಫ್ರೆ ಒತ್ತಾಯಿಸುತ್ತದೆ.

ಮೂರು: ಸರ್ಕಾರ ಸಮವಸ್ತ್ರ ನೀಡುವ ಬದಲು ಕೇವಲ ಬಟ್ಟೆ ನೀಡಿದ ಕಾರಣ ಹೊಲಿಸುವ ಕೂಲಿ ಪಾಲಕರಿಗೆ ಹೊರೆಯಾಗಿದೆ. ಒಂದು ಜೊತೆ ಸಮವಸ್ತ್ರ ಹೊಲಿಯಲು ಸುಮಾರು 300 ರಿಂದ 500 ರೂ.ಗಳು ಬೇಕಾಗಿರುವುದರಿಂದ ಹಲವು ಪಾಲಕರು ಇನ್ನೂ ಹೊಲಿಸದ ಕಾರಣ ಮಕ್ಕಳು ಸಮವಸ್ತ್ರವಿಲ್ಲದೆ ಶಾಲೆಗೆ ಬರುವಂತಾಗಿದೆ. ಈ ಹಿಂದೆ ಸರ್ಕಾರ ರೆಡಿಮೇಡ್‌ ಸಮವಸ್ತ್ರವನ್ನು ನೀಡುತ್ತಿದ್ದು ಏಕಾಏಕಿ ನಿಲ್ಲಿಸಿದ್ದು ಸಾಮಾಜಿಕ ಅನ್ಯಾಯವಾಗಿದೆ. ಈಗಲಾದರೂ ಸರ್ಕಾರ ಈ ಹಣವನ್ನು ಮಕ್ಕಳ ಪಾಲಕರಿಗೆ ಹಿಂತಿರುಗಿಸುವುದು ನ್ಯಾಯಸಮ್ಮತವೆನಿಸುತ್ತದೆ.

ನಾಲ್ಕು: ಸರ್ಕಾರಿ ಶಾಲೆಗಳಲ್ಲಿ ಬಹುವರ್ಗ ಬೋಧನೆಯನ್ನು ಸಮರ್ಥಿಸುವ ರೀತಿಯಲ್ಲಿ ನಲಿಕಲಿ ವ್ಯವಸ್ಥೆ ರೂಡಿಯಲ್ಲಿದೆ. ಆದರೆ, ಆ ಹಿಂದೆ ನಲಿಕಲಿ ತರಬೇತಿ ಪಡೆದ ಬಹುತೇಕ ಜನ ಶಿಕ್ಷಕರು ನಿವೃತ್ತರಾಗಿದ್ದು, ಕೆಲವು ಶಾಲೆಯಲ್ಲಿ ಅತಿಥಿ ಶಿಕ್ಷಕರು ನಲಿಕಲಿ ಪದ್ಧತಿಯಲ್ಲಿ ಪಾಠ ಮಾಡಬೇಕಾಗಿದ್ದು, ತರಬೇತಿಯಿಲ್ಲದ ಕಾರಣ ಗೊಂದಲವುಂಟಾಗಿದೆ.

ಇನ್ನು ಯಾವುದೇ ಬಗೆಯ ಸಿದ್ಧತೆ ಅಥವಾ ವೈಜ್ಞಾನಿಕತೆಯಿಲ್ಲದೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡಿರುವ ಕಾರಣ 20 ಮಕ್ಕಳಿದ್ದರೆ 10 ಮಕ್ಕಳು ಆಂಗ್ಲ ಮಾಧ್ಯಮಕ್ಕೆ 5 ಮಕ್ಕಳು ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆಯುವುದರಿಂದ, ಇಂಗ್ಲಿಷೂ ಇಲ್ಲದೆ ಕನ್ನಡವೂ ಇಲ್ಲದೆ ತ್ರಿಶಂಕು ಸ್ಥಿತಿಯಾಗಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲು ಶಿಕ್ಷಕರೇ ಇಲ್ಲದಿರುವಾಗ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ದಾಖಲು ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಸರ್ಕಾರ ಯೋಚಿಸಬೇಕಿದೆ. ಸರ್ಕಾರದ ಈ ನಡೆಯಿಂದ ಮುಂದೆ ಆ ಮಕ್ಕಳು ಎಡಬಿಡಂಗಿಗಳಾಗುವ ಸಾಧ್ಯತೆಯೇ ಹೆಚ್ಚು.

ಐದು: ಮಕ್ಕಳು ಸಮವಸ್ತ್ರದ ಭಾಗವಾಗಿ ಧರಿಸಬೇಕಾದ ಷೂ ಮತ್ತು ಸಾಕ್ಸ್ ಈವರೆಗೆ ಅನುದಾನ ಬಿಡುಗಡೆ ಆಗಿರುವುದಿಲ್ಲ. ಇಲ್ಲಿಯವರೆಗೆ ಎಸ್‌ಡಿಎಂಸಿ ನೇತೃತ್ವದಲ್ಲಿ ಇದರ ನಿರ್ವಹಣೆ ಆಗುತ್ತಿತ್ತು ಈ ಬಾರಿ ಏನಾಗುತ್ತೆಯೆಂಬುದು ಈವರೆಗೆ ತಿಳಿದಿಲ್ಲ. ಐಎಸ್ಓ ಬ್ರಾಂಡೆಡ್‌ನ ಕಂಪನಿಯಿಂದಲೇ ಷೂ ಖರೀದಿ ಮಾಡುವಂತೆ ತಿಳಿಸಿರುವ ಸರ್ಕಾರ ಅದಕ್ಕೆ ನೀಡಿರುವ ಹಣ ಮಾತ್ರ ಏನೇನು ಸಾಲದಾಗಿದೆ. ಅಸಲಿಗೆ ಗುಣಮಟ್ಟದ ಷೂ ಖರೀದಿಸಬೇಕಾದರೆ ಪ್ರತಿ ಮಗುವಿಗೂ ಕನಿಷ್ಠ 800 ರಿಂದ 1000 ರೂಪಾಯಿಗಳಾದರೂ ಬೇಕಾಗುತ್ತದೆ. ಇಲ್ಲವಾದಲ್ಲಿ, ಮಾರುಕಟ್ಟೆಯಲ್ಲಿ ದೊರೆಯುವ ಕಳಪೆ ಗುಣಮಟ್ಟದ ಷೂಗಳು ಒಂದೆರಡು ತಿಂಗಳಿಗೆ ಕಿತ್ತು ಹೋಗುತ್ತವೆ. ಈ ಲೋಕಲ್ ಬ್ರಾಂಡೆಡ್ ಷೂಗಳು ಉಚಿತ ಷೂ ಮತ್ತು ಸಾಕ್ಸ್ ವಿತರಣೆಯ ಭಾಗವಾಗಿಯೇ ತಯಾರಾಗುತ್ತಿವೆ. ಈ ಬಗ್ಗೆ ಸರ್ಕಾರ ಪುನರಾಲೋಚಿಸಬೇಕಿದೆ.

ಆರು: ಸರ್ಕಾರ ಸರ್ಕಾರಿ ಶಾಲೆಗಳಿಗೆ ಶೈಕ್ಷಣಿಕ ಕ್ಯಾಲೆಂಡರ್/ ಮಾರ್ಗಸೂಚಿಯನ್ನು ನೀಡಿದೆ. ಅದರಂತೆ ಆಯಾ ತಿಂಗಳಲ್ಲಿ ಬರುವ ಪಾಠ ಹಾಗು ಶೈಕ್ಷಣಿಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸೂಚಿಸಿರುತ್ತಾರೆ. ಶಿಕ್ಷಕರು ಅದನ್ನು ಪ್ರಾರಂಭಿಸಿದ ಕೂಡಲೇ ಇಲಾಖೆಯು ಇತರೆ ಹತ್ತಾರು ಕಾರ್ಯಕ್ರಮಗಳು ಮೇಲಿಂದ ಮೇಲೆ ಸೂಚಿಸುತ್ತದೆ. ಜೊತೆಗೆ ಹಲವು ಸರ್ಕಾರೇತರ ಸಂಸ್ಥೆಗಳು ಸರ್ಕಾರದ ಅನುಮತಿಯೊಂದಿಗೆ ಅವರದೇ ಆದ ಉದ್ದೇಶಗಳನ್ನು ಇಟ್ಟುಕೊಂಡು ಶಾಲೆಗೆ ಬರುತ್ತಾರೆ. ಅವರಿಗೂ ವಾರಕ್ಕೆ ಇಂತಿಷ್ಟು ಗಂಟೆ ನೀಡಬೇಕು. ಇವುಗಳನ್ನೆಲ್ಲ ನೋಡಿದರೆ ಶಿಕ್ಷಣ ಹಕ್ಕು ಕಾಯಿದೆ ನಿಗದಿಗೊಳಿಸಿರುವ 200 ರಿಂದ 220 ದಿನಗಳ ಬದಲು ಕನಿಷ್ಠ 100 ದಿನ ಪೂರ್ಣವಾಗಿ ಪಾಠ ಮಾಡಲು ಕಷ್ಟವಾಗುತ್ತದೆ ಇದು ಕಲಿಕೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದ್ದು ಗುಣಾತ್ಮಕ ಕಲಿಕೆ ಕಷ್ಟ ಸಾಧ್ಯವಾಗಿದೆ. ಕಾರಣ, ಶಿಕ್ಷಕರು ಸಂಪೂರ್ಣ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ಮಕ್ಕಳ ಕಲಿಕಾ ಕೊರತೆಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ.

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರ ಅದರಲ್ಲೂ ವಿಶೇಷವಾಗಿ ಶಾಲಾ ಶಿಕ್ಷಣ ಇಲಾಖೆ ತುರ್ತು ಗಮನ ಹರಿಸಬೇಕು ಎಂದು ಪಾಫ್ರೆ ಒತ್ತಾಯಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X