ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಕನ್ನಡ ಕೋಟ್ಯಧಿಪತಿ ಶೋ ಮೂಲಕ ಪಂಪಣ್ಣ ಇಡೀ ಕರ್ನಾಟಕಕ್ಕೆ ಪರಿಚಯವಾಗಿದ್ದ. ಇದೀಗ ವಾಲ್ಮೀಕಿ ನಿಗಮ ಹಗರಣದಲ್ಲಿ ಇಡಿ ಬಲೆಗೆ ಬಿದ್ದಿದ್ದಾನೆ.
2012ರಲ್ಲಿ ನಟ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ಕನ್ನಡ ಕೋಟ್ಯಧಿಪತಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಪಂಪಣ್ಣ ಕೊನೆಯವರೆಗೂ ಉಳಿದಿದ್ದ. ಒಂದು ಕೋಟಿ ರೂಪಾಯಿಗೆ ಕೇಳಿದ ಕೊನೆ ಪ್ರಶ್ನೆವರೆಗೂ ಸೇಫ್ ಆಗಿ ಆಡಿ ಕೊನೆ ಪ್ರಶ್ನೆಗೆ ಉತ್ತರಿಸಲು ಆಗದೇ ಆಟದಿಂದ ನಿರ್ಗಮಿಸಿ 50 ಲಕ್ಷ ರೂ. ಪಡೆದಿದ್ದ.
ದೇವದುರ್ಗ ಮೂಲದ ಪಂಪಣ್ಣ ಸ್ಮಶಾನದಲ್ಲಿ ಇಡುವ ಎಡೆಯನ್ನು ತಿಂದು ಬೆಳೆದವರು ಅನ್ನೋ ವಿಚಾರ ಆಗ ಸಂಚಲನ ಮೂಡಿಸಿತ್ತು. ಇಂತಹ ಪಂಪಣ್ಣ ಕಡು ಬಡತನದಲ್ಲಿ ಬೆಳೆದು ಬಂದ ತಾನು ಬುದ್ದಿವಂತ ಎನ್ನುವುದನ್ನು ಸಾಬೀತು ಮಾಡಿದ್ದ. ಅದೇ ಪಂಪಣ್ಣ ಇಂತಹ ಅಕ್ರಮದಲ್ಲಿ ಆರೋಪಿಯಾಗಿದ್ದಾನೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂ. ಅಕ್ರಮ ವರ್ಗಾವಣೆ ಹಗರಣ ಸಂಬಂಧ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾಜಿ ಆಪ್ತ ಸಹಾಯಕ ಪಂಪಣ್ಣನನ್ನು ಇಡಿ ಅಧಿಕಾರಿಗಳು ಗುರುವಾರ (ಜು.11) ವಶಕ್ಕೆ ಪಡೆದಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ನಡೆದಿರುವ ಜಾರಿ ನಿರ್ದೇಶನಾಲಯ (ED) ದಾಳಿ ಎರಡನೇ ದಿನವೂ ಮುಂದುವರಿದಿದ್ದು, ಡೀಲ್ ಬಗ್ಗೆ ಪಂಪಣ್ಣ ಬಾಯಿ ಬಿಟ್ಟಿದ್ದಾನೆಂದು ತಿಳಿದುಬಂದಿದೆ.
ಪಂಪಣ್ಣ ಮನೆ ಮೇಲೆ ಇ.ಡಿ ದಾಳಿ ನಡೆಸಿದ ವೇಳೆ ಅಕ್ರಮಗಳ ಮಾಹಿತಿ ಲಭ್ಯವಾಗಿದೆ. ಬಿಚ್ಚಾಲಿ ಗ್ರಾ.ಪಂ ಪಿಡಿಒ ಆಗಿ ನಿಯೋಜನೆಗೊಂಡಿದ್ದ ಪಂಪಣ್ಣ, ಪಿಡಿಒ ಚಾರ್ಜ್ ತೆಗೆದುಕೊಳ್ಳದೆ ರಾಯಚೂರು ತಾ.ಪಂನಲ್ಲಿ ಕೇಸ್ ವರ್ಕರ್ ಆಗಿ ಮುಂದುವರಿದಿದ್ದ. ನೂತನ ಎಂಎಲ್ಸಿಯೊಬ್ಬರ ಪಿಎ ಆಗಲು ಹೊರಟಿದ್ದ ಎನ್ನಲಾಗಿದೆ.
ರಾಯಚೂರಿನ ಆಜಾದ್ ನಗರದಲ್ಲಿ ಐಷಾರಾಮಿ ಪ್ಲ್ಯಾಟ್ ಖರೀದಿಸಿ ವಾಸ ಮಾಡುತ್ತಿದ್ದ. ತಾಲೂಕು ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬಸವನಗೌಡ ದದ್ದಲ್‌ನ ಖಾಸಗಿ ವ್ಯವಹಾರ ನೋಡಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ಪಂಪಣ್ಣ 50 ಲಕ್ಷ ರೂ. ಗೆದ್ದ ಬಳಿಕ ಅಂದಿನ ರಾಯಚೂರು ಸಂಸದರಿಗೆ ಸರ್ಕಾರಿ ಆಪ್ತ ಸಹಾಯಕರಾಗಿ ಸೇರಿಕೊಂಡ. ಬಳಿಕ ಪಿಡಿಒ ಹುದ್ದೆಗೆ ನಿಯೋಜನೆಗೊಂಡ. ಶಾಸಕ ಬಸನಗೌಡ ದದ್ದಲ್ ಅವರಿಗೂ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದ.