ಪತ್ರಕರ್ತನ ಪಯಣ | ಕನ್ನಡ ಪತ್ರಿಕೋದ್ಯಮದ ಅರೆಶತಮಾನದ ನಿಷ್ಠುರ ಕಥನ

Date:

Advertisements
ಆಧುನಿಕ ಕರ್ನಾಟಕದ ಚರಿತ್ರೆಯ ಕುತೂಹಲಕಾರಿ ನೋಟವನ್ನು ಕಾಣಬಯಸುವವರಿಗೆ; ಮುಖ್ಯವಾಗಿ ಕನ್ನಡ ಪತ್ರಿಕೋದ್ಯಮದ ಅರೆಶತಮಾನದ ಚರಿತ್ರೆಯನ್ನು ಅಧ್ಯಯನ ಮಾಡಬಯಸುವವರಿಗೆ 'ಪತ್ರಕರ್ತನ ಪಯಣ' ಒಂದು ಆಕರಗ್ರಂಥವಾಗಿ ಒದಗಿಬರುತ್ತದೆ.

ಕನ್ನಡ ಪತ್ರಿಕಾರಂಗದಲ್ಲಿ ‘ಪ್ರಜಾವಾಣಿ’ಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಇದು ನಾಡಿನ ಜನಮಾನಸವನ್ನು ಜಾತ್ಯತೀತ ನೆಲೆಯಲ್ಲಿ ರೂಪಿಸುತ್ತ ಬಂದ ಪತ್ರಿಕೆ. ಪತ್ರಿಕೆಯ ಈ ನಿಲುವಿಗೆ ಧಕ್ಕೆಯೊದಗಿದ ಸಂದರ್ಭಗಳೂ ಇವೆ. ಈ ಸಂದರ್ಭಗಳ ಸೃಷ್ಟಿಗೆ ಎರಡು ಕಾರಣಗಳನ್ನು ಕೊಡಬಹುದು. ಒಂದು ಆಧುನಿಕ ಕಾಲಮಾನದಲ್ಲಿನ ಪೈಪೋಟಿಯ ಮಾರುಕಟ್ಟೆಯಲ್ಲಿ ತನ್ನ ಗ್ರಾಹಕಸಮೂಹವಾದ ಓದುಗರನ್ನು ಹಿಡಿದಿಟ್ಟುಕೊಳ್ಳಲು ‘ಎಲ್ಲಾ’ ವರ್ಗದ ಓದುಗರನ್ನು ತಣಿಸಬೇಕಾದ ಅನಿವಾರ್ಯತೆ. ಎರಡನೆಯದು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲ ಪತ್ರಕರ್ತರ ನಿಲುವುಗಳು ಜಾಣಮಾರ್ಗದಲ್ಲಿ ಪತ್ರಿಕೆಯೊಳಗೆ ನುಸುಳುತ್ತಿದ್ದುದು. ಇಂತಹ ‘ಪ್ರಜಾವಾಣಿ’ಯಲ್ಲಿ ಸುದೀರ್ಘ ಮೂವತ್ತನಾಲ್ಕು ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಸುಮಾರು ಒಂದು ದಶಕದ ಹಿಂದೆ ನಿವೃತ್ತಿ ಹೊಂದಿದ ಲಕ್ಷ್ಮಣ ಕೊಡಸೆ ಅವರು ಇಲ್ಲಿನ ತಮ್ಮ ಅನುಭವಗಳನ್ನು ‘ಪತ್ರಕರ್ತನ ಪಯಣ’ ಕೃತಿಯಲ್ಲಿ ನಿರೂಪಿಸಿದ್ದಾರೆ.

ಲಕ್ಷ್ಮಣ ಕೊಡಸೆ ಅವರು ಕಥೆ, ಕಾದಂಬರಿ, ಅಂಕಣ ಬರೆಹಗಳ ಮೂಲಕ ಸಾಹಿತಿಯಾಗಿಯೂ ಗುರುತಿಸಿಕೊಂಡವರು. ಬಹುಷಃ ಈ ಕಾರಣದಿಂದಾಗಿಯೇ ‘ಪತ್ರಕರ್ತನ ಪಯಣ’ ಕೃತಿಯು ಆತ್ಮಕಥೆಯ ಸ್ವರೂಪ ಪಡೆದಿದೆ. ಇಂತಹ ಆತ್ಮಕಥೆಯಲ್ಲಿ ಹಲವು ಕಥನಗಳಿವೆ.

  1. ಮಲೆನಾಡಿನ ಅತಿಪುಟ್ಟ ಹಳ್ಳಿಯಿಂದ ಬಂದ ಹಿಂದುಳಿದ ಸಮುದಾಯದ ವಿದ್ಯಾವಂತ ಯುವಕನೋರ್ವ ಬೆಂಗಳೂರಿನಂತಹ ಬೃಹತ್ ನಗರದಲ್ಲಿ ತನ್ನ ಮಿತಿಗಳನ್ನೆಲ್ಲ ಮೀರಿ ಅರಳಿದ ಕಥನ.
  2. ಈ ಅರಳುವಿಕೆಗೆ ಕಾರಣವಾದ ‘ಪ್ರಜಾವಾಣಿ’ ಪತ್ರಿಕೆಗೆ ದೆಹಲಿಯ ಜೆಎನ್‌ಯು ಶಿಕ್ಷಣದ ಪ್ರಭಾವದಿಂದ ಬಂದ ಪತ್ರಿಕೆಯ ಮಾಲೀಕರ ಕುಟುಂಬದ ಯುವಕ ನೀಡಿದ ಸಾಮಾಜಿಕ ನ್ಯಾಯದ ಸ್ಪರ್ಶ.
  3. ಹಳ್ಳಿಯಿಂದ ಬಂದ ಪತ್ರಕರ್ತನ ಬೆರಗುಗಣ್ಣಿಗೆ ಕಂಡ ರಾಜ್ಯದ ರಾಜಕೀಯ ವ್ಯೂಹಗಳ ರೋಚಕ ಚರಿತ್ರೆ.

ಲೇಖಕರು 1975ರಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಮುಗಿಸಿ, ಉದ್ಯೋಗಕ್ಕಾಗಿ ಅಲೆಯುತ್ತ ‘ಜನಪ್ರಗತಿ’ ಮತ್ತು ‘ಉದಯರವಿ’ ಪತ್ರಿಕೆಯಲ್ಲಿ ಪತ್ರಿಕೋದ್ಯಮದ ಪ್ರಾಥಮಿಕ ಪಾಠಗಳನ್ನು ಕಲಿತ ನಂತರ ಅವಕಾಶ ಒದಗಿ ಬಂದಿದ್ದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ. ಆರಂಭದಲ್ಲಿಯೇ ಲೇಖಕರು ಹಳ್ಳಿಯ ತಮ್ಮ ಬಾಲ್ಯ, ತಮ್ಮ ಕುಟುಂಬದ ಪರಿಸರ ತಾವು ಪತ್ರಕರ್ತನಾಗಿ ಶ್ರದ್ಧೆ, ಪ್ರಾಮಾಣಿಕತೆ ಮತ್ತು ನೈತಿಕಎಚ್ಚರವನ್ನು ಕಾಯ್ದುಕೊಳ್ಳಲು ನೆರವಾದ ಪರಿಯನ್ನು ವಿನಮ್ರವಾಗಿ ನೆನೆದುಕೊಂಡಿದ್ದಾರೆ.

Advertisements

ಇದನ್ನು ಓದಿದ್ದೀರಾ?: ಜಾತ್ಯತೀತ, ಸಮಾಜವಾದ ಬೇಡ; ಇದು ನೂರಕ್ಕೆ ನೂರು ಮೀಸಲಾತಿ ಪಡೆದವರ ಗೊಣಗಾಟ

ಪತ್ರಕರ್ತರಾಗಿ ಮುಖ್ಯಮಂತ್ರಿ, ಪ್ರಧಾನಮಂತ್ರಿಗಳನ್ನು ಅತಿ ಹತ್ತಿರದಿಂದ ನೋಡುವ, ಮಾತನಾಡಿಸುವ ಅವಕಾಶ ದೊರೆತದ್ದನ್ನು ಧನ್ಯತೆಯಿಂದ ಬಣ್ಣಿಸುವಾಗ ಗ್ರಾಮೀಣ ಮನಸ್ಸಿನ ಮುಗ್ಧತೆ ಕಾಣುತ್ತದೆ. ಹಿರಿತನಕ್ಕೋ, ಜಾತಿ ಕಾರಣಕ್ಕೋ ತಮ್ಮ ಡೆಸ್ಕಿನ ಹಿರಿಯರಿಂದ ಅನುಭವಿಸಿದ ನೋವು, ಅವಮಾನ ಮತ್ತು ವರ್ಗಾವಣೆಯ ಶಿಕ್ಷೆಗಳ ಬಗ್ಗೆ ನಿರ್ಭಾವುಕವಾಗಿ ದಾಖಲಿಸಿದ್ದಾರೆ. ಅದೇ ರೀತಿ ಜಾತಿ, ಹಿರಿತನ ಮೀರಿ ತನಗೆ ಪ್ರೋತ್ಸಾಹಿಸಿದ ಹಿರಿಯರನ್ನು ಕೃತಜ್ಞತೆಯಿಂದ ನೆನೆದಿದ್ದಾರೆ. ಹಿಂದುಳಿದ ಬಡಕುಟುಂಬದಿಂದ ಬಂದ ತಮಗೆ ‘ಪ್ರಜಾವಾಣಿ’ ಮೂರು ದಶಕಗಳ ಕಾಲ ಉದ್ಯೋಗಕೊಟ್ಟು ಸಲಹಿದ್ದನ್ನು ಮತ್ತೆ ಮತ್ತೆ ನೆನೆಸಿಕೊಂಡಿದ್ದಾರೆ.

ಮೂರು ದಶಕಗಳ ‘ಪತ್ರಕರ್ತನ ಪಯಣ’ದಲ್ಲಿ ಮೂರು ದಶಕಗಳ ಭಾರತದ, ಅದರಲ್ಲೂ ನಿರ್ದಿಷ್ಟವಾಗಿ ಕರ್ನಾಟಕದ ಪ್ರಮುಖ ರಾಜಕೀಯ ಸ್ಥಿತ್ಯಂತರಗಳ ಒಳಹೊರಗನ್ನು ಸಾಕಷ್ಟು ವಸ್ತುನಿಷ್ಠವಾಗಿ ಕಣ್ಣಿಗೆ ಕಟ್ಟುವಂತೆ, ಒಂದು ಸಾಕ್ಷ್ಯಚಿತ್ರದಂತೆ ಓದುಗರ ಮುಂದೆ ತೆರೆದಿಡುತ್ತಾರೆ. ಇಲ್ಲಿ ದೇವರಾಜ ಅರಸು ಮತ್ತು ಬಂಗಾರಪ್ಪ ಅವರಿಗೆ ಆದ ಅನ್ಯಾಯಗಳ ಬಗ್ಗೆ ಸಾತ್ವಿಕ ಸಿಟ್ಟಿದೆ. ಮೇಲ್ವರ್ಗದಿಂದ ಬಂದ ಪತ್ರಕರ್ತರ ಪಕ್ಷಪಾತತನವೂ ಕೂಡ ಹಿಂದುಳಿದ ವರ್ಗದಿಂದ ಬಂದ ಈ ನಾಯಕರ ಪತನಕ್ಕೆ ಕಾರಣವಾಯಿತು ಎಂದು ಸಾಂದರ್ಭಿಕ ಸಂಗತಿಗಳ ಮೂಲಕವೇ ಲೇಖಕರು ನಿರೂಪಿಸುತ್ತಾರೆ.

ನಮ್ಮ ಸಮಾಜದ ಜಾತಿವ್ಯವಸ್ಥೆ ನಾಡಿನ ಎಲ್ಲ ಕ್ಷೇತ್ರಗಳಂತೆ ಪತ್ರಿಕಾಕ್ಷೇತ್ರವನ್ನು ಆವರಿಸಿದೆ. ಅಕ್ಟೋಬರ್ 14, 2022ರ ‘ದಿ ಹಿಂದೂ’ ಪತ್ರಿಕೆಯ ಸಂಶೋಧನಾ ವರದಿಯಂತೆ ಭಾರತೀಯ ಪತ್ರಿಕೋದ್ಯಮದ ಮುಂದಾಳತ್ವ ಶೇಕಡ 90ರಷ್ಟು ಮೇಲ್ಜಾತಿಗಳ ಕೈಯಲ್ಲಿದೆ. ಕೆಳವರ್ಗದ ಜನರಿಗೆ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಸಿಕ್ಕರೂ ಅದರ ಸ್ವರೂಪ ಭಿನ್ನವಾಗಿಯೇ ಇರುತ್ತದೆ. ಲೇಖಕರು ಎಂಬತ್ತರ ದಶಕದಲ್ಲಿ ಪ್ರಜಾವಾಣಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಒಂದಿಬ್ಬರು ಮೇಲ್ಜಾತಿಯ ನೌಕರರು ಮಧ್ಯಾಹ್ನದ ಪಾಳಿಯಲ್ಲಿ ಕೆಲಸ ಮಾಡಲು ಬಂದಾಗ ಬೆಳಗಿನ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತರು ಕುಳಿತಿದ್ದ ಕುರ್ಚಿಗಳನ್ನು ಬದಲಾಯಿಸಿಕೊಂಡು ಕುಳಿತುಕೊಳ್ಳುತ್ತಿದ್ದುದನ್ನು ನೆನಪು ಮಾಡಿಕೊಂಡಿದ್ದಾರೆ. ಜಾತ್ಯತೀತ ನಿಲುವು ಪ್ರತಿಪಾದಿಸುವ ಪ್ರಜಾವಾಣಿಯಂತಹ ಪತ್ರಿಕೆಯ ಆವರಣದಲ್ಲಿಯೇ ಜಾತಿಗ್ರಸ್ಥ ಪತ್ರಕರ್ತರಿದ್ದರಲ್ಲ ಎಂದು ದುಗುಡವಾಗುತ್ತದೆ. ಪತ್ರಿಕೆಯ ಆಡಳಿತವ್ಯವಸ್ಥೆಯ ಗಮನಕ್ಕೆ ತಾರದೆ ಒಬ್ಬರ ಅವಕಾಶವನ್ನು ತಾವೇ ನುಂಗಿ ಹಾಕುವ ‘ಬುದ್ಧಿವಂತ’ ಪತ್ರಕರ್ತರ ಹಿಕ್ಮತ್ತುಗಳನ್ನು ಲೇಖಕರು ಬಹಿರಂಗಪಡಿಸುತ್ತಾರೆ. ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಈ ಬಗೆಯಲ್ಲಿ ಉಡುಪಿಯ ಪತ್ರಕರ್ತ ರಾಮಕೃಷ್ಣಮೂರ್ತಿ ಆಗುತ್ತಿದ್ದ ಅನ್ಯಾಯವನ್ನು ನಿಷ್ಠುರ ಕ್ರಮದಿಂದ ತಡೆದ ಪ್ರಕರಣ ಇದಕ್ಕೊಂದು ಉದಾಹರಣೆ.

deccanherald import sites dh files gallery images 2023 06 20 hk2
ಕೆ.ಎನ್. ಹರಿಕುಮಾರ್

ಲೇಖಕರು ಪ್ರಜಾವಾಣಿಗೆ ಪ್ರವೇಶಿಸುವಾಗ ಅವರ ಜತೆಗೆ ಇನ್ನೂ ಐದು ಮಂದಿ ಒಂದೇ ಬಾರಿಗೆ ಪ್ರಜಾವಾಣಿಗೆ ಪತ್ರಿಕಾ ನೌಕರರಾಗಿ ಸೇರ್ಪಡೆಯಾಗುತ್ತಾರೆ. ಈ ಆರೂ ಮಂದಿಯು ಸಮಾಜದ ಅವಕಾಶವಂಚಿತ ಸಮುದಾಯದಿಂದ ಬಂದವರು. ಇವರ ಆಯ್ಕೆಯ ಹಿಂದೆ ಪತ್ರಿಕೆಯ ಮಾಲೀಕ ಕುಟುಂಬದ ಕೆ.ಎನ್.ಹರಿಕುಮಾರ್ ಅವರ ಪಾತ್ರವಿತ್ತು. ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದಿಂದ ಶಿಕ್ಷಣ ಮುಗಿಸಿ ಬಂದಿದ್ದ ಹರಿಕುಮಾರ್ ಅವರು ಪತ್ರಿಕಾಸಂಸ್ಥೆಯ ಒಳಗೆ ಸಾಮಾಜಿಕನ್ಯಾಯ ಅನುಷ್ಠಾನಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಆ ನಂತರ ಸಾಕಷ್ಟು ಸಮಾಜದ ಕೆಳಹಂತದಿಂದ ಬಂದವರು ಇಲ್ಲಿ ಪತ್ರಕರ್ತರಾಗಿ ಬೆಳೆದರು. ಇದು ಪ್ರಜಾವಾಣಿಯನ್ನು ಇತರ ಪತ್ರಿಕೆಗಳಿಗಿಂತ ಭಿನ್ನವಾಗಿ ಜನಪರವಾಗಿ, ಸಮಾಜಮುಖಿಯಾಗಿ ರೂಪಿಸಲು ನೆರವಾಯಿತು.

ಇದನ್ನು ಓದಿದ್ದೀರಾ?: ಡಾ. ಬಿ.ಆರ್. ಅಂಬೇಡ್ಕರ್ ಪೀಪಲ್ ಎಜುಕೇಷನ್ ಸೊಸೈಟಿ ಸ್ಥಾಪಿಸಿದ್ದೇಕೆ?

ಗೋಕಾಕ್ ವರದಿಯ ಜಾರಿಯಿಂದ ಭಾಷಿಕ ಅಲ್ಪಸಂಖ್ಯಾತರ ಹಕ್ಕಿಗೆ ಧಕ್ಕೆ ಬರುತ್ತದೆಂಬ ಆತಂಕವನ್ನು ಹರಿಕುಮಾರ್ ವ್ಯಕ್ತಪಡಿಸುತ್ತಾರೆ. ಇದು ಅವರು ಹೊಂದಿದ್ದ ಸಾಮಾಜಿಕನ್ಯಾಯದ ಕಾಳಜಿಗೆ ಉದಾಹರಣೆಯಾಗಿದೆ. ಅವರ ಕಾಳಜಿ ಕೇವಲ ಭಾವನಾತ್ಮಕವಾಗಿ ಮಾತ್ರ ಉಳಿಯದೆ ಈ ವಿಷಯ ಕುರಿತಂತೆ ಅವರು ಪ್ರಜಾವಾಣಿಯಿಂದ ಒಂದು ಪುರವಣಿಯನ್ನೇ ಹೊರತರುತ್ತಾರೆ. ಗೋಕಾಕ್ ವರದಿಯ ಪೂರ್ಣ ಅನುಷ್ಠಾನದ ಒತ್ತಾಯದಲ್ಲಿ ಭಾಷಿಕ ಅಲ್ಪಸಂಖ್ಯಾತರಿಗೆ ಆಗುವ ಅನ್ಯಾಯದ ಅಪಾಯದ ಬಗ್ಗೆ ಗೋಕಾಕ್ ವರದಿಯ ಪರವಾದ ಬೃಹತ್ ಆಂದೋಲನದ ಸಂದರ್ಭದಲ್ಲಿ ಯು.ಆರ್ ಅನಂತಮೂರ್ತಿಯವರೂ ಎಚ್ಚರಿಸಿದ್ದರು. ಕನ್ನಡ ಸಾಹಿತ್ಯ, ಚಳವಳಿಗಳ ಬಗ್ಗೆ ನಿಕಟಸಂಪರ್ಕ, ಅರಿವು ಹೊಂದಿದ್ದ ಹರಿಕುಮಾರ್ ಅವರಿಗೆ ಅನಂತಮೂರ್ತಿ ಅವರ ನಿಲುವು ಪ್ರೇರಣೆ ಒದಗಿಸಿರಬಹುದು. ಪ್ರಜಾವಾಣಿಯಲ್ಲಿ ಅವಕಾಶವಂಚಿತ ಸಮುದಾಯಗಳ ಜನರಿಗೆ ಅವಕಾಶ ಕಲ್ಪಿಸುವ ಚಿಂತನೆ ಕೂಡ ಜೆಎನ್‌ಯು ಶಿಕ್ಷಣದ ಜೊತೆಗೆ ಡಿ.ಆರ್.ನಾಗರಾಜ್ ಅವರ ಒಡನಾಟದ ಕಾರಣದಿಂದ ಬಂದಿತ್ತೆಂದು ತಿಳಿಯಲ್ಪಟ್ಟಿದ್ದೇನೆ.

ತಮ್ಮ ಸಮಾಜವಾದಿ ಚಿಂತನೆಯ ಕಾರಣದಿಂದ ಕಾಲಾನುಕ್ರಮದಲ್ಲಿ ಪತ್ರಿಕೆಯನ್ನು ಪ್ರವೇಶಿಸಿದ ಐದು ಜನ ಪತ್ರಕರ್ತರು ಒಮ್ಮೆಗೆ ಸಂಸ್ಥೆಗೆ ರಾಜೀನಾಮೆ ನೀಡಿದ್ದು ಹರಿಕುಮಾರ್ ಅವರಿಗೆ ಆಘಾತ ತಂದಿತು. ಇದೇ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿ ನಿರ್ಗಮಿಸಿದ ವಡ್ಡರ್ಸೆ ರಘುರಾಮಶೆಟ್ಟರು ಆರಂಭಿಸಿದ ‘ಮುಂಗಾರು’ ಪತ್ರಿಕೆಗೆ ಅವರು ತೆರಳಿದರು. ಇಲ್ಲಿಂದ ಹರಿಕುಮಾರ್ ಅವರು ಸಂಸ್ಥೆಯ ನೇಮಕದ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯನ್ನು ಬದಿಗೆ ಸರಿಸಿ ಪ್ರತಿಭೆ, ಅನುಭವ, ಲಿಖಿತ ಪರೀಕ್ಷೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳತೊಡಗಿದರು ಎಂದು ಲೇಖಕರು ದಾಖಲಿಸುತ್ತಾರೆ. 

ಪತ್ರಿಕಾಕ್ಷೇತ್ರಕ್ಕೆ ಬಹುದೊಡ್ಡ ತಿರುವು ನೀಡಿದ ಪ್ರಜಾವಾಣಿ ಪತ್ರಿಕೆಯ ಹೆಚ್ಚುಗಾರಿಕೆಯನ್ನು ಕೃತಿಯ ಉದ್ದಕ್ಕೂ ಸಂದರ್ಭಾನುಸಾರ ನಿರೂಪಿಸುವ ಲೇಖಕರು ಅದೇ ಹೊತ್ತಿಗೆ ಪ್ರಜಾವಾಣಿ ಅಥವಾ ಅಲ್ಲಿನ ಹಿರಿಯ ಪತ್ರಕರ್ತರು ತೆಗೆದುಕೊಂಡ ಕೆಲವು ನಿಲುವುಗಳನ್ನು ದಾಖಲಿಸಲು ಹಿಂದೇಟು ಹಾಕುವುದಿಲ್ಲ. ಮುಖ್ಯವಾಗಿ ಇಲ್ಲಿ ಪತ್ರಕರ್ತರಾಗಿದ್ದ ವಡ್ಡರ್ಸೆ ರಘುರಾಮಶೆಟ್ಟರಿಗೆ ಅವರ ಅಭಿಪ್ರಾಯಗಳನ್ನು ಮುಕ್ತವಾಗಿ ಬರೆಯಲಾಗದ ಕೆಲವು ಸಂದರ್ಭಗಳು ಮತ್ತು ದೇವರಾಜ ಅರಸು ಅವರು ಸಮಾಜದ ಅವಕಾಶವಂಚಿತ ಜಾತಿ ಸಮುದಾಯಗಳಿಗೆ ನೀಡಿದ ರಾಜಕೀಯ ಪ್ರಾತಿನಿಧ್ಯ ಮತ್ತು ಅವರು ಮುಖ್ಯಮಂತ್ರಿಗಳಾಗಿ ಜಾರಿಗೆ ತಂದ ಜನಪರ ಯೋಜನೆಗಳ ಕುರಿತು ಅಗತ್ಯವಿದ್ದಷ್ಟು ಪತ್ರಿಕೆ ಪ್ರಾಮುಖ್ಯತೆ ನೀಡದ ಬಗ್ಗೆ ಲೇಖಕರಿಗೆ ಅಸಮಾಧಾನವಿದೆ.

ಮೂರು ದಶಕದ ಪಯಣದಲ್ಲಿ ತಾವು ನಿರೂಪಿಸುವ ಪ್ರತಿಯೊಂದು ಘಟನೆಯ ದಿನ, ವಾರ, ಗಂಟೆಯ ಬೆಳವಣಿಗೆಯನ್ನು ದಾಖಲಿಸುವ ಲೇಖಕರ ಅಗಾಧ ನನಪಿನ ಶಕ್ತಿ ಅಚ್ಚರಿ ಹುಟ್ಟಿಸುತ್ತದೆ. ಕೆಲವು ಸಂಗತಿಗಳ ಪುನರಾವರ್ತನೆಯನ್ನು ಎಡಿಟ್ ಮಾಡುವ ಅಗತ್ಯವಿದೆ. 

ಆಧುನಿಕ ಕರ್ನಾಟಕದ ಚರಿತ್ರೆಯ ಕುತೂಹಲಕಾರಿ ನೋಟವನ್ನು ಕಾಣಬಯಸುವವರಿಗೆ ‘ಪತ್ರಕರ್ತನ ಪಯಣ’ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಮುಖ್ಯವಾಗಿ ಕನ್ನಡಪತ್ರಿಕೋದ್ಯಮದ ಅರೆಶತಮಾನದ ಚರಿತ್ರೆಯನ್ನು ಅಧ್ಯಯನ ಮಾಡಬಯಸುವವರಿಗೆ ಈ ಕೃತಿ ಒಂದು ಆಕರಗ್ರಂಥವಾಗಿ ಒದಗಿಬರುತ್ತದೆ.

1417716 531606640266610 1974048228 o
ಡಾ. ಸರ್ಜಾಶಂಕರ್ ಹರಳಿಮಠ
+ posts

ಲೇಖಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ | ಬಾನು ಮುಷ್ತಾಕ್‌ಗೆ ವಿರೋಧ; ಮಹಿಳಾ ವಿರೋಧಿಗಳ ಹಳಹಳಿಕೆ

ಕೆ ಎಸ್ ನಿಸಾರ್ ಅಹಮದ್ ಅವರು ನಾಡಹಬ್ಬ ಉದ್ಘಾಟನೆ ಮಾಡಿದಾಗ ಇವರೆಲ್ಲ...

ನಿರ್ಲಕ್ಷ್ಯಕ್ಕೆ ಗುರಿಯಾಗಿ ದುಸ್ಥಿತಿಗೆ ಬಿದ್ದ ರಾಜ್ಯ ಹೆದ್ದಾರಿ; ಶಾಸಕರ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಲಬುರಗಿ ಜಿಲ್ಲೆಯ ರಾಜ್ಯ ಹೆದ್ದಾರಿ 125, ಶಹಾಬಾದ್ ತಾಲೂಕಿನಿಂದ ಜೇವರ್ಗಿಯ ರಾಷ್ಟ್ರೀಯ...

Download Eedina App Android / iOS

X