ಜನರೇ ನಮ್ಮ ಪಾಲಿನ ದೇವರು, ಜನರ ಸೇವೆಗೆ ಸದಾ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

Date:

Advertisements

“ಜನರೇ ನಮ್ಮ ಪಾಲಿನ ದೇವರು, ಜನರ ಸಮಸ್ಯೆ ಸರ್ಕಾರದ ಸಮಸ್ಯೆ, ಜನರ ಪರಿಹಾರವೇ ರಾಜ್ಯದ ಪರಿಹಾರ. ಜನರ ಸೇವೆಗೆ ನಾವು ಸದಾ ಬದ್ಧ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲು/ಕುಂದು-ಕೊರತೆಗಳನ್ನು ಆಲಿಸುವ ಸಲುವಾಗಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಯಲಹಂಕ, ಬ್ಯಾಟರಾಯನಪುರ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಯಲಹಂಕದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, “ಇಲ್ಲಿಗೆ ನಾನೊಬ್ಬನೇ ಬಂದಿಲ್ಲ. ಪೊಲೀಸ್ ಸೇರಿದಂತೆ ಸುಮಾರು 300 ಅಧಿಕಾರಿಗಳು ನಿಮ್ಮ ಸೇವೆಗೆ ಬಂದಿದ್ದೇವೆ. ನೀವು ನಮಗೆ ಅಧಿಕಾರ ನೀಡಿದ್ದೀರಿ. ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇನೆ. ಋಣ ತೀರಿಸುವ ವಿಚಾರದಲ್ಲಿ ಭೀಷ್ಮ ಧರ್ಮರಾಯನಿಗೆ ಒಂದು ಮಾತು ಹೇಳುತ್ತಾನೆ. ತಂದೆ ತಾಯಿ, ದೇವರು, ಗುರುಗಳು ಹಾಗೂ ಸಮಾಜ ಈ ನಾಲ್ಕು ಋಣವನ್ನು ನಾವು ತೀರಿಸಬೇಕಂತೆ. ಇವರ ಋಣವನ್ನು ಧರ್ಮದಿಂದ ತೀರಿಸಬೇಕು” ಎಂದರು.

Advertisements

“ಈ ಹಿಂದೆ ಅನೇಕರು ಬೆಂಗಳೂರಿನ ಮಂತ್ರಿಯಾಗಿ ಅವರ ಶೈಲಿಯಲ್ಲಿ ಕೆಲಸ ಮಾಡಿದ್ದಾರೆ. ನಾನು 35 ವರ್ಷಗಳ ಹಿಂದೆ ಶಾಸಕನಾದಾಗ ಪ್ರತಿ ವರ್ಷ ಪ್ರತಿ ಹಳ್ಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಅವರ ಕಷ್ಟ ಆಲಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದೆ. ಅದರಿಂದ ನಮ್ಮ ಮೇಲಿನ ಒತ್ತಡ ಕಡಿಮೆ ಆಗುತ್ತದೆ” ಎಂದು ತಿಳಿಸಿದರು.

“ಪ್ರತಿನಿತ್ಯ ಜನ ನಮ್ಮ ಮನೆ ಬಾಗಿಲಿಗೆ ತಮ್ಮ ಸಮಸ್ಯೆ ಹೊತ್ತುಕೊಂಡು ಬರುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಖ್ಯಮಂತ್ರಿಗಳು ಜನಸ್ಪಂದನ ಕಾರ್ಯಕ್ರಮ ಮಾಡಿ, ಎಲ್ಲ ಸಚಿವರಿಗೂ ಸೂಚನೆ ನೀಡಿದ್ದಾರೆ. ನಾನೂ ನನ್ನ ಕ್ಷೇತ್ರ ಹಾಗೂ ಆನೇಕಲ್‌ನಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿದ್ದೇನೆ. ಜನ ತಮ್ಮ ಆಸ್ತಿಗಳ ಖಾತೆ ವಿಚಾರ, ಪಿಂಚಣಿ ಸೇರಿದಂತೆ ಸರ್ಕಾರದ ಸವಲತ್ತುಗಳ ಸಮಸ್ಯೆ ಹೊತ್ತು ತರುತ್ತಾರೆ. ಅಧಿಕಾರಿಗಳು ಗೌರವ ನೀಡದಿದ್ದಾಗ ಜನ ರಾಜಕಾರಣಿಗಳ ಬಳಿ ಬರುತ್ತಾರೆ. ಅಧಿಕಾರಿಗಳು ಲಂಚ ಕೇಳಿ ಹಿಂಸೆ ಕೊಟ್ಟಾಗ ಜನ ನಮ್ಮತ್ತ ಬರುತ್ತಾರೆ. ಇಂತಹ ದೂರುಗಳು ಹೆಚ್ಚುತ್ತಿವೆ. ಇವುಗಳನ್ನು ತಪ್ಪಿಸಬೇಕು” ಎಂದರು.

“ಯಾರೇ ಲಂಚ ಕೇಳಿದರೂ ನಿರ್ದಾಕ್ಷಿಣ್ಯವಾಗಿ ದೂರು ನೀಡಿ. ಯಾರೇ ಆಗಲಿ ನನ್ನ ಹೆಸರು, ಕೃಷ್ಣಬೈರೇಗೌಡ, ವಿಶ್ವನಾಥ್, ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ ಯಾರ ಹೆಸರಲ್ಲಿ ಹಣ ಕೇಳಿದರೂ ನಮ್ಮ ಗಮನಕ್ಕೆ ತನ್ನಿ, ನಾವು ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಕೆ.ಆರ್.ಪುರದ ಕಾರ್ಯಕ್ರಮದಲ್ಲಿ ನಾನೇ ಇಂತಹ ಹತ್ತು ಪ್ರಕರಣಗಳನ್ನು ನೋಡಿದ್ದೇನೆ. ಇದನ್ನು ಬಗೆಹರಿಸಿ ಅವರಿಗೆ ಹಣ ನೀಡಲಾಗುವುದು” ಎಂದರು.

“ಬೆಂಗಳೂರಿನಲ್ಲಿ ಸ್ವಯಂ ತೆರಿಗೆ ವ್ಯವಸ್ಥೆಯಲ್ಲಿ ಆಸ್ತಿಗೆ ಸರಿಯಾದ ಲೆಕ್ಕದಲ್ಲಿ ತೆರಿಗೆ ಪಾವತಿ ಮಾಡುತ್ತಿಲ್ಲ. ಹೀಗಾಗಿ, ನಾವು ಸಮೀಕ್ಷೆ ಮಾಡುತ್ತಿದ್ದೇವೆ. ತೆರಿಗೆ ಪಾವತಿ ಮಾಡದಿದ್ದರೆ ರಸ್ತೆ ಮಾಡುವುದು, ನೀರು ನೀಡುವುದು ಹೇಗೆ? ಬೆಂಗಳೂರಿನಲ್ಲಿ 1.40 ಕೋಟಿ ಜನ ವಾಸ ಮಾಡುತ್ತಿದ್ದಾರೆ. ಇವರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಬೇಕು. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಹೆಬ್ಬಾಳ ಹಾಗೂ ಯಲಹಂಕ ನಂತರ ಕುಡಿಯುವ ನೀರು ಪೂರೈಸಬಾರದು ಎಂದು ಸಹಿ ಹಾಕಿಸಿದ್ದರು” ಎಂದು ವಿವರಿಸಿದರು.

“ಮೊನ್ನೆಯಷ್ಟೇ ಕುಡಿಯುವ ಉದ್ದೇಶಕ್ಕೆ 6 ಟಿಎಂಸಿ ನೀರನ್ನು ಪೂರೈಸಲು ನಿರ್ದೇಶನ ನೀಡಲಾಗಿದೆ. ಇನ್ನು ಒಂದೂವರೆ ಟಿಎಂಸಿ ನೀರು ಬಾಕಿ ಇದೆ. ಎತ್ತಿನಹೊಳೆ ನೀರು ಪೂರೈಕೆ, ಅಂತರ್ಜಲ ನೀರಿನ ಸದ್ಬಳಕೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಬೆಂಗಳೂರಿನಲ್ಲಿ ಕಸದ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಕಸ ತಂದು ಸುರಿಯುತ್ತಾರೆ. ಕಟ್ಟಡ ತ್ಯಾಜ್ಯವನ್ನು ರಸ್ತೆ ಬದಿ ಸುರಿದು ಹೋಗುತ್ತಾರೆ. ಇದನ್ನು ತಡೆಗಟ್ಟಿ ಬೆಂಗಳೂರಿನ ಸ್ವಚ್ಛತೆ ಕಾಪಾಡಲು ಕ್ಯಾಮೆರಾ ಅಳವಡಿಸುತ್ತಿದ್ದೇವೆ. ಈ ರೀತಿ ಕಸ ಸುರಿಯುವವರ ವಿರುದ್ಧ ಕೇಸ್ ದಾಖಲಿಸಲಾಗುವುದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಸಾಧ್ಯತೆ | ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದ ಎಸ್ಕಾಂಗಳು

“ಬೆಂಗಳೂರು ಯೋಜಿತ ನಗರವಲ್ಲ. ಹಿಂದೆ ಕೆಂಪೇಗೌಡರು ನಾಲ್ಕು ಸ್ತಂಭಗಳನ್ನು ಅಳವಡಿಸಿ ನಗರ ನಿರ್ಮಾಣ ಮಾಡಿದ್ದರು. ಆದರೆ, ಈಗ ಅದು ಐದಾರು ಪಟ್ಟು ವಿಸ್ತೀರ್ಣವಾಗಿದೆ. ಇಲ್ಲಿರುವ ಹವಾಮಾನ, ಶಿಕ್ಷಣ, ಆರೋಗ್ಯ ಸೌಲಭ್ಯದಿಂದ ಬೆಂಗಳೂರಿಗೆ ಬಂದವರು ವಾಪಸ್ ಹೋಗುವುದಿಲ್ಲ. ಹೀಗಾಗಿ ಬೆಂಗಳೂರಿನ ನಿರ್ವಹಣೆ ಬಹಳ ಮುಖ್ಯ. ಇಂದು ಇಲ್ಲಿ ಅಹವಾಲು ತರುವ ಜನರಿಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡಬಹುದೋ ನೀಡುತ್ತೇವೆ. ಒಂದು ವೇಳೆ ಪರಿಹಾರ ನೀಡಲು ಆಗದಿದ್ದರೆ, ಯಾವ ಕಾರಣಕ್ಕೆ ಪರಿಹಾರ ನೀಡಲು ಆಗುವುದಿಲ್ಲ ಎಂಬ ಕಾರಣವನ್ನು ತಿಳಿಸುತ್ತೇವೆ” ಎಂದು ಮಾಹಿತಿ ನೀಡಿದರು.

“ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಮೇಲೆ ಜನರ ಸೇವೆಯೇ ಜನಾರ್ದನ ಸೇವೆ ಎಂದು ಹೇಳುತ್ತಾರೆ. ನಾವು ನಿಮ್ಮನ್ನು ದೇವರಂತೆ ಕಂಡು ನಿಮ್ಮ ಸೇವೆ ಮಾಡುತ್ತೇವೆ. ಅದಕ್ಕಾಗಿ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಟಿ ಆಯಿತು. ಐದು ಗ್ಯಾರಂಟಿ ಯೋಜನೆಯಿಂದ ಜನರ ಕೈ ಗಟ್ಟಿಯಾಯಿತು. ನಿಮ್ಮ ಕೈ ಬಲಪಡಿಸಲು ನಾವು ಈ ಯೋಜನೆ ಕೊಟ್ಟು ಸೇವೆ ಮಾಡುತ್ತಿದ್ದೇವೆ. ಇಲ್ಲಿನ ಶಾಸಕರುಗಳು ಪರಾಜಿತ ಅಭ್ಯರ್ಥಿಗಳು ಕೆಲವು ಮನವಿ ಸಲ್ಲಿಸಿದ್ದಾರೆ. ಅವರ ಅರ್ಜಿಗಳನ್ನು ನಮ್ಮ ಅಧಿಕಾರಿಗಳಿಗೆ ನೀಡಿದ್ದೇವೆ” ಎಂದರು.

ಈ ವೇಳೆ ಕಂದಾಯ ಸಚಿವರು ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ, ಯಲಹಂಕ ಶಾಸಕ ವಿಶ್ವನಾಥ್, ದಾಸರಹಳ್ಳಿ ಶಾಸಕ ಮುನಿರಾಜು, ವಿಧಾನ ಪರಿಷತ್ ಸದಸ್ಯ ಎಂ.ಆರ್ ಸೀತಾರಾಮ್, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಾನಾ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X