“ಕೇವಲ ಬಾಯಿತಪ್ಪಿ ಈ ಮಾತನ್ನು ಅಮಿತ್ ಶಾ ಹೇಳಿಲ್ಲ. ಇದೇ ಅವರ ಅಸಲಿ ರೂಪ”
“ಅಂಬೇಡ್ಕರ್ ಹೆಸರು ಹೇಳುವುದು ಒಂದು ವ್ಯಸನವಾಗಿದೆ, ಹೀಗೆಯೇ ದೇವರುಗಳ ಹೆಸರುಗಳನ್ನು ಹೇಳಿದ್ದರೆ ಏಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು” ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಹಲವು ಸಂಘಟನೆಗಳು ಫ್ರೀಡಂ ಪಾರ್ಕ್‌ನಲ್ಲಿ ಸೇರಿ ಪ್ರತಿಭಟಿಸಿದವು.
ಅಮಿತ್ ಶಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಧಿಕ್ಕಾರ ಕೂಗಲಾಯಿತು. ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಚಿಂತಕ ಶಿವಸುಂದರ್ ಮಾತನಾಡಿ, “ನಾಲ್ಕು 400 ಸೀಟ್ ಬಂದಿಲ್ಲದೆಯೇ ಇಷ್ಟು ಮಾತನಾಡುತ್ತಿದ್ದಾರೆ. ಒಂದು ವೇಳೆ 400 ಸೀಟು ಗೆದ್ದಿದ್ದರೆ ಅವರು ಇನ್ನೆಷ್ಟು ಮಾತನಾಡುತ್ತಿದ್ದರು ಎಂಬುದನ್ನು ಲೆಕ್ಕಹಾಕಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ದಲಿತರ ಮತಗಳನ್ನು ಕಳೆದುಕೊಂಡಿದ್ದೇವೆ ಎಂದು ಅರಿವಾದ ಮೇಲೆ ‘ಸಂವಿಧಾನ ಸನ್ಮಾನ ಅಭಿಯಾನ’ ಆರಂಭಿಸಿದ್ದಾರೆ. ಸಂವಿಧಾನವನ್ನು ಕಾಂಗ್ರೆಸ್ ಪಕ್ಷ ಹಾಳುಗೆಡವಿದ್ದು, ನಾವು ಅದನ್ನು ಉಳಿಸುತ್ತಿದ್ದೇವೆ ಎಂದು ಬಿಜೆಪಿಯವರು ಬಿಂಬಿಸಿಕೊಳ್ಳುತ್ತಿದ್ದಾರೆ. ಇದರರ್ಥ- ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಉಳಿಸಿತು ಎಂದಲ್ಲ; ಆದರೆ ಸಂಘಪರಿವಾರದವರು ಅಗಾಧವಾದ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂಬುದು ಸತ್ಯ” ಎಂದು ತಿಳಿಸಿದರು.
“ಕೇವಲ ಬಾಯಿತಪ್ಪಿ ಈ ಮಾತನ್ನು ಅಮಿತ್ ಶಾ ಹೇಳಿಲ್ಲ. ಇದೇ ಅವರ ಅಸಲಿ ರೂಪ. ಗುಜರಾತಿನ ಸರ್ಕಾರಿ ಕಚೇರಿಗಳಲ್ಲಿಅಂಬೇಡ್ಕರ್ ಅವರ ಭಾವಚಿತ್ರವನ್ನು ಹಾಕುವುದಿಲ್ಲ. ಯಾಕೆಂದು ಆರ್‌ಟಿಐ ಮೂಲಕ ಪ್ರಶ್ನೆ ಮಾಡಿದಾಗ, ‘ಭಾರತ ಸರ್ಕಾರ 9 ಮಂದಿ ರಾಷ್ಟ್ರೀಯ ನಾಯಕರನ್ನು ಮಾತ್ರ ಪಟ್ಟಿ ಮಾಡಿದೆ. ಅಲ್ಲಿ ಅಂಬೇಡ್ಕರ್ ಹೆಸರಿಲ್ಲ’ ಎಂದಿತ್ತು ಸರ್ಕಾರ. ಆದರೆ ಆ 9 ಜನರಲ್ಲಿ ಸಂಘಪರಿವಾರದ ಶ್ಯಾಮ್ ಪ್ರಸಾದ್ ಮುಖರ್ಜಿ ಹೆಸರಿದೆ. ಸಂವಿಧಾನ ರಕ್ಷಕರು ನಾವೆನ್ನುವ ಬಿಜೆಪಿಯವರು ಇದರ ಬಗ್ಗೆ ಏನು ಹೇಳುತ್ತಾರೆ?” ಎಂದು ಪ್ರಶ್ನಿಸಿದರು.
ಭೀಮಾ ಕೋರೆಗಾಂವ್ ವಿಜಯಸ್ತೂಪಕ್ಕೆ ನಮಿಸಿದ ಕಾರಣ ಅಂಬೇಡ್ಕರ್ ಅವರನ್ನು ಆರ್‌ಎಸ್‌ಎಸ್‌ನ ಸರಸಂಘಚಾಲಕ ಗೋಳ್ವಲ್ಕರ್ ಅವರು ವಿಕೃತ ಎಂದು ಜರಿದಿದ್ದಾರೆ. ಇದು ಅವರ ಅಸಲಿ ಸ್ವರೂಪ. ಆರ್‌ಎಸ್‌ಎಸ್‌ನ ಮುಖಂಡ ಮೂಂಜೆ, ‘ಅಂಬೇಡ್ಕರ್‌ಗೆ ಸಹಾಯ ಮಾಡುವುದೆಂದರೆ ಹಾವಿಗೆ ಹಾಲೆರೆದಂತೆ’ ಎಂದು ಜರಿದಿದ್ದರು ಎಂದು ಶಿವಸುಂದರ್ ಉಲ್ಲೇಖಿಸಿದರು.
ಇದನ್ನೂ ಓದಿರಿ: ಅಂಬೇಡ್ಕರ್ ಮೇಲೆ ಅಮಿತ್ ಶಾ ಅಸಹನೆ; ಬಾಬಾ ಸಾಹೇಬರ ವಿರುದ್ಧ ಸಂಘಿಗಳ ದ್ವೇಷ ಹೊಸದಲ್ಲ!
ಹಿರಿಯ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯ್ಕ್ ಮಾತನಾಡಿ, “ಅಮಿತ್ ಶಾ ಅವರು ಸ್ವರ್ಗದ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಮತ್ತೆ ಭಗವಂತನ ಪ್ರಾರ್ಥನೆ ಮಾಡಿ ಅವರು ಸ್ವರ್ಗಕ್ಕೆ ಹೋದರೆ ಇಲ್ಲಿ ಜನ ಸುಖವಾಗಿ ಇರುತ್ತಾರೆ” ಎಂದು ವ್ಯಂಗ್ಯವಾಡಿದರು.
“ನಮಗೆ ಇಲ್ಲಿಯೇ ಸ್ವರ್ಗ ಇದೆ. ಇಲ್ಲಿ ಸಾಮರಸ್ಯ, ಸೌಹಾರ್ದತೆಯ ಸಮಾಜವನ್ನು ಕಟ್ಟುವುದಕ್ಕೆ ಬಾಬಾ ಸಾಹೇಬ್ ಮತ್ತು ಅವರ ಸಂವಿಧಾನವನ್ನು ಪದೇ ಪದೇ ನೆನೆಯುತ್ತೇವೆ. ಅದರ ಆಧಾರದಲ್ಲೇ ನಾವು ಮುನ್ನಡೆಯುತ್ತೇವೆ” ಎಂದು ಗುಡುಗಿದರು.
ಬರಹಗಾರ ವಿ.ಎಲ್.ನರಸಿಂಹಮೂರ್ತಿ ಮಾತನಾಡಿ, “ಅಮಿತ್ ಶಾ ಹಿನ್ನಲೆ ನೋಡಿದರೆ ಅವರು ಸಾರ್ವಜನಿಕ ಸ್ಥಾನಗಳಲ್ಲಿ ಇರಬೇಕಾದ ವ್ಯಕ್ತಿಯಲ್ಲ. ಗೂಂಡಾ ಪ್ರವೃತ್ತಿ ಅವರದ್ದು. ಬಾಬಾ ಸಾಹೇಬರ ಬಗ್ಗೆ ನಯಾಪೈಸೆ ಅರಿವು ಅಮಿತ್ ಶಾಗೆ ಇಲ್ಲ. ಆತನಲ್ಲಿ ಇರುವುದು ಕೇವಲ ಅಜ್ಞಾನ” ಎಂದು ವಾಗ್ದಾಳಿ ನಡೆಸಿದರು.
ರೈತ ಮುಖಂಡ ವೀರಸಂಗಯ್ಯ, ವಕೀಲ ವಿನಯ್ ಶ್ರೀನಿವಾಸ್, ಕವಿ ಹುಲಿಕುಂಟೆಮೂರ್ತಿ, ಆರ್‌ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ತಮಟೆ ಮೀಡಿಯಾ, ದಲಿತ ವಿದ್ಯಾರ್ಥಿ ಪರಿಷತ್, ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟ, ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್, ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.