ಜನ ಚಳವಳಿಗಳ ಬಜೆಟ್‌ ಅಧಿವೇಶನ; ಅವಲೋಕನ ಮತ್ತು ಆಗ್ರಹ

Date:

Advertisements

ಕೇಂದ್ರ ಬಜೆಟ್‌ ಸಂಪೂರ್ಣವಾಗಿ ಜನ ವಿರೋಧಿಯಾಗಿದೆ. ಕಾರ್ಪೊರೇಟ್‌ ಪರವಾಗಿದೆ. ರಾಜ್ಯದ ಹಕ್ಕುಗಳನ್ನು ಹರಣ ಮಾಡುವಂಥದ್ದಾಗಿದೆ. ಕೇಂದ್ರ ಸರ್ಕಾರವು ಕೃಷಿಯನ್ನು ಸಂಪೂರ್ಣವಾಗಿ ಖಾಸಗಿ ಕಾರ್ಪೋರೇಟುಗಳಿಗೆ ಒಪ್ಪಿಸಲು ಹಾತೊರೆಯುತ್ತಿದೆ ಎಂದು ಜನ ಚಳವಳಿ ಆರೋಪಿಸಿದೆ.

ಎರಡು ದಿನಗಳ ಕಾಲ ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಜನ ಚಳವಳಿಗಳ ಬಜೆಟ್‌ ಅಧಿವೇಶನ ಅರ್ಥಪೂರ್ಣವಾಗಿ ಸಮಾರೋಪಗೊಂಡಿದೆ. ಎರಡು ದಿನಗಳ ಕಾಲ ನಡೆದ ಈ ವಿಶಿಷ್ಟ ಅಧಿವೇಶನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್‌ ಮತ್ತು ಆ ಬಜೆಟ್‌ ಗಳಿಗೆ ಪ್ರೇರಣೆಯಾಗಿರುವ ನೀತಿಗಳ ಕುರಿತು ಆಳವಾದ ಅವಲೋಕನ ನಡೆಸಲಾಯಿತು. ವಿವಿಧ ಜನ ವರ್ಗಗಳ ದೃಷ್ಟಿಯಿಂದ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳ ದೃಷ್ಟಿಯಿಂದ ಆಳುವ ನೀತಿಗಳನ್ನು ವಿವರವಾದ ವಿಶ್ಲೇಷಣೆಗೆ ಒಳಪಡಿಸಲಾಯಿತು.

ಕಾರ್ಮಿಕ ವರ್ಗದ ಎಲ್ಲಾ ಹಕ್ಕುಗಳನ್ನು ಕಸಿದು ಗುಲಾಮಿ ಕಾರ್ಮಿಕರನ್ನು ಸೃಷ್ಟಿಸಲು ಬಯಸುತ್ತಿದೆ. ಈ ಉದ್ದೇಶಗಳೊಂದಿಗೆ ಸಾಲು ಸಾಲು ತಿದ್ದುಪಡಿ ಕಾಯ್ದೆಗಳನ್ನು ತರಲಾಗುತ್ತಿದೆ. ಈಗ ಕೇಂದ್ರ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ National Policy Framework for Agricultural Marketing (NPFAM) (ಕೃಷಿ ಉತ್ಪನ್ನಗಳ ಮಾರುಕಟ್ಟೆ ಕುರಿತ ರಾಷ್ಟ್ರೀಯ ಚೌಕಟ್ಟು ನೀತಿ) ಹಾಗೂ 4 ಕಾರ್ಮಿಕ ಕೋಡ್‌ಗಳು ದುಡಿಯುವ ವರ್ಗಗಳ ಭವಿಷ್ಯವನ್ನೇ ನಾಶ ಮಾಡುವ ಅತಿ ಅಪಾಯಕಾರಿ ನೀತಿಗಳಾಗಿವೆ. ಜಿಎಸ್‌ಟಿ ಎಂಬುದು ಜನಸಾಮಾನ್ಯರನ್ನು ಸುಲಿಯುವ ಹಾಗೂ ರಾಜ್ಯದ ಸಂಪನ್ಮೂಲಗಳನ್ನೆಲ್ಲಾ ಸೂರೆಗೈದು ಅವನ್ನು ದೈನೇಸಿಯಾಗಿಸಿ ಬೇಡುವ ಸ್ಥಿತಿಗೆ ತಳ್ಳುವ ಲೂಟಿಕೋರ ಪದ್ದತಿಯಾಗಿದೆ. ಸಾಲದೆಂಬಂತೆ ಜನಬಳಕೆಯ ವಸ್ತುಗಳ ಮೇಲೆ ಸೆಸ್‌ ಹೆಚ್ಚಿಸುವ ಮೂಲಕ ಬೆಲೆ ಏರಿಸಿ, ಜನಸಾಮಾನರನ್ನು ಸುಲಿಯಲಾಗುತ್ತಿದೆ. ಸೆಸ್‌ ಹಣವನ್ನೆಲ್ಲಾ ಕೇಂದ್ರವೇ ಕಬಳಿಸಿ ರಾಜ್ಯಗಳಿಗೆ ದ್ರೋಹ ಬಗೆಯಲಾಗುತ್ತಿದೆ.

ಕರ್ನಾಟಕ ರಾಜ್ಯವಂತೂ ಕೇಂದ್ರ ಸರ್ಕಾರದಿಂದ ಮಹಾ ವಂಚನೆಗೆ ಗುರಿಯಾಗಿದೆ. ತೆರಿಗೆ ಸಂಗ್ರಹದಲ್ಲಿ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಅದರ ನ್ಯಾಯಸಮ್ಮತ ಪಾಲನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಸಂಪನ್ಮೂಲಗಳ ಕೊರತೆ ಎದುರಿಸಲು ಇದೂ ಒಂದು ಮುಖ್ಯ ಕಾರಣವಾಗಿದೆ. ರಾಜ್ಯಕ್ಕಾಗುತ್ತಿರುವ ಈ ವಂಚನೆಯನ್ನು ಈ ಅಧಿವೇಶನ ತೀವ್ರವಾಗಿ ಖಂಡಿಸಿದೆ.

ಸಾರಾಂಶದಲ್ಲಿ ಕೇಂದ್ರ ಬಜೆಟ್‌ ಮತ್ತು ನೀತಿಗಳು ಖಾಸಗೀಕರಣವನ್ನು ವೇಗಗೊಳಿಸುವ ಮತ್ತು ಕಲ್ಯಾಣ ಕ್ರಮಗಳಿಗೆ ಕತ್ತರಿ ಹಾಕುವ ಗುರಿಯನ್ನು ಹೊಂದಿವೆ. ಇವು ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಇದ್ದ ಎಲ್ಲಾ ಮಾರ್ಗಗಳನ್ನು ಮುಚ್ಚಿಹಾಕಿ, ಮೀಸಲಾತಿಯನ್ನು ಅಘೋಷಿತವಾಗಿ ರದ್ದುಮಾಡಿ, ಅವರನ್ನು ಮತ್ತೆ ಕತ್ತಲಕೂಪಕ್ಕೆ ತಳ್ಳುವ ಇರಾದೆಯನ್ನು ಹೊಂದಿವೆ.
ಜನ ಚಳವಳಿಗಳ ಅಧಿವೇಶನ ಕೇಂದ್ರದ ನೀತಿಗಳನ್ನು ತೀವ್ರ ರೀತಿಯಲ್ಲಿ ಖಂಡಿಸುತ್ತದೆ ಮತ್ತು ತಿರಸ್ಕರಿಸುತ್ತದೆ. ಇವುಗಳ ವಿರುದ್ಧ ಎಡಬಿಡದೆ ಹೋರಾಡುವ ಸಂಕಲ್ಪ ತೊಡಲು ಚಳವಳಿಗಾರರು ಹೇಳಿದರು.

ರಾಜ್ಯ ಬಜೆಟ್ ಅವಲೋಕನ ‌

Advertisements

ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದರೂ ನೀತಿಗಳು ಬದಲಾಗಿಲ್ಲ. ಹಳೆಯ ನೀತಿಗಳನ್ನು ತಿರಸ್ಕರಿಸದೆಯೇ ಹೊಸ ಹಾದಿಯನ್ನು ತುಳಿಯುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರೆ ಅದನ್ನು ನಂಬಲು ಸಾಧ್ಯವಿಲ್ಲ. ಬಿಜೆಪಿ ತಂದಿದ್ದ 8 ಮನೆಹಾಳು ಕಾಯ್ದೆಗಳನ್ನೂ ಮುಂದುವರೆಸುವ ಮೂಲಕ. ಕಾಂಗ್ರೆಸ್‌ ನೀತಿಗೂ ಬಿಜೆಪಿ ನೀತಿಗೂ ಆರ್ಥಿಕ ವಿಚಾರದಲ್ಲಿ ಬದಲಾವಣೆ ಇಲ್ಲ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತೋರಿಸಿಕೊಂಡಿದೆ.

WhatsApp Image 2025 03 13 at 6.20.45 PM

ಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರಣಾಳಿಕೆ ಕೊಟ್ಟ ಭರವಸೆಗಳನ್ನು ಸಂಪೂರ್ಣವಾಗಿ ಮರೆತಿದೆ. 5 ಗ್ಯಾರಂಟಿಗಳ ಗುಂಗಿನಲ್ಲೇ ಸರ್ಕಾರ ತೇಲುತ್ತಿದೆಯಾಗಲೀ ಅದು ರಾಜ್ಯದ ವಿವಿಧ ಜನ ವರ್ಗಗಗಳಿಗೆ ಕೊಟ್ಟಿದ್ದ ಭರವಸೆಗಳಲ್ಲಿ ಒಂದೇ ಒಂದು ಭರವಸೆಯನ್ನೂ ಈಡೇರಿಸದೆ, ಈಡೇರಿಸುವ ಸೂಚನೆಯನ್ನೂ ನೀಡದೆ ದ್ರೋಹ ಬಗೆದಿದೆ.

ಯಾವುದೇ ಸ್ಪಷ್ಟ ನೀತಿ ಮತ್ತು ದಿಕ್ಕು ಇಲ್ಲದ ಬಜೆಟ್‌ ಇದಾಗಿದೆ. ತಾತ್ವಿಕತೆ ಎಂಬುದು ಬಜೆಟ್‌ ಪ್ರತಿಯೊಳಗಿನ ಕವನಗಳಲ್ಲಿ ಇದೆಯೇ ಹೊರತು ಅದರ ತೀರ್ಮಾನಗಳಲ್ಲಿ ಅಲ್ಲ. ಜನಪರ ಅಭಿವೃದ್ದಿಯ ರೋಡ್‌ ಮ್ಯಾಪ್‌ ಇಲ್ಲದ ಬಜೆಟ್‌ ಇದಾಗಿದೆ. ಅಷ್ಟು ಮಾತ್ರವಲ್ಲ ಇದು ಬೆಂಗಳೂರು ಮತ್ತು ಕಾರ್ಪೋರೇಟ್‌ ಕೇಂದ್ರಿತ ಬಜೆಟ್‌ ಆಗಿದೆ.

ಕರ್ನಾಟಕ ಬಜೆಟ್‌ ಅನ್ನು ಜನಪ್ರಿಯಗೊಳಿಸಲು ಎಲ್ಲಾ ಸಮುದಾಯಗಳಿಗೂ ಇಷ್ಟಿಷ್ಟು ಕೊಟ್ಟಂತೆ ಮಾಡುವ ಸರ್ಕಸ್‌ ನಡೆದಿದೆ. ಆದರೆ ಅದನ್ನು ನಿಜವಾದ ಅರ್ಥದಲ್ಲಿ ಜನಪರಗೊಳಿಸುವ ಪ್ರಾಮಾಣಿಕ ಪ್ರಯತ್ನ ಇದರಲ್ಲಿ ಗೋಚರಿಸುತ್ತಿಲ್ಲ. ಯಾವುದೇ ಸಮುದಾಯದ ದೂರಗಾಮಿ ಅಭಿವೃದ್ಧಿಗೆ ಬೇಕಾದ ದೂರದೃಷ್ಟಿ ಈ ಬಜೆಟ್ಟಿನಲ್ಲಿ ಇಲ್ಲವಾಗಿದೆ. ಕಾರ್ಮಿಕ, ಮಹಿಳಾ, ಅಲ್ಪಸಂಖ್ಯಾತ, ಹಿಂದುಳಿದ, ಮುಂತಾದ ಜನ ವರ್ಗಗಳನ್ನು ಕನಿಷ್ಠ ಬಜೆಟ್‌ ಪೂರ್ವ ಸಮಾಲೋಚನೆಗಳಿಗೂ ಕರೆದಿಲ್ಲ ಎಂಬುದನ್ನು ಅಧಿವೇಶನ ತಿರಸ್ಕರಿಸುತ್ತದೆ.

ಕೃಷಿ ಬಿಕ್ಕಟ್ಟನ್ನು ಬಗೆಹರಿಸಲಿಕ್ಕಾಗಲೀ, ರೈತರನ್ನು ರುಣಮುಕ್ತರನ್ನಾಗಿಸಲಿಕ್ಕಾಗಲೀ, ರೈತರ ಬೆಳೆಗೆ ನ್ಯಾಯಸಮ್ಮತ ಬೆಲೆ ದಕ್ಕಿಸಿಕೊಡಲಿಕ್ಕಾಗಲೀ, ಕಾರ್ಮಿಕರಿಗೆ ಘನತೆಯ ವೇತನ ಖಾತ್ರಿ ಪಡಿಸಲಿಕ್ಕಾಗಲಿ, ಉದ್ಯೋಗ ಸೃಷ್ಟಿಸಲಿಕ್ಕಾಗಲಿ, ಕನಿಷ್ಠ ವೇತನವನ್ನು ಖಾತ್ರಿಪಡಿಸಲಿಕ್ಕಾಗಲೀ, ತಳ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಾಗಲಿ, ಬಡವರಿಗೆ ಭೂಮಿ ಮತ್ತು ವಸತಿ ಒದಗಿಸಲಿಕ್ಕಾಗಲೀ ಯಾವುದೇ ನಿರ್ಧಿಷ್ಟ ಕ್ರಮಗಳಿಲ್ಲ. ಸ್ಕೀಂ ಕಾರ್ಮಿಕರಿಗೆ 1000 ರೂ.ಗಳ ವೇತನ ಹೆಚ್ಚಿಸಿ ಕೈ ತೊಳೆದುಕೊಂಡಿದೆ.

ದಲಿತರಿಗೆ, ಅಲ್ಪಸಂಖ್ಯಾತರಿಗೆ ಸಿಕ್ಕಾಪಟ್ಟೆ ಕೊಡಲಾಗಿದೆ ಎಂಬ ಹುಸಿ ಚಿತ್ರಣ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಆದರೆ, ವಾಸ್ತವ ಅದಕ್ಕೆ ತದ್ವಿರುದ್ಧವಾಗಿದೆ. ದಲಿತ ಸಮುದಾಯಕ್ಕೆ ಕೊಟ್ಟಂತೆ ಮಾಡಿರುವ ಹಣ ಹಿಂಬಾಗಿಲಿನಿಂದ ಅನ್ಯ ಉದ್ದೇಶಗಳಿಗೆ ಹರಿದು ಹೋಗಲು ಮತ್ತೆ ಅವಕಾಶ ನೀಡಲಾಗಿದೆ. ಅಲ್ಪಸಂಖ್ಯಾತರಿಗೆ ಘೋಷಿಸಿದ್ದನ್ನೂ ಕೊಡದೆ ವಂಚನೆ ಮಾಡಲಾಗಿದೆ.

ಮುಖ್ಯಮಂತ್ರಿಗಳಿಗೆ ಜನ ಚಳವಳಿಗಳ ಬಜೆಟ್‌ ಅಧಿವೇಶನದ ಆಗ್ರಹ

  1. ತಮ್ಮ ಸರ್ಕಾರ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ ಎಂಬುದು ಸಾಬೀತಾಗಬೇಕಾದರೆ ಬಿಜೆಪಿ ತಂದಿದ್ದ ಕೆಳಕಂಡ ಈ ಎಲ್ಲಾ ನೀತಿಗಳನ್ನು ನಿಮ್ಮ ಸರ್ಕಾರ ಸಾರಾಸಗಟು ತಿರಸ್ಕರಿಸಬೇಕು.
    ಭೂ ಸುಧಾರಣಾ ತಿದ್ದುಪಡಿ ಕಾಯ್ದೆ
    ಎಪಿಎಂಸಿ ತಿದ್ದುಪಡಿ ಕಾಯ್ದೆ
    ಜಾನುವಾರು ಹತ್ಯೆ ನಿಶೇಧ ತಿದ್ದುಪಡಿ ಕಾಯ್ದೆ.
    ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸಿರುವ ತಿದ್ದುಪಡಿ ಕಾಯ್ದೆ
    ಮತಾಂತರ ನಿಶೇಧ ಕಾಯ್ದೆ
    ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ರದ್ದುಪಡಿಸುವ ತಿದ್ದುಪಡಿ ಕಾಯ್ದೆ.
    ಕೇಂದ್ರದ ವಿದ್ಯುತ್‌ ಖಾಸಗೀಕರಣ ಮಸೂದೆ.
    ಲೋಕಸಭಾ ಕ್ಷೇತ್ರದ ಮರು ವಿಂಗಡಣೆ ನೀತಿ.
    ಅಲ್ಲದೆ ಅತಿ ತುರ್ತಾಗಿ ರೈತ ಹೋರಾಟಕ್ಕೆ ಹೆದರಿ ಹಿಂತೆಗೆದುಕೊಂಡಿದ್ದ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಬಾಗಿಲಿನಿಂದ ತರಲು ಕೇಂದ್ರ ಸರ್ಕಾರವು ಈಗ ಮುಂದಿಟ್ಟಿರುವ (National Policy Framework for Agricultural Marketing (NPFAM)ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಹಾಗೆಯೇ ಕಾರ್ಮಿಕರ ಬದುಕಿಗೆ ಕಂಟಕವಾಗಿರುವ 4 ಕೋಡ್‌ ಗಳನ್ನು ತಿರಸ್ಕರಿಸುವ ತೀರ್ಮಾನವನ್ನು ಈ ಸದನದಲ್ಲಿಯೇ ಘೋಷಿಸಬೇಕು. ನಿರ್ಧಿಷ್ಟವಾಗಿ ವಿದ್ಯುತ್‌ ಕ್ಷೇತ್ರದಲ್ಲಿ ಒಳಗೊಳೊಳಗೇ ನಡೆಯುತ್ತಿರುವ ಖಾಸಗೀಕರಣದ ಪ್ರಕ್ರಿಯೆಯನ್ನು ಕೈಬಿಡಬೇಕು. ಕೃಷಿ ವಿದ್ಯುತ್‌ ಮೀಟರುಗಳಿಗೆ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಅಳವಡಿಸುವುದನ್ನು ಕೈಬಿಡಬೇಕು. ಎಲ್ಲಾ ಕೃಷಿ ಪಂಪ್‌ ಸೆಟ್ಟುಗಳಿಗೆ ಉಚಿತ ವಿದ್ಯುತ್‌ ಒದಗಿಸಬೇಕು. ಕೃಷಿಗೆ ವಿದ್ಯುತ್‌ ಸಂಪರ್ಕ ಪಡೆಯಲು ಘೋಷಿಸಲಾಗಿರುವ ಸ್ವಯಂ ವೆಚ್ಚ ಯೋಜನೆಯನ್ನು ರದ್ದುಪಡಿಸಬೇಕು.
  2. ರೈತರನ್ನು ರುಣಮುಕ್ತಗೊಳಿಸಲು ಮತ್ತು ರೈತರ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಖಚಿತ ಯೋಜನೆ ಮತ್ತು ಕಾಯ್ದೆ ರೂಪಿಸಬೇಕು. ‌ಕೃಷಿ ಬೆಲೆ ಆಯೋಗವನ್ನು ಬಲಪಡಿಸಬೇಕು, ಬಿಜೆಪಿ ಸರ್ಕಾರ ಕೊಟ್ಟಿದ್ದ ಮಾರ್ಗಸೂಚಿಯನ್ನು ಹಿಂಪಡೆದು, ರೈತ ಚಳವಳಿಗಳ ಜೊತೆ ಸಮಾಲೋಚಿಸಿ ಹೊಸ ಮಾರ್ಗಸೂಚಿಯನ್ನು ನೀಡಬೇಕು.
    ನಿರ್ಧಿಷ್ಟವಾಗಿ ರೈತರಿಗೆ ಬೆಂಬಲ ಬೆಲೆ ಒದಗಿಸುವ ಸಲುವಾಗಿ ಕನಿಷ್ಟ 10 ಸಾವಿರ ಕೋಟಿಗಳನ್ನು ಆವರ್ತ ನಿಧಿಗೆ ಒದಗಿಸಬೇಕು.
    ಮೈಕ್ರೋಫೈನಾನ್ಸ್‌ ಜಾಲದಿಂದ ಬಡಜನರನ್ನು, ವಿಶೇಷವಾಗಿ ಮಹಿಳೆಯರನ್ನು ಪಾರು ಮಾಡಲು ಸಾಂಸ್ಥಿಕ ಸಾಲವನ್ನು ಹೆಚ್ಚಿಸುವ ಹಾಗೂ ಸರಳ ವಿಧಾನದಲ್ಲಿ ಒದಗಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಕೃಷಿ ಕ್ಷೇತ್ರಕ್ಕೆ, ಗ್ರಾಮೀಣಭಿವೃದ್ದಿಗೆ ಹಾಗೂ ನೀರಾವರಿಗೆ ಅನುದಾನವನ್ನು ಗಮನಾರ್ಹವಾಗಿ ಹೆಚ್ಚಿಸಬೇಕು. ನರೇಗಾ ಯೋಜನೆಯನ್ನು ನಗರಕ್ಕೂ ವಿಸ್ತರಿಸಿ, ಬಲಪಡಿಸವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ನಿರ್ಣಯವನ್ನು ವಿಧಾನಸಭೆಯಲ್ಲಿ ತೆಗೆದುಕೊಳ್ಳಬೇಕು.
  3. ಪ್ರಾಕೃತಿಕ ಸಂಪತ್ತು ಮತ್ತು ಸಾರ್ವಜನಿಕ ಸ್ವತ್ತಾದ ಭೂಮಿ ಬಂಡವಾಳಿಗರ ಪಾಲಾಗದಂತೆ ತಡೆಯಬೇಕು. ಭೂಮಿಯನ್ನು ಸಾಮಾಜಿಕ ನ್ಯಾಯದ ಪ್ರಮುಖ ಆಯಾಮವಾಗಿ ಪರಿಗಣಿಸಬೇಕು. ಬಲವಂತದ ಭೂ ಸ್ವಾಧೀನ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಬಗರ್‌ ಹುಕುಂ ರೈತರಿಗೆ ತ್ವರಿತ ಭೂ ಹಂಚಿಕೆಯ ದಿಟ್ಟ ತೀರ್ಮಾನ ತೆಗೆದುಕೊಳ್ಳಬೇಕು. ಕಾನೂನು ತೊಡಕುಗಳನ್ನು ನಿವಾರಿಸಿ ಎಲ್ಲಾ ಬಡ ಬಗರ್‌ ಹುಕುಂ ರೈತರಿಗೂ ಸಾಮಾಜಿಕ ನ್ಯಾಯ ದಕ್ಕಿಸಿಕೊಡಬೇಕು. ಚನ್ನರಾಯಪಟ್ಟಣ ಭೂಸ್ವಾಧೀನ ತೀರ್ಮಾನವನ್ನು ಕೊಟ್ಟ ಮಾತಿನಂತೆ ಕೈಬಿಡಬೇಕು.
  4. ಶೋಷಿತ ಸಮುದಾಯಗಳ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಹಣ ಅನ್ಯ ಉದ್ದೇಶಗಳಿಗೆ ಹರಿದುಹೋಗದಂತೆ ಕ್ರಮವಹಿಸಬೇಕು. ಘೋಷಿತ ಪ್ರಮಾಣದ ಮೊತ್ತವೆಲ್ಲವೂ ಬಿಡುಗಡೆಯಾಗಬೇಕು ಮತ್ತು ನಿಜವಾದ ಫಲಾನುಭವಿಗಳಿಗೆ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
    ನಿರ್ಧಿಷ್ಟವಾಗಿ ಹೇಳಬೇಕೆಂದರೆ: ಪ.ಜಾತಿ/ಪ.ವರ್ಗಗಳ ಸಮಗ್ರ ಸಮಸ್ಯೆಗಳು ಹಾಗೂ ಅಭಿವೃದ್ಧಿ, SCSP/TSP ಹಣದ ವಿತರಣೆ ವಿನಿಯೋಗ, ಸಾಧಕ-ಭಾದಕಗಳು ಮತ್ತು ಆದಿವಾಸಿ – ಅಲೆಮಾರಿ ಜನಾಂಗದ ಪುನರ್ವಸತಿ ಹಾಗೂ ಮಹಿಳಾ ಸಬಲೀಕರಣ ಕುರಿತು ಸರ್ಕಾರದ ಅವಧಿಯಲ್ಲಿ ಎರಡೂವರೆ ವರ್ಷಕ್ಕೊಮ್ಮೆ “ಸಾಮಾಜಿಕ ನ್ಯಾಯಕ್ಕಾಗಿ ವಿಶೇಷ ಅಧಿವೇಶನ” ನಡೆಸಿ ಸಮಗ್ರ ಚರ್ಚೆ ನಡೆಸುವುದು ಹಾಗೂ ಮೌಲ್ಯಮಾಪನ ಮಾಡುವುದು.
    SCSP/TSP ಹಣದ ವಿತರಣೆ, ವಿನಿಯೋಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ಹಾಗೂ ದುರ್ಬಳಕೆಯ ಮೇಲೆ ನಿಗಾ ವಹಿಸುವ ಕಾರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿ “ಏಕ ಗವಾಕ್ಷಿ ಯೋಜನೆ” ಅನುಷ್ಠಾನಗೊಳಿಸಲು ಸೂಕ್ತ ಕ್ರಮ ವಹಿಸುವುದು. ನಿರ್ವಹಣೆಗಾಗಿ ಮೇಲ್ವಿಚಾರಣಾ ಕೋಶ ರಚಿಸುವುದು
    ಖಾಸಗೀ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್‌ ಅನ್ನು ಮತ್ತು ಹಾಸ್ಟೆಲ್‌ ಸೌಲಭ್ಯವನ್ನು ನಿಲ್ಲಿಸಿರುವ ತೀರ್ಮಾನವನ್ನು ಹಿಂತೆಗೆದುಕೊಳ್ಳಬೇಕು. ಶೋಷಿತ ಹಾಗೂ ಬಡ ಮಕ್ಕಳಿಗೆ ಮೊದಲಿನಂತೆಯೇ ಶೈಕ್ಷಣಿಕ ನೆರವು ಮುಂದುವರೆಯುವಂತಾಗಬೇಕು.
  5. ಖಾಯಂ ಸ್ವರೂಪದ ಕ್ಷೇತ್ರಗಳಲ್ಲಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಕಾಯ್ದೆ ರೂಪಿಸಬೇಕು. ಎಲ್ಲಾ ಬಗೆಯ ದುಡಿಯುವ ಜನರಿಗೆ ಕನಿಷ್ಠ ವೇತನ ದರ ಜಾರಿಯಾಗುವಂತೆ ಮಾಡಬೇಕು.
    ನಿರ್ಧಿಷ್ಟವಾಗಿ ಹೇಳಬೇಕೆಂದರೆ: ಈಗಾಗಲೇ ರಚಿಸಲಾಗಿರುವ ಅಸಂಘಟಿತ ವಲಯದ ಸಾಮಾಜಿಕ ಭದ್ರತಾ ಮಂಡಳಿಗಳಿಗೆ 1200 ಕೋಟಿ ರೂಗಳ ಅನುದಾನ ಕೊಡಬೇಕು. ಸ್ಕೀಂ ನೌಕರರಿಗೆ ಈಗ ಮಾಡಿರುವ ವೇತನ ಹೆಚ್ಚಳವನ್ನು ಕನಿಷ್ಠ ದ್ವಿಗುಣಗೊಳಿಸಬೇಕು.
    ICDS ಯೋಜನೆಯನ್ನು ಬಲಹೀನಗೊಳಿಸುವ 5000 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಾಲೆಯಲ್ಲಿ ತರೆಯುವ ಸೂಚನೆಯನ್ನು ಕೈಬಿಟ್ಟುಇದನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಪ್ರಾರಂಭಿಸಬೇಕು
    ಕರ್ನಾಟಕ ಲೇಬರ್‌ ಕಾನ್ಫರೆನ್ಸ್‌ (ಕೆ ಎಲ್‌ ಸಿ ) ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಬೇಕು.
  6. ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ ದೌರ್ಜನ್ಯ, ಕೋಮು ಪ್ರಚೋದನೆ ಹಾಗೂ ಮಹಿಳೆಯರ ಅತ್ಯಾಚಾರ ಹಾಗೂ ಹತ್ಯೆಗಳನ್ನು ತಡೆಯಲು ಸಮಗ್ರ ಯೋಜನೆ ರೂಪಿಸಬೇಕು. ನಿರ್ಧಿಷ್ಟವಾಗಿ ಹೇಳಬೇಕೆಂದರೆ: ನೊಂದ ಸಮುದಾಯಗಳ ಜೊತೆ ಸಮಾಲೋಚನೆ ನಡೆಸಿ ಮೂರೂ ರೀತಿಯ ಸಾಮಾಜಿಕ ಸಮಸ್ಯೆಗಳನ್ನು ಬುಡಮಟ್ಟದಲ್ಲಿ ಅಡ್ರೆಸ್‌ ಮಾಡುವ ಮೆಗಾ ಯೋಜನೆಯೊಂದನ್ನು ರೂಪಿಸಬೇಕು. ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ ನಡೆಸುವ, ಷಡ್ಯಂತರ ರೂಪಿಸುವ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ವಿಶೇಷ ಕಾಯ್ದೆಯನ್ನು ಜಾರಿಗೆ ತರಬೇಕು.
  7. ಶಿಕ್ಷಣ ನೀತಿಯಲ್ಲಿನ ದ್ವಂದ್ವ ನಡೆಯನ್ನು ಸರ್ಕಾರ ಕೈಬಿಡಬೇಕು. ಒಂದೆಡೆ ಎನ್‌ ಇ ಪಿ ವಿರೋದಿಸುವ, ಆದರೆ ಪರ್ಯಾಯ ಎಸ್‌ ಇ ಪಿ ಯನ್ನು ಕೂಡಲೇ ಕಾರ್ಯರೂಪಕ್ಕೆ ತರದೆ ಕಾಲಹರಣ ಮಾಡುವ, ಎನ್‌ ಇ ಪಿ ಕ್ರಮಗಳನ್ನು ಪೀಸ್‌ ಬೈ ಪೀಸ್‌ ಜಾರಿಮಾಡುವ ಮತ್ತು ಅದಕ್ಕಾಗಿ ಕೇಂದ್ರದಿಂದ ಹಣವನ್ನೂ ಪಡೆಯುವ ಕಪಟ ನಡೆಯನ್ನು ಕೈಬಿಡಬೇಕು. ನಿರ್ಧಿಷ್ಟವಾಗಿ ಹೇಳಬೇಕೆಂದರೆ: ಎಸ್‌ ಇ ಪಿ ಯನ್ನು ಕಾಲಮಿತಿಯೊಳಗೆ ಜಾರಿಗೆ ತರಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು, ಬದಲು ಬಲವರ್ಧನೆಗೊಳಿಸಲು ಕ್ರಮವಹಿಸಬೇಕು. ಸಾರ್ವಜನಿಕ ಶಿಕ್ಷಣಕ್ಕೆ ಮೀಸಲಿಟ್ಟಿರುವ ಹಣವನ್ನು ದುಪ್ಪಟ್ಟುಗೊಳಿಸಬೇಕು.
  8. ಭವಿಷ್ಯದ ಪೀಳಿಗೆ ಅಭದ್ರತೆಯಲ್ಲಿ, ಅನಾಥ ಪ್ರಜ್ಞೇಯಲ್ಲಿ ನರಳುವಂತಾಗಬಾರದು. ಉದ್ಯೋಗ ಸೃಷ್ಟಿಗೆ ಸಮಗ್ರ ಯೋಜನೆ ರೂಪಿಸಬೇಕು. ಎಲ್ಲಾ ಉದ್ಯೋಗಕ್ಕೂ ಭದ್ರತೆ ತೊರೆಯಬೇಕು. ಪ್ರತಿಯೊಬ್ಬ ಉದ್ಯೋಗಿಗೂ ಗನತೆಯ ವೇತನ ದಕ್ಕುವಂತಾಗಬೇಕು.
    ನಿರ್ಧಿಷ್ಟವಾಗಿ ಹೇಳಬೇಕೆಂದರೆ: ಖಾಲಿ ಇರುವ 2 ಲಕ್ಷ ಸರ್ಕಾರಿ ಉದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ದಿಟ್ಟ ತೀರ್ಮಾನ ತೆಗೆದುಕೊಳ್ಳಬೇಕು. ಉದ್ಯೋಗ ಖಾತ್ರಿ ಕಾಯ್ದೆಯನ್ನು ರೂಪಿಸಬೇಕು ಮತ್ತು ಉದ್ಯೋಗ ಖಾತ್ರಿ ಆಯೋಗವನ್ನು ರಚಿಸಬೇಕು.
  9. ಆರೋಗ್ಯ ಕ್ಷೇತ್ರದಲ್ಲಿ ಖಾಸಗಿಯವರಿಂದ ನಡೆಯುತ್ತಿರುವ ಸುಲಿಗೆಯನ್ನು ತಡೆಯಲು ಕಾಯ್ದೆ ರೂಪಿಸಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು.
    ನಿರ್ಧಿಷ್ಟವಾಗಿ ಹೇಳಬೇಕೆಂದರೆ: ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನೆಲ್ಲಾ ಈ ಕೂಡಲೇ ತುಂಬ ಬೇಕು. ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಅನುದಾನವನ್ನು ಶೇ. 4ರಿಂದ ಶೇ. 8ಕ್ಕೆ ಹೆಚ್ಚಿಸಬೇಕು.
  10. “ಪ್ರತಿಯೊಬ್ಬರಿಗೂ ಸೂರು” ಯೋಜನೆಯನ್ನು ರೂಪಿಸಬೇಕು. ಕೊಳಚೆ ಪ್ರದೇಶಗಳ ಪರಿವರ್ತನೆ, ನಿವೇಶನಗಳ ಹಂಚಿಕೆ, ಮನೆಗಳ ನಿರ್ಮಾಣಕ್ಕೆ ಆಧ್ಯತೆಯ ಯೋಜನೆ ರೂಪಿಸಬೇಕು.
    ನಿರ್ಧಿಷ್ಟವಾಗಿ ಹೇಳಬೇಕೆಂದರೆ… 94 c, 94cc ಅರ್ಜಿ ಹಾಕಿರುವ ಜನರನ್ನು ಕೊನೆ ಇಲ್ಲದೆ ಕಾಯಿಸದೆ ಅಕ್ರಮ ಸಕ್ರಮದಡಿ ವಸತಿ ಮಂಜೂರು ಮಾಡಬೇಕು. ನಗರ ಪ್ರದೇಶಗಳಲ್ಲಿ ಅಗ್ಗದ ಬೆಲೆಯ ಮನೆ ನಿರ್ಮಾಣವನ್ನು ಯುದ್ಧೋಪಾದಿಯಲ್ಲಿ ನಡೆಸಬೇಕು.
    ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತದ ಸೂರಿಲ್ಲದವರಿಗೆ ನಿವೇಶನ ಹಂಚಿಕೆ ಭೂ ಹಂಚಿಕೆಯ ಆಧ್ಯತೆಯ ವಿಚಾರವಾಗಬೇಕು.
    ಗೃಹ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು 5 ಲಕ್ಷ ರೂ. ಗಳಿಗೆ ಹೆಚ್ಚಿಸಬೇಕು.
  11. ಕೊನೆಯದಾಗಿ ಮತ್ತು ಅತಿಮುಖ್ಯವಾಗಿ ಜನ ವರ್ಗಗಳ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಿ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲು ವಿಶೇಷ ಜನತಾ ಅಧಿವೇಶನವನ್ನು ಕರೆಯಬೇಕು.

ನಿರ್ಧಿಷ್ಟವಾಗಿ ಹೇಳಬೇಕೆಂದರೆ: ವರ್ಷಕ್ಕೊಮ್ಮೆ ಜನರ ಬದುಕಿನ ಜೀವಂತ ಸಮಸ್ಯೆಗಳ ಚರ್ಚೆಗೆ ವಿಶೇಷ ಅಧಿವೇಶನ ಆಯೋಜನೆಯಾಗಬೇಕು. ಜನತಾ ದರ್ಶನದ ರೀತಿಯಲ್ಲಲ್ಲದೆ ಶಾಸನಾ ಬಲವಿರವ ಜನತಾ ಅಧಿವೇಶನ ಇದಾಗಿರಬೇಕು.
ಕ್ಯಾಬಿನೆಟ್‌ ಸಚಿವರು, ಸಂಬಂಧಿತ ಅಧಿಕಾರಿಗಳು ಹಾಗೂ ಜನಚಳವಳಿಗಳ ಪ್ರತಿನಿಧಿಗಳು ಜೊತೆಗೂಡಿ ಚರ್ಚಿಸಿ ಸರ್ವಸಮ್ಮತ ಆಧಾರದ ಮೇಲೆ ಕೆಲವಾದರೂ ಅತಿಮುಖ್ಯ ಜನರ ಸಮಸ್ಯೆಗಳಿಗೆ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳುವಂತಾಗಬೇಕು.
ಮೇಲ್ಕಂಡ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ, ಕೇಂದ್ರ ಸರ್ಕಾರ ಹೊರಟಿರುವ ಕಾರ್ಪೋರೇಟ್‌ ಕೇಂದ್ರಿತ ಅಭಿವೃದ್ದಿಯ ಹಾದಿಯನ್ನು ತೊರೆದು ಜನ ಕೇಂದ್ರಿತ ಹೊಸ ಮಾದರಿಯನ್ನು ಕರ್ನಾಟಕ ಕಟ್ಟುಕೊಡಲು ದಿಟ್ಟ ಹೆಜ್ಜೆಗಳನ್ನು ಮುಖ್ಯಮಂತ್ರಿಗಳು ಇಡಬೇಕೆಂದು ಈ ಅಧಿವೇಶನವು ಆಶಿಸುತ್ತದೆ ಮತ್ತು ಆಗ್ರಹಿಸುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X