ಡೆಲ್ಲಿ ಮತ್ತು ಆರ್‌ಸಿಬಿಯ ನಡುವೆ ಮೇ 12ರಂದು ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು. ಪಂದ್ಯ ವೀಕ್ಷಣೆಗೆ ಬಂದ ಪ್ರೇಕ್ಷಕರೊಬ್ಬರಿಗೆ ಕಳಪೆ ಆಹಾರ ನೀಡಿದ ಆರೋಪದಡಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ (ಕೆಎಸ್ಸಿಎ) ವಿರುದ್ಧ ಎಫ್ಐಆರ್ ದಾಖಲಾಗಿದೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಟಿ20 ಕ್ರಿಕೆಟ್ ಪಂದ್ಯ ಮೇ 12ರಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯ ನೋಡಲು ತೆರಳಿದ್ದ ಚೇತನ (23) ಎಂಬುವರು ತಮಗೆ ನೀಡಿದ್ದ ಆಹಾರ ಹಳಸಿತ್ತು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಡಳಿತ ಮಂಡಳಿ ಮತ್ತು ಕ್ಯಾಂಟೀನ್ ಮ್ಯಾನೇಜರ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ಘಟನೆ?
ಮೇ 12ರಂದು ಚೈತನ್ಯ ಅವರು ತಮ್ಮ ಸ್ನೇಹಿತ ಗೌತಮ್ ಅವರೊಂದಿಗೆ ಪಂದ್ಯವನ್ನು ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದರು. ಈ ವೇಳೆ, ಚೈತನ್ಯ ಅವರು ಕತಾರ್ ಏರ್ ವೇಸ್ ಫ್ಯಾನ್ಸ್ ಟರೇಸ್ ಸ್ಟ್ಯಾಂಡಿನ ಕ್ಯಾಂಟಿನ್‌ನಿಂದ ಗೀ ರೈಸ್, ಇಡ್ಲಿ, ಚನ್ನಾ ಮಸಾಲ, ಕಟ್ಲೆಟ್, ರಾಯ್ತಾ, ಒಣ ಜಾಮೂನ್ ತರಿಸಿದ್ದರು.
ಈ ಊಟವನ್ನು ಸೇವಿಸಿದ್ದ ಕೆಲವೇ ನಿಮಿಷಗಳಲ್ಲಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಾನು ಕುಳಿತುಕೊಂಡಿದ್ದ ಜಾಗದಲ್ಲಿಯೇ ಚೈತನ್ಯ ಕುಸಿದುಬಿದ್ದಿದ್ದಾರೆ. ಕ್ರೀಡಾಂಗಣದ ಸಿಬ್ಬಂದಿಯ ನೆರವಿನೊಂದಿಗೆ ಕ್ರೀಡಾಂಗಣದ ಹೊರಗೆ ಆಂಬುಲೆನ್ಸ್‌ನಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.
ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚೈತನ್ಯರನ್ನು ಪರೀಕ್ಷಿಸಿದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದಾರೆ. ಚೈತನ್ಯ ಅವರ ಆರೋಗ್ಯ ಹದಗೆಡಲು ಕ್ಯಾಂಟೀನ್‌ನಲ್ಲಿ ನೀಡಲಾದ ಆಹಾರ ಕಾರಣವಾಗಿದೆ ಎಂದು ಚೈತನ್ಯ ಆರೋಪಿಸಿದ್ದಾರೆ.
ಹಾಗಾಗಿ, ಚೈತನ್ಯ ಅವರು ಕೆಎಸ್ಸಿಎ ಆಡಳಿತ ಮಂಡಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಕೆಎಸ್ಸಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೇ 24ರಿಂದ ಲಾಲ್‌ಬಾಗ್‌ನಲ್ಲಿ ‘ಮಾವು-ಹಲಸು ಮೇಳ’
ಈ ಹಿಂದೆ ಹಲವು ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ವೇಳೆ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಹಲವು ಬಾರಿ ಇಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಇಲ್ಲಿನ ಆಹಾರ ವಿತರಣೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಆರೋಪ ಮಾಡಿದ್ದರು.