2023ರಲ್ಲಿ UAPAಯಡಿಯಲ್ಲಿ ಪ್ರಬೀರ್ ಪುರಕಾಯಸ್ತ ಬಂಧಿತರಾಗುತ್ತಾರೆ. ಈ ಬಂಧನವು 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ ಎನ್ನುವ ಪ್ರಬೀರ್ ಸದ್ಯದ ಸ್ಥಿತಿಯನ್ನು ಅಘೋಷಿತ ತುರ್ತು ಪರಿಸ್ಥಿತಿ ಎನ್ನುತ್ತಾರೆ. ಅವರ ಹೊಸ ಪುಸ್ತಕದ ಆಯ್ದ ಭಾಗ ಇಲ್ಲಿದೆ...
”ನಮ್ಮ ದೇಶದ ಎಮರ್ಜೆನ್ಸಿ ಕಾಲ ಇದ್ಯಲ್ಲಾ ಅದೊಂದು ಭೀಕರ ಕಾಲ… ಆಗ ನಾವು ಅನುಭವಿಸಿದ ಯಾತನೆಗಳು ಅನೇಕ… ನೀವೂ ಏನೇ ಹೇಳಿ, ಆಗ ನಾವು ಮಾಡಿದ ಹೋರಾಟ ಇತ್ತಲ್ಲಾ, ಅದೊಂದು ನಿಜಕ್ಕೂ ಅದ್ಭುತ ಹೋರಾಟ…” …ಇವು ಸಾಮಾನ್ಯವಾಗಿ 1975-76ರ ತುರ್ತು ಪರಿಸ್ಥಿತಿಯ ಕುರಿತು ಕೇಳಿಬರುವ ಮಾತುಗಳು. ಈಗ 70/75ರ ವಯಸ್ಸಿನ ಗಡಿಯಲ್ಲಿರುವವರಿಗೆ ಇದರ ನೇರವಾದ ಅನುಭವವಿದೆ. 50/40 ಗಡಿಯೊಳಗಿನವರಿಗೆ ಇದರ ನೇರ ಅನುಭವ ಇಲ್ಲ. ಆದರೆ ಹಿರಿಯರ ಅನುಭವವನ್ನು ಕೇಳುತ್ತಾ ಬೆಳದವರು ಇವರು. ಇನ್ನು 25/30 ಗಡಿಯಲ್ಲಿರುವವರಿಗೆ ಇದು ಇತ್ತೀಚಿನ ರಾಜಕಾರಣಿಗಳ ಭಾಷಣದಲ್ಲಿ ಕೇಳಿಸುತ್ತಿರುವ ಮಾತುಗಳು ಮಾತ್ರ.
ನಿಜಕ್ಕೂ 1975-76ರ ಕಾಲಘಟ್ಟದಲ್ಲಿ ನಡೆದದ್ದು ಏನು? ಅಂದಿನ ಪರಿಸ್ಥಿತಿ ಏನಿತ್ತು? ಹೇಗಿತ್ತು? ಯಾಕೆ ಹಾಗಿತ್ತು? ಈ ಪ್ರಶ್ನೆಗಳಿಗೆ ಒಂದು ವ್ಯವಸ್ಥಿತ ಉತ್ತರದ ಅಗತ್ಯವಿದೆ. ಭಾವನಾತ್ಮಕವಾದ ಮಾತುಗಳು/ವಿವರಣೆಗಳು ಹೀರೋ ಮತ್ತು ವಿಲನ್ಗಳ ಸೃಷ್ಟಿಯಲ್ಲಿ ಅಂತ್ಯವಾಗುವ ಅಪಾಯಗಳಿರುತ್ತವೆ. ಅಕಾಡೆಮಿಕ್ಗಳ ಬರಹಗಳು ಸಪ್ಪೆಯಾದ ಫುಟ್ನೋಟ್ ಮತ್ತು ಎಂಡ್ನೋಟ್ಗಳಲ್ಲಿಯೇ ಕಳೆದುಹೋಗುವ ಅಪಾಯಗಳಿರುತ್ತವೆ. ಇವೆರಡರ ನಡುವಿನ ಒಂದು ಬರಹಕ್ಕೆ ಅವಕಾಶವಿದೆ. ಇಲ್ಲಿ ಭಾವನೆಯ ಅಭಿವ್ಯಕ್ತಿಯನ್ನು-ಬೌದ್ಧಿಕ ಒಳನೋಟವನ್ನು ಒಟ್ಟಿಗೆ ಹಿಡಿದಿಡಬಹುದು. ಇಂತಹದೊಂದು ಕೃತಿ Keeping Up The Good Fight. ಇದರ ಕರ್ತೃ ಪ್ರಬೀರ್ ಪುರಕಾಯಸ್ತ ಅವರು.
ಪ್ರಬೀರ್ ಪುರಕಾಯಸ್ತರ ಆತ್ಮಕತೆಯಾದ Keeping Up The Good Fight ತುರ್ತು ಪರಿಸ್ಥಿತಿಯ ಸ್ಥಿತಿಗತಿಯನ್ನು ಭಾವನಾತ್ಮಕತೆ-ಬೌದ್ಧಿಕತೆಯ ಹದವಾದ ಮಿಶ್ರಣದೊಂದಿಗೆ ಮಂಡಿಸುತ್ತದೆ. ವೃತ್ತಿಯಿಂದ ಇಂಜಿನಿಯರ್ ಆದ ಪ್ರಬೀರ್, ತುರ್ತು ಪರಿಸ್ಥಿತಿಯಲ್ಲಿ ಜಾರಿಯಾಗಿದ್ದ ಮೀಸಾ ಕಾಯಿದೆಯಡಿ ಬಂಧಿತರಾಗಿ ಒಂದು ವರ್ಷ ಜೈಲಿನಲ್ಲಿದ್ದವರು. ಜೈಲಿನ ಒಳಗಿನ ಬದುಕನ್ನು ವಿವರವಾಗಿ ಪುಸ್ತಕದಲ್ಲಿ ಚರ್ಚಿಸುತ್ತಾರೆ. ತರಬೇತಿ ಪಡೆದ ಇಂಜಿನಿಯರ್ ಆಗಿರುವ ಕಾರಣಕ್ಕೆ ಮತ್ತು ವಿಜ್ಞಾನದ ಶಿಸ್ತಿನ ಚೌಕಟ್ಟಿನೊಳಗೆ ಬದುಕನ್ನು ಕಟ್ಟಿಕೊಂಡ ಬದ್ಧತೆಯ ಕಾರಣದಿಂದ ತುರ್ತು ಪರಿಸ್ಥಿತಿಯನ್ನು ಬೌದ್ಧಿಕ ಚೌಕಟ್ಟಿನಲ್ಲಿ ಗ್ರಹಿಸಿ ಬರೆಯಲು ಇವರಿಗೆ ಸಾಧ್ಯವಾಗಿದೆ. ಈ ಕಾರಣದಿಂದ ಇವರ ಆತ್ಮಕತೆಯು ತನ್ನ ವೈಯಕ್ತಿಕ ಕತೆಯ ಚೌಕಟ್ಟನ್ನು ಮೀರಿ ಓದುಗರಿಗೆ ಆಪ್ತವಾಗುತ್ತದೆ. 2023ರಲ್ಲಿ UAPAಯಡಿಯಲ್ಲಿ ಪ್ರಬೀರ್ ಬಂಧಿತರಾಗುತ್ತಾರೆ. ಈ ಬಂಧನವು 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ ಎನ್ನುವ ಪ್ರಬೀರ್ ಸದ್ಯದ ಸ್ಥಿತಿಯನ್ನು ಅಘೋಷಿತ ತುರ್ತು ಪರಿಸ್ಥಿತಿ ಎನ್ನುತ್ತಾರೆ.
ಪ್ರಬೀರ್ರ ಜೀವನ ಕತೆ ಸ್ವತಂತ್ರ ಭಾರತದ ಕತೆಯೂ ಆಗುತ್ತದೆ. 1950ರಲ್ಲಿ ಜನಿಸಿದ ‘ನನಗೂ ಮತ್ತು ಭಾರತಕ್ಕೂ ಈಗ ಒಂದೇ ವಯಸ್ಸು’ ಎನ್ನುತ್ತಾರೆ. ಬಾಲ್ಯದ ದಿನಗಳು, ಕಮ್ಯುನಿಸ್ಟ್ ಸಿದ್ಧಾಂತದೆಡೆಗೆ ಹೊರಳಿದ ಸನ್ನಿವೇಶಗಳು, ಜೆಎನ್ಯುನ ಅನುಭವಗಳು, ಡೆಲ್ಲಿ ಸೈನ್ಸ್ ಫೋರಂನಂತಹ ಜನಪ್ರಿಯ ಮತ್ತು ಜನಪರವಾದ ವಿಜ್ಞಾನ ಚಳವಳಿಗಳ ವಿವರಗಳು ಅವರ ಆತ್ಮಕತೆಯಲ್ಲಿ ದಾಖಲಾಗುತ್ತವೆ. ತಮ್ಮ ರಾಜಕೀಯ ಸಿದ್ಧಾಂತದ ಆಚೆಗೆ ನಿಂತು ತಮ್ಮ ಬದುಕನ್ನು, ಭಾರತದ ಬದುಕನ್ನು ನೋಡಲು ವಿಜ್ಞಾನಿ ಪ್ರಬೀರ್ರಿಗೆ ಸಾಧ್ಯವಾಗಿದೆ. ಹಾಗಾಗಿಯೇ ಆತ್ಮಕತೆಯ ಅಂತ್ಯದಲ್ಲಿ ಈ ಸಾಲುಗಳು ಮೂಡಿ ಬರಲು ಅವಕಾಶವಾಗಿದೆ: ”ನನ್ನ 75 ವರ್ಷಗಳ ಜೀವಿತಾವಧಿಯಲ್ಲಿ ಒಂದೆರಡು ವಿಷಯಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಪರಸ್ಪರ ಭಿನ್ನವಾದ ನೆಲೆಗಳಿಂದ ಬರುವವರೊಂದಿಗೆ ಬೆರೆಯುವುದನ್ನು ಕಲಿತಿರುವೆ. ಈ ಅದ್ಭುತವಾದ ಮತ್ತು ಸಂಕೀರ್ಣವಾದ ಜಗತ್ತಿನ ಭಾಗವೂ ಆಗಿರುವೆ. ಒಂದು ಉತ್ತಮ ಜಗತ್ತಿಗಾಗಿ ನನ್ನ ಹೋರಾಟವನ್ನು ಮುಂದುವರಿಸಬೇಕಿದೆ ಮತ್ತು ನಾನು ಮಾಡಬೇಕಿರುವುದು ಇಷ್ಟು ಮಾತ್ರ.”

ತಿಹಾರ್ ಜೈಲು: ಜನ ಮತ್ತು ಜಾಗ
ರಾತ್ರಿಯ ಬೀಗವನ್ನು ಹಾಕಿದ (ಲಾಕ್ಡೌನ್) ಮೇಲೆ, ತಿಹಾರಿಗೆ ನನ್ನನ್ನು ಪೊಲೀಸರು ಕರೆದೊಯ್ದರು. ಇದೊಂದು ವಿಚಿತ್ರವಾದ ನಡೆಯಾಗಿತ್ತು. ಏಕೆಂದರೆ ಒಮ್ಮೆ ಜೈಲಿನಲ್ಲಿ ಬೀಗವನ್ನು ಹಾಕಿದ ಮೇಲೆ ಪ್ರತಿ ಸೆಲ್ನಲ್ಲಿ ಇರಬೇಕಿರುವ ಖೈದಿಗಳು ಇದ್ದಾರೆ ಹಾಗೂ ದಾಖಲೆಗಳ ಪ್ರಕಾರ ಇರಬೇಕಿರುವ ಎಲ್ಲರೂ ಇದ್ದಾರೆಂದು ಖಚಿತಪಡಿಸಿಕೊಳ್ಳಲಾಗಿದೆ ಎಂದರ್ಥ. ಜೈಲಿನ ಕೈಪಿಡಿಯ ಪ್ರಕಾರ ಇರುವ ಖೈದಿಗಳ ಸಂಖ್ಯೆ ಮತ್ತು ದಾಖಲೆಯಲ್ಲಿರುವ ಸಂಖ್ಯೆ ನಿಖರವಾಗಿ ಹೊಂದುತ್ತಿದೆ ಎಂದು ಖಚಿತಪಡಿಸಿಕೊಂಡು ರಾತ್ರಿಯ ಲಾಕ್ಡೌನ್ ಮಾಡಿದ ಮೇಲೆ ಹೊಸ ಖೈದಿಯನ್ನು ಒಳಗೆ ಬಿಡುವಂತಿಲ್ಲ. ಏಕೆಂದರೆ ಖೈದಿಗಳಲ್ಲಿ ಯಾರಾದರೂ ತಪ್ಪಿಸಿಕೊಂಡರೆ ನಿಮಗವರ ಲೆಕ್ಕ ಸಿಗುವುದಿಲ್ಲ. ಹಾಗಾಗಿ ರಾತ್ರಿ ಲಾಕ್ಡೌನ್ ಅನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.
ಲಾಕ್ಡೌನ್ ಆಗಿದ್ದರೂ ತಿಹಾರ್ ಜೈಲನ್ನು ಪ್ರವೇಶಿಸಿದ ಕೆಲವೇ ಮಂದಿಗಳಲ್ಲಿ ನಾನೂ ಒಬ್ಬನಾಗಿ ಅಂದು ರಾತ್ರಿ ತಿಹಾರ್ ಒಳಕ್ಕೆ ಹೋದೆನು. ಆ ದಿನಗಳಲ್ಲಿ ಮೀಸಾದಡಿ ಬಂಧಿತರಾದ ರಾಜಕೀಯ ಖೈದಿಗಳನ್ನು ಪ್ರತ್ಯೇಕ ವಾರ್ಡಿನಲ್ಲಿ ಇರಿಸುತ್ತಿದ್ದರು. ಪ್ರತಿಬಂಧಕ ಬಂಧನಕ್ಕೆ ಒಳಗಾದವರು ಒಂದೆಡೆ, ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್ನಡಿ ಬಂಧಿತರಾದವರನ್ನು ಇನ್ನೊಂದಡೆ ಇರಿಸುತ್ತಿದ್ದರು. ಮಹಿಳಾ ರಾಜಕೀಯ ಖೈದಿಗಳು ಮಾತ್ರ ಕಷ್ಟದ ಸ್ಥಿತಿಯನ್ನು ನಿಭಾಯಿಸಬೇಕಿತ್ತು. ಏಕೆಂದರೆ ಇವರಿಗೆಂದು ಪ್ರತ್ಯೇಕವಾದ ವ್ಯವಸ್ಥೆ ಇರಲಿಲ್ಲ. ಇವರನ್ನು ಈಗಾಗಲೇ ಶಿಕ್ಷೆಗೆ ಒಳಪಟ್ಟ ಇಲ್ಲವೇ ವಿಚಾರಣಾ ಹಂತದಲ್ಲಿರುವ ಖೈದಿಗಳ ಜೊತೆಯೇ ಇರಿಸುತ್ತಿದ್ದರು. ಜೊತೆಗೆ ಯಾವುದೇ ಮಾನಸಿಕ ರೋಗಿಗಳ ಆರೈಕೆ ಕೇಂದ್ರದಲ್ಲಿ ಜಾಗ ದೊರೆಯದ ಮಾನಸಿಕ ಅಸ್ವಸ್ಥರನ್ನು ಜೈಲಿನಲ್ಲಿರಿಸುವ ಒಂದು ವಿಶಿಷ್ಟ ಅಭ್ಯಾಸ ಇಂಡಿಯಾದ ಜೈಲುಗಳಲ್ಲಿದೆ. ಜೈಲಿನಲ್ಲಿ ಭರ್ತಿ ಮಾಡಿದಾಗ, ಅಧಿಕಾರಿಗಳು ನನ್ನನ್ನು ಮೀಸಾ ಖೈದಿಗಳು ಇರುವ ಜಾಗದಲ್ಲಿರಿಸದೆ, ಸಾಮಾನ್ಯ ವಾರ್ಡಿನಲ್ಲಿರಿಸಿದರು. ಇಲ್ಲಿ ಈಗಾಗಲೇ ಶಿಕ್ಷೆಗೆ ಒಳಗಾದವರು ಮತ್ತು ವಿಚಾರಣಾಧೀನ ಖೈದಿಗಳು ಇರುತ್ತಿದ್ದರು.
ಜೈಲನ್ನು ನಾನು ಕಂಡದ್ದು ಇದೇ ಮೊದಲು. ನಾನಿದ್ದ ವಾರ್ಡಿನಲ್ಲಿ ಹಲವು ಬ್ಲಾಕ್ಗಳು ಇದ್ದವು. ಪ್ರತಿ ಬ್ಲಾಕನಲ್ಲೂ ಒಂದಷ್ಟು ಸೆಲ್ಗಳು ಇದ್ದವು. ಪ್ರತೀ ಬ್ಲಾಕ್ನ ನಡುವೆ ಖಾಲಿ ಜಾಗವಿತ್ತಾದರೂ, ಹಸಿರು ಇರಲಿಲ್ಲ. ಸೆಲ್ಗಳಲ್ಲಿ ಕನಿಷ್ಠ ವ್ಯವಸ್ಥೆಗಳಿದ್ದವು. ಇದನ್ನು ಇದಕ್ಕಿಂತ ಬೇರೆಯಾಗಿ ಹೇಳಲು ಅವಕಾಶವೇ ಇಲ್ಲ. ಪ್ರತಿಯೊಬ್ಬ ಖೈದಿಗೂ ಒಂದು ಸಿಮೆಂಟ್ ಹಾಸು, ಒಂದು ಬೆಡ್ಶೀಟ್ ಮತ್ತು ಒಂದು ದಿಂಬು ಇದ್ದವು. ಕೆಲವು ಅದೃಷ್ಟವಂತರಿಗೆ ಹೊದೆಯಲು ಇನ್ನೂ ಒಂದು ಬೆಡ್ಶೀಟ್ ಸಿಗುತಿತ್ತು. ಚಳಿಗಾಲದಲ್ಲಿ ಒಂದು ಕಂಬಳಿ ದೊರೆಯುತಿತ್ತು. ಶೌಚಾಲಯವು ಕೂಡ ಸೆಲ್ ಭಾಗವೇ! ಅದೃಷ್ಟಕ್ಕೆ ನಾನಿದ್ದ ಸೆಲ್ ಒಬ್ಬರಿಗೆ ಮಾತ್ರ ಸೀಮಿತವಾಗಿದ್ದ ಸೆಲ್ ಆಗಿತ್ತು.
ಇಲ್ಲಿನ ದಿನಚರಿಯಲ್ಲಿ ಯಾವುದೇ ಏರುಪೇರು ಇರುವುದಿಲ್ಲ. ಬೆಳಗಿನ ಹೊತ್ತು ನಿಮಗೆ ಹೊರಗೆ ಬಿಡಲಾಗುತ್ತದೆ ಮತ್ತು ರಾತ್ರಿ ವೇಳೆ ಒಳಗೆ ಬಿಟ್ಟು ಬೀಗ ಹಾಕಲಾಗುತ್ತದೆ. ಸೆಲ್ನ ದೀಪಗಳು ರಾತ್ರಿಯಿಡೀ ಉರಿಯುತ್ತವೆ. ಉರಿಯುವ ದೀಪದಡಿಯಲ್ಲಿ ಮಲುಗುವುದನ್ನು ರೂಢಿ ಮಾಡಿಕೊಳ್ಳಬೇಕು. ಪ್ರತೀ ದಿನ ಸಂಜೆ ಜೈಲಿನಲ್ಲಿ ಬಹಳ ಮುಖ್ಯವಾದ ಚಟುವಟಿಕೆಯಾದ ʼಖೈದಿಗಳ ತಲೆ ಎಣಿಕೆʼ ನಡೆಯುತ್ತದೆ. ಸಂಜೆಯ ಹೊತ್ತಿಗೆ ಎಲ್ಲಾ ಖೈದಿಗಳನ್ನು ಅವರವರ ಸೆಲ್ಗಳಲ್ಲಿ ಕೂಡಿ ಬೀಗ ಹಾಕಲಾಗುತ್ತದೆ. ಈ ಅಧಿಕಾರಿ ವರ್ಗಕ್ಕೆ ಸಂಖ್ಯೆಗಳು ಎಂದರೆ ಬಹಳ ಪ್ರೀತಿ ಎನಿಸುತ್ತದೆ. ದಿನ ಕೊನೆಗೆ ಎಲ್ಲಾ ಸಂಖ್ಯೆಗಳ ಲೆಕ್ಕ ಪಕ್ಕ ಆಗಿಬಿಡಬೇಕು.
ಇದನ್ನು ಓದಿದ್ದೀರಾ?: ಜನರ ಕವಿ ಲೋರ್ಕಾನ ನಾಲ್ಕು ನಾಟಕಗಳು: ಎಸ್.ಗಂಗಾಧರಯ್ಯ ಬರೆಹ
ನಾನಿದ್ದ ವಾರ್ಡಿನಲ್ಲಿ ಕೆಲವು ಗಂಭೀರ ಅಪರಾಧಗಳಲ್ಲಿ ಶಿಕ್ಷೆಯಾದ ಖೈದಿಗಳಿದ್ದರು. ಹಾಗೆ ವಿಚಾರಣಾಧೀನ ಖೈದಿಗಳು ಸಹಾ ಇದ್ದರು. ಕೆಲವರು ಬೇಲ್ ಪಡೆಯಲು ಕಾಯುತ್ತಿದ್ದರೆ, ಹಲವರಿಗೆ ಅಂತಹ ಅವಕಾಶಗಳೇ ಇರಲಿಲ್ಲ. ಕೆಲವು ಗಂಭೀರ ಅಪರಾಧಗಳಲ್ಲಿ ಭಾಗಿಯಾದವರಿಗೆ ಬೇಲ್ ಅವಕಾಶ ಇರುವುದಿಲ್ಲ. ಈಗಿನ ದಿನಗಳಲ್ಲಿ ವಿಚಾರಣಾಧೀನ ಖೈದಿಗಳು ಮತ್ತು ಶಿಕ್ಷಿತ ಖೈದಿಗಳನ್ನು ಪ್ರತ್ಯೇಕವಾಗಿ ಇರಿಸುವ ವ್ಯವಸ್ಥೆ ಇದೆಯೋ ಏನೋ ನನಗೆ ಗೊತ್ತಿಲ್ಲ. ಆದರೆ ನಾನು ಜೈಲಿನಲ್ಲಿದ್ದ ದಿನಗಳಲ್ಲಿ ಇಬ್ಬರನ್ನು ಒಟ್ಟಿಗೆ ಇರಿಸುತ್ತಿದ್ದರು. ಮಾನಸಿಕ ಅಸ್ವಸ್ಥರಿಗೆ ಪರಿಹಾರ ದೊರೆಯಲು ಇನ್ನೂ 25 ವರ್ಷಗಳು ಬೇಕಾಯಿತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ನ್ಯಾ. ಜೆ.ಎಸ್. ವರ್ಮ ಮಾನಸಿಕ ರೋಗಿಗಳನ್ನು ಯಾವುದೇ ಸಂದರ್ಭದಲ್ಲೂ ಜೈಲಿನಲ್ಲಿ ಇರಿಸದಂತೆ ಕ್ರಮಕೈಗೊಳ್ಳಬೇಕೆಂದು ಸರ್ಕಾರಗಳಿಗೆ ಸೂಚನೆ ನೀಡಿದರು.
ಈ ವಿಚಾರ ನಾನು ನೋಡಿದ ಮನಕರಗುವಂತಹ ಘಟನೆಯನ್ನು ನೆನಪಿಸುತ್ತಿದೆ. ಮೂವರು ಸಿಖ್ ಪುರಷರು ಕೊಲೆ ಆರೋಪದ ಮೇಲೆ ವಿಚಾರಣೆಯನ್ನು ಎದುರಿಸುತ್ತಾ ತಿಹಾರ್ ಜೈಲಿನಲ್ಲಿದ್ದರು. ಜೈಲಿನಲ್ಲಿರುವಾಗ ಒಳಿತನ್ನು ಮಾಡಿ ದೈವದ ಕೃಪೆ ಪಡೆದಲ್ಲಿ ಶಿಕ್ಷೆಗೆ ಗುರಿಯಾಗದೇ ಇರಬಹುದೆಂದು ಅವರು ತೀರ್ಮಾನಿಸಿದರೆಂದು ಕಾಣುತ್ತದೆ. ಈ ಪುಣ್ಯವನ್ನು ಸಂಪಾದಿಸುವ ಸಲುವಾಗಿ ಈ ಮೂವರು ಅಲ್ಲಿದ್ದ ಒರ್ವ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಜೋಪಾನಿಸುವ ಕೆಲಸ ಮಾಡುತ್ತಿದ್ದರು. ಈತನಿಗೆ ಕಣ್ಣು ಕಾಣುತ್ತಿರಲಿಲ್ಲ ಮತ್ತು ಮಾತೂ ಬರುತ್ತಿರಲಿಲ್ಲ. ಕೆಲವೊಂದು ವಿಚಿತ್ರವಾದ ಸದ್ದುಗಳನ್ನು ಆಗಾಗ ಹೊರಡಿಸುತ್ತಿದ್ದನು. ಬಹುಶಃ ಈ ಮೂವರು ಮಾಡಿದ ಪುಣ್ಯ ಕಾರ್ಯದ ಲೆಕ್ಕ ದೇವರ ಕಡತಕ್ಕೆ ಸೇರಲಿಲ್ಲವೆಂದು ಕಾಣುತ್ತದೆ. ಮೂವರಿಗೂ ಜೈಲು ಶಿಕ್ಷೆ ಖಾಯಂ ಆಯಿತು. ಇಡೀ ವಾರ್ಡ್ ಇವರ ಕುರಿತು ಬೇಸರ ಮಾಡಿಕೊಂಡಿತು. ಎಲ್ಲರೊಂದಿಗೆ ಒಳ್ಳೆಯ ವರ್ತನೆ ತೋರುತ್ತಿದ್ದ ಈ ಮೂವರು ಆ ಕಣ್ಣಿಲ್ಲದ ಮಾನಸಿಕ ಅಸ್ವಸ್ಥನನ್ನು ಜೋಪಾನಿಸುವ ಪರಿಯನ್ನು ಇವರೆಲ್ಲಾ ನೋಡಿದ್ದು ಮತ್ತೊಂದು ಕಾರಣವೂ ಇತ್ತು. ಇವರಿಗೆ ಶಿಕ್ಷೆ ಖಾಯಂ ಆಗಿದ್ದನ್ನು ಕಂಡು ಸಮಾಧಾನವಾಗಿದ್ದು ಬಹುಶಃ ಆ ಕಣ್ಣು-ಮಾತು ಇರದ ವ್ಯಕ್ತಿಗೆ ಮಾತ್ರ ಎನಿಸುತ್ತದೆ. ಒಂದು ವೇಳೆ ಇವರಿಗೆ ಬಿಡುಗಡೆಯಾದರೆ ನನ್ನನ್ನು ನೋಡಿಕೊಳ್ಳುವವರು ಯಾರೆಂಬ ಆತನಿಗೆ ಆತಂಕವಿದ್ದಿರಬಹುದು.
ಅಲ್ಲಿದ್ದ ಖೈದಿಗಳಲ್ಲಿ ಕೆಲವರು ಸರ್ಕಾರವನ್ನು ಪ್ರತಿರೋಧಿಸದೇ ಇದ್ದವರು ಇದ್ದರು. ಇವರೆಲ್ಲಾ ಒಂದು ಸ್ವಾಯತ್ತ ಸಂಸ್ಥೆಯೊಂದರ ಯೂನಿಯನ್ಗೆ ಸೇರಿದ ನಾಯಕರಾಗಿದ್ದವರು. ಈ ಯೂನಿಯನ್ ಯಾವುದೇ ರಾಜಕೀಯ ಪಕ್ಷದ ಪರವಾಗಿ ಇರಲಿಲ್ಲವಾದರೂ, ಅದರ ನಾಯಕರು ಕಾಂಗ್ರೆಸ್ಗೆ ತುಸು ಹತ್ತಿರವಾಗಿದ್ದರು. ಇವರ ಯೂನಿಯನ್ ಚಟುವಟಿಕೆಗಳನ್ನು ಸಹಿಸಲಾಗದ ಸಂಸ್ಥೆಯ ಅಧಿಕಾರಿಯೋರ್ವ ಇವರೆಲ್ಲಾ ತುರ್ತು ಪರಿಸ್ಥಿತಿಯ ವಿರುದ್ಧವಾಗಿದ್ದಾರೆಂದು ಸರ್ಕಾರಕ್ಕೆ ದೂರು ನೀಡಿದನು. ಸಾಮಾನ್ಯವಾಗಿ ಇವರನ್ನು ಇತರೆ ರಾಜಕೀಯ ಖೈದಿಗಳ ಜೊತೆಯಲ್ಲಿ ಇರಿಸಬೇಕಿತ್ತು. ಆದರೆ ಇವರಿಗೆ ಸರ್ಕಾರ ತುರ್ತು ಪರಿಸ್ಥಿತಿಯನ್ನು ವಿರೋಧಿಸುವವರ ಜೊತೆಗೆ ಹೋಗಲು ಸಿದ್ಧರಿರಲಿಲ್ಲ. ಏಕೆಂದರೆ ಅವರು ತುರ್ತು ಪರಿಸ್ಥಿತಿಯನ್ನು ಯಾವ ಕಾರಣಕ್ಕೂ ವಿರೋಧಿಸುವವರಲ್ಲ. ಹಾಗಾಗಿ ಸಾಮಾನ್ಯ ವಾರ್ಡಿನಲ್ಲೇ ತಮ್ಮನ್ನು ಇರಿಸುವಂತೆ ಅವರು ಕೋರಿಕೊಂಡಿದ್ದರು.
ಇವರ ಪ್ರಕರಣವೂ ಸಹಾ ತುರ್ತು ಪರಿಸ್ಥಿತಿಯ ಲಕ್ಷಣಗಳನ್ನು ವಿವರಿಸುತ್ತದೆ. ಯಾವುದೋ ಫ್ಯಾಕ್ಟರಿಯ ಮಾಲೀಕನಿಗೆ ಇಲ್ಲವೇ ಯಾವುದೋ ಅಧಿಕಾರಿಗೆ ಕಾರ್ಮಿಕರು ನಡೆಸುತ್ತಿದ್ದ ಯೂನಿಯನ್ ಚಟುವಟಿಕೆಗಳು ಇಷ್ಟವಾಗಲಿಲ್ಲ ಎಂದಿಟ್ಟುಕೊಳ್ಳಿರಿ, ಆಗ ಆತ/ಆಕೆ ಸರ್ಕಾರಕ್ಕೆ ದೂರು ನೀಡಿ ಇವರನ್ನು ಜೈಲಿನಲ್ಲಿರುವಂತೆ ಮಾಡಬಲ್ಲವಾಗಿದ್ದರು. ಇಂತಹವರು ತುರ್ತು ಪರಿಸ್ಥಿತಿಯನ್ನು ವಿರೋಧಿಸುತ್ತಿದ್ದಾರೆಂದು ಸರ್ಕಾರಕ್ಕೆ ದೂರು ನೀಡಿದರೆ ಸಾಕಾಗಿತ್ತು. ಆಡಳಿತ ಯಂತ್ರವು ಹೀಗೆ ದೂರಲ್ಪಟ್ಟವರನ್ನು ಮೀಸಾದಡಿಯಲ್ಲೋ ಇಲ್ಲವೇ ಡಿಐಆರ್ ಅಡಿಯಲ್ಲೋ ಪ್ರಕರಣವನ್ನು ದಾಖಲಿಸುತ್ತಿತ್ತು. ಡಿಐಆರ್ ಅಡಿಯಲ್ಲಿ ಪ್ರಕರಣ ದಾಖಲಾದವರು ಸ್ವಲ್ಪ ಅದೃಷ್ಟವಂತರೆಂದೇ ಪರಿಗಣಿಸಬೇಕು. ಸ್ವಲ್ಪ ದಿನಗಳವರೆಗೆ ಜೈಲಿನಲ್ಲಿರುವುದು ಅಗತ್ಯವಿದ್ದರೂ, ಕೋರ್ಟುಗಳಲ್ಲಿ ಪ್ರಕರಣ ದಾಖಲಿಸಿ ಹೋರಾಡಬಹುದಿತ್ತು. ಆದರೆ ಮೀಸಾದಡಿ ಬಂಧಿತರಾದವರಿಗೆ ಇದ್ಯಾವುದೇ ಸೌಲಭ್ಯವಿರಲಿಲ್ಲ. ಮೀಸಾ ವಿಚಾರವಾಗಿ ಸುಪ್ರೀಂ ಕೋರ್ಟ್ ಕೆಲವು ನಿಬಂಧನೆಗಳನ್ನು 1976ರ ಎಡಿಎಂ ಜಬಲ್ಪುರದ ಪ್ರಕರಣದಲ್ಲಿ ಸ್ಪಷ್ಟಪಡಿಸಿತ್ತು. ಇದರ ಪ್ರಕಾರ ಎಲ್ಲರಿಗೂ ಬದುಕುವ ಮತ್ತು ಸ್ವಾತಂತ್ರ್ಯ ಹಕ್ಕು ಇದೆಯಾದರೂ, ಆದರೆ ಈ ಹಕ್ಕಿನ ಹಕ್ಕು ಸ್ಥಾಪನೆಗಾಗಿ ಕೋರ್ಟಿನ ಬಳಿ ಹೋಗುವಂತಿರಲಿಲ್ಲ. ಪ್ರತಿಯೊಂದು ಮೀಸಾ ಆದೇಶಗಳನ್ನು ಪ್ರತಿ ನಾಲ್ಕು ತಿಂಗಳಲ್ಲಿ ಒಮ್ಮೆ ಪರಿಶೀಲಿಸುವ ಅಗತ್ಯವಿತ್ತು. ಆದರೆ ಇದೊಂದು ಕಣ್ಣೊರೆಸುವ ನಾಟಕವೆಂದು ನಮಗೆಲ್ಲಾ ತಿಳಿದಿತ್ತು. ಏಕೆಂದರೆ ಸರ್ಕಾರದ ಆಂತರಿಕ ಪರಿಶೀಲನೆ ಯಾವ ತೀರ್ಮಾನಕ್ಕೆ ಬರಬೇಕೆಂಬುದು ಪೂರ್ವನಿರ್ಧಾರವಾಗಿರುತ್ತಿದೆ.
ವಿಚರಣಾಧೀನ ಖೈದಿಗಳು ಮತ್ತು ಶಿಕ್ಷಿತ ಖೈದಿಗಳ ನಡುವೆ ಇರಲು ನನಗೆ ದೊರೆತಿದ್ದು ಕಡಿಮೆ ಕಾಲಾವಕಾಶವಾದರೂ, ಇವರ ಕುರಿತು ಕೆಲವು ವಿಷಯಗಳನ್ನು ನನಗೆ ಅರಿಯಲು ಆಗಿತ್ತು. ಆಹಾರ ಇಲ್ಲಿ ಎಲ್ಲರಿಗೂ ಸಮಾನವಾಗಿತ್ತು. ತಿನ್ನಲು ಅಸಾಧ್ಯವಾದ ಆಹಾರವನ್ನು ಎಲ್ಲರೂ ಪಡೆಯುತಿದ್ದರು. ನನ್ನಂತಹವರು ನಮ್ಮ ವರ್ಗದ ಕಾರಣದಿಂದ ಸುರಕ್ಷಿತವಾಗಿರಲು ಸಾಧ್ಯವಾಗುವುದನ್ನು ನೇರವಾಗಿ ಅನುಭವಿಸಿದೆನು. ನಾನೋರ್ವ ಓದು-ಬರಹ ಬಲ್ಲ ಹುಡುಗ ಎನ್ನುವ ಕಾರಣಕ್ಕೆ ಗೌರವ ಪಡೆಯಲು ಸಾಧ್ಯವಾಗಿತ್ತು. ಜೊತೆಗೆ ರಾಜಕೀಯ ಖೈದಿ ಅನ್ನೋ ಹಣೆಪಟ್ಟಿ ಬೇರೆ ಇತ್ತು. ನಮ್ಮ ಜೈಲಿನಲ್ಲಿ ನಮ್ಮ ವರ್ಗದ ಕಾರಣದಿಂದ ಒಂದಿಷ್ಟು ಸುರಕ್ಷೆಯನ್ನು ಪಡೆಯಲು ಅವಕಾಶವಾಗುತಿತ್ತು. ಆದರೆ ಇದು ಅನೇಕ ಹೊರ ದೇಶಗಳಲ್ಲಿ ಲಭ್ಯವಿಲ್ಲ. ಅಮೆರಿಕಾದ ದೇಶದ ಉದಾಹರಣೆಯನ್ನು ಪರಿಗಣಿಸದಿರುವುದೇ ಉತ್ತಮ. ಬಹುತೇಕ ಅಮೆರಿಕಾದ ಜೈಲುಗಳು ಹಿಂಸೆಯ ಆಗರಗಳು(ಹಾಲಿವುಡ್ ಸಿನಿಮಾ ಮತ್ತು ಗಂಭೀರ ಸಾಹಿತ್ಯದಲ್ಲಿ ವಿವರಿಸುವಂತೆ). ಉದಾಹರಣೆಗೆ ಲ್ಯಾಟಿನ್ ಅಮೆರಿಕಾದ ದೇಶಗಳ ಜೈಲಿನಲ್ಲಿ ಯಾವುದೇ ವಿಶೇಷವಾದ ಸುರಕ್ಷತೆಗಳು ರಾಜಕೀಯ ಖೈದಿಗಳಿಗೆ ದೊರೆಯುತ್ತಿರಲಿಲ್ಲ. ಇಲ್ಲಿನ ಜೈಲುಗಳಲ್ಲಿ ಬಂಧಿಯಾಗಿದ್ದ ಸ್ನೇಹಿತರು ಇಲ್ಲವೇ ಸ್ನೇಹಿತರ ಸ್ನೇಹಿತರಿಂದ ಕೇಳಿ ತಿಳಿದ ಹಾಗೆ, ರಾಜಕೀಯ ಖೈದಿಗಳ ಮೇಲೆ ಅಪಾರವಾದ ದೌರ್ಜನ್ಯ ನಡೆಯುತ್ತದೆ. ಪಿನ್ಶೋಟ್ನ ರೀತಿಯ ಸರ್ವಾಧಿಕಾರಿಗಳ ಆಡಳಿತದಲ್ಲಿ ಶಿಕ್ಷೆಗೆ ಒಳಗಾದ ರಾಜಕೀಯ ಖೈದಿಗಳು ಅಪಾರವಾದ ಹಿಂಸೆಗೆ ಗುರಿಯಾಗಿದ್ದಾರೆ. ಎಡಪಂಥೀಯ ಮೌಲ್ಯಗಳನ್ನು ಹೊಂದಿರುವ ಏಕೈಕ ಕಾರಣಕ್ಕೆ, ರಾಜಕೀಯ ಖೈದಿಗಳು ಅಪಾರವಾದ ಹಿಂಸಾಚಾರಕ್ಕೆ ಈಡಾಗಿದ್ದಾರೆ. ಹಾಗೇ ನೋಡಿದರೆ, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ನೋಡಿದಾಗ, ಇಂದು ಜೈಲಿನಲ್ಲಿರುವ ಖೈದಿ, ನಾಳಿನ ಜನನಾಯಕರು ಆಗಿದ್ದು ಇದೆ. ಹೀಗಿದ್ದರೂ, ನಿಮ್ಮ ವರ್ಗ ಜೈಲಿನಲ್ಲಿ ವಿಶೇಷವಾದ ರಕ್ಷಣೆಯನ್ನು ನಿಮಗೆ ನೀಡೇ ನೀಡುತ್ತದೆ.
ಬಹುಶಃ ಜೈಲಿನ ಮೊದಲ ಐದು ದಿನಗಳನ್ನು ನಾನು ಸಾಮಾನ್ಯ ವಾರ್ಡಿನಲ್ಲಿ ಕಳೆದೆ. ಆನಂತರ ನನ್ನನ್ನು ವಾರ್ಡ್ 14ಕ್ಕೆ ಸ್ಥಳಾಂತರಿಸಲಾಯಿತು. ಇದು ಮೀಸಾ ಖೈದಿಗಳಿಗೆಂದು ಮೀಸಲಾಗಿದ್ದ ಎರಡು ವಾರ್ಡುಗಳಲ್ಲಿ ಒಂದಾಗಿತ್ತು. ಮೀಸಾ ಖೈದಿಗಳಿಗೆಂದೇ ಇದ್ದ ಇನ್ನೊಂದು ವಾರ್ಡ್ 01 ಆಗಿತ್ತು. ನನ್ನ ನೆನಪು ಸರಿಯಿದ್ದರೆ, ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್ನಲ್ಲಿ ಬಂಧಿತರಾದವರನ್ನು ವಾರ್ಡ್ 15ರಲ್ಲಿ ಇರಿಸುತ್ತಿದ್ದರು.
(ಕೃತಿಯ ಆಯ್ದ ಭಾಗ. ಕನ್ನಡ ಅನುವಾದ: ಸದಾನಂದ ಆರ್.)
