ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ಇತಿಹಾಸದಲ್ಲಿಯೇ ಅತಿ ದೊಡ್ಡ ಲೈಂಗಿಕ ಹಗರಣ ಎನ್ನಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಪ್ರಜ್ವಲ್ ತಂದೆ, ಎ1 ಆರೋಪಿ ಎಚ್.ಡಿ ರೇವಣ್ಣರನ್ನು ಬಂಧಿಸಿದೆ. ಪ್ರಜ್ವಲ್ ಬಂಧನಕ್ಕಾಗಿ ‘ಬ್ಲೂ ಕಾರ್ನ್ ನೋಟಿಸ್’ ಜಾರಿ ಮಾಡಲಾಗಿದೆ.
ಹಗರಣದಲ್ಲಿ ನೂರಾರು ಸಂತ್ರಸ್ತೆಯರನ್ನು ಆರೋಪಿ ತನ್ನ ಕಾಮವಾಂಚೆ ತೀರಿಸಿಕೊಳ್ಳಲು ಹೆದರಿಸಿ, ಬೆದರಿಸಿ, ಆಮಿಷವೊಡ್ಡಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಸಂತ್ರಸ್ತೆಯ ರಕ್ಷಣೆಗೆ ಎಸ್‌ಐಟಿ ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಯಾರು ಶೇರ್ ಮಾಡದಂತೆ ಎಚ್ಚರಿಕೆ ನೀಡಿದೆ.
ವೈರಲ್ ಆದ ವಿಡಿಯೋಗಳಲ್ಲಿ ರೇವಣ್ಣ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ವಿಡಿಯೋ ಕೂಡ ಇದ್ದು, ಆಕೆಯ ಮೇಲೆ ಆರೋಪಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಕೃತ್ಯದ ವಿಡಿಯೋ ಹೊರಬಂದ ಬಳಿಕ, ಆಕೆಯನ್ನು ಅಪಹರಿಸಲಾಗಿತ್ತು. ಅಪಹರಣ ಪ್ರಕರಣದಲ್ಲಿ ರೇವಣ್ಣ ಮತ್ತು ಅವರ ಸಹಚರ ಸತೀಶ್‌ನನ್ನು ಬಂಧಿಸಲಾಗಿದೆ.
ಇಂತಹ ಬೆಳವಣಿಗೆಗಳ ನಡುವೆ, ಸಂತ್ರಸ್ತೆಯ ಮನೆಗೆ ನ್ಯೂಸ್ ಮಿನಿಟ್ ತಂಡ ಭೇಟಿ ನೀಡಿದ್ದು, ಕುಟುಂಬಸ್ಥರ ಅಭಿಪ್ರಾಯ, ಆಕ್ರೋಶಗಳನ್ನು ವರದಿ ಮಾಡಿದೆ. “ಪ್ರಜ್ವಲ್ ರೇವಣ್ಣಗೆ ಯಾವತ್ತು ತಲೆ ಎತ್ತಿ ನಡೆಯದಂತಹ ಶಿಕ್ಷೆ ಆಗಬೇಕು” ಎಂದು ಸಂತ್ರಸ್ತೆಯ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿದ್ದಾರೆ.
“ಪ್ರಜ್ವಲ್ ರೇವಣ್ಣನ ಲೈಂಗಿಕ ಕೃತ್ಯದ ಸುಮಾರು 3,000 ವಿಡಿಯೋಗಳಲ್ಲಿ ನನ್ನ ಸಹೋದರಿ ಇದ್ದಾರೆ ಎಂಬ ಬಗ್ಗೆ ಕೆಲ ದಿನಗಳ ಹಿಂದೆಯಷ್ಟೇ ತಿಳಿಯಿತು. ನಮಗೆ ಕೃತ್ಯದ ಮಾಹಿತಿ ತಿಳಿಯುವ ಮೊದಲೇ ರೇವಣ್ಣ ಕುಟುಂಬದ ಸಂಬಂಧಿ ಹಾಗೂ ಆತನ ಆಪ್ತ ಸತೀಶ್ ಬಾಬಣ್ಣ ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿದ್ದರು” ಎಂದು ಹೇಳಿದ್ದಾರೆ.
“ನಾವು ಸಂತ್ರಸ್ತೆಯ ಬಗ್ಗೆ ಸತೀಶ್‌ನನ್ನು ಕೇಳಿದಾಗ, ಆತ, ‘ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದ್ದನು. ಆದರೆ, ಮೇ 1ರಂದು ಸಂತ್ರಸ್ಥೆಯ ಮಗನ ಸ್ನೇಹಿತರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೋಗಳ ಬಗ್ಗೆ ತಿಳಿಸಿದ್ದರು. ಆಗ ಆಕೆ ಕಿಡ್ನಾಪ್ ಆಗಿದ್ದಾರೆಂದು ನಮಗೆ ಅರಿವಾಯಿತು. ಬಳಿಕ, ಮೇ 2 ರಂದು ಕೆ.ಆರ್.ನಗರ ಪೊಲೀಸರಿಗೆ ದೂರು ನೀಡಿದೇವು” ಎಂದು ಸಂತ್ರಸ್ತೆಯ ಸಹೋದರಿ ವಿವರಿಸಿದ್ದಾರೆ.
ಸಂತ್ರಸ್ತೆ ಮತ್ತು ಆಕೆಯ ಪತಿ ಹೊಳೆನರಸೀಪುರದ ಗನ್ನಿಕಡದಲ್ಲಿರುವ ಎಚ್.ಡಿ.ರೇವಣ್ಣ ಅವರ ಜಮೀನಿನಲ್ಲಿ ಆರು ವರ್ಷಗಳಿಂದ ಕೃಷಿ ಕೆಲಸ ಮಾಡುತ್ತಿದ್ದರು. ಮಾಲಾ ಮತ್ತು ಆಕೆಯ ಪತಿ ಕಾಮೇನಹಳ್ಳಿಯ ಮತ್ತೊಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಗನ್ನಿಕಡದಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಾಗ ಅಂದರೆ, ಮೂರು ವರ್ಷಗಳ ಹಿಂದೆಯೇ ಸಂತ್ರಸ್ತೆಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದನು. ಆಕೆಗೆ ಬೆದರಿಕೆ ಹಾಕಿದ್ದನು. ಕೃತ್ಯದಿಂದ ಸಂತ್ರಸ್ತೆ ನೊಂದು ಹೋಗಿದ್ದರು. ಆಕೆ ತನ್ನ ಪತಿಯೊಂದಿಗೆ ಕೆಲಸ ತೊರೆದು ತಮ್ಮೂರಿಗೆ ಮರಳಿದ್ದರು.
“ರೇವಣ್ಣ ಅವರ ಮನೆಯ ಕೆಲಸ ಬಿಟ್ಟ ನಂತರವೂ ತನ್ನ ಮೇಲೆ ಪ್ರಜ್ವಲ್ ರೇವಣ್ಣ ಎಸಗಿದ ಕೃತ್ಯದ ಬಗ್ಗೆ ಆಕೆ ಯಾರ ಬಳಿಯೂ ಹೇಳಿರಲಿಲ್ಲ. ನಾವೆಲ್ಲರೂ ಅವರನ್ನೇ ದೂಷಿಸಿ ಬೈಯುತ್ತೇವೆ ಎಂದು ಅವರು ಹೆದರಿದ್ದರು ಎಂದೆನಿಸುತ್ತದೆ. ಆದರೆ, ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಅವಳು ಯಾವುದೇ ತಪ್ಪು ಮಾಡಿಲ್ಲ. ಆದರೆ, ಅದು ಅವಳ ತಪ್ಪು ಎಂದು ಜನರು ಭಾವಿಸುತ್ತಾರೆ. ನಾವು ಯಾವುದೇ ತಪ್ಪು ಮಾಡದಿದ್ದರೂ ಜನರನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿಲ್ಲ” ಎಂದು ಸಂತ್ರಸ್ತೆಯ ಸಹೋದರಿ ಮಾಲಾ ಹೇಳಿದ್ದಾರೆ.

“ನನ್ನ ಸಹೋದರಿಗೆ ಎಚ್.ಡಿ ರೇವಣ್ಣ ಅಥವಾ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಹೆಚ್ಚಾಗಿ ತಿಳಿದಿರಲಿಲ್ಲ. ಅವಳು ಹೆಚ್ಚಾಗಿ ಭವಾನಿ ರೇವಣ್ಣ ಅವರ ಜತೆಗೆ ಸಂಪರ್ಕದಲ್ಲಿದ್ದಳು. ನಾವು ಬಡವರಾಗಿದ್ದು, ನಮಗೆ ಕೆಲಸದ ಅವಶ್ಯಕತೆಯಿದೆ. ಹಾಗಾಗಿ, ಅದೇ ಗ್ರಾಮದ ನಿವಾಸಿಯಾದ ಸತೀಶ್ ಬಾಬಣ್ಣ ಅವರ ಮೂಲಕ ರೇವಣ್ಣನವರ ಮನೆಯಲ್ಲಿ ಕೆಲಸ ಸಿಕ್ಕಿತು. ಉದ್ಯೋಗವನ್ನು ನೀಡಿದಾಗ ನಾವು ಒಪ್ಪಿಕೊಂಡೆವು. ಅಲ್ಲಿ ಹೀಗಾಗುತ್ತದೆ ಎಂದು ಯಾರು ಭಾವಿಸಿರಲಿಲ್ಲ’’ ಎಂದು ಅಳಲು ತೋಡಿಕೊಂಡಿದ್ದಾರೆ.
“ಈಗ ನಮಗೆ ದುಡಿಮೆಯೇ ಇಲ್ಲವಾಗಿದೆ. ಮುಂದೆ ನಾವು ಹೇಗೆ ಕೆಲಸ ಹುಡುಕುತ್ತೀವಿ ಎಂಬ ಬಗ್ಗೆ ನಮಗೆ ತಿಳಿದಿಲ್ಲ. ಸಾಲ ಕೂಡ ಮಾಡಿಕೊಂಡಿದ್ದೇವೆ. ಫೆಬ್ರುವರಿಯಲ್ಲಿ ಮಗಳ ಮದುವೆಗಾಗಿ, ಮತ್ತೋರ್ವ ಮಗಳ ಬಾಣಂತನಕ್ಕಾಗಿ ಗ್ರಾಮದಲ್ಲಿ 3 ಲಕ್ಷ ಮತ್ತು ಪರಿಚಯಸ್ಥರಿಂದ 2 ಲಕ್ಷ ಸಾಲ ಪಡೆದಿದ್ದೇವೆ” ಎಂದಿದ್ದಾರೆ.
“ಈ ಸಂದರ್ಭವನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿಲ್ಲ. ಮನೆಯಲ್ಲಿ ಒಬ್ಬರಿಗೊಬ್ಬರು ಏನು ಹೇಳಬೇಕೆಂದು ನಮಗೆ ತಿಳಿದಿಲ್ಲ. ನಾವು ಮಾತನಾಡುವುದನ್ನು ಕಡಿಮೆ ಮಾಡಿದ್ದೇವೆ. ಏಕೆಂದರೆ, ಅದು ಇನ್ನೊಬ್ಬ ವ್ಯಕ್ತಿಯನ್ನು ಅಳುವಂತೆ ಮಾಡುತ್ತದೆ. ಮನೆ ಸ್ಮಶಾನದಂತಾಗಿದೆ” ಎಂದು ಮಾಲಾ ತಿಳಿಸಿದ್ದಾರೆ.
“ಇದಕ್ಕೆ ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ.ರೇವಣ್ಣ ಅವರೇ ಹೊಣೆಗಾರರು. ಅವರಿಗೆ ಶಿಕ್ಷೆಯಾಗಬೇಕು. ನಮಗೆ ಆದಂತೆ ಇನ್ನೊಬ್ಬರಿಗೆ ಆಗಬಾರದು. ಅವರಿಗೆ ಶಿಕ್ಷೆಯಾಗದಿದ್ದರೆ, ಅವರು ಮತ್ತೆ ಈ ರೀತಿ ಮಾಡುತ್ತಾರೆ” ಎಂದು ಮಾಲಾ ಹೇಳಿದ್ದಾರೆ.

ಇದೀಗ, ಎಚ್.ಡಿ ರೇವಣ್ಣರನ್ನು ಬಂಧಿಸಲಾಗಿದೆ. ಸಂತ್ರಸ್ತೆಯನ್ನು ರಕ್ಷಿಸಲಾಗಿದೆ. ಹೀಗಾಗಿ, ಸಂತ್ರಸ್ತೆಯ ಕುಟುಂಬದವರೂ ಆಘಾತಕ್ಕೊಳಗಾಗಿದ್ದರೂ ಹೆದರಿಕೆ ದೂರವಾಗಿದೆ. ಅವರು ವಿಶ್ವಕರ್ಮ ಜಾತಿಗೆ ಸೇರಿದವರಾಗಿದ್ದು, ಪ್ಲಾಸ್ಟರ್ ಮಾಡದ ಇಟ್ಟಿಗೆ ಗೋಡೆಗಳ ಸಣ್ಣ ಎರಡು ಕೋಣೆಗಳ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಸಂತ್ರಸ್ತೆಯ ಮನೆಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.
“ನಮ್ಮ ಮನೆಯ ಬಳಿ ಪೊಲೀಸ್ ವ್ಯಾನ್ ಇರುವ ಬಗ್ಗೆ ನೆರೆಹೊರೆಯವರು ಕೇಳುತ್ತಾರೆ. ನಮ್ಮ ಕುಟುಂಬದಲ್ಲಿ ಯಾರಾದರೂ ಅಪರಾಧ ಮಾಡಿರಬಹುದು ಎಂದು ಅವರು ಭಾವಿಸುತ್ತಾರೆ. ಜನರು ಆ ವಿಡಿಯೋಗಳನ್ನು ನೋಡಿದ್ದಾರೆ. ಆದರೆ, ಅದರಲ್ಲಿರುವ ಮಹಿಳೆ ನನ್ನ ಸಹೋದರಿ ಎಂದು ಅವರಿಗೆ ತಿಳಿದಿಲ್ಲ” ಎಂದು ಮಾಲಾ ಹೇಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ ರೇವಣ್ಣನವರ ಕುಟುಂಬದ ಬಗ್ಗೆ ಇರುವ ಭಯ ಈ ಗ್ರಾಮದಲ್ಲಿ ಇಲ್ಲ. ಈ ಗ್ರಾಮ ಹಾಸನ ಗಡಿಯಿಂದ ಸುಮಾರು 20 ಕಿ.ಮೀ ಮತ್ತು ಹೊಳೆನರಸೀಪುರದಿಂದ 50 ಕಿ.ಮೀ ದೂರದಲ್ಲಿದೆ.
ಪ್ರಜ್ವಲ್ ಅವರ ರಾಜಕೀಯ ಪ್ರತಿಸ್ಪರ್ಧಿಗಳಿಂದ ಈ ಪೆನ್‌ಡ್ರೈವ್‌ಗಳಲ್ಲಿ ವಿಡಿಯೋಗಳನ್ನು ಅಪಲೋಡ್ ಮಾಡಲಾಗಿದೆ. ಈ ಪೆನ್‌ಡ್ರೈವ್‌ಗಳನ್ನು ಹಾಸನದ ಉದ್ಯಾನವನಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಅಂಗಡಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗಿತ್ತು.
ಏಪ್ರಿಲ್ 26 ರಂದು ಹಾಸನದಲ್ಲಿ ಚುನಾವಣೆ ನಡೆಯುವ ಮೂರು ದಿನಗಳ ಮೊದಲು ಪ್ರಜ್ವಲ್ ಕೃತ್ಯದ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಈ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿಯೂ ಸ್ಪಷ್ಟವಾಗಿ ಮಹಿಳೆಯರ ಮುಖ ಕಾಣುವ ಫೋಟೋಗಳು ಹರಿದಾಡುತ್ತಿವೆ. ಇದು ನೂರಾರು ಮಹಿಳೆಯರಿಗೆ ಮತ್ತು ಅವರ ಕುಟುಂಬಗಳಿಗೆ ಆಘಾತವನ್ನುಂಟು ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು, ಕೃತ್ಯದಲ್ಲಿ ಮಹಿಳೆಯರೂ ಸ್ವಯಂಪ್ರೇರಿತರಾಗಿ ಭಾಗಿದ್ದಾರೆಂದು ಬಿಂಬಿಸಲಾಗುತ್ತಿದೆ. ಅದರೆ, ಆಕ್ರಮಣದ ದೃಶ್ಯಗಳನ್ನು ಮರೆಮಾಚಿ ಅಥವಾ ನಿರ್ಲಕ್ಷ್ಯಿಸಿ ಇಂತಹ ಅಪರಾಧಗಳನ್ನು ಮತ್ತೆ ಎಸಗಲು ಅವಕಾಶ ನೀಡುವಂತಹ ಪ್ರತಿಪಾದನೆಗಳೂ ಕೇಳಿಬರುತ್ತಿವೆ.
ಸಂತ್ರಸ್ತೆ ವಾಸಿಸುತ್ತಿದ್ದ ಗ್ರಾಮದ ತರಕಾರಿ ಅಂಗಡಿಯ ಮಾಲೀಕರೊಬ್ಬರು ಮಾತನಾಡಿ, ”ನಾನು ಜೆಡಿಎಸ್ ಬೆಂಬಲಿಗರಾಗಿದ್ದರೂ ವೀಡಿಯೊಗಳಲ್ಲಿರುವ ವಿಷಯದಿಂದ ಬೇಸರಗೊಂಡಿದ್ದೇವೆ. ಅವರು ಒಕ್ಕಲಿಗರು ಎಂದು ನಾವು ಜೆಡಿಎಸ್‌ಗೆ ಬೆಂಬಲ ನೀಡಿದ್ದೇವೆ. ಆದರೆ, ಪ್ರಜ್ವಲ್ ರೇವಣ್ಣ ಮಾಡಿದ್ದು ತಪ್ಪು. ಅವರು ನಮ್ಮ ಹೆಸರನ್ನು ಹಾಳು ಮಾಡಿದರು. ಇಂಥವರು ಸಂಸದರಾಗಬಾರದಿತ್ತು’’ ಎಂದರು.
ಮೂಲ: ದಿ ನ್ಯೂಸ್ ಮಿನಿಟ್