ಮಳೆ ಅಬ್ಬರ | ಹಲವು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’; ಎರಡೇ ದಿನದಲ್ಲಿ 7 ಸಾವು

Date:

Advertisements

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರ ಮಳೆ ಮುಂದುವರೆದಿದೆ. ಕೆಲವೆಡೆ ಸಾಧಾರಣ ಮಳೆಯಾದರೇ, ಇನ್ನು ಕೆಲವೆಡೆ ಬಿಸಿಲಿನ ವಾತಾವರಣ ಮುಂದುವರೆದಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಸಾವು-ನೋವುಗಳು ಸಂಭವಿಸಿವೆ. ಅಲ್ಲದೆ, ರಾಜ್ಯದ ನಾನಾ ಭಾಗಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ 40ರಿಂದ 50 ಕಿ.ಮೀ ವೇಗದಲ್ಲಿ ನಿರಂತರ ಗಾಳಿಯ ಜತೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಭಾರೀ ಮಳೆ ಹಾಗೂ ಪ್ರವಾಹದ ಹಿನ್ನೆಲೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಆರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ನಾಲ್ಕು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ಆರಿದ್ರಾ ಮಳೆಯಬ್ಬರ ಶುಕ್ರವಾರವೂ ಮುಂದುವರಿದಿದೆ. ಭಾರೀ ಮಳೆಯಿಂದಾಗಿ ಮನೆಗಳ ಗೋಡೆ ಕುಸಿತ, ಮನೆಗೆ ನೀರು ನುಗ್ಗುವುದು ಹಾಗೂ ಮನೆಗಳು ಬಿದ್ದು ವ್ಯಾಪಕ ನಷ್ಟ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾದ ಅನಾಹುತಗಳಿಂದ ಎರಡೇ ದಿನಗಳಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

Advertisements

ಉಳ್ಳಾಲ ತಾಲೂಕಿನ ಮದನಿನಗರದಲ್ಲಿ ಮನೆ ಕುಸಿದು ನಾಲ್ವರು ಮೃತಪಟ್ಟಿದ್ದರೆ, ಮಂಗಳೂರು ನಗರದ ರೊಸಾರಿಯೊ ಶಾಲೆ ಹಿಂಭಾಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ಗುರುವಾರ ಸಂಜೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಮಳೆ ನೀರಿನಲ್ಲಿ ವಿದ್ಯುತ್‌ ಪ್ರವಹಿಸಿ 20 ವರ್ಷದ ಯುವತಿ ಪ್ರತೀಕ್ಷಾ ಶೆಟ್ಟಿ ಎಂಬವರು ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮರ ಬಿದ್ದಿರುವುದು, ಗೋಡೆ ಕುಸಿತ ಹಾಗೂ ಪ್ರವಾಹದಿಂದಾಗಿ ಕೃಷಿಗೇ ಹಾನಿಯಾದ ಘಟನೆಗಳು ವರದಿಯಾಗಿವೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನದಲ್ಲಿ ಭಾರೀ ಮಳೆಗೆ ಮಣ್ಣು ಸಡಿಲಗೊಂಡಿದ್ದು, ಮನೆಯ ಆವರಣದಲ್ಲಿದ್ದ ಬಾವಿ ಕುಸಿದುಹೋಗಿದೆ. ಬಾವಿ ಕುಸಿಯುವ ದೃಶ್ಯ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಬಳಿ ಭದ್ರಾ ನದಿ ಮೈತುಂಬಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಗೆ 4-5 ಅಡಿಯಷ್ಟೇ ಬಾಕಿ ಇದೆ.

ಘಟ್ಟಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಕುಮಾಧಾರಾ ನದಿ ಉಕ್ಕಿ ಹರಿಯುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಬಳಿ ಸ್ನಾನಘಟ್ಟ, ಕಿಂಡಿ ಆಣೆಕಟ್ಟು ಸಂಪೂರ್ಣ ಮುಳುಗಡೆ ಆಗಿವೆ. ನೇತ್ರಾವತಿ ನದಿ ಕೂಡಾ ಮೈದುಂಬಿ ಹರಿಯುತ್ತಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಅಲ್ಲಿನ ಸ್ನಾನಘಟ್ಟ ಮುಳುಗಿ, ಮುಖ್ಯದ್ವಾರದವೆರಗೂ ನೀರು ತಲುಪಿದೆ. ನೆರೆಯ ಕಾಸರಗೋಡಿನ ಪ್ರಸಿದ್ಧ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಜಲಾವೃತವಾಗಿದೆ.

ಶಾಲೆಗಳಿಗೆ ರಜೆ ಘೋಷಣೆ

ಭಾರೀ ಮಳೆ ಹಿನ್ನೆಲೆ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶಾಲೆಗಳಿಗೆ ಶುಕ್ರವಾರವೂ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೂ ಕೂಡ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಿ ತಹಶೀಲ್ದಾರ್ ಪರಮಾನಂದ ಅವರು ಆದೇಶ ಹೊರಡಿಸಿದ್ದಾರೆ. ಪಿಯುಸಿ ಹಾಗೂ ಪದವಿ ಕಾಲೇಜುಗಳು ಎಂದಿನಂತೆ ನಡೆಯಲಿವೆ.

ಮಳೆ ಸೃಷ್ಠಿಸಿದ ಅವಾಂತರ

ಬುಧವಾರ ರಾತ್ರಿಯಿಂದ ಸುರಿದ ಮಳೆಗೆ ಜಿಲ್ಲೆಯ ಎಲ್ಲ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಮಧುವಾಹಿನಿ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಮಧುವಾಹಿನಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ಮಧೂರು ಪಂಚಾಯಿತಿಯ ಪಟ್ಲಪರಿಸರ ಪ್ರದೇಶದಿಂದ ಐದು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕೊಡಗು ಜಿಲ್ಲೆ ಸಂಪಾಜೆ ಸಮೀಪದ ಕೊಯ್ನಾಡಿನಲ್ಲಿ ಶಾಲಾ ಕೊಠಡಿಯ ಮೇಲೆ ಗುಡ್ಡ ಕುಸಿದಿದೆ. ಗೋಡೆ, ಕಿಟಕಿ ಜಖಂ ಆಗಿದೆ. ಕೊಡಗಿನ ಅಬ್ಬಿಫಾಲ್ಸ್ ಸಮೀಪ ನಿರ್ಮಾಣವಾಗಿರೋ ಸ್ಕೈವಾಕ್ ಬ್ರಿಡ್ಜ್ ಕೂಡ ಕುಸಿದಿದೆ. ಈ ಬ್ರಿಡ್ಜ್​ನ ಪಿಲ್ಲರ್ ಸಮೀಪದ ಮಣ್ಣು ಕುಸಿತಕೊಂಡಿದ್ದು, ಕಂಬಗಳು ಜಾರುವ ಆತಂಕ ಎದುರಾಗಿದೆ.

ಶಿವಮೊಗ್ಗ ಸುತ್ತಮುತ್ತಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮಿಕ್ಕಿ ಹರಿಯುತ್ತಿದೆ. ತೀರ್ಥಹಳ್ಳಿ ಭಾಗದಲ್ಲಿ ವರ್ಷಧಾರೆಯಿಂದಾಗಿ ಭೂಕುಸಿತ ಭೀತಿ ಇರುವುದರಿಂದ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಸೆಪ್ಟೆಂಬರ್ 15ರವರೆಗೆ ಬಂದ್‌ ಮಾಡಲಾಗಿದೆ.

ಉತ್ತರ ಕನ್ನಡದ ದೇವಬಾಗ್ ರೆಸಾರ್ಟ್‌ನ 4 ಕಾಟೇಜ್ ಮನೆಗಳಿಗೆ ಹಾನಿ ಆಗಿದ್ದು, ಕಡಲ ಕೊರೆತದ ಅಬ್ಬರಕ್ಕೆ ಮರಗಳು ನೆಲಕ್ಕುರುಳಿವೆ. ಮೂರ್ನಾಲ್ಕು ದಿನಗಳ ಅಂತರದಲ್ಲೇ 4 ಕಾಟೇಜ್‌ಗಳು ಕಡಲ್ಕೊರೆತದಿಂದ ನೆಲಸಮವಾಗಿದೆ. ಇನ್ನು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು ತೀರಪ್ರದೇಶದ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ನದಿ ಪಾತ್ರದ ಜನರು ಭಯದಲ್ಲಿ ಬದುಕುವಂತಾಗಿದೆ.

mLe

ಜಲಾಶಯಗಳಿಗೆ ಒಳಹರಿವು ಹೆಚ್ಚಳ

ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಿಗೆ ಒಳಹರಿವು ಹೆಚ್ಚಳಗೊಂಡಿದೆ. ಹಾರಂಗಿ ಜಲಾಶಯದ ಒಳಹರಿವು ಸಾವಿರ ಕ್ಯುಸೆಕ್ ದಾಟಿದೆ. ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯಕ್ಕೆ ಗುರುವಾರ ಒಳಹರಿವು 4,082 ಕ್ಯುಸೆಕ್‌ಗೆ ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯದ ಒಳಹರಿವು 16,984 ಕ್ಯುಸೆಕ್‌ಗೆ ಏರಿಕೆಯಾಗಿದೆ. ಭದ್ರಾ ಜಲಾಶಯ ಭರ್ತಿಯಾಗಲು ಇನ್ನೂ 66 ಅಡಿ ನೀರಿನ ಅಗತ್ಯವಿದೆ. ಕಬಿನಿ ಜಲಾಶಯ ಒಳಹರಿವು 17 ಸಾವಿರ ಕ್ಯುಸೆಕ್‌ಗೆ ಏರಿದೆ.

ಕರಾವಳಿಯಲ್ಲಿ ವರುಣನ ಆರ್ಭಟ ಕಳೆದ ಮೂರು ದಿನಗಳಿಂದ ಮುಂದುವರೆದಿದ್ದು, ಮುಂದಿನ ನಾಲ್ಕು ದಿನ ಮತ್ತೆ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕರಾವಳಿ ಭಾಗದಲ್ಲಿ ಮುಂದಿನ 4 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಕಾಫಿನಾಡು ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಗೋಷಿಸಿದೆ. ಇದರ ಜೊತೆಗೆ ಬೆಳಗಾವಿ, ಹಾವೇರಿ, ಧಾರವಾಡ, ಹಾಸನ ಮೈಸೂರು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಸೇರಿದಂತೆ ಇತರ ಕಡೆ ಹಗುರದಿಂದ ಸಾಧಾರಣ ಮಳೆ ಆಗಲಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | 6 ವರ್ಷದ ಮೊಮ್ಮಗಳ ಮೇಲೆಯೇ ಕಾಮುಕ ಅಜ್ಜನಿಂದ ಅತ್ಯಾಚಾರ; ಪೋಕ್ಸೋ ಪ್ರಕರಣ ದಾಖಲು

ಬೆಂಗಳೂರಿನ ವಾತಾವರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮೋಡ ಕವಿದ ವಾತಾವಣವಿರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಿರಂತರ ಗಾಳಿಯ ವೇಗ ಗಂಟೆಗೆ 40-50 ವೇಗದಲ್ಲಿ ಬೀಸಲಿದೆ. ಗರಿಷ್ಠ ತಾಪಮಾನ 27° ಹಾಗೂ ಕನಿಷ್ಠ ತಾಪಮಾನ 21°C ಇರಲಿದೆ. ಮುಂದಿನ 48 ಗಂಟೆಗಳಲ್ಲಿ ಕೂಡಾ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಹೇಳಿದೆ.

ಎಲ್ಲೆಲ್ಲಿ, ಎಷ್ಟು ಮಳೆ?

ಗುರುವಾರ ಕರಾವಳಿಯ ಬಹುತೇಕ ಕಡೆ ಭಾರೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 30 ಸೆಂ.ಮೀ, ಉಡುಪಿ ಹಾಗೂ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ತಲಾ 21 ಸೆಂ.ಮೀನಷ್ಟು ಮಳೆ ಆಗಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ 17 ಸೆಂ.ಮೀ, ಮಣಿ, ಕಾರ್ಕಳ, ಆಗುಂಬೆ, ಪಣಂಬೂರಿನಲ್ಲಿ ತಲಾ 15 ಸೆಂ.ಮೀ, ಹೊನ್ನಾವರ, ಧರ್ಮಸ್ಥಳ, ಶಿರಾಲಿ, ಕೋಟ, ಉಪ್ಪಿನಂಗಡಿ, ಕೊಟ್ಟಿಗೆಹಾರದಲ್ಲಿ ತಲಾ 14 ಸೆಂ.ಮೀ, ನಾಪೋಕ್ಲುವಿನಲ್ಲಿ 13 ಸೆಂ.ಮೀ, ಕೊಡಗಿನಲ್ಲಿ 12 ಸೆಂ.ಮೀನಷ್ಟು ಮಳೆ ಆಗಿದೆ. ಪುತ್ತೂರು, ಕೊಲ್ಲೂರು, ಸುಳು, ಮೂರ್ನಾಡು, ವಿರಾಜಪೇಟೆಯಲ್ಲಿ ತಲಾ 11 ಸೆಂ.ಮೀ, ಮಂಗಳೂರಿನಲ್ಲಿ 10 ಸೆಂ.ಮೀ, ಮಂಕಿಯಲ್ಲಿ 9 ಸೆಂ.ಮೀ, ಕಳಸ, ಶೃಂಗೇರಿ, ಕುಂದಾಪುರದಲ್ಲಿ ತಲಾ 9 ಸೆಂ.ಮೀ, ಕುಮಟಾ, ಅಂಕೋಲಾದಲ್ಲಿ ತಲಾ 8 ಸೆಂ.ಮೀನಷ್ಟು ಮಳೆ ಆಗಿದೆ. ಇದನ್ನು ಹೊರತುಪಡಿಸಿ ಶಿವಮೊಗ್ಗ, ಚಾಮರಾಜನಗರ, ಹುಣಸೂರು, ಬಾಳೆಹೊನ್ನೂರು, ಬನವಾಸಿ ಸೇರಿದಂತೆ ಇತರ ಕಡೆ ಸಾಧಾರಣ ಮಳೆ ಆಗಿದೆ.

ಕಾರವಾರದ ದೇವಬಾಗ್ ಅರಬ್ಬಿ ಸಮುದ್ರದಲ್ಲಿ ಗಾಳಿ ಮಳೆ ಅಬ್ಬರಕ್ಕೆ ಕ್ಷಣಕ್ಷಣಕ್ಕೂ ಕಡಲಕೊರತೆ ಹೆಚ್ಚಾಗುತ್ತಿದೆ. ಮೀನುಗಾರರೇ ತಡೆಗೋಡೆ ಹಾಕುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯ ಕಾರಣ ಈಗಾಗಲೇ ಜೀವಹಾನಿ ಸಂಭವಿಸಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X