ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಯಂಕಾಲ ಜೋರು ಮಳೆ ಸುರಿಯುತ್ತಿದೆ. ಶುಕ್ರವಾರ ರಾತ್ರಿ ವೇಳೆ ಭಾರೀ ಮಳೆಯಾಗಿದ್ದು, ಹಲವೆಡೆ ಅವಾಂತರ ಸೃಷ್ಟಿ ಮಾಡಿದೆ.
ಆರ್.ಆರ್.ನಗರ, ಜ್ಞಾನಭಾರತಿ, ಏಪೋರ್ಟ್ ರಸ್ತೆ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿದಿದೆ. ಅನ್ನಪೂರ್ಣೇಶ್ವರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನಿದ್ದೆಯಿಲ್ಲದೇ ಸ್ಥಳೀಯರು ರಾತ್ರಿಯೆಲ್ಲ ನೀರನ್ನು ಹೊರಹಾಕುವ ಕೆಲಸ ಮಾಡಿದ್ದಾರೆ. ಮನೆಯ ವಸ್ತುಗಳೆಲ್ಲ ಮಳೆ ನೀರಿಗೆ ತೊಯ್ದಿವೆ.
ಇನ್ನು ಬಿನ್ನಿಮಿಲ್ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಿಂದ ಹರಿಯುವ ನೀರು, ಗೋಡೆಯಿಂದ ಸೋರಿ ರಾಯಪುರ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿ ಅವಾಂತರ ಉಂಟಾಗಿದೆ. ಬೆಂಗಳೂರಿನ ನಾಗರಬಾವಿ ಎನ್‌ಜಿಎಫ್ ಬಡಾವಣೆಯ 9ನೇ ಕ್ರಾಸ್‌ನಲ್ಲಿ ಬೆಸ್ಕಾಂ ಲೈಟ್ ಕಂಬ ಮತ್ತು ದೊಡ್ಡ ಮರವೊಂದು ಶೆಡ್ ಮನೆಯ ಮುಂದೆ ಬಿದ್ದಿದೆ.
ಮಳೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 70 ಮರಗಳು ನೆಲಕ್ಕುರುಳಿವೆ. 171 ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿದೆ. ನಾಗರಬಾವಿಯ ನೃಪತುಂಗ ನಗರದ 4ನೇ ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದಿವೆ. ಒಂದೇ ರಸ್ತೆಯ ಉದ್ದಕ್ಕೂ ಸುಮಾರು 10ಕ್ಕೂ ಅಧಿಕ ಮರಗಳು ನೆಲಕ್ಕೊರಗಿವೆ. ಪರಿಣಾಮ ಮರದ ಕೆಳಗೆ ಪಾರ್ಕ್ ಮಾಡಿದ್ದ ಕಾರುಗಳ ಗಾಜು ಪುಡಿ ಪುಡಿಯಾಗಿದೆ.
ಇಡೀ ರಸ್ತೆಯಲ್ಲಿ ಮರದ ರೆಂಬೆಕೊಂಬೆಗಳು ಬಿದ್ದು ರಸ್ತೆ ಸಂಚಾರ ಬಂದ್ ಆಗಿತ್ತು. ಆದಷ್ಟು ಬೇಗ ಮರಗಳನ್ನು ತೆರವು ಮಾಡುವಂತೆ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮೈಸೂರು ರಸ್ತೆ ಸೇರಿದಂತೆ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ನಗರದ ಎಲ್ಲೆಲ್ಲಿ ಎಷ್ಟೆಷ್ಟು ಮಳೆ
ಕೆಂಗೇರಿ – 89 ಮಿಮೀ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 62 ಮಿ.ಮೀ, ನಾಯಂಡನಹಳ್ಳಿ – 61.5 ಮಿ.ಮೀ, ಹೆಮ್ಮಿಗೆಪುರ – 61 ಮಿ.ಮೀ, ಆರ್ ಆರ್ ನಗರ – 60 ಮಿ.ಮೀ, ಮಾರುತಿ ಮಂದಿರ -51.50ಮಿ.ಮೀ, ವಿದ್ಯಾಪೀಠ – 50ಮಿಮೀ, ಉತ್ತರಹಳ್ಳಿ -42 ಮಿ.ಮೀ, ಹಂಪಿನಗರ – 39 ಮಿ.ಮೀ, ಯಲಹಂಕ – 38.50 ಮಿ.ಮೀ, ಜಕ್ಕೂರು – 38 ಮಿ.ಮೀ, ಕೊಟ್ಟಿಗೆಪಾಳ್ಯ – 33 ಮಿ.ಮೀ, ಕೊಡಿಗೆಹಳ್ಳಿ – 28.50 ಮಿ.ಮೀ, ನಂದಿನಿ ಲೇಔಟ್ – 28 ಮಿ.ಮೀ ಮಳೆ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ; ನಾಮಪತ್ರ ಸಲ್ಲಿಕೆಗೆ ಮೇ.16 ಕೊನೆಯ ದಿನ
ಮಳೆಯ ಅಬ್ಬರಕ್ಕೆ ತಡರಾತ್ರಿ ನಗರ ನಿವಾಸಿಗಳು ಹೈರಾಣಾಗಿದ್ದಾರೆ. ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.