ಪೂರ್ವ ಮಧ್ಯ ಅರೇಬಿಯನ್ ಸಮುದ್ರ ಮತ್ತು ಉತ್ತರ ಲಕ್ಷ ದ್ವೀಪ ಪ್ರದೇಶದ ಮೇಲೆ ಬೀಸಿದ ಚಂಡಮಾರುತದ ಪ್ರಭಾವದಿಂದ ರಾಜ್ಯದಲ್ಲಿ ಮುಂದಿನ ಒಂದು ವಾರ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾನುವಾರ ಹಾಗೂ ಸೋಮವಾರ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ. ಅಕ್ಟೋಬರ್ 19 ರಂದು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ.
ಅಕ್ಟೋಬರ್ 21 ಮತ್ತು 22ರಂದು ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದ್ದು, ಕರಾವಳಿಯ ಎಲ್ಲ ಜಿಲ್ಲೆಗಳಿಗೆ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಹಾಗೂ ಒಳನಾಡಿನ ಹಲವೆಡೆ ಶನಿವಾರ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ತೀವ್ರತೆ ಭಾನುವಾರ ಹೆಚ್ಚುವ ಸಂಭವವಿದ್ದು, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.
ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಪ್ರತಿ ಗಂಟೆಗೆ 35 ಕಿ.ಮೀ.ಯಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಚಂಡಮಾರುತದ ವಾತಾವರಣ ಇರಲಿದೆ. ಮೀನುಗಾರರು ಎಚ್ಚರವಹಿಸಬೇಕು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಮಳೆ ಸುರಿದಷ್ಟು ಅಧಿಕಾರಸ್ಥರ ಜೇಬಲ್ಲಿ ಹಣದ ಹೊಳೆ; ಬೆಂಗಳೂರು ನಿವಾಸಿಗಳಿಗೆ ತಪ್ಪದ ನರಕ!
ಬೆಂಗಳೂರಿನಲ್ಲಿ ಎರಡು ದಿನಗಳು ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಶುಕ್ರವಾರ ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿಯಲ್ಲಿ 15 ಸೆಂ.ಮೀ., ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ9 ಸೆಂ.ಮೀ., ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ 8 ಸೆಂ.ಮೀ., ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ6 ಸೆಂ.ಮೀ., ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ 4 ಸೆಂ.ಮೀ. ಮಳೆಯಾಗಿದೆ.
ಧಾರವಾಡ ನಗರ ಹಾಗೂ ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ದಿನವಿಡೀ ಆಗಾಗ ರಭಸದ ಮಳೆ ಸುರಿದಿದೆ. ಜಿಲ್ಲೆಯಲ್ಲಿಅ.1ರಿಂದ 16ರ ವರೆಗೆ 67 ಮಿ.ಮೀ ವಾಡಿಕೆಗಿಂತ 139 ಮಿಮೀ ಹೆಚ್ಚು ಮಳೆಯಾಗಿದೆ.
ಧಾರವಾಡದಲ್ಲಿ ದಿನ ಪೂರ್ತಿ ಹಗರು ಮಳೆ ಸುರಿದಿದ್ದರಿಂದ ತಗ್ಗು ಪ್ರದೇಶದಲ್ಲಿನೀರು ನುಗ್ಗಿತ್ತು. ಅಲ್ಲದೇ ಮಾರುಕಟ್ಟೆ ಪ್ರದೇಶದಲ್ಲೂಕಡಿಮೆ ಜನರ ಓಡಾಟ ಕಂಡುಬಂತು. ಗ್ರಾಮೀಣ ಭಾಗದಲ್ಲಿಯೂ ರಭಸದ ಮಳೆ ಸುರಿದಿದ್ದರಿಂದ ಬೆಣ್ಣೆಹಳ್ಳ, ತುಪ್ಪರಿಹಳ್ಳ ಒಂದು ವಾರದಿಂದ ತುಂಬಿ ಹರಿಯುತ್ತಿವೆ.
ಪ್ರಮುಖವಾಗಿ ಧಾರವಾಡ ತಾಲೂಕಿನಲ್ಲಿ ಹೆಚ್ಚಿನ ಮಳೆ ಸುರಿದಿದ್ದು, ಉಪ್ಪಿನ ಬೆಟಗೇರಿ ಸುತ್ತಲಿನ ಪ್ರದೇಶದಲ್ಲಿಮಳೆ ನೀರು ನುಗ್ಗಿ ರಸ್ತೆಗಳು ಜಲಾವೃತವಾಗಿದ್ದವು. ನಗರದ ಪ್ರದೇಶದಲ್ಲಿಯೂ ಇದೇ ಪರಸ್ಥಿತಿ ಇತ್ತು.