ರಾಜ್ಯಸರ್ಕಾರವನ್ನು ಅತಂತ್ರಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರವನ್ನು ಖಂಡಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದವರು ಮಂಗಳವಾರ ಫ್ರೀಡಂಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜಭವನ ಚಲೋ ನಡೆಸಿದರು. ʼಜೆಡಿಎಸ್- ಬಿಜೆಪಿ ಹಠಾವೊ, ರಾಜ್ಯ ಬಚಾವೊʼ ಘೋಷಣೆ ಕೂಗಿದರು.
ನ್ಯಾಯವಾದಿ, ಸಾಮಾಜಿಕ ಚಿಂತಕ ಪ್ರೊ ರವಿವರ್ಮ ಕುಮಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯಪಾಲರು ಮೊದಲನೆಯದಾಗಿ ಪ್ರಿವೆನ್ಶನ್ ಆಫ್ ಕರೆಪ್ಶನ್ ಆಕ್ಟ್ 17 ಎ ಸೆಕ್ಷನ್ ಅಡಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿದ್ದೇನೆ ಎಂದಿದ್ದಾರೆ. ಆದರೆ, 17ಎ ಅನುಮತಿಗೆ ಸಂಬಂಧಿಸಿ ಪರಿಚ್ಛೇದವಲ್ಲ. ಭಾರತೀಯ ನ್ಯಾಯ ಸಂಹಿತೆ 218ನೇ ಪರಿಚ್ಛೇದದಲ್ಲಿ ಸ್ಯಾಂಕ್ಷನ್ ಯಾರಿಗೆ, ಯಾವಾಗ ಕೊಡಬಹುದು ಎಂದು ಒಬ್ಬ ಸಾಮಾನ್ಯ ಲಾ ವಿದ್ಯಾರ್ಥಿಯನ್ನು ಕೇಳಿದ್ರೆ ಹೇಳುತ್ತಿದ್ದ. ಎರಡನೆಯದಾಗಿ ಕಾನೂನು ಅರ್ಥ ಮಾಡಿಕೊಳ್ಳದೇ, ಓದದೇ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಏನು ತಪ್ಪು ಮಾಡಿದ್ದಾರೆ ಎಂದು ಒಂದೇ ಒಂದು ಪದದ ವಿವರಣೆ ಕೂಡಾ ಇಲ್ಲ. ಒಬ್ಬ ಘನತೆವೆತ್ತ ರಾಜ್ಯಪಾಲರು ಹೀಗೆ ಮಾಡಿದ್ದು ಖಂಡನೀಯ ಎಂದು ಹೇಳಿದರು.
ಕಾಂಗ್ರೆಸ್‌ನ ಯುವ ನಾಯಕಿ ನಜ್ಮಾ ಚಿಕ್ಕನೇರಳೆ ಮಾತನಾಡಿ, “ಕುಮಾರಸ್ವಾಮಿ ಅವರೇ ನೀವು ಒಂದು ತುಂಡು ಭೂಮಿ ಬಗ್ಗೆ ಇಂದು ಪ್ರಶ್ನೆ ಮಾತನಾಡುತ್ತಿದ್ದೀರಿ ಅಲ್ವಾ, ನೀವು ಯಾವ ಯಾವ ಎಂಎಲ್‌ಸಿ ಹೆಸರಿನಲ್ಲಿ ಯಾವ ಯಾವ ಎಸ್ಟೇಟಿನಲ್ಲಿ ಎಷ್ಟೆಷ್ಟು ಬಚ್ಚಿಟ್ಟಿದ್ದೀರಿ ಚೆಕ್ ಮಾಡಿಕೊಳ್ಳಿ. ವಿಜಯೇಂದ್ರ ಅವರೇ ನೀವು ಯಾರ್ಯಾರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದೀರಿ ಚೆಕ್ ಮಾಡಿಕೊಳ್ಳಿ” ಎಂದರು.
“ಸಿದ್ದರಾಮಯ್ಯ ಅವರು ಬಸವಣ್ಣನ ತತ್ವ, ಈ ನಾಡಿನ ತತ್ವಗಳನ್ನು ಅನುಸರಿಸಿ ಎಲ್ಲ ಸಮುದಾಯಗಳಿಗೆ ಸಮಾನ ಸ್ಥಾನಮಾನ ಕೊಡುತ್ತಿದ್ದಾರೆ ಅದಕ್ಕೆ ನಿಮಗೆ ಹೊಟ್ಟೆ ಉರಿ. ಮೇಲ್ವರ್ಗದಲ್ಲಿರುವವರಿಗೂ 10% ಮೀಸಲಾತಿ ಕೊಟ್ಟವರು, ಅದಾನಿ -ಅಂಬಾನಿಯವರಿಗೆ ದುಡ್ಡು ಕೊಡುವವರು ನಿಮಗೆ ಇಷ್ಟ ಆಗುತ್ತಿದ್ದಾರೆ” ಎಂದು ಟೀಕಿಸಿದರು.
ಶೋಷಿತ ಸಮುದಾಯದ ಒಕ್ಕೂಟದ ರಾಜ್ಯ ಸಂಚಾಲಕ ಕೆ ಎಂ ರಾಮಚಂದ್ರ , ಅಹಿಂದ ಒಕ್ಕೂಟದ ಮುಖಂಡರಾದ ಮಾವಳ್ಳಿ ಶಂಕರ್, ಅನಂತ ನಾಯ್ಕ್, ವೆಂಕಟರಾಮಯ್ಯ ಸೇರಿದಂತೆ ಹಲವು ಮುಖಂಡರು ರಾಜಭವನ ಚಲೋ ಮುಂದಾಳತ್ವ ವಹಿಸಿದ್ದರು. ಸಾವಿರಾರು ಮಂದಿ ಒಕ್ಕೂಟದ ಸದಸ್ಯರು, ಮಹಿಳೆಯರು ಭಾಗವಹಿಸಿದ್ದರು.