ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಸಂಪ್‌ನಲ್ಲಿ ಮುಳುಗಿದ್ದ 2 ವರ್ಷ 6 ತಿಂಗಳ ಮಗುವಿನ ರಕ್ಷಿಸುವಲ್ಲಿ ಪಿಎಸ್ಐಯೊಬ್ಬರು ಸಫಲರಾಗಿದ್ದಾರೆ.
ಬೆಂಗಳೂರು ನಗರದ ಬ್ಯಾಡರಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ ಎ ಆರ್ ಎಂಬುವರು ಮಗುವಿನ ಜೀವ ಉಳಿಸಿದ್ದು, ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಾಗರಾಜ ಅವರ ಈ ಸಾಹಸವನ್ನು ಶ್ಲಾಘಿಸಿದ್ದಾರೆ.
ಮಗುವಿನ ರಕ್ಷಣೆ ಮಾಡಿದ ಪಿಎಸ್ಐ ನಾಗರಾಜ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, “ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಕರ್ತವ್ಯಕ್ಕೆ ಅದೇ ಮಾರ್ಗದಲ್ಲಿ ತೆರಳುತ್ತಿದ್ದೆ. ಮನೆಯ ಆವರಣದಲ್ಲಿ ಮಹಿಳೆಯರು ‘ಮಗು ಕಾಪಾಡಿ..’ ಎಂದು ಕೂಗುತ್ತಿದ್ದರು. ನಾನೇನೋ ಹಾವು ಕಡಿದಿರಬಹುದು ಎಂದುಕೊಂಡು ಕೂಡಲೇ ಅಲ್ಲಿಗೆ ಹೋದೆ. ಮಗು ನೀರಿನಲ್ಲಿ ಬಿದ್ದಿರುವುದು ಗೊತ್ತಾಯಿತು” ಎಂದರು.
ನೀರಿನ ಸಂಪ್ ನಲ್ಲಿ ಬಿದ್ದಿದ್ದ ಎರಡೂವರೆ ವರ್ಷದ ಮಗುವಿನ ಜೀವ ಉಳಿಸಿದರು.
“ಪೊಲೀಸ್ ಅಂದ್ರೆ ಭಯ ಅಲ್ಲ,
ಭರವಸೆ-ಜೀವ ರಕ್ಷಕ”ಮತ್ತೊಮ್ಮೆ ನಿಜವಾಯಿತು
“ನಮ್ಮ @KarnatakaCops ಬಗ್ಗೆ ನಮಗೆ ಹೆಮ್ಮೆ ಇದೆ.”ಧನ್ಯವಾದಗಳು: ನಾಗರಾಜ ಎ.ಆರ್. **PSI**@bypuratraffic @DgpKarnataka pic.twitter.com/EyVOKr9nDh
— ಕರ್ನಾಟಕ ರಾಜ್ಯ ಪೊಲೀಸ್ Karnataka State Police (@KarnatakaCops) March 7, 2024
ಮುಂದುವರಿದು, “ಮಗು ಬಿದ್ದ ಸಂಪ್ 10 ಅಡಿ ಆಳ ಇತ್ತು. ಅದರಲ್ಲಿ ಐದು ಅಡಿ ನೀರು ಇತ್ತು. ಮಗು ಬಿದ್ದು 2-3 ನಿಮಿಷ ಆಗಿರಬಹುದು. ಹಿಂದೆ ಮುಂದೆ ಯೋಚಿಸದೇ ಸಂಪ್‌ನೊಳಗೆ ಇಳಿದೆ. ನೋಡಿದ್ರೆ ಮಗು ಮೂಲೆಯಲ್ಲಿ ಇತ್ತು. ಮಗುವನ್ನು ಮೇಲೆ ಎತ್ತಿಕೊಟ್ಟೆ. ಅಷ್ಟೊತ್ತಿಗಾಗಲೇ ಮಗು ನೀರು ಕುಡಿದು ಚೂರು ಹೊಟ್ಟೆ ಉಬ್ಬಿದಂತೆ ಕಂಡಿತು. ಮಗುವಿನ ಹೊಟ್ಟೆ ಒತ್ತಿದರೆ ಪ್ರಾಣಕ್ಕೆ ತೊಂದರೆ ಆಗಬಹುದು ಎಂದು ಅರಿತು ಮೀನಿನ ತರ ಮಲಗಿಸಿ ಸ್ವಲ್ಪ ಸ್ವಲ್ಪ ಬೆನ್ನು ಒತ್ತಿ ನೀರು ತೆಗೆದೆ. ಅರ್ಧ ಲೀಟರ್ ನೀರು ಹೊರಗೆ ಬಂತು. ಕೂಡಲೇ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು. ಆಸ್ಪತ್ರೆಯಲ್ಲಿ ಮಗುವಿನ ಅಳು ಕೇಳಿ ನಿರಾಳನಾದೆ” ಎಂದು ತಮ್ಮ ಅನುಭವ ಹಂಚಿಕೊಂಡರು.
ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದೆ, ಬುಧವಾರ ಸಂಜೆಯೇ ಮಗುವನ್ನು ಪಾಲಕರು ಮನೆಗೆ ಕರೆದೊಯ್ದಿದ್ದಾರೆ.

👌 good job 🥰