ಸುರಕ್ಷಿತ ಹೆಲ್ಮೆಟ್ ಧರಿಸುವಿಕೆ ಮತ್ತು ಸೀಟ್ ಬೆಲ್ಟ್ ಬಳಕೆ, ಪಾದಚಾರಿ ಸುರಕ್ಷತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು 1.5 ಲಕ್ಷ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಅಭಿಯಾನದ ಮುಖಾಂತರ ತರಬೇತಿ ನೀಡಿದ್ದಾರೆ.
ಸ್ಟೂಡೆಂಟ್ಸ್ ಅಸೋಸಿಯೇಷನ್ ಫಾರ್ ರೋಡ್ ಸೇಫ್ಟಿ (ಎಸ್‌ಎಆರ್‌ಎಸ್) ಕಾರ್ಯಕ್ರಮದ ಅಡಿಯಲ್ಲಿ ಒಂದು ವಾರದ ರಸ್ತೆ ಸುರಕ್ಷತಾ ಅಭಿಯಾನದ ಭಾಗವಾಗಿ ಬೆಂಗಳೂರು ಸಂಚಾರ ಪೊಲೀಸರು 1.5 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ಐದು ದಿನಗಳಲ್ಲಿ 1 ಲಕ್ಷ ವಿದ್ಯಾರ್ಥಿಗಳನ್ನು ತಲುಪುವ ಗುರಿ ಹೊಂದಿದ್ದ ಈ ಕಾರ್ಯಕ್ರಮವು ಸುರಕ್ಷಿತ ರಸ್ತೆ ಶಿಷ್ಟಾಚಾರ ಮತ್ತು ಸಂಚಾರ ನಿಯಮಗಳನ್ನು ಪಾಲಿಸುವುದರ ಮಹತ್ವದ ಬಗ್ಗೆ ಅರಿವು ನೀಡಿದೆ.
ಜೂನ್ 24 ರಿಂದ 28ರವರೆಗೆ ನಡೆಸಲಾದ ಈ ಅಭಿಯಾನವು ಸಂವಾದ, ಕಾರ್ಯಾಗಾರಗಳು ಮತ್ತು ಪ್ರಾಯೋಗಿಕ ಪ್ರದರ್ಶನಗಳ ಮೂಲಕ 566 ಶಿಕ್ಷಣ ಸಂಸ್ಥೆಗಳ 1.5 ಲಕ್ಷ ವಿದ್ಯಾರ್ಥಿಗಳನ್ನು ತಲುಪಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮುಕ್ತಾಯ ಹಂತದಲ್ಲಿರುವ ಕಾವೇರಿ 5ನೇ ಹಂತದ ಯೋಜನೆ; ಮುಂದೇನು?
ಸುರಕ್ಷಿತ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಬಳಕೆ, ಪಾದಚಾರಿ ಸುರಕ್ಷತೆ, ಅಪಾಯಕಾರಿ ಚಾಲನೆ ಹಾಗೂ ಜೀಬ್ರಾ ಕ್ರಾಸಿಂಗ್‌ಗಳ ಸರಿಯಾದ ಬಳಕೆ ಮತ್ತು ಟ್ರಾಫಿಕ್ ಸಿಗ್ನಲ್‌ಗಳನ್ನು ಆರ್ಥಮಾಡಿಕೊಳ್ಳುವುದರ ಬಗ್ಗೆ ಕಾರ್ಯಕ್ರಮಳಲ್ಲಿ ವಿವರಿಸಲಾಗಿದೆ. ಅನುಭವಿ ಟ್ರಾಫಿಕ್ ಅಧಿಕಾರಿಗಳು ಪ್ರಸ್ತುತಿಗಳು ಮತ್ತು ಪ್ರಾಯೋಗಿಕ ಪ್ರದರ್ಶನಗಳನ್ನು ನಡೆಸಿದ್ದಾರೆ.
ಹಲವಾರು ರಸ್ತೆ ಅಪಘಾತಗಳಲ್ಲಿ ಯುವ ಪಾದಚಾರಿಗಳು, ಸೈಕ್ಲಿಸ್ಟ್ಗಳು ಮತ್ತು ಬೈಕ್ ಸವಾರರು ಹೆಚ್ಚು ತುತ್ತಾಗಿರುವ ಕಾರಣ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.