ಮಾರ್ಚ್ 8ರಂದು ಶಿವರಾತ್ರಿ ಬಳಿಕ ವಾರಾಂತ್ಯದ ರಜೆ ಇರುವ ಕಾರಣ ಜನರು ತಮ್ಮ ತಮ್ಮ ಊರುಗಳಿಗೆ ಸಂಚರಿಸುವುದು ಹೆಚ್ಚಾಗಿರುತ್ತದೆ. ಹೀಗಾಗಿ, ಪ್ರಯಾಣಿಕರ ದಟ್ಟಣೆ ಮತ್ತು ಬೇಡಿಕೆ ಪೂರೈಸಲು ಮಾರ್ಚ್ 7 ಮತ್ತು 10ರ ನಡುವೆ ಬೆಂಗಳೂರಿನಿಂದ ನಾನಾ ನಗರಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) 1,500 ವಿಶೇಷ ಬಸ್ ಸೇವೆ ಒದಗಿಸುವುದಾಗಿ ತಿಳಿಸಿದೆ.
ಮಾರ್ಚ್ 10 ಮತ್ತು 11ರಂದು ವಾಪಸ್ ಬರುವವರಿಗಾಗಿ ನಾನಾ ನಗರಗಳಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದಲೂ ವಿಶೇಷ ಬಸ್ಗಳು ಕಾರ್ಯಾಚರಿರಣೆ ನಡೆಸಲಿವೆ.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಿಗಮದಿಂದ 1500 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ ಮಾಲಾಗಿದೆ. ಮಾರ್ಚ್ 8 ರಂದು ಮಹಾಶಿವರಾತ್ರಿ ಹಾಗೂ ಮಾರ್ಚ್ 9 ಮತ್ತು 10 ರಂದು ವಾರಾಂತ್ಯ ದಿನ ಆಗಿರುವುದರಿಂದ ನಿಗಮ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಚ್ 7ರಿಂದ ಮಾರ್ಚ್ 10ರವರೆಗೆ ಬೆಂಗಳೂರಿನಿಂದ ನಾನಾ ಸ್ಥಳಗಳಿಗೆ 1,500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.
ರಾಜ್ಯದ ಮತ್ತು ಅಂತರರಾಜ್ಯದ ನಾನಾ ಸ್ಥಳಗಳಿಂದ ಬೆಂಗಳೂರಿಗೆ ಮಾರ್ಚ್ 10 ಹಾಗೂ ಮಾರ್ಚ್ 11 ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಕಾರ್ಯಾಚರಣೆ ನಡೆಸಲಾಗುವುದು.
ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೆಟ್‌ಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್ನ ಹೆಸರನ್ನು ಗಮನಿಸುವಂತೆ ಕೋರಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಜೈಲಿನ ಕೈದಿಗಳನ್ನು ಉಗ್ರ ಕೃತ್ಯಕ್ಕೆ ಬಳಕೆ ಆರೋಪ; 7 ರಾಜ್ಯಗಳಲ್ಲಿ ಎನ್‌ಐಎ ಶೋಧಕಾರ್ಯ
ಇ–ಟಿಕೆಟ್ ಬುಕಿಂಗ್ನ್ನು www.ksrtc.karnataka.gov.in ವೆಬ್‌ಸೈಟ್ ಮುಖಾಂತರ ಮಾಡಬಹುದಾಗಿದೆ ಎಂದು ಹೇಳಿದೆ.
ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು. ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್ ಅನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ನಿಗಮ ತಿಳಿಸಿದೆ.
ಕರ್ನಾಟಕ ಹಾಗೂ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್ಗಳು ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ.
ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.