ಬೆಂಗಳೂರಿನಲ್ಲಿ ಹುಕ್ಕಾ ಬಾರ್ ಹೆಸರಿನಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ. ಹದಿ ಹರೆಯದ ಯುವಕರಿಂದ ಹಿಡಿದು ವಯಸ್ಸಾದವರೂ ಕೂಡ ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ತಕ್ಷಣವೇ ಹುಕ್ಕಾ ಬಾರ್‌ಗಳನ್ನು ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ವಕೀಲರಾದ ಲೋಹಿತ್ ಒತ್ತಾಯಿಸಿದರು.
ನಗರದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇರುವ ಹುಕ್ಕಾಬಾರ್‌ಗಳನ್ನು ನಿಲ್ಲಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ ಒಂದು ತಿಂಗಳ ನಂತರ, ನಗರದ ಹುಕ್ಕಾಬಾರ್‌ವೊಂದರಲ್ಲಿ ಬೆಂಕಿ ದುರಂತ ಸಂಭವಿಸಿದೆ. ಸಚಿವರು ಬರಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಇವು ಆದೇಶಗಳಾಗಿ ಬದಲಾಗುತ್ತಿಲ್ಲ” ಎಂದರು.
“ಗಾಂಜಾ ವಿಚಾರದಲ್ಲಿ ರಾಜ್ಯದಲ್ಲಿ ಪ್ರತಿ ದಿನ 100 ರಿಂದ 150 ಪ್ರಕರಣ ದಾಖಲಾಗುತ್ತಿವೆ. ಈ ಗಾಂಜಾ ಸೇವನೆಗೆ ಹುಕ್ಕಾ ಬಾರ್ ಸುರಕ್ಷಿತ ತಾಣಗಳಾಗಿವೆ. ಗಾಂಜಾ ಮಿಶ್ರಣ ಮಾಡಿ ಹುಕ್ಕಾ ಸೇವನೆ ಮಾಡಲಾಗುತ್ತಿದೆ. ಮಧ್ಯರಾತ್ರಿ 2-3 ಗಂಟೆವರೆಗೂ ಇವು ತೆರೆದಿರುತ್ತವೆ. ಇದಕ್ಕೆ ಪೊಲೀಸರು ಕೂಡ ಕೈಜೋಡಿಸಿದ್ದಾರೆ. ಇಂದು ರಸ್ತೆ ಬದಿಗಳಲ್ಲಿ ಹುಕ್ಕಾ ಸೇದುವ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶ ಇದೆ. ಆದರೆ, ಇದು ಕಾನೂನಾಗಿ ಬದಲಾಗಬೇಕು” ಎಂದು ಆಗ್ರಹಿಸಿದರು.
“ಶೀಘ್ರದಲ್ಲೇ ಹುಕ್ಕಾ ಬಾರ್‌ಗಳನ್ನು ಮುಚ್ಚದಿದ್ದರೆ ಆಮ್ ಆದ್ಮಿ ಪಕ್ಷದಿಂದ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು. ನಾವೇ ಹುಕ್ಕಾ ಬಾರ್‌ಗಳನ್ನು ಮುಚ್ಚಿಸಬೇಕಾಗುತ್ತದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಲಿ” ಎಂದು ಎಚ್ಚರಿಸಿದರು.
ಎಎಪಿ ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಮಾತನಾಡಿ, “ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಯುವ ಸಬಲೀಕರಣ ಸಚಿವ ನಾಗೇಂದ್ರ ಸಭೆ ನಡೆಸಿ, ಹುಕ್ಕಾಬಾರ್ ಅನಧಿಕೃತ ಅದನ್ನು ನಿಲ್ಲಿಸುತ್ತೇವೆ. ತಂಬಾಕು ಮಾರಾಟ ನಿಯಂತ್ರಣ ಮಾಡುವುದಾಗಿ ಹೇಳಿದ್ದರೂ ಇನ್ನೂ ಆದೇಶ ಹೊರಡಿಸಿಲ್ಲ. ಬೆಂಗಳೂರಿನ ಅಶೋಕನಗರ ವ್ಯಾಪ್ತಿಯ ಎಂಜಿ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ 24 ಹುಕ್ಕಾ ಬಾರ್‌ಗಳಿವೆ. ಪ್ರತಿಯೊಂದು ಹುಕ್ಕಾ ಬಾರ್‌ನ ಬಾಡಿಗೆ ಒಂದರಿಂದ ಒಂದೂವರೆ ಲಕ್ಷ ರೂ. ಇದ್ದರೆ, 75 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಹಫ್ತಾ ನೀಡುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
“ಬಹುತೇಕ ಹುಕ್ಕಾ ಬಾರ್‌ಗಳು ಪ್ರತಿಷ್ಠಿತ ವ್ಯಕ್ತಿಗಳು, ಶಾಸಕರು ಅವರ ಬೇನಾಮಿಗಳು ನಡೆಸುತ್ತಿರುವುದರಿಂದ ಪೊಲೀಸರು ಕೂಡ ಇವುಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಎಂಜಿ ರಸ್ತೆಯಲ್ಲಿರುವ ಪ್ರತಿಷ್ಠಿತ ನಾಲ್ಕು ಹುಕ್ಕಾ ಬಾರ್‌ಗಳು ಆ ಏರಿಯಾದ ಶಾಸಕರಿಗೆ ಸೇರಿವೆ. ಅಲ್ಲಿಗೆ ನಗರದ ಪ್ರತಿಷ್ಠಿತ ವ್ಯಕ್ತಿಗಳ ಮಕ್ಕಳು ಕೂಡ ಬಂದು ಹೋಗುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಂಡನನ್ನು ತಾನೇ ಕೊಲೆ ಮಾಡಿ ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದ ಎರಡನೇ ಪತ್ನಿ
“ಆ ಭಾಗದಲ್ಲಿ ಪ್ರಮುಖ ಶಿಕ್ಷಣ ಸಂಸ್ಥೆಗಳಿವೆ. ಕಾಲೇಜುಗಳಿವೆ ಈ ಹುಕ್ಕಾ ಬಾರ್‌ಗಳು ಯುವ ಜನರನ್ನು ಹಾಳು ಮಾಡುತ್ತಿವೆ. ಮೊದಲು ಸ್ನೂಕರ್ ಗೇಮ್‌ಗಳಿದ್ದ ಜಾಗಗಳನ್ನು ಹುಕ್ಕಾ ಬಾರ್‌ಗಳನ್ನಾಗಿ ಬದಲಾಯಿಸಲಾಗಿದೆ. ಹಳೆ ಸರ್ಕಾರ ಪಡೆಯುತ್ತಿದ್ದ ಕಮಿಷನ್ ಅನ್ನು ನಿಮ್ಮ ಸರ್ಕಾರಕ್ಕೆ ಶಿಫ್ಟ್ ಮಾಡಿಕೊಳ್ಳಲು ಹುಕ್ಕಾಬಾರ್ ನಿಲ್ಲಿಸುವ ಹೇಳಿಕೆ ನೀಡಿದ್ದಾರೆ ಅಥವಾ ನಿಮಗೆ ನಿಜವಾಗಿಯೂ ಯುವ ಜನರ ಆರೋಗ್ಯದ ಮೇಲೆ ಕಾಳಜಿ ಇದೆಯಾ?” ಎಂದು ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ನಾಗೇಂದ್ರ ಅವರನ್ನು ಪ್ರಶ್ನಿಸಿದರು.
“ಇನ್ನೊಂದು ತಿಂಗಳಿನಲ್ಲಿ ಹುಕ್ಕಾ ಬಾರ್‌ಗಳನ್ನು ನಿಲ್ಲಿಸದಿದ್ದರೆ, ಅಲ್ಲಿ ನಡೆಯುವ ಚಟುವಟಿಕೆಗಳನ್ನು ವಿಡಿಯೋ ಮಾಡಿ ಬ್ರಾಂಡ್ ಬೆಂಗಳೂರಿಗೆ ಟ್ಯಾಗ್ ಮಾಡಿ ಜನರ ಮುಂದೆ ತೋರಿಸುತ್ತೇವೆ” ಎಂದು ಹೇಳಿದರು.