ಕಿವಿ ಕೇಳಿಸದ ಮತ್ತು ಮಾತು ಬಾರದ ಮಹಿಳೆಯ ಎಂಟು ವರ್ಷದ ಮಗುವಿನ ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನುಷ ಘಟನೆ ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸದ್ಯ ಪೊಲೀಸರು ಆರೋಪಿಯ ವಿರುದ್ಧ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಯ ಸುಳಿವು ಸಿಕ್ಕಿದ್ದು, ಆತನಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
“ಕಿವಿ ಕೇಳಿಸದ, ಮಾತು ಬಾರದ ಮಹಿಳೆ ಮತ್ತು ಆಕೆಯ ಮಗಳು ಮೂಲತಃ ಕರ್ನಾಟಕದವರಲ್ಲ. ಜೀವನ ಸಾಗಿಸಲು ಬೆಂಗಳೂರಿನಲ್ಲಿದ್ದಾರೆ. ಸಂತ್ರಸ್ತೆಯ ತಾಯಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಬಲೂನ್ ಮಾರಾಟ ಮಾಡುತ್ತಾರೆ” ಎಂದು ಪೊಲೀಸರು ಹೇಳಿದ್ದಾರೆ.
“ಮಹಿಳೆ ತನ್ನ ಎಂಟು ವರ್ಷದ ಮಗುವನ್ನು ನೆರಳಿನಲ್ಲಿ ಕೂರಿಸಿ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಬಲೂನ್ ಮಾರಾಟ ಮಾಡಲು ಹೋಗಿದ್ದಳು” ಎಂದು ಪೊಲೀಸರು ತಿಳಿಸಿದ್ದಾರೆ.
“ಈ ವೇಳೆ, ಒಬ್ಬ ವ್ಯಕ್ತಿ ಮಗುವಿಗೆ ಆಹಾರ ಕೊಡಿಸುವುದಾಗಿ ಹೇಳಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗುವಿನ ಕಿರುಚಾಟ ಕೇಳಿದ ತಾಯಿ ಮಗಳ ಬಳಿಗೆ ಓಡಿ ಬಂದಿದ್ದಾರೆ. ಆದರೆ, ಆ ವೇಳೆಗಾಗಲೇ ಶಂಕಿತ ವ್ಯಕ್ತಿ ಪರಾರಿಯಾಗಿದ್ದಾನೆ” ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಯಿ ಅಳಲು ಪ್ರಾರಂಭ ಮಾಡಿದ್ದಂತೆ ಜನರು ಸುತ್ತಲೂ ಜಮಾಯಿಸಿದ್ದಾರೆ. ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಂಸದ, ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಆರೋಗ್ಯ ಸ್ಥಿತಿ ಗಂಭೀರ
“ತಾಯಿ ಮೂಕಳಾಗಿರುವುದರಿಂದ, ಅವರು ಸಂಕೇತ ಭಾಷೆಯ ಮೂಲಕ ಘಟನೆಯನ್ನು ವಿವರಿಸಿದ್ದಾರೆ. ನಂತರ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವರದಿಗಳು ದೃಢಪಡಿಸಿವೆ” ಎಂಬ ಬಗ್ಗೆ ತನಿಖಾಧಿಕಾರಿ ಹೇಳಿದ್ದಾರೆ.